ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಗುಂಡಿ

ದಂಡುಮಂಡಳಿ ಪ್ರದೇಶದ ಸಗಟು ತರಕಾರಿ ಮಾರುಕಟ್ಟೆ ರಸ್ತೆಯ ದುಃಸ್ಥಿತಿ
Last Updated 11 ಡಿಸೆಂಬರ್ 2017, 5:43 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ಹಳೆಯ ಪುಣೆ– ಬೆಂಗಳೂರು ರಸ್ತೆಯ ದಂಡುಮಂಡಳಿ ಪ್ರದೇಶದ ಸಗಟು ತರಕಾರಿ ಮಾರುಕಟ್ಟೆ ಮುಂಭಾಗದಿಂದ ನಗರದೊಳಗೆ ಹೋಗುವ ರಸ್ತೆಯ ಮೂಲೆಯಲ್ಲಿ ಗುಂಡಿಯೊಂದು ಬಾಯ್ತೆರೆದುಕೊಂಡಿದೆ. ಇದು ಮುಖ್ಯ ವೃತ್ತದಲ್ಲಿರುವುದರಿಂದ ನಿತ್ಯ ಸಂಚಾರಕ್ಕೂ ಅಡಚಣೆಯಾಗಿದೆ, ಅಪಘಾತಗಳಿಗೂ ಕಾರಣವಾಗಿದೆ.

ಪೆಟ್ರೋಲ್‌ ಪಂಪ್‌, ಟೆಂಪೊ ನಿಲ್ದಾಣ, ತರಕಾರಿ ಮಾರುಕಟ್ಟೆ, ವಾಹನಗಳ ಬಿಡಿಭಾಗಗಳ ಅಂಗಡಿಗಳು, ಗೂಡಂಗಡಿಗಳು, ಪಾಲಿಕೆ ಮಾಲೀಕತ್ವದ ಶಾಪಿಂಗ್ ಕಟ್ಟಡಗಳ ಮಧ್ಯದಲ್ಲಿರುವ ಈ ಗುಂಡಿ ಮುಚ್ಚುವಂತೆ ಅನೇಕ ಸಲ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದರು.

ನಗರದಲ್ಲಿ ಅತಿ ಹೆಚ್ಚು ಜನ, ವಾಹನಗಳ ದಟ್ಟಣೆ ಹೊಂದಿರುವ ಈ ಭಾಗದಲ್ಲಿ ಸಂಚಾರ ವ್ಯವಸ್ಥೆ ಸರಿಪಡಿಸಲು ಜಿಲ್ಲಾಡಳಿತವು ಅನೇಕ ಕ್ರಮಗಳನ್ನು ಕೈಕೊಂಡಿದೆ.

ರಸ್ತೆ ವಿಸ್ತರಣೆ, ರಸ್ತೆ ವಿಭಜಕ ನಿರ್ಮಾಣ, ಚರಂಡಿ ಮೇಲೆ ಸಿಮೆಂಟ್‌ ಕಾಂಕ್ರೀಟ್‌ ನಿರ್ಮಿಸುವುದು ಎಲ್ಲ ಕೆಲಸ ಎಲ್ಲವನ್ನೂ ಮಾಡಲಾಗಿದೆ. ಪೊಲೀಸರು ಆಗಾಗ, ಗುಂಡಿಯ ಸುತ್ತಲೂ ಬ್ಯಾರಿಕೇಡ್‌ ಹಾಕಿ ಅಪಘಾತವಾಗದಂತೆ ನೋಡಿ ಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ಈ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿಲ್ಲ. ಐದಡಿ ಆಳದ ಈ ಗುಂಡಿಯಲ್ಲಿ ಈ ವೃತ್ತ ತಿರು ಗುವಾಗ ಅನೇಕ ವಾಹನ ಬಿದ್ದಿವೆ. ಅನೇಕರು ಕೈಕಾಲು ಮುರಿದು ಕೊಂಡಿದ್ದಾರೆ.

‘ಈ ಭಾಗದ ನಿವಾಸಿಗಳು, ವ್ಯಾಪಾ ರಸ್ಥರು, ಅಂಗಡಿಯವರು ಅನೇಕ ಸಲ ಶಾಸಕರು, ಪಾಲಿಕೆ ಅಧಿಕಾರಿಗಳಿಗೆ ಖುದ್ದಾಗಿ ಭೇಟಿಯಾಗಿ, ಗಟಾರ ಬಾಯಿ ಮುಚ್ಚಲು ಮನವಿ ಮಾಡಿದರೂ ಯಾರೂ ಕಾಳಜಿ ವಹಿಸಿಲ್ಲ’ ಎಂದು ವಾಹನಗಳ ಬಿಡಿಭಾಗಗಳ ಮಾರಾಟಗಾರ ಕುತುಬುದ್ದೀನ್‌ ಶೇಖ್‌ ವಿಷಾದ ವ್ಯಕ್ತಪಡಿಸಿದರು.

ವರ್ಷದ ಹಿಂದೆ, ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ಇಲ್ಲಿ ಸೇತುವೆ ನಿರ್ಮಿಸಲಾಗಿದೆ. ಆಗ ಈ ಸೇತುವೆ ಜತೆಗೇ ಈ ತೆರೆದ ಗಟಾರವನ್ನು ಮುಚ್ಚಲಾಗುವುದು ಎಂದು ಅಧಿಕಾರಿಗಳು, ಗುತ್ತಿಗೆದಾರರು ಭರವಸೆ ನೀಡಿದ್ದರು. ನಂತರ ಯಾರೂ ಸ್ಪಂದಿಸಲಿಲ್ಲ ಎಂದು ಟೈಯರ್‌ ಮಾರಾಟಗಾರರ ಅಮೀರ್‌ ಪಠಾಣ ಹೇಳಿದರು.

ತರಕಾರಿ ಮಾರುಕಟ್ಟೆಗೆ ಬರುವ ರೈತರು, ಟೆಂಪೊ ಮಾಲೀಕರು, ಚಾಲಕರು ಸೇರಿ ವಿವಿಧ ಅಂಗಡಿಗಳಿಂದ ಇಲ್ಲಿ ಚಹಾ ಕುಡಿಯಲು ಬರುತ್ತಾರೆ. ಗುಂಡಿಯಿಂದ ದುರ್ವಾಸನೆ ಬರುತ್ತದೆ. ಮಾಲಿನ್ಯ ಉಂಟಾಗುತ್ತಿದೆ ಎಂದು ರೈತ ಜಗದೀಶ ಪಾಟೀಲ ತಿಳಿಸಿದರು.

*

ಕೇವಲ ₹1 ಸಾವಿರದಲ್ಲಿ ಮುಚ್ಚಬಹುದಾಗಿರುವ ಈ ಗುಂಡಿ ಹಾಗೇ ಬಿಟ್ಟಿರುವುದ ರಿಂದ ನಿತ್ಯ ಅಪಘಾತ ಸಂಭವಿಸುತ್ತಿವೆ. ಬೇಗ ಗುಂಡಿ ಮುಚ್ಚಿ ಅಪಘಾತ ತಡೆಯಬೇಕು.

–ಅಮೀರ್‌ ಪಠಾಣ, ವ್ಯಾಪಾರಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT