ಬುಧವಾರ, ಮಾರ್ಚ್ 3, 2021
26 °C

ಇವಿಎಂ ದುರ್ಬಳಕೆ ಆಗಿಲ್ಲ: ಆಯೋಗದ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇವಿಎಂ ದುರ್ಬಳಕೆ ಆಗಿಲ್ಲ: ಆಯೋಗದ ಸ್ಪಷ್ಟನೆ

ಅಹಮದಾಬಾದ್‌ /ನವದೆಹಲಿ: ಗುಜರಾತ್‌ನಲ್ಲಿ ಶನಿವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಪೋರಬಂದರಿನ ಮೂರು ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು (ಇವಿಎಂ) ಬ್ಲೂಟೂತ್ ತಂತ್ರಜ್ಞಾನದ ಮೂಲಕ ಹೊರಗಿನ ಸಾಧನಗಳಿಗೆ ಸಂಪರ್ಕಿಸಿ ದುರ್ಬಳಕೆ ಮಾಡಿರುವ ಸಾಧ್ಯತೆ ಇದೆ ಎಂಬ ಆರೋಪವನ್ನು ಚುನಾವಣಾ ಆಯೋಗ ತಳ್ಳಿಹಾಕಿದೆ.

‘ಕೆಲವೇ ಕೆಲವು ಇವಿಎಂ ಮತ್ತು ಮತದಾನ ದೃಢೀಕರಣ ರಸೀದಿ ಯಂತ್ರಗಳಲ್ಲಿ (ವಿವಿಪಿಎಟಿ) ದೋಷ ಕಂಡು ಬಂದಿತ್ತು. ತಕ್ಷಣವೇ ಅವುಗಳ ಬದಲಿಗೆ ಹೊಸ ಯಂತ್ರಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಅದು ಹೇಳಿದೆ.

ಮತಯಂತ್ರಗಳು ಒಂದೇ ಅಭ್ಯರ್ಥಿಗೆ ತಪ್ಪಾಗಿ ಮತಗಳನ್ನು ನಮೂದು ಮಾಡುತ್ತಿದ್ದ ಬಗ್ಗೆಯೂ ಯಾವುದೇ ದೂರು ಬಂದಿಲ್ಲ ಎಂದು ಆಯೋಗ ಹೇಳಿದೆ.

‘ಪೋರಬಂದರ್‌ ಕ್ಷೇತ್ರದ ಮೆಮನ್ವಾಡಾದಲ್ಲಿನ ಮೂರು ಮತಗಟ್ಟೆಗಳಲ್ಲಿ ಇವಿಎಂಗಳನ್ನು ಬ್ಲೂಟೂತ್‌ ಮೂಲಕ ಬೇರೆ ಸಾಧನಗಳಿಗೆ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಕಾಂಗ್ರೆಸ್‌ನ ಅಭ್ಯರ್ಥಿ ಅರ್ಜುನ್‌ ಮೊಧ್ವಾಡಿಯಾ ದೂರು ನೀಡಿದ್ದರು. ಆಯೋಗವು ಈ ಬಗ್ಗೆ ತಕ್ಷಣವೇ ತನಿಖೆ ನಡೆಸಿತ್ತು.

‘ಇವಿಎಂಗಳನ್ನು ಬ್ಲೂಟೂತ್‌ ಮೂಲಕ ಬೇರೆ ಸಾಧನಗಳಿಗೆ ಸಂಪರ್ಕಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಮೊಬೈಲ್‌ ಫೋನಿನ ಬ್ಲೂಟೂತ್‌  ಚಾಲೂ ಮಾಡಿದಾಗ, ಲಭ್ಯವಿದ್ದ ಬ್ಲೂಟೂತ್‌ ಸಾಧನಗಳ ಪಟ್ಟಿಯಲ್ಲಿ ‘ಇಸಿಒ 105‘ ಎಂಬ ಹೆಸರಿನ ಸಾಧನವನ್ನು ತೋರಿಸಿದೆ’ ಎಂದು ಮೊಧ್ವಾಡಿಯಾ ಹೇಳಿದ್ದರು.

ಇದಕ್ಕೆ ದೆಹಲಿಯಲ್ಲಿ ಸ್ಪಷ್ಟನೆ ನೀಡಿರುವ ಉಪ ಮುಖ್ಯ ಚುನಾವಣಾ ಆಯುಕ್ತ ಸುದೀಪ್‌ ಜೈನ್‌, ‘ಆಯೋಗವು ತಕ್ಷಣ ಚುನಾವಣಾ ವೀಕ್ಷಕರನ್ನು ಮತ್ತು ಸ್ಥಳೀಯ ಚುನಾವಣಾಧಿಕಾರಿಗಳನ್ನು ಮತಗಟ್ಟೆಗಳಿಗೆ ಕಳುಹಿಸಿ ಪರಿಶೀಲನೆ ನಡೆಸಿದೆ. ಮತಗಟ್ಟೆಯಲ್ಲಿದ್ದ ಏಜೆಂಟರೊಬ್ಬರು ಇಸಿಒ 105 ಎಂಬ ಐಡಿಯ ಸ್ಮಾರ್ಟ್‌ಪೋನ್‌ ಹೊಂದಿದ್ದರು. ಹಾಗಾಗಿ ಲಭ್ಯವಿರುವ ಬ್ಲೂಟೂತ್‌ ಸಾಧನಗಳ ಪಟ್ಟಿಯಲ್ಲಿ ಆ ಹೆಸರು ಬರುತ್ತಿತ್ತು’ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.