ಶನಿವಾರ, ಮಾರ್ಚ್ 6, 2021
29 °C

ಕಾಡಾನೆ ದಾಳಿಗೆ ಇಬ್ಬರು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಡಾನೆ ದಾಳಿಗೆ ಇಬ್ಬರು ಬಲಿ

ದಾವಣಗೆರೆ: ಚಿತ್ರದುರ್ಗ ಜಿಲ್ಲೆಯಿಂದ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಹೋಬಳಿ ಪ್ರವೇಶಿಸಿದ್ದ ಜೋಡಿ ಕಾಡಾನೆಗಳ ಪೈಕಿ ಒಂದು ಶುಕ್ರವಾರ ದಾಳಿ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ದಾಳಿಯಿಂದಾಗಿ ಮೂವರು ಗಾಯಗೊಂಡಿದ್ದಾರೆ.

ಹೊಸನಗರ ಗ್ರಾಮದ ಈಶ್ವರ್‌ ನಾಯ್ಕ (65) ಹಾಗೂ ಹೊಸಳ್ಳಿ ಗ್ರಾಮದ ರಮೇಶ್‌ (45) ಮೃತಪಟ್ಟಿದ್ದಾರೆ. ತ್ಯಾವಣಿಗೆಯ ಗಣೇಶ್‌ (42) ಗಂಭೀರವಾಗಿ ಗಾಯಗೊಂಡಿದ್ದು, ಎಸ್‌.ಎಸ್‌ ಹೈಟೆಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ತ್ಯಾವಣಿಗೆಯ ಗಂಗಾಧರ್‌ ಹಾಗೂ ಹೊಸನಗರದ ಹನುಮಂತನಾಯ್ಕ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಹಿರೇಕುರಬರಹಳ್ಳಿಯಲ್ಲಿ ಎಮ್ಮೆ ಹಾಗೂ ಹೊಸನಗರದಲ್ಲಿ ಎರಡು ಎತ್ತುಗಳನ್ನೂ ಆನೆಯು ಗಂಭೀರವಾಗಿ ಗಾಯಗೊಳಿಸಿದೆ. ದಾರಿಯಲ್ಲಿ ಬೈಕ್‌ ಹಾಗೂ ಟ್ರ್ಯಾಕ್ಟರ್‌ಗೂ ಹಾನಿ ಮಾಡಿದೆ.

ಆನೆಯ ಪಯಣ: ‘ಗುರುವಾರ ರಾತ್ರಿ ಚಿತ್ರದುರ್ಗದಿಂದ ದಾವಣಗೆರೆ ಗಡಿಭಾಗಕ್ಕೆ ಬಂದ ಆನೆಗಳು ಬೆಳಿಗ್ಗೆ ತ್ಯಾವಣಿಗೆಯಲ್ಲಿ ಕಾಣಿಸಿಕೊಂಡವು. ಒಂದು ಆನೆ ಸೂಳೆಕೆರೆ ಅರಣ್ಯಪ್ರದೇಶಕ್ಕೆ ತೆರಳಿದರೆ, ಇನ್ನೊಂದು ಆನೆ ದೊಡ್ಡಘಟ್ಟ, ಹಿರೇಕುರಬರಹಳ್ಳಿ, ಕಣಿವೆ ಬಿಳಚಿ ಗ್ರಾಮದ ಮಾರ್ಗವಾಗಿ ಹೊಸಹಳ್ಳಿ, ಹೊಸನಗರ ಪ್ರವೇಶಿಸಿತು.

ಇಬ್ಬರ ಮೇಲೆ ದಾಳಿ ನಡೆಸಿದ ಬಳಿಕ ಆನೆ ಯಾರಿಗೂ ಕಾಣಿಸಿಕೊಂಡಿಲ್ಲ ಎಂದು ಎಸಿಎಫ್‌ ಶಶಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಆನೆ ದಾಳಿ ಹಿನ್ನೆಲೆಯಲ್ಲಿ ಬಸವಾಪಟ್ಟಣ ಹೋಬಳಿ ವ್ಯಾಪ್ತಿಯ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗ್ರಾಮಸ್ಥರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

ಆನೆಗಳನ್ನು ಸೆರೆ ಹಿಡಿಯಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಒತ್ತಾಯಿಸಿದ್ದಾರೆ.

ಶಿವಮೊಗ್ಗ, ದಾವಣಗೆರೆ, ತರೀಕೆರೆ, ಭದ್ರಾವತಿ, ಚನ್ನಗಿರಿ ವಿಭಾಗದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.