ಬುಧವಾರ, ಮಾರ್ಚ್ 3, 2021
28 °C
12 ವಲಯಗಳನ್ನು ಗುರುತಿಸಿದ ಬಿಡಿಎ

ಪಾರಂಪರಿಕ ವಲಯದಲ್ಲಿ ನಿರ್ಮಾಣ ಚಟುವಟಿಕೆ ನಿಯಂತ್ರಣಕ್ಕೆ ಸಮಿತಿ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಪಾರಂಪರಿಕ ವಲಯದಲ್ಲಿ ನಿರ್ಮಾಣ ಚಟುವಟಿಕೆ ನಿಯಂತ್ರಣಕ್ಕೆ ಸಮಿತಿ

ಬೆಂಗಳೂರು: ನಗರದಲ್ಲಿ ಇನ್ನು ಮುಂದೆ ಕಟ್ಟಡ ನಿರ್ಮಿಸುವ ಮುನ್ನ ಆ ಜಾಗವು ಪಾರಂಪರಿಕ ವಲಯದ ವ್ಯಾಪ್ತಿಯಲ್ಲಿ ಬರುತ್ತದೆಯೋ ಇಲ್ಲವೋ ಎಂಬುದನ್ನು ನೋಡಿಕೊಳ್ಳಬೇಕು. ಕಟ್ಟಡವನ್ನು ದುರಸ್ತಿಪಡಿಸುವ ವೇಳೆ ಅದು ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಸೇರಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.

ನಗರದಲ್ಲಿ 12 ಪಾರಂಪರಿಕ ವಲಯಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪಟ್ಟಿ ಮಾಡಿದೆ. ಅಭಿವೃದ್ಧಿ ಚಟುವಟಿಕೆಯಿಂದ ಪಾರಂಪರಿಕ ಕಟ್ಟಡ ಅಥವಾ ತಾಣಗಳಿಗೆ ಧಕ್ಕೆ ಉಂಟಾಗದಂತೆ ನಿರ್ಬಂಧಿಸುವ ಸಲುವಾಗಿ ‘ಪಾರಂಪರಿಕ ಸಮಿತಿ’ ರಚಿಸುವ ಪ್ರಸ್ತಾವ ‘ಪರಿಷ್ಕೃತ ನಗರ ಮಹಾ ಯೋಜನೆ 2031’ರ ಕರಡಿನಲ್ಲಿದೆ. ಪಾರಂಪರಿಕ ವಲಯಗಳಲ್ಲಿ ನಿರ್ಮಾಣ ಚಟುವಟಿಕೆಗೆ ಅಥವಾ ಪಾರಂಪರಿಕ ಕಟ್ಟಡವನ್ನು ದುರಸ್ತಿ ಪಡಿಸಲು ಪಾರಂಪರಿಕ ಸಮಿತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ.

ಪಾರಂಪರಿಕ ತಾಣಗಳನ್ನು ಮಾನವ ನಿರ್ಮಿತ ಪರಂಪರೆ, ನೈಸರ್ಗಿಕ ಪರಂಪರೆ ಹಾಗೂ ಸಾಂಸ್ಕೃತಿಕ ಪರಂಪರೆ ಎಂದು ಬಿಡಿಎ ವರ್ಗೀಕರಿಸಿದೆ.

ಮಾನವ ನಿರ್ಮಿತ ಪರಂಪರೆ

ಸ್ಪರ್ಶಿಸಬಹುದಾದ ಹಾಗೂ ಸಂಗ್ರಹಯೋಗ್ಯವಾದ ಸ್ಮಾರಕಗಳು, ಕಲಾಕೃತಿಗಳು, ವಿಶಿಷ್ಟ ವಾಸ್ತುಪ್ರಕಾರವನ್ನು ಹೊಂದಿರುವ ಕಟ್ಟಡಗಳು, ನಿರ್ದಿಷ್ಟ ತಾಣಗಳು ನಿರ್ಮಿತ ಪರಂಪರೆ ಪಟ್ಟಿಯಲ್ಲಿವೆ. ಚಾರಿತ್ರಿಕ, ಸುಂದರವಾದ, ಪ್ರಾಚ್ಯ, ವಾಸ್ತುಶಿಲ್ಪ, ವೈಜ್ಞಾನಿಕ ಹಾಗೂ ದೇಸಿ ಮೌಲ್ಯಗಳ ಸಂರಕ್ಷಣೆಯ ಉದ್ದೇಶದಿಂದ ಇವುಗಳನ್ನು ರಕ್ಷಿಸುವ ಅಗತ್ಯವಿದೆ. ವಿಧಾನಸೌಧ, ಅಠಾರ ಕಚೇರಿ (ಹೈಕೋರ್ಟ್‌), ರಾಜ್ಯ ಕೇಂದ್ರ ಗ್ರಂಥಾಲಯ, ಬೆಂಗಳೂರು ಕೋಟೆ ನಿರ್ಮಿತ ಪರಂಪರೆಯ ಪಟ್ಟಿಯಲ್ಲಿವೆ. ಶೇಕಡಾ 97ರಷ್ಟು ಪಾರಂಪರಿಕ ತಾಣಗಳು ಮಾನವ ನಿರ್ಮಿತ ಪರಂಪರೆಗಳಾಗಿವೆ.

ನೈಸರ್ಗಿಕ ಪರಂಪರೆ

ಸೌಂದರ್ಯದ ದೃಷ್ಟಿಯಿಂದ ಹಾಗೂ ವೈಜ್ಞಾನಿಕ ದೃಷ್ಟಿಯಿಂದ ಮಹತ್ವ ಪಡೆದ ಭೌತಿಕ ಹಾಗೂ ಜೈವಿಕ ರಚನೆಗಳು ನೈಸರ್ಗಿಕ ಪರಂಪರೆಯ ಪಟ್ಟಿಯಲ್ಲಿವೆ. ಭೌಗೋಳಿಕ ತಾಣಗಳು, ಕೆಲವು ಅಳಿವಿನ ಅಂಚಿನಲ್ಲಿರುವ ಸಸ್ಯ, ಪ್ರಾಣಿ ಹಾಗೂ ಪಕ್ಷಿ ಸಂಕುಲಗಳಿಗೆ ನೆಲೆ ಒದಗಿಸಿರುವ ತಾಣಗಳನ್ನೂ ಈ ಪಟ್ಟಿಯಲ್ಲಿ ಕಾಣಬಹುದು. ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌, ಮಾಣೆಕ್‌ ಷಾ ಪರೇಡ್‌ ಮೈದಾನ, ಅರಮನೆ ಮೈದಾನ, ಅಲಸೂರು ಕೆರೆ, ಸ್ಯಾಂಕಿ ಕರೆ, ದೊಡ್ಡ ಆಲದ ಮರ ಈ ಪಟ್ಟಿಯಲ್ಲಿರುವ ಪ್ರಮುಖ ತಾಣಗಳು. ಪಾರಂಪರಿಕ ತಾಣಗಳಲ್ಲಿ ಶೇ 2 ರಷ್ಟು ಮಾತ್ರ ಈ ವರ್ಗದಲ್ಲಿವೆ.

ಸಾಂಸ್ಕೃತಿಕ ಪರಂಪರೆ

ಮನುಕುಲದ ಸಾಂಸ್ಕೃತಿಕ ವೈಭವವನ್ನು ಎತ್ತಿಹಿಡಿಯುವ ತಾಣಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಗುರುತಿಸಬಹುದಾದ ವಿಶಿಷ್ಟ ಮಾನವ ಅನುಭವ ಕಟ್ಟಿಕೊಡುವ ವಿಚಾರಗಳು ಈ ಪಟ್ಟಿಯಲ್ಲಿವೆ. ಧರ್ಮರಾಯ ದೇವಸ್ಥಾನದಲ್ಲಿ ನಡೆಯುವ ಕರಗ ಉತ್ಸವ, ಬಸವನ ಗುಡಿಯ ಕಡಲೆಕಾಯಿ ಪರಿಷೆ, ವಿ.ವಿ.ಪುರದ ಆಹಾರ ಬೀದಿ (ಫುಡ್‌ ಸ್ಟ್ರೀಟ್‌), ಗಾಂಧಿಬಜಾರ್‌ನ ವಿದ್ಯಾರ್ಥಿಭವನ ಹೋಟೆಲ್‌, ಕೋಶಿಸ್‌ ಕೆಫೆ, ಶಿವಾಜಿನಗರ ಬಳಿ ನಡೆಯುವ ಮೇರಿ ಉತ್ಸವ, ಹಲಸೂರಿನ ಸೋಮೇಶ್ವರ ದೇವಸ್ಥಾನದ ರಥೋತ್ಸವ ಬೀದಿ ಈ ಪಟ್ಟಿಯಲ್ಲಿವೆ.

ಪಾರಂಪರಿಕ ವಲಯ: ಪ್ರದೇಶ, ಕಟ್ಟಡ ಅಥವಾ ಸ್ಮಾರಕದ ಚಾರಿತ್ರಿಕ ಅಂಶ, ನಗರದ ಗುಣಲಕ್ಷಣ, ಇಲ್ಲಿನ ಚಟುವಟಿಕೆ, ವಾಸ್ತುಶಿಲ್ಪದ ಗುಣಲಕ್ಷಣ, ಶೈಲಿ, ಪ್ರಾದೇಶಿಕ ವಿಸ್ತಾರ ಹಾಗೂ ಸಮಂಜಸ ಅಂಶಗಳ ಆಧಾರದಲ್ಲಿ 12 ಪಾರಂಪರಿಕ ವಲಯಗಳನ್ನು ಗುರುತಿಸಲಾಗಿದೆ. ಈ ವಲಯಗಳನ್ನು ಉಪವಲಯಗಳನ್ನಾಗಿ ವಿಂಗಡಿಸಲಾಗಿದೆ.

‘ನಗರದ ಪಾರಂಪರಿಕ ವಲಯಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರು ಕೈಜೋಡಿಸಬೇಕು ಎಂಬ ಆಶಯ ನಮ್ಮದು. ಈ ಪ್ರಕ್ರಿಯೆಗೆ ಸ್ಪಷ್ಟತೆ ನೀಡುವ ಸಲುವಾಗಿಯೇ ಪಾರಂಪರಿಕ ವಲಯದಲ್ಲಿ ನಡೆಯುವ ಕೆಲವೊಂದು ಅಭಿವೃದ್ಧಿ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲು ಮುಂದಾಗಿದ್ದೇವೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

‘ಉದಾಹರಣೆಗೆ, ಕೇಂದ್ರೀಯ ಆಡಳಿತಾತ್ಮಕ ವಲಯದಲ್ಲಿ ರಾಜಭವನ, ವಿಧಾನಸೌಧ, ಹೈಕೋರ್ಟ್‌ (ಅಠಾರ ಕಚೇರಿ) ಪಾರಂಪರಿಕ ಕಟ್ಟಡಗಳು ಬರುತ್ತವೆ. ಈ ವಲಯವನ್ನು ಮೂರು ಉಪವಲಯಗಳನ್ನಾಗಿ ವರ್ಗೀಕರಿಸಲಾಗಿದೆ. ಇಲ್ಲಿನ ಪಾರಂಪರಿಕ ಕಟ್ಟಡಗಳ ಬಳಿ ವಾಣಿಜ್ಯ ಉದ್ದೇಶದ ಯಾವುದೇ ಹೋರ್ಡಿಂಗ್‌ಗಳನ್ನು ಅಳವಡಿಸಲು ಅವಕಾಶವಿಲ್ಲ. ಪಾರಂಪರಿಕ ಸಮಿತಿಯ ಅನುಮತಿ ಪಡೆಯದೆ ಹೊಸ ಕಟ್ಟಡ ನಿರ್ಮಿಸುವಂತಿಲ್ಲ. ರಾಜಭವನ ರಸ್ತೆಯ 45 ಮೀ ವ್ಯಾಪ್ತಿಯಲ್ಲಿ 21 ಮೀಟರ್‌ಗಿಂತ ಹೆಚ್ಚು ಎತ್ತರದ ಕಟ್ಟಡ ಕಟ್ಟುವುದಕ್ಕೆ ಅವಕಾಶ ಇಲ್ಲ. ಈ ವಲಯದಲ್ಲಿ ರಸ್ತೆ ವಿಸ್ತರಣೆ ಮಾಡಲು ಹಾಗೂ ಮೂಲಸೌಕರ್ಯ ಕೊಳವೆ ಅಳವಡಿಸುವುದಕ್ಕೂ ಪಾರಂಪರಿಕ ಸಮಿತಿಯ ಅನುಮತಿ ಅಗತ್ಯ’ ಎಂದು ಅವರು ವಿವರಿಸಿದರು.

‘ಪಾರಂಪರಿಕ ಕಟ್ಟಡಗಳ ಬಾಹ್ಯ ಸೌಂದರ್ಯಕ್ಕೆ ಧಕ್ಕೆ ಉಂಟಾಗುವಂತೆ ಅಕ್ಕಪಕ್ಕದಲ್ಲಿ ಹೊಸ ಕಟ್ಟಡ ಕಟ್ಟುವುದನ್ನು ನಿರ್ಬಂಧಿಸಲಾಗುತ್ತದೆ. ಹೊಸ ಕಟ್ಟಡದ ವಿನ್ಯಾಸವು ಪಾರಂಪರಿಕ ಕಟ್ಟಡದ ಬಾಹ್ಯ ವಿನ್ಯಾಸಕ್ಕೆ ಪೂರಕವಾಗಿರಬೇಕು. ವಿನ್ಯಾಸವನ್ನು ಪಾರಂಪರಿಕ ಸಮಿತಿ ಪರಿಶೀಲಿಸಿದ ಬಳಿಕವೇ ಅದಕ್ಕೆ ಸಂಬಂಧಪಟ್ಟ ಪ್ರಾಧಿಕಾರ ಮಂಜೂರಾತಿ ನೀಡಲಿದೆ’ ಎಂದು ಅವರು ತಿಳಿಸಿದರು.

‘ಪಾರಂಪರಿಕ ತಾಣಗಳ ಸಮೀಪ ಅಳವಡಿಸುವ ಬೀದಿದೀಪಗಳ ವಿನ್ಯಾಸ, ರಸ್ತೆ ಪಕ್ಕದ ಪೀಠೋಪಕರಣಗಳ ವಿನ್ಯಾಸವನ್ನೂ ಸಮಿತಿ ಪರಿಶೀಲನೆ ನಡೆಸಲಿದೆ. ಇಂತಹ ಕಟ್ಟಡಗಳ ಪಕ್ಕ ಟೆಲಿಫೋನ್‌ ತಂತಿಗಳು ಅಥವಾ ಕೇಬಲ್‌ಗಳು ಹಾದುಹೋಗುವಂತಿಲ್ಲ. ಕೆಲವು ನಿರ್ದಿಷ್ಟ ತಾಣಗಳ ಬಳಿ ವಾಹನ ನಿಲುಗಡೆಗೂ ಅವಕಾಶ ಇರುವುದಿಲ್ಲ’ ಎಂದರು.

ಹೆಚ್ಚುವರಿಯಾಗಿ 320 ಪಾರಂಪರಿಕ ತಾಣಗಳು

ಪಾರಂಪರಿಕ ವಲಯಗಳ ವ್ಯಾಪ್ತಿಯಲ್ಲಿ ಇಲ್ಲದ 320  ಪಾರಂಪರಿಕ ಕಟ್ಟಡಗಳನ್ನು ಬಿಡಿಎ ಗುರುತಿಸಿದೆ. ಈ ಪಟ್ಟಿಯಲ್ಲಿ ಮಹಾರಾಣಿ ಕಾಲೇಜು, ಬೆಂಗಳೂರು ಟರ್ಫ್‌ ಕ್ಲಬ್‌, ಬನಶಂಕರಿ ದೇವಸ್ಥಾನ, ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣ, ಕಾರ್ಲ್‌ಟನ್‌ ಭವನ, ಇಸ್ಕಾನ್‌ ದೇವಸ್ಥಾನ, ಚಿತ್ರಕಲಾ ಪರಿಷತ್‌ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.