ಶುಕ್ರವಾರ, ಮಾರ್ಚ್ 5, 2021
30 °C
ವೀರಶೈವ ಧರ್ಮಕ್ಕೆ ಶಾಸ್ತ್ರಗ್ರಂಥ, ವಚನಗಳಲ್ಲಿ ಆಧಾರಗಳಿವೆ: ಶ್ರೀಶೈಲ ಶ್ರೀ

ಬ್ರಿಟಿಷ್‌ ಗೆಜೆಟಿಯರ್‌ಗಳು ಸಾಕ್ಷ್ಯ ಆಗಲಾರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಿಟಿಷ್‌ ಗೆಜೆಟಿಯರ್‌ಗಳು ಸಾಕ್ಷ್ಯ ಆಗಲಾರವು

ದಾವಣಗೆರೆ: ಬ್ರಿಟಿಷರು ಪ್ರಕಟಿಸಿರುವ ಗೆಜೆಟಿಯರ್‌ಗಳನ್ನು ಸಾಕ್ಷ್ಯವನ್ನಾಗಿ ಇಟ್ಟುಕೊಂಡು ಲಿಂಗಾಯತ ಧರ್ಮ ಪ್ರತಿಪಾದನೆ ಮಾಡಲು ಮುಂದಾಗಿರುವುದರಲ್ಲಿ ಅರ್ಥವಿಲ್ಲ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

‘ಬ್ರಿಟಿಷರು ಭಾರತಕ್ಕೆ ವಲಸೆ ಬಂದವರು. ನಮ್ಮ ಧರ್ಮ, ಸಂಸ್ಕೃತಿಯ ಅಮೂಲಾಗ್ರ ಇತಿಹಾಸ ಅರಿಯಲು ಅವರಿಗೆ ಸಾಧ್ಯವಿಲ್ಲ. ಹೀಗಿರುವಾಗ ಅವರು ಪ್ರಕಟಿಸಿರುವ ಗೆಜೆಟಿಯರ್‌ಗಳನ್ನು ಇತಿಹಾಸಕ್ಕೆ ಆಧಾರ ಎಂದು ಸ್ವೀಕರಿಸಲು ಸಾಧ್ಯವಿಲ್ಲ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವಚನ ಸಾಹಿತ್ಯ, ಶಾಸ್ತ್ರಗ್ರಂಥಗಳಲ್ಲಿ ವೀರಶೈವ ಧರ್ಮದ ಅಸ್ತಿತ್ವದ ಬಗ್ಗೆ ಅಪಾರ ಸಾಕ್ಷ್ಯಗಳಿವೆ. ಅವನ್ನು ನಾವು ತೋರಿಸಿದರೂ ಪ್ರತ್ಯೇಕ ಧರ್ಮ ಪ್ರತಿಪಾದಕರು ನೋಡುತ್ತಿಲ್ಲ. ನಾವು ಹೇಳಿದರೂ ಅವರು ಕೇಳುತ್ತಿಲ್ಲ’ ಎಂದರು.

‘ನಾನು ಶೈವನಿದ್ದೆ, ವೀರಶೈವನಾದೆ’ ಎಂದು ಬಸವಣ್ಣ ವಚನದಲ್ಲಿ ಹೇಳಿಕೊಂಡಿದ್ದಾನೆ. ಆದರೆ, ಎಲ್ಲಿಯೂ ಆತನ ವಚನಗಳಲ್ಲಿ ಲಿಂಗಾಯತ ಪದ ಬಳಕೆಯಾಗಿಲ್ಲ. ಆದರೆ, ಒಟ್ಟು ವಚನ ಸಾಹಿತ್ಯದಲ್ಲಿ 200ಕ್ಕೂ ಹೆಚ್ಚು ಬಾರಿ ವೀರಶೈವ ಪದ ಬಳಕೆಯಾಗಿದೆ. ಆದರೆ, ಲಿಂಗಾಯತ ಪದವನ್ನು ಬೇರೆ ವಚನಕಾರರು 12 ಬಾರಿ ಮಾತ್ರ ಪ್ರಯೋಗಿಸಿದ್ದಾರೆ. ವೀರಶೈವ ಅಂದರೆ ಧರ್ಮ, ಲಿಂಗಾಯತ ಎಂಬುದು ಸಂಸ್ಕಾರ’ ಎಂದು ಪ್ರತಿಪಾದಿಸಿದರು.

ಪಂಚಪೀಠಗಳು ಬಸವಣ್ಣನನ್ನು ಒಪ್ಪುವುದಿಲ್ಲ ಎಂಬುದು ಸುಳ್ಳು. ಶ್ರೀಶೈಲ ಪೀಠದ ವಾಗೀಶ್ವರ ಸ್ವಾಮೀಜಿ ‘ಲೋಕಾರ ಬಸವಣ್ಣ’ ಕೃತಿ ರಚಿಸಿದ್ದಾರೆ. ವಿರೋಧಿಗಳ ಮಾತುಗಳಿಗೆ ಭಕ್ತರು ಕಿವಿಗೊಡಬಾರದು.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸೇರಿ ಹಲವು ಕಾನೂನು ತಜ್ಞರು, ‘ಲಿಂಗಾಯತಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಸಿಗಲಾರದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಅರಿವಿದ್ದರೂ ಗೊಂದಲ ಸೃಷ್ಟಿಸಲು ಹಾಗೂ ವೈಯಕ್ತಿಕ ಕಾರಣಕ್ಕೆ ಪ್ರತ್ಯೇಕ ಧರ್ಮದ ಕೂಗು ಹಾಕಲಾಗುತ್ತಿದೆ ಎಂದು ದೂರಿದರು.

ಉಜ್ಜಯಿನಿ ಪೀಠದ ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ವೀರಶೈವ–ಲಿಂಗಾಯತ ಧರ್ಮವನ್ನು ಒಡೆಯುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿರುವುದು ದುರಂತ. ಒಡೆದು ಆಳುವವರನ್ನು ಬೆಂಬಲಿಸಬಾರದು. ಅಂಥ ಉದ್ದೇಶ ಇರುವ ವ್ಯಕ್ತಿಯನ್ನೇ ಒಡೆಯಬೇಕು. ಒಗ್ಗೂಡುವ ಕೂಗಿಗೆ ಮಹತ್ವ ನೀಡಬೇಕು ಎಂದು ಅವರು ಕರೆ ನೀಡಿದರು.

ಗದಗದಲ್ಲಿ ವೀರಶೈವ–ಲಿಂಗಾಯತ ಸಮಾವೇಶ 24ಕ್ಕೆ

ಗುರು–ವಿರಕ್ತ ಪರಂಪರೆಯಲ್ಲಿ ಒಗ್ಗಟ್ಟು ಮೂಡಿಸುವ ಉದ್ದೇಶದಿಂದ ಡಿ. 24ರಂದು ಗದಗದಲ್ಲಿ ವೀರಶೈವ–ಲಿಂಗಾಯತ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪಂಚಪೀಠಾಧೀಶರು, ವಿರಕ್ತ ಪರಂಪರೆಯ ಮಠಾಧೀಶರು ಮತ್ತು ಅಖಿಲ ಭಾರತ ವೀರಶೈವ ಮಹಾಸಭೆಯ ಪದಾಧಿಕಾರಿಗಳು ಹಾಗೂ ಮುಖಂಡರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.

ಸಮಾವೇಶದ ಹಿನ್ನೆಲೆ ತಿಳಿಸಲು ಹಾಗೂ ಸ್ವಚ್ಛತೆಯ ಅರಿವು ಮೂಡಿಸಲು ಡಿ. 13ರಿಂದ 24ರವರೆಗೆ ಪ್ರತಿದಿನ ಬೆಳಿಗ್ಗೆ 5ರಿಂದ ಗದಗ ನಗರದಲ್ಲಿ ಪಾದಯಾತ್ರೆ ನಡೆಸಲಾಗುವುದು. ಈ ವೇಳೆ 30 ಸಾವಿರ ಮಂದಿಗೆ ಲಿಂಗಧಾರಣೆ, 1 ಲಕ್ಷ ರುದ್ರಾಕ್ಷಿ ಧಾರಣೆ ಮಾಡಿಸಲಾಗುವುದು. ನಿತ್ಯವೂ ಸಂಜೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಉಜ್ಜಯಿನಿ ಹಾಗೂ ಶ್ರೀಶೈಲ ಶ್ರೀಗಳು ‘ಸಿದ್ಧಾಂತ ಶಿಖಾಮಣಿ’ ಪ್ರವಚನ ನೀಡುವರು. ಹೊಸಳ್ಳಿ ಬೂದೀಶ್ವರ ಸ್ವಾಮೀಜಿ ‘ವಚನ ಸಾಹಿತ್ಯ ಸಾರ’ದ ಪ್ರವಚನ ನಡೆಸಿಕೊಡುವರು. ಗುರು–ವಿರಕ್ತ ಪರಂಪರೆಯ ಸಿದ್ಧಾಂತ ತಿಳಿಸುವ ಕೆಲಸ ನಡೆಯಲಿದೆ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.