ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಮೇಲೆ ನಿಲ್ಲದ ದೌರ್ಜನ್ಯ

ಅಂಬೇಡ್ಕರ್‌ ಪರಿನಿರ್ವಾಣ ದಿನ: ಶಾಸಕ ಎಚ್.ಕೆ. ಕುಮಾರಸ್ವಾಮಿ ಆತಂಕ
Last Updated 7 ಡಿಸೆಂಬರ್ 2017, 10:25 IST
ಅಕ್ಷರ ಗಾತ್ರ

ಹಾಸನ : ಸ್ವಾತಂತ್ರ್ಯ ಬಂದು ಅನೇಕ ವರ್ಷ ಕಳೆದರೂ ದಲಿತರ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್‌ 61ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಿದ ಅಂಬೇಡ್ಕರ್‌ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಆದರೆ, ಅವರ ಶ್ರಮದ ಫಲವನ್ನು ಅನುಭವಿಸುತ್ತಿರುವವರು ಎಲ್ಲವನ್ನು ಮರೆತಿದ್ದಾರೆ. ಸುಸ್ಥಿರ ಸಮಾಜ ನಿರ್ಮಾಣ ಆಗಬೇಕಾದರೆ ಅಂಬೇಡ್ಕರ್ ತತ್ವ ಆಧರಿಸಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕಿದೆ ಎಂದು ತಿಳಿಸಿದರು.

ಶಾಸಕ ಪ್ರಕಾಶ್ ಮಾತನಾಡಿ, ಅಂಬೇಡ್ಕರ್ ಮತ್ತು ಬುದ್ಧನಿಗೆ ಇರುವ ಸಂಬಂಧವನ್ನು ಗ್ರಾಮೀಣ ಪ್ರದೇಶದ ಜನರಿಗೆ ತಿಳಿಸಬೇಕು. ಅಂಬೇಡ್ಕರ್‌ ಇಂದು ಇಲ್ಲದಿರಬಹುದು. ಆದರೆ, ಅವರ ತತ್ವ, ಸಿದ್ದಾಂತಗಳಿಗೆ ಎಂದಿಗೂ ಅಂತ್ಯವಿಲ್ಲ ಎಂದು ನುಡಿದರು.

ಅಂಬೇಡ್ಕರ್ ಅಭಿಮಾನಿಗಳು ಗ್ರಾಮಗಳಲ್ಲಿ ಮಾರಮ್ಮ , ಚೌಡಮ್ಮನ ಗುಡಿಕಟ್ಟುವ ಬದಲು ಒಂದೊಂದು ಬುದ್ಧ ಮಂದಿರ ಕಟ್ಟಿದರೆ ಗ್ರಾಮವೇ ಶಾಂತಿಯಿಂದ ಬದುಕುವಂತಾಗುತ್ತದೆ ಎಂದರು.

ನಗರಾಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್ ಮಾತನಾಡಿ, ಅಂಬೇಡ್ಕರ್‌ತಮ್ಮ ವೈಯಕ್ತಿಕ ಬದುಕನ್ನು ಲೆಕ್ಕಿಸದೆ ಶೋಷಿತ ಸಮುದಾಯಕ್ಕೆ ಅನೇಕ ಅವಕಾಶ ಮಾಡಿಕೊಟ್ಟಿದ್ದಾರೆ. ಬೌದ್ಧ ಧರ್ಮ ಸ್ವೀಕರಿಸುವುದರಿಂದ ಸಮಾಜದ ಸಮಗ್ರ ಏಳಿಗೆಗೆ ಉತ್ತರ ಸಿಗಲು ಸಾಧ್ಯ ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಜಾನಕಿ, ಶಾಸಕರಾದ ಎಚ್.ಎಸ್. ಪ್ರಕಾಶ್, ಎಚ್.ಕೆ. ಕುಮಾರಸ್ವಾಮಿ, ಬುದ್ಧ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪನಮನ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ದಲಿತ ಮುಖಂಡರಾದ ಎಚ್.ಕೆ. ಸಂದೇಶ್, ಅತ್ನಿ ಕಷ್ಣ, ನಾಗರಾಜ್‌ ಹೆತ್ತೂರು, ಬೌದ್ಧ ಧರ್ಮ ಮಹಾಸಭಾ ಅಧ್ಯಕ್ಷ ಶ್ರೀನಿವಾಸ್‌, ಮರಿಜೋಸೆಫ್‌, ಆರ್.ಪಿ.ಐ ಸತೀಶ್‌ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT