ಭಾನುವಾರ, ಫೆಬ್ರವರಿ 28, 2021
31 °C

ಧೂಮಪಾನ ತ್ಯಜಿಸುವ ಆಸೆ

ಸುನೀತಾ ರಾವ್‌ Updated:

ಅಕ್ಷರ ಗಾತ್ರ : | |

ಧೂಮಪಾನ ತ್ಯಜಿಸುವ ಆಸೆ

1. ನಾನು ಧೂಮಪಾನಕ್ಕೆ ಅಂಟಿಕೊಂಡಿದ್ದೇನೆ. ದಿನಕ್ಕೆ 4ರಿಂದ 5 ಸಿಗರೇಟ್ ಸೇದುತ್ತೇನೆ. ನನಗೆ ಸಿಗರೇಟ್ ಬಿಡಬೇಕೆಂಬ ಆಸೆ. ನನ್ನ ಆರೋಗ್ಯವೂ ಸರಿಯಿಲ್ಲ. ಓದಿನ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಮನಸ್ಸಿಗೆ ಶಾಂತಿ ಇಲ್ಲ. ದಿನಕ್ಕೆ 3ರಿಂದ 4 ಗಂಟೆ ನಿದ್ದೆ ಮಾಡುತ್ತೇನೆ. ಇದನ್ನೆಲ್ಲಾ ಪರಿಹರಿಸಲು ನನಗೆ ದಾರಿ ತಿಳಿಸಿ.

–ಸೈಯದ್, ಬಾಗಲಕೋಟೆ

ಉತ್ತರ: ಧೂಮಪಾನ ಮಾಡುವುದು ದೈಹಿಕ ಚಟ ಮತ್ತು ಮಾನಸಿಕ ಅಭ್ಯಾಸ. ಸಿಗರೇಟಿನಲ್ಲಿರುವ ನಿಕೋಟಿನ್ ಅಂಶ ತಾತ್ಕಾಲಿಕವಾಗಿರುತ್ತದೆ. ಆದರೆ ಇದು ಅತಿಯಾದ ವ್ಯಸನಕಾರಿ. ನಿಕೋಟಿನ್‌ ನಮ್ಮ ದೇಹ ಮತ್ತು ಮನಸ್ಸಿನ ಭಾವನೆಗಳನ್ನು ಉದ್ರೇಕಗೊಳಿಸುತ್ತದೆ. ಈ ಅಂಶ ನಮ್ಮ ಮೆದುಳಿಗೂ ‘ಫೀಲ್ ಗುಡ್’ ಭಾವನೆಯನ್ನು ನೀಡುತ್ತದೆ. ಒಮ್ಮೆ ಸೀಗರೇಟು ಸೇದಿದಾಗ ಆ ಖುಷಿ ನಮಗೆ ಸಿಗುತ್ತದೆ. ಮನಸ್ಸಿಗೆ ಒತ್ತಡ, ಖಿನ್ನತೆ, ಆತಂಕ ಹಾಗೂ ಬೇಸರ ಕಾಡಿದಾಗ ಮತ್ತೆ ಸಿಗರೇಟ್ ಸೇದಲು ಇದು ಪ್ರೇರೆಪಿಸುತ್ತದೆ.

ನೀವು ಧೂಮಪಾನವನ್ನು ಯಶಸ್ವಿಯಾಗಿ ತ್ಯಜಿಸಲು ನಿಮ್ಮ ಚಟ ಹಾಗೂ ಅಭ್ಯಾಸ‌ದ ಜೊತೆಗೆ ಅದರೊಂದಿಗಿರುವ ವಾಡಿಕೆಗಳನ್ನು ತಿಳಿದುಕೊಳ್ಳಬೇಕು. ನೀವು ಯಾವ ರೀತಿಯ ಧೂಮಪಾನಿ, ಯಾವ ಸಂದರ್ಭದಲ್ಲಿ ನೀವು ಸಿಗರೇಟ್ ಅನ್ನು ಬಯಸುತ್ತೀರಿ ಮತ್ತು ಯಾಕೆ ಎಂದು ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳಿ. ಆಗ ನಿಮಗೆ ನಿಮ್ಮಲ್ಲಿರುವ ಮುಖ್ಯ ಪ್ರಚೋದಕ ಅಂಶ ಯಾವುದು ಎಂಬುದು ತಿಳಿಯುತ್ತದೆ.  ಮೊದಲು ನೀವು ನಿಮ್ಮನ್ನು ಸಿಗರೇಟ್‌ನತ್ತ ವಾಲುವಂತೆ ಮಾಡುವ ಸಂದರ್ಭದಿಂದ ದೂರವಿರಿ.

ದಿನಕ್ಕೊಂದು ಸಿಗರೇಟ್‌ನಂತೆ ಬಿಡಲು ಪ್ರಯ್ನತಿಸಿ; ಧೂಮಪಾನ ಮಾಡದ ಸ್ನೇಹಿತರ ಜೊತೆ ಬೆರೆಯಿರಿ. ದೇಹಕ್ಕೆ ಕಠಿಣ ವ್ಯಾಯಾಮ ಮತ್ತು ಮನಸ್ಸಿಗೆ ಧ್ಯಾನ – ಇದು ನಿಮ್ಮ ಗುರಿಯ ಮೇಲೆ ಗಮನ ಹರಿಸಲು ಸಹಾಯ ಮಾಡುತ್ತದೆ. ಅದರ ಜೊತೆಗೆ ಓದಿನ ಮೇಲೆ ಗಮನ ನೀಡಲು ಸಾಧ್ಯವಾಗುತ್ತದೆ. ಅಲ್ಲದೇ ಓದು ನಿಮ್ಮನ್ನು ಯಾವಾಗಲೂ ಬ್ಯುಸಿಯಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗೆಯೇ ನೀವು ಧೂಮಪಾನ ಮಾಡುವುದನ್ನು ಕಡಿಮೆ ಮಾಡಿಕೊಳ್ಳಬಹುದು. ಒಂದು ಬಾರಿಗೆ ಒಂದು ಸಿಗರೇಟ್ ಬಿಟ್ಟರೆ, ಆಗ ನೀವು ‘ವಿತ್–ಡ್ರಾವಲ್ ಸಿಮ್‌ಟಮ್ಸ್‌’ ಅನ್ನು ನಿರ್ವಹಿಸಬಹುದು.

2. ನಾನು ನವೋದಯದಲ್ಲಿ ತರಬೇತಿ ಶಿಕ್ಷಕನಾಗಿದ್ದೇನೆ. ನಾನು ಯಾವುದೇ ಕೆಲಸ ಮಾಡಿದರೂ ನಷ್ಟವಾಗುತ್ತಿದೆ. ಎರಡು ವರ್ಷಗಳಿಂದ ಮಾಡುತ್ತಾ ಬಂದಿರುವ ಸ್ವಂತ ಹಾಗೂ ಪಾಲುದಾರಿಕೆ ಕೆಲಸಗಳು ನಷ್ಟವಾಗಿ ಹಾಕಿದ ಬಂಡವಾಳ ಕೂಡ ವಾಪಸ್ಸು ಬಂದಿಲ್ಲ. ಹೀಗಾಗಿ ಜೀವನದಲ್ಲಿ ಜುಗುಪ್ಸೆಯನ್ನು ಹೊಂದಿದ್ದೇನೆ. ಮತ್ತೆ ವ್ಯವಹಾರ ಮಾಡಲು ಹಣವಿಲ್ಲದೇ, ಉತ್ಸಾಹವಿಲ್ಲದೇ ಪರದಾಡುತ್ತಿದ್ದೇನೆ. ಇದಕ್ಕೆ ಪರಿಹಾರ ತಿಳಿಸಿ.

–ರವಿಕುಮಾರ್, ಕಾರಟಗಿ

ಉತ್ತರ: ಜೀವನದಲ್ಲಿ ಹಣಕಾಸಿನ ತೊಂದರೆ ಹಾಗೂ ವಿಪತ್ತುಗಳು ಎದುರಾದಾಗ ನಮ್ಮಲ್ಲಿ ಹೆಚ್ಚಿನವರು ಗಡಿಯಾರದ ಮುಳ್ಳು ಹಿಂದಕ್ಕೆ ತಿರುಗಲಿ ಎಂದೇ ಬಯಸುತ್ತಾರೆ. ಭೂತಕಾಲವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ದೃಷ್ಟಿಕೋನ ಹಾಗೂ ಪ್ರತಿಕ್ರಿಯೆಯಿಂದ ಅದನ್ನು ಬದಲಾಯಿಸಬಹುದು. ಆಗ ನಿಮ್ಮ ಆರ್ಥಿಕ ನಷ್ಟವನ್ನು ನೀವು ಮರಳಿ ಪಡೆಯುವ ಕೆಲಸವನ್ನು ಸಕ್ರಿಯಗೊಳಿಸಬಹುದು. ಅಥವಾ ನಿಮ್ಮ ಮನಸ್ಸಿನ ಶಾಂತಿಯನ್ನಾದದೂ ಮರಳಿ ಪಡೆಯಬಹುದು.

ನಮ್ಮ ತಪ್ಪಿನಿಂದ ನಾವು ಪಾಠ ಕಲಿತು, ಮುಂದಿನ ದಾರಿಯನ್ನು ನಿಭಾಯಿಸುವುದನ್ನು ಕಲಿಯಬೇಕು. ಸಮಯ ಕಳೆದಂತೆ ನಿಮ್ಮ ನಷ್ಟಕ್ಕೆ ಪರಿಹಾರ ಕಂಡುಕೊಳ್ಳಬಹುದು. ನೀವು ವಿಪರೀತ ಅಪಾಯ ಅಥವಾ ನಂಬಿಕೆ ಅರ್ಹರಲ್ಲದವರನ್ನು ನಂಬುವುದು ಅಥವಾ ನೀವು ಅದೃಷ್ಟವಂತರಲ್ಲದೇ ಇದ್ದಾಗ ನೀವು ತುಂಬಾ ಜಾಗರೂಕತೆಯಿಂದ ಇರಬೇಕು. ಭೂತಕಾಲದಲ್ಲಿ ಏನಾಗಿದೆ ಎನ್ನುವುದನ್ನು ಅರಿತುಕೊಂಡು ಮುಂದೆ ಸಾಗುವುದು ಉತ್ತಮ ಭವಿಷ್ಯಕ್ಕೆ ನಾಂದಿಯಾಗುತ್ತದೆ.

ಈಗಿನಿಂದಲೇ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳಿ. ನಿಮ್ಮ ಶಿಕ್ಷಕವೃತ್ತಿಯ ಮೇಲೆ ಗಮನ ಹರಿಸಿ. ಈಗಲೂ ನಿಮಗೆ ವ್ಯವಹಾರ ಅಥವಾ ಹೂಡಿಕೆಯ ಮೇಲೆ ಇಚ್ಛೆಯಿದ್ದರೆ ಒಂದು ಸರಿಯಾದ ಯೋಜನೆ, ತಂತ್ರ ಹಾಗೂ ಮಾರುಕಟ್ಟೆಯ ಅಧ್ಯಯನ ಮಾಡಿ. ಒಂದು ಯೋಜನೆ ರೂಪಿಸಿ ಆ ಯೋಜನೆಗೆ ತಕ್ಕಂತೆ ಕೆಲಸ ಮಾಡಿ ನೋಡಿ.

3. ನಾನು ತುಂಬಾ ದಪ್ಪಗಿದ್ದೇನೆ, ನನ್ನ ಸ್ನೇಹಿತೆಯರೆಲ್ಲಾ ತೆಳ್ಳಗಿದ್ದಾರೆ. ನನಗೆ ಇದರಿಂದ ತುಂಬಾ ಬೇಸರವಾಗುತ್ತದೆ. ಯಾರೊಂದಿಗೂ ಬೆರೆಯಲು ಮನಸ್ಸಾಗುತ್ತಿಲ್ಲ. ನನಗೆ ಪರಿಹಾರ ತಿಳಿಸಿ.

–ಹೆಸರು ಬೇಡ, ಧಾರವಾಡ

ಉತ್ತರ: ನೀವು ಯಾರು ಎಂಬುದನ್ನು ನಿಮ್ಮ ತೂಕ ನಿರ್ಧರಿಸುವುದಿಲ್ಲ. ನೀವು ಈ ಸಾರ್ವತ್ರಿಕ ಸತ್ಯವನ್ನು ನಿಮ್ಮಲ್ಲಿ ಅವಳವಡಿಸಿಕೊಂಡು ಆಗಾಗ ಇದನ್ನು ಪುನರಾವರ್ತನೆ ಮಾಡಿಕೊಳ್ಳಿ. ನಾನು ದಪ್ಪವಿದ್ದೇನೆ ಯಾರನ್ನು ನನ್ನನ್ನು ಗುರುತಿಸುತ್ತಿಲ್ಲ ಎಂಬ ಋಣಾತ್ಮಕ ಯೋಚನೆಯನ್ನು ತಲೆಯಲ್ಲಿ ತುಂಬಿಕೊಳ್ಳುವುದಕ್ಕಿಂತ ಇರುವ ಸತ್ಯವನ್ನು ಒಪ್ಪಿಕೊಳ್ಳಿ.

ನೀವು ಯಾರು ಎಂಬುದು ನಿಮ್ಮ ವ್ಯಕ್ತಿತ್ವ, ಮೌಲ್ಯ, ಪ್ರತಿಭೆ, ತಪ್ಪುಗಳು, ದೌರ್ಬಲ್ಯಗಳು, ನಿಮ್ಮಲ್ಲಿರುವ ಒಳ್ಳೆಯತನಗಳು, ಪ್ರತ್ಯೇಕತೆ, ಪ್ರೀತಿ ಹಾಗೂ ಉತ್ಸಾಹದ ಮೇಲೆ ಅವಲಂಬಿಸಿದೆ. ನಿಮ್ಮ ದಪ್ಪವೇ ನಿಮ್ಮ ವ್ಯಕ್ತಿತ್ವಕ್ಕೆ ಕನ್ನಡಿಯಲ್ಲ. ನಿಮಗೆ ನೀವೇ ಯಾವ ರೀತಿ ಮೌಲ್ಯ ನೀಡಬೇಕು ಹಾಗೂ ಸ್ವಪ್ರೇರಣೆಯನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಎಂಬ ಶಕ್ತಿ ನಿಮಗಿದೆ.

ನೋಟಕ್ಕಿಂತ ದೇಹದ ಆರೋಗ್ಯಕ್ಕಾಗಿ ಕೆಲವು ವರ್ಕೌಟ್‌ಗಳನ್ನು ಮಾಡಿ. ಇದರಿಂದ ನೀವು ಆರೋಗ್ಯವಂತರಾಗಿರಬಹುದು. ದೇಹದಲ್ಲಿ ಕೊಬ್ಬಿನಂಶ ಹೆಚ್ಚಿರುವ ವ್ಯಕ್ತಿಗಳನ್ನು ಹೆಚ್ಚು ಕಾಯಿಲೆಗಳು ಪೀಡಿಸುತ್ತವೆ. ಹಾಗಾಗಿ ಪ್ರತಿದಿನ ಏಕ್ಸಸೈಜ್ ಮಾಡುವುದನ್ನು ರೂಢಿಸಿಕೊಳ್ಳಿ ಮತ್ತು ಅದನ್ನು ಚಾಚು ತಪ್ಪದೇ ಪಾಲಿಸಿ.

ಇದು ನಿಮ್ಮ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ ನೀವು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರುವಂತೆ ಮಾಡುತ್ತದೆ. ಸಮತೋಲಿತ ಡಯೆಟ್ ಅನ್ನು ಪಾಲಿಸಿ. ಡಯೆಟ್ ಅನುಸರಿಸುವುದು, ನಿಲ್ಲಿಸುವುದು ಮಾಡುವ ಬದಲು ಆರೋಗ್ಯಕರ ಆಹಾರವನ್ನು ಸೇವಿಸಿ. ಯಾವಾಗಲೂ ಖುಷಿಯಾಗಿರುವುದನ್ನು ಆಯ್ಕೆ ಮಾಡಿಕೊಳ್ಳಿ.

4. ನಾನು ಪೋಟೊಗ್ರಾಫರ್, ನಾನು ನನ್ನ ಮಾವನ ಮಗಳನ್ನು ಪ್ರೀತಿಸುತ್ತಿದ್ದೇನೆ. ಅವಳಿಗೂ ನನ್ನ ಪ್ರೀತಿ ಒಪ್ಪಿಗೆ ಇದೆ. ಆದರೆ ನಾನು ನೋಡಲು ಸ್ವಲ್ಪ ಕಪ್ಪಗಿದ್ದೇನೆ. ಇದರಿಂದ ಅವಳಿಗೆ ಮುಜುಗರ ಇಲ್ಲ. ಆದರೆ ಅವಳು ನನಗಿಂತ 2 ವರ್ಷ 3 ತಿಂಗಳು ದೊಡ್ಡವಳು. ಇದರಿಂದಾಗಿ ನಾವು ಮುಂದುವರೆಯುವುದೋ ಬೇಡವೋ ಎಂಬ ಪ್ರಶ್ನೆ ಕಾಡುತ್ತಿದೆ. ನಮಗೆ ಒಬ್ಬನ್ನೊಬ್ಬರು ಬಿಟ್ಟಿರುವುದು ಕಷ್ಟ. ಮನೆಯಲ್ಲಿ ಒಪ್ಪುತ್ತಾರೋ ಇಲ್ಲವೋ ಎನ್ನುವುದು ಅನುಮಾನ. ನಾವೇನು ಮಾಡಬೇಕು.

–ವಿಶಾಲ್, ಊರು ಬೇಡ

ಉತ್ತರ: ಪ್ರೀತಿಯಲ್ಲಿ ಬಿದ್ದಾಗ ಅನೇಕ ವಿಷಯಗಳು ದೊಡ್ಡ ಸಂಗತಿ ಎನ್ನಿಸುವುದಿಲ್ಲ. ಅದರಲ್ಲಿ ಒಂದು ವಯಸ್ಸು. ನಿಮ್ಮಬ್ಬರ ನಡುವೆ ಒಂದು ಬಂಧವಿದ್ದರೆ, ನೀವು ಮಾನಸಿಕವಾಗಿ ಒಬ್ಬರನ್ನು ಒಪ್ಪಿದ್ದರೆ, ಒಬ್ಬರು ಕುಳಿತು ಮದುವೆಯ ಬಗ್ಗೆ ಚರ್ಚಿಸಿ ಒಪ್ಪಿಕೊಳ್ಳಿ. ನಿಮ್ಮಿಬ್ಬರು ತಂದೆ–ತಾಯಿಗಳ ಜೊತೆ ಮಾತನಾಡಿ, ಅವರಿಗೆ ನಾವಿಬ್ಬರೂ ಖುಷಿಯಾಗಿರುತ್ತೇವೆ ಎಂಬ ಭರವಸೆ ನೀಡಿ. ವಯಸ್ಸಿನ ಅಂತರ ನಗಣ್ಯ. ಹಾಗಾಗಿ ಅದರ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.

*

ಏನಾದ್ರೂ ಕೇಳ್ಬೋದು

ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ. ನಿಮ್ಮ ಪ್ರಶ್ನೆಗಳನ್ನು ಇಮೇಲ್ ಹಾಗೂ ವಾಟ್ಸ್ಯಾಪ್‌ ಮೂಲಕವು ಕಳುಹಿಸಬಹುದು.

ಇಮೇಲ್ ವಿಳಾಸ; bhoomika@prajavani.co.in ವಾಟ್ಸ್ಯಾಪ್ ಸಂಖ್ಯೆ: 9482006746

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.