ಮಂಗಳವಾರ, ಮಾರ್ಚ್ 2, 2021
29 °C

ಹಾರರ್‌ ಅಲ್ಲ, ಸಾಮಾಜಿಕ ಕಳಕಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾರರ್‌ ಅಲ್ಲ, ಸಾಮಾಜಿಕ ಕಳಕಳಿ

‘ಮಂತ್ರಂ 2 ಹಾರರ್‌ ಸಿನಿಮಾ ಅಲ್ಲ, ಇದೊಂದು ಸಾಮಾಜಿಕ ಕಳಕಳಿಯ ಚಿತ್ರ’ ಹೀಗೆ ಹೇಳಿಕೊಂಡೇ ಮಾತಿಗೆ ಇಳಿದರು ನಿರ್ದೇಶಕ ಸಂಗಮೇಶ ಸಜ್ಜನ. ಕಳೆದ ವಾರವಷ್ಟೇ ಬಿಡುಗಡೆಯಾದ ಅವರದೇ ನಿರ್ದೇಶನದ ‘ಮಂತ್ರಂ’ ಸಿನಿಮಾದ ಮುಂದುವರಿದ ಭಾಗವನ್ನು ತೆಗೆಯಲು ಈಗಾಗಲೇ ಸಜ್ಜಾಗಿದ್ದಾರೆ.

‘ಮಂತ್ರಂ’ ಸಿನಿಮಾದಲ್ಲಿಯೇ ನಿರ್ದೇಶಕರು ಹಾರರ್‌ ಅಂಶಗಳ ಜತೆಗೆ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ಅಂಶಗಳನ್ನೂ ಹೇಳಿದ್ದರು. ‘ಮಂತ್ರಂ 2’ನಲ್ಲಿ ಯಾವುದೇ ಹಾರರ್ ಅಂಶಗಳುಇರುವುದಿಲ್ಲವಂತೆ. ಬದಲಿಗೆ ಸಂಪೂರ್ಣವಾಗಿ ಸಾಮಾಜಿಕ ಸಮಸ್ಯೆಯ ಮೇಲೆಯೇ ಕಥೆ ಕೇಂದ್ರೀಕೃತ ಆಗಿರುತ್ತದೆ ಎನ್ನುತ್ತಾರೆ ನಿರ್ದೇಶಕರು.

‘ಮಂತ್ರಂ ಸಿನಿಮಾದ ಕೊನೆಯಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡದೆ ಹಾಗೆಯೇ ಬಿಟ್ಟಿದ್ದೆವು. ಆ ಪ್ರಶ್ನೆಗಳಿಗೆ ಈ ಭಾಗದಲ್ಲಿ ಉತ್ತರ ನೀಡಲಾಗುವುದು. ‘ಮಂತ್ರಂ’ ಚಿತ್ರದಲ್ಲಿ ನಾಯಕ– ನಾಯಕಿಯಾಗಿ ನಟಿಸಿದ್ದ ಮಣ ಶೆಟ್ಟಿ ಮತ್ತು ಪಲ್ಲವಿ ರಾಜು ಅವರೇ ಈ ಚಿತ್ರದಲ್ಲಿಯೂ ಮುಂದುವರಿಯಲಿದ್ದಾರೆ. ಅವರ ಜತೆಗೆ ಕನ್ನಡದ ಒಬ್ಬ ಸ್ಟಾರ್‌ ನಟ ಕೂಡ ನಟಿಸಲಿದ್ದಾರೆ’’ ಎಂದು ನಿರ್ದೇಶಕರು ಹೇಳಿದರು. ಆದರೆ ಆ ನಟ ಯಾರು ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ.

‘ಮಂತ್ರ ಒಳ್ಳೆಯ ಸಾಮಾಜಿಕ ಸಂದೇಶ ಇರುವ ಸಿನಿಮಾ. ಮಂತ್ರಂ 2ನಲ್ಲಿಯೂ ಅದು ಮುಂದುವರಿಯಲಿದೆ. ಒಂದನೇ ಭಾಗದಲ್ಲಿ ನಮ್ಮ ಪಾತ್ರಗಳಿಗೆ ತಾರ್ಕಿಕ ಅಂತ್ಯ ಇರಲಿಲ್ಲ. ಎರಡನೇ ಭಾಗದಲ್ಲಿ ಅದು ಒಂದು ತಾರ್ಕಿಕ ಅಂತ್ಯ ಕಾಣಲಿದೆ. ನಮ್ಮ ಜತೆ ಹಲವು ಹಿರಿಯ ನಟರು ಮತ್ತು ಒಬ್ಬ ಸ್ಟಾರ್‌ ನಟ ಕೂಡ ತಂಡಕ್ಕೆ ಸೇರಿಕೊಳ್ಳಲಿದ್ದಾರೆ’ ಎಂದರು ಪಲ್ಲವಿ ರಾಜು.

ನಿರ್ಮಾಪಕ ಅಮಿತ್ ಚೌಧರಿ ಮಾತನಾಡಿ ‘ಎರಡನೇ ಭಾಗ ಇನ್ನಷ್ಟು ಅದ್ದೂರಿಯಾಗಿ ಚಿತ್ರೀಕರಿಸಲಿದ್ದೇವೆ. ಇನ್ನೆರಡು ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಏಳು ದಿನ ಚೀನಾ ದೇಶದಲ್ಲಿಯೂ ಚಿತ್ರೀಕರಿಸುತ್ತೇವೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.