ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿ ಆಸ್ಪತ್ರೆಯಲ್ಲಿ ಮಕ್ಕಳ ವೈದ್ಯರಿಲ್ಲ!

Last Updated 8 ಡಿಸೆಂಬರ್ 2017, 8:19 IST
ಅಕ್ಷರ ಗಾತ್ರ

ಎ.ಎಂ. ಸೋಮಶೇಖರಯ್ಯ

ಕೂಡ್ಲಿಗಿ: ನೂರು ಹಾಸಿಗೆಗಳ ಸೌಲಭ್ಯ ಹೊಂದಿರುವ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ ಯಾವ ಆಸ್ಪತ್ರೆಯಲ್ಲಿಯೂ ಮಕ್ಕಳ ವೈದ್ಯರಿಲ್ಲ.

ಅಪೌಷ್ಟಿಕತೆ ಕೊರತೆ ಸೇರಿದಂತೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಣ್ಣ ಪುಟ್ಟ ಕಾಯಿಲೆಗೂ ಪೋಷಕರು ತಮ್ಮ ಕೆಲಸ ಕಾರ್ಯಗಳನ್ನು ಸಾವಿರಾರು ರೂಪಾಯಿ ವ್ಯಯಿಸಿ ಹೊಸಪೇಟೆ, ಬಳ್ಳಾರಿ, ಜಗಳೂರು, ದಾವಣಗೆರೆ ಪಟ್ಟಣಗಳಿಗೆ ತೆರಳಬೇಕಾಗಿದೆ.

ಹೊಸಪೇಟೆ ಅಥವಾ ಬಳ್ಳಾರಿಯಂಥ ನಗರಗಳಲ್ಲಿ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಗಳಲ್ಲಿ ಟೋಕನ್ ವ್ಯವಸ್ಥೆ ಮಾಡಿಕೊಂಡಿದ್ದು, ರಾತ್ರಿ ವೇಳೆ ಕಾದು ಮುಂಗಡವಾಗಿ ಟೋಕನ್ ಪಡೆಯಬೇಕು. ರಾತ್ರಿಯೆಲ್ಲಾ ಕಾದರೂ ಟೋಕನ್ ಸಿಕ್ಕರೆ ಸಿಗಬಹುದು. ಸಿಗದೇ ಇರಬಹುದು!

‘ಇಲ್ಲಿ ವೈದ್ಯರಿಲ್ಲ. ನಮ್ಮ ಮಕ್ಕಳಿಗೆ ಲಸಿಕೆ, ಚುಚ್ಚುಮದ್ದಿಗಷ್ಟೇ ಬರಬೇಕು. ಇಲ್ಲವೇ ಹೊಸಪೇಟೆಗೆ ಹೋಗಬೇಕು, ಮಕ್ಕಳ ವೈದ್ಯರೊಬ್ಬನ್ನು ಕೊಡಲು ಸರ್ಕಾರಕ್ಕೆ ಆಗುವುದಿಲ್ಲವೇ’ ಎಂದು ಸಾಸಲವಾಡದ ಗೌರಮ್ಮ ಕೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ತನ್ನ ಮಗುವಿಗೆ ಮಾಸಿಕೆ ಲಸಿಕೆ ಹಾಕಿಸಲು ಬಂದಿದ್ದ ಅವರು, ‘ಮಗು ಹುಟ್ಟಿದಾಗಿನಿಂದ ನಾವು ವೈದ್ಯರಿಗಾಗಿ ಅದೆಷ್ಟು ಬಾರಿ ಬಳ್ಳಾರಿ, ಹೊಸಪೇಟೆಗೆ ಹೋಗಿ ಬಂದೆವೋ ಲೆಕ್ಕವೇ ಇಲ್ಲ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮೀಕ್ಷೆ ಪ್ರಕಾರ ತಾಲ್ಲೂಕಿನಲ್ಲಿ 3 ವರ್ಷದವರೆಗಿನ 22,108 ಮಕ್ಕಳು ಹಾಗೂ 6 ವರ್ಷದವರಗಿನ 14,157 ಮಕ್ಕಳಿದ್ದಾರೆ. ಆದರೆ ಈ ಮಕ್ಕಳಿಗೆ ಚಿಕಿತ್ಸೆ ನೀಡಲು ಒಬ್ಬ ಮಕ್ಕಳ ತಜ್ಞ ವೈದ್ಯರು ಕೂಡ ತಾಲ್ಲೂಕಿನಲ್ಲಿ ಇಲ್ಲ.
ಪಟ್ಟಣದಲ್ಲಿ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ 7 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ 3 ಸಮುದಾಯ ಆರೋಗ್ಯ ಕೆಂದ್ರಗಳು ತಾಲ್ಲೂಕಿನಲ್ಲಿವೆ. ಇವುಗಳಲ್ಲಿ ಒಟ್ಟು 15 ಮಂದಿ ಪದವೀಧರ ವೈದ್ಯರು, 20 ಮಂದಿ ಸ್ನಾತಕೋತ್ತರ ಪದವೀಧರ ವೈದ್ಯರು, ಹಾಗೂ 5 ದಂತ ವೈದ್ಯರ ಹುದ್ದೆಗಳಿವೆ.

ಆ ಪೈಕಿ ಮೂವರು ಪದವೀಧರ ವೈದ್ಯರು, ಇಬ್ಬರು ಸ್ನಾತಕೋತ್ತರ ಪದವೀಧರ ವೈದ್ಯರು ಹಾಗೂ ನಾಲ್ವರು ದಂತ ವೈದ್ಯರು ಖಾಯಂ ಇದ್ದಾರೆ. ಅವರೊಂದಿಗೆ ಹತ್ತು ವೈದ್ಯರು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಎಲ್ಲಿಯೂ ಮಕ್ಕಳ ತಜ್ಞ ವೈದ್ಯರಿಲ್ಲ.
‘ಮಂಜೂರಾದ ದಿನದಿಂದ ಇಲ್ಲಿ ಮಕ್ಕಳ ವೈದ್ಯರು ಸೇವೆ ಸಲ್ಲಿಸಿರುವುದೇ ವಿರಳ. ಈ ಮೊದಲು ಇಲ್ಲಿದ್ದ ಮಕ್ಕಳ ವೈದ್ಯರೊಬ್ಬರು ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಹೋದ ನಂತರ ಯಾರೂ ಬಂದಿಲ್ಲ. ಸುಮಾರು ಏಳು ವರ್ಷಗಳಿಂದ ಹುದ್ದೆ ಖಾಲಿ ಉಳಿದಿದೆ.

ಇದರಿಂದ ತಾಲ್ಲೂಕಿನ ಆಸ್ಪತ್ರೆಗಳು ಮಕ್ಕಳಿಗೆ ಚುಚ್ಚು ಮದ್ದು, ಲಸಿಕೆ ಹಾಕುವ ಕೇಂದ್ರಗಳಾಗಿ ಮಾತ್ರ ಉಳಿದುಕೊಂಡಿವೆ. ತಾಲ್ಲೂಕಿನಲ್ಲಿ ಉತ್ತಮ ಸೇವೆ ನೀಡುವ ಖಾಸಗಿ ಆಸ್ಪತ್ರೆಗಳೂ ಇಲ್ಲದಿರುವುದು ಸಮಸ್ಯೆ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.

* * 

ತಾಲ್ಲೂಕಿನಲ್ಲಿ ಇರುವಷ್ಟು ವೈದ್ಯರನ್ನೆ ಬಳಸಿಕೊಂಡು ಜನರಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಹೆಚ್ಚಿನ ವೈದ್ಯರ ನೇಮಕ ಮಾಡುವಂತೆ ಪ್ರಸ್ತಾವ ಕಳಿಸಲಾಗಿದೆ
ಡಾ. ಷಣ್ಮುಖ ನಾಯ್ಕ್ ತಾಲ್ಲೂಕು ಆರೋಗ್ಯಧಿಕಾರಿ, ಕೂಡ್ಲಿಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT