ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು

Last Updated 9 ಡಿಸೆಂಬರ್ 2017, 5:59 IST
ಅಕ್ಷರ ಗಾತ್ರ

ಮೈಸೂರು: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಹಾಗೂ ಸುಸಜ್ಜಿತ ಆಸ್ಪತ್ರೆ ತೆರೆಯುವ ಗುರಿ ಇಟ್ಟುಕೊಂಡಿದ್ದೇನೆ. ಬಡವರಿಗೆ ಸುಲಭವಾಗಿ ಚಿಕಿತ್ಸೆ ದೊರೆಯಬೇಕೆಂಬುದು ನನ್ನ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಶುಕ್ರವಾರ ತಿಳಿಸಿದರು.‌

ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ವಿದ್ಯಾವರ್ಧಕ ಸಂಘದ ವಜ್ರಮಹೋತ್ಸವ ಆಚರಣೆ ಹಾಗೂ ಸಂಘದ ಸಂಸ್ಥಾಪಕ ಕಾರ್ಯದರ್ಶಿ, ಮಾಜಿ ಸಚಿವ ಕೆ.ಪುಟ್ಟಸ್ವಾಮಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನನ್ನನ್ನು ಡಾಕ್ಟ್ರು ಮಾಡಬೇಕೆಂದು ಅಪ್ಪ ಕನಸು ಹೊಂದಿದ್ದರು. ಕನ್ನಡ ಮಾಧ್ಯಮದಲ್ಲಿ ಓದಿ ಎಸ್ಸೆಸ್ಸೆಲ್ಸಿಯಲ್ಲಿ ಇಡೀ ಶಾಲೆಗೆ ಮೊದಲು ಬಂದಿದ್ದೆ. ಆದರೆ, ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡು ಹಿಂದೆ ಬಿದ್ದೆ‌. ಹೀಗಾಗಿ, ನನಗೆ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗಲಿಲ್ಲ’ ಎಂದರು.

‘ಆಗ ವೈದ್ಯಕೀಯ ಸಚಿವರಾಗಿದ್ದ ಪುಟ್ಟಸ್ವಾಮಿ ಅವರನ್ನು ಶಾಸಕರ ನೆರವಿನಿಂದ ಭೇಟಿ ಮಾಡಿ ಸೀಟು ಕೊಡಿಸುವಂತೆ ಕೋರಿದ್ದೆ. ಕಡಿಮೆ ಅಂಕವಿದ್ದ ಕಾರಣ ಕಾನೂನಿನ ಪ್ರಕಾರ ಸೀಟು ಕೊಡಿಸಲು ಆಗಲ್ಲ ಎಂದಿದ್ದರು. ಆಗ ಕೇವಲ ನಾಲ್ಕು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇದ್ದವು. ಈಗ 18 ಸರ್ಕಾರಿ ವೈದ್ಯಕೀಯ ಕಾಲೇಜುಗಳಿವೆ. ಇವೆಲ್ಲವನ್ನು ಹಣಕಾಸು ಸಚಿವನಾಗಿ ನಾನೇ ಮಂಜೂರು ಮಾಡಿದ್ದು. 2,700 ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯುತ್ತಿದೆ‌’ ಎಂದು ಹೇಳಿದರು.

‘ಇನ್ನೂ ಆರು ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಮಂಜೂರಾತಿ ನೀಡಿದ್ದೇನೆ. ಜನವರಿಯಲ್ಲಿ ಶಂಕುಸ್ಥಾಪನೆ ನೆರವೇರಲಿದೆ. ಹಳ್ಳಿಗಾಡಿನ, ತಳವರ್ಗದ ಹಾಗೂ ಹಿಂದುಳಿದ ಸಮುದಾಯಗಳ ಮಕ್ಕಳು ಓದಲು ಸಾಧ್ಯವಾಗಬೇಕು ಎಂಬುದು ನನ್ನ ಆಸೆ’ ಎಂದು ನುಡಿದರು.

‘ನನಗೆ ವೈದ್ಯಕೀಯ ಸೀಟು ಸಿಕ್ಕಿದ್ದರೆ ಡಾಕ್ಟ್ರಾಗಿ ಕೆಲಸ ಮಾಡುತ್ತಾ ಇರುತ್ತಿದ್ದೆ. ಸಿಗದೇ ಇದ್ದದ್ದು ಒಳ್ಳೆಯದಾಯಿತು. ಹೀಗಾಗಿ, ಮುಖ್ಯಮಂತ್ರಿ ಪದವಿಗೇರಲು ಸಾಧ್ಯವಾಯಿತು’ ಎಂದರು. ‘ಪುಟ್ಟಸ್ವಾಮಿ ಅವರು ಹಳ್ಳಿಗಾಡಿನ ಮಕ್ಕಳಿಗೆ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಅದೀಗ ಹೆಮ್ಮೆರವಾಗಿ ಬೆಳೆದಿದೆ’ ಎಂದು ಶ್ಲಾಘಿಸಿದರು.

ಡಿ.ಎಸ್‌.ಜಯಪ್ಪಗೌಡ ಅವರು ಸಂಪಾದಿಸಿರುವ ‘ವಿಧಾನ ಮಂಡಲದಲ್ಲಿ ಕೆ.ಪುಟ್ಟಸ್ವಾಮಿ’ ಗ್ರಂಥವನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಿಡುಗಡೆ ಮಾಡಿದರು. ಕಾಲೇಜು ವಿಸ್ತರಣಾ ಕಟ್ಟಡಗಳ ಶಂಕುಸ್ಥಾಪನೆಯನ್ನು ಸಿದ್ದರಾಮಯ್ಯ ನೆರವೇರಿಸಿದರು. ಬಳಿಕ ಸ್ಥಾಪಕ ಸದಸ್ಯರ ಭಾವಚಿತ್ರ ಅನಾವರಣಗೊಳಿಸಿದರು.

ಆದಿಚುಂಚನಗಿರಿ ಕ್ಷೇತ್ರದ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಸಂಸದ ಪ್ರತಾಪಸಿಂಹ, ವಿಧಾನ ಪರಿಷತ್‌ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ವಾಸು, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್‌, ಮೇಯರ್‌ ಎಂ.ಜೆ.ರವಿಕುಮಾರ್‌, ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಡಿ.ಮಾದೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT