ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯಕ್ಕೆ ಹೊಸ ಔಷಧ ಬಳಸಲು ಕೇಂದ್ರ ಅನುಮತಿ

ಡೆಲಾಮನಿಡ್‌ ಬಳಕೆ ತರಬೇತಿಗೆ ಕೇಂದ್ರಕ್ಕೆ ರಾಜ್ಯದ ತಂಡ
Last Updated 10 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ಷಯ ರೋಗಿಗಳಿಗೆ ಹೊಸ ಔಷಧವನ್ನು ಬಳಸಲು ಕೇಂದ್ರ ಆರೋಗ್ಯ ಇಲಾಖೆ ಅನುಮತಿ ನೀಡಿದ್ದು, ರಾಜ್ಯದಲ್ಲೂ ರೋಗಿಗಳಿಗೆ ಅದನ್ನು ಬಳಸಲು ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.

ಕೇಂದ್ರ ಆರೋಗ್ಯ ಇಲಾಖೆ ಒಪ್ಪಿಗೆ ನೀಡಿರುವ ಹೊಸ ಔಷಧ ಡೆಲಾಮನಿಡ್‌ (Delamanid). ಇದರ ಬಳಕೆಗೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ತರಬೇತಿ ನೀಡಲಿದ್ದು, ರಾಜ್ಯದಿಂದಲೂ ಒಂದು ತಂಡ ಇದೇ ತಿಂಗಳು ದೆಹಲಿಗೆ ತೆರಳಲಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ.

ಕರ್ನಾಟಕವೂ ಸೇರಿ ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಕ್ಷಯ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬಹು ಔಷಧ(ಎಂಡಿಆರ್‌) ಮತ್ತು ವ್ಯಾಪಕ ಔಷಧ (ಎಕ್ಸ್‌ಡಿಆರ್‌) ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡ ಕ್ಷಯದ ಪ್ರಕರಣಗಳೇ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

‘ಸದ್ಯ ಬಳಕೆಯಲ್ಲಿಯರುವ ಔಷಧಗಳಿಗಿಂತ ‘ಡೆಲಾಮನಿಡ್‌’ ಹೆಚ್ಚು ಪರಿಣಾಮಕಾರಿ ಮತ್ತು ಉತ್ತಮ ಪರ್ಯಾಯ. ಡೆಲಾಮನಿಡ್‌ ಅನ್ನು ದಕ್ಷಿಣ ಆಫ್ರಿಕಾ ಮತ್ತು ಜಪಾನ್‌ನಲ್ಲಿ ಕ್ಲಿನಿಕಲ್‌ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಶೇ.70 ರಿಂದ 80 ರಷ್ಟು ರೋಗಿಗಳು ಸ್ಪಂದಿಸಿದ್ದಾರೆ.  ಭಾರತದಲ್ಲಿ 400 ರೋಗಿಗಳ ಮೇಲೆ ಈ ಔಷಧದ ಕ್ಲಿನಿಕಲ್‌ ಟ್ರಯಲ್‌ ನಡೆದಿದ್ದು, ಉತ್ತಮ ಪರಿಣಾಮ ಕಂಡು ಬಂದಿದೆ. ಡೆಲಾಮನಿಡ್‌ ಜೊತೆಗೆ ಬಡಕ್ವಿಲೆನ್‌ ಔಷಧ ಬಳಸಲು ಕೇಂದ್ರ ಆರೋಗ್ಯ ಇಲಾಖೆ ಒಪ್ಪಿಗೆ ನೀಡಿದೆ’ ಎಂದು ಮೂಲಗಳು ತಿಳಿಸಿವೆ.

4 ದಿನಗಳಲ್ಲಿ 1156 ರೋಗಿಗಳ ಪತ್ತೆ: ರಾಜ್ಯದಲ್ಲಿ ಕ್ಷಯ ರೋಗಿಗಳನ್ನು ಗುರುತಿಸುವ ಮತ್ತು ಹತೋಟಿಗೆ ತರುವ ಕಾರ್ಯವನ್ನು ಸರ್ಕಾರ ಸಮರೋಪಾದಿಯಲ್ಲಿ ನಡೆಸಿದೆ. ಇದೇ ತಿಂಗಳ ಮೊದಲ ವಾರ ಸುಮಾರು 1156 ರೋಗಿಗಳನ್ನು ರಾಜ್ಯದಲ್ಲಿ ಪತ್ತೆ ಮಾಡಲಾಗಿದೆ.

ರಾಜ್ಯದ 20 ಜಿಲ್ಲೆಗಳಲ್ಲಿ 67,39,905 ಜನರನ್ನು ಕ್ಷಯ ತಪಾಸಣೆಗೆ ಒಳಪಡಿಸಲು ಉದ್ದೇಶಿಸಲಾಗಿತ್ತು. ಅದರಲ್ಲಿ 41, 35,320 ಜನರನ್ನು ತಪಾಸಣೆಗೆ ಒಳಪಡಿಸಲಾಯಿತು. ಇದರಲ್ಲಿ 1156 ಜನರಲ್ಲಿ ಕ್ಷಯ ಇರುವುದು ಪತ್ತೆ ಆಗಿದೆ. ಬೆಳಗಾವಿಯಲ್ಲಿ ಅತಿ ಹೆಚ್ಚು ರೋಗಿಗಳು (232) ಪತ್ತೆಯಾಗಿದ್ದರೆ, ರಾಮನಗರದಲ್ಲಿ (5) ಅತಿ ಕಡಿಮೆ ರೋಗಿಗಳು ಇದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಕಿ– ಸಂಖ್ಯೆ ತಿಳಿಸಿವೆ.

‘ಇದು ಸೋಂಕು ರೋಗ ಆಗಿರುವುದರಿಂದ ಅತಿ ಬೇಗನೇ ಹರಡುತ್ತದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕ್ಷಯವನ್ನು ಪತ್ತೆ ಮಾಡುವ ವ್ಯವಸ್ಥೆ ಇಲ್ಲ. ಹೀಗಾಗಿ ಕ್ಷಯಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ಕ್ಷಯ ರೋಗದ ವೈರಸ್‌ ಔಷಧ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿರುವ ಯಾವುದೇ ಔಷಧಿಯೂ ನಾಟುತ್ತಿಲ್ಲ’ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಕ್ಷಯವನ್ನು ಅಧಿಸೂಚಿತ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಆದ್ದರಿಂದ, ರಾಜ್ಯದ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಶಂಕಿತ ರೋಗಿಗಳ ಮಾಹಿತಿ ನೀಡುವುದು ಕಡ್ಡಾಯ. ಅಲ್ಲದೆ, ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕ್ಷಯ ರೋಗಿಗಳ ಬಗ್ಗೆ ಸರ್ಕಾರಕ್ಕೆ ತಕ್ಷಣವೇ ಮಾಹಿತಿ ನೀಡಬೇಕು ಎಂದು ಕಟ್ಟುನಿಟ್ಟಿನ ಆದೇಶವನ್ನೂ ಹೊರಡಿಸಿದೆ.

ಕ್ಷಯ ಹರಡುವುದನ್ನು ತಡೆಯಲು ಸರ್ಕಾರಕ್ಕೆ ಸಂಪೂರ್ಣ ಮಾಹಿತಿಯ ಅಗತ್ಯವಿದೆ.  ಕ್ಷಯ ರೋಗಿಗಳು ಬಂದರೆ ಆ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಮಾಹಿತಿ ನೀಡಬೇಕೆಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳಿಗೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ರತನ್ ಕೇತ್ಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT