ಸೋಮವಾರ, ಮಾರ್ಚ್ 8, 2021
31 °C
ನಗರದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಸಿಗದ ಭೂಮಿ

ಜಿಲ್ಲಾಕೇಂದ್ರದಲ್ಲಿ ಮಾರುಕಟ್ಟೆಗಳಿಗಿಲ್ಲ ನೆಲೆ!

ಮಲ್ಲೇಶ್ ನಾಯಕನಹಟ್ಟಿ . Updated:

ಅಕ್ಷರ ಗಾತ್ರ : | |

ಜಿಲ್ಲಾಕೇಂದ್ರದಲ್ಲಿ ಮಾರುಕಟ್ಟೆಗಳಿಗಿಲ್ಲ ನೆಲೆ!

ಯಾದಗಿರಿ: ಶಿಥಿಲ ಕಾಂಪೌಂಡ್‌ ಹೊಂದಿರುವ ತರಕಾರಿ ಮಾರುಕಟ್ಟೆ ಹೊರತುಪಡಿಸಿದರೆ ನಗರದಲ್ಲಿ ಒಂದೂ ಮಾರುಕಟ್ಟೆಗಳಿಗೆ ಜಿಲ್ಲಾಡಳಿತ ನೆಲೆ ಕಲ್ಪಿಸಿಲ್ಲ.

ಮಾರುಕಟ್ಟೆ ನಿರ್ಮಿಸುವಂತೆ ಸರ್ಕಾರ ವಿವಿಧ ಇಲಾಖೆಗಳಿಗೆ ಅನುದಾನ ಒದಗಿಸಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲವೊಂದು ಮಾರುಕಟ್ಟೆ ನಿರ್ಮಾಣಕ್ಕೆ ನಿಗದಿಪಡಿಸಿರುವ ಅನುದಾನ ಮಾತ್ರ ವಿನಿಯೋಗವಾಗಿಲ್ಲ. ಕೆಲ ಇಲಾಖೆಗಳ ಅನುದಾನ ಸರ್ಕಾರದ ಖಜಾನೆಗೆ ಹಿಂದಿರುಗಿದೆ.

ಜಿಲ್ಲೆಯಲ್ಲಿ ಕುರಿ, ಉಣ್ಣೆ ಹಾಗೂ ಮೀನು ಉದ್ಯಮ ಯಥೇಚ್ಛವಾಗಿದ್ದರೂ ಜಿಲ್ಲಾಕೇಂದ್ರದಲ್ಲಿ ಈ ಉದ್ಯಮ ಅಭಿವೃದ್ಧಿಗೆ ಪ್ರಮುಖವಾಗಿ ಮಾರುಕಟ್ಟೆ ಕೊರತೆ ಕಾರಣ ಎಂದು ನಗರದ ವ್ಯಾಪಾರಿಗಳು ದೂರುತ್ತಾರೆ.

ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 152 ಕೆರೆಗಳಲ್ಲಿ ಮೀನು ಸಾಕಣೆ ನಡೆಯುತ್ತಿದೆ. ಕಳೆದ ಜುಲೈ ತಿಂಗಳಿನಲ್ಲಿ ಮೀನುಗಾರಿಕೆ ಇಲಾಖೆ ರಿಯಾಯಿತಿ ದರದಲ್ಲಿ 2 ಲಕ್ಷಕ್ಕೂ ಹೆಚ್ಚು ಮೀನುಮರಿಗಳನ್ನು ಮೀನುಗಾರ ಸಂಘಗಳಿಗೆ ವಿತರಿಸಿದೆ. ಈಗ ಮೀನುಗಳು ಮಾರಾಟಕ್ಕೆ ಸಿದ್ಧಗೊಂಡಿವೆ. ಆದರೆ, ನಿರ್ದಿಷ್ಟ ಮಾರುಕಟ್ಟೆ ಕೊರತೆಯಿಂದ ಮೀನುಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

‘ಮಾರುಕಟ್ಟೆ ನಿರ್ಮಿಸಿಕೊಡುವ ಮೂಲಕ ಮೀನುಗಾರರನ್ನು ಸಬಲರನ್ನಾಗಿಸುವಂತೆ ಮೀನುಗಾರಿಕೆ ಇಲಾಖೆ ಜಿಲ್ಲಾಡಳಿತವನ್ನು ಹಲವು ವರ್ಷಗಳಿಂದ ಮನವಿ ಮಾಡಿದೆ. ಆದರೆ, ಜಾಗ ನಿಗದಿಪಡಿಸದೆ ಇರುವುದರಿಂದ ಮೀನುಗಾರರಿಕೆ ಮಾರುಕಟ್ಟೆ ಭಾಗ್ಯ ಸಿಕ್ಕಿಲ್ಲ’ ಎಂದು ಜಿಲ್ಲಾ ಟೋಕ್ರೆ ಕೋಲಿ ಕಬ್ಬಲಿಗ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ್‌ ಜಿ. ಮುದ್ನಾಳ ಹೇಳುತ್ತಾರೆ.

ಮಾರ್ಗಸೂಚಿ ಇಲ್ಲದ ಕುರಿ ಮಾರುಕಟ್ಟೆ: ನಗರದಲ್ಲಿ ಕುರಿ, ಮೇಕೆ ಮಾರುಕಟ್ಟೆ ಕೊರತೆಯೂ ಇದೆ. ಇಲ್ಲಿನ ಎಪಿಎಂಸಿ ಹಿಂಭಾಗದಲ್ಲಿ ಕುರಿ ಮಾರುಕಟ್ಟೆ ಪ್ರತಿ ಮಂಗಳವಾರ ತೆರೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಕುರಿ, ಮೇಕೆಗಳಿಗೆ ಕುಡಿಯುವ ನೀರು, ನೆರಳು ಹಾಗೂ ಮೇವು ಸೌಲಭ್ಯ ಕೂಡ ಅಲ್ಲಿ ಸಿಗುವುದಿಲ್ಲ. ಇಡೀ ದಿನ ಕುರಿ ವ್ಯಾಪಾರಿಗಳು, ಮಾರಾಟಗಾರರು ನಿಂತುಕೊಂಡೇ ವ್ಯಾಪಾರ ನಡೆಸುತ್ತಾರೆ.

‘ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಇಲ್ಲಿನ ಎಪಿಎಂಸಿಗೆ ಕುರಿ ಮಾರುಕಟ್ಟೆ ನಿರ್ಮಾಣಕ್ಕೆ ₹20ಲಕ್ಷ ಅನುದಾನ ಬಿಡುಗಡೆಯಾಗಿದೆ. ಆದರೆ, ನಿರ್ಮಾಣಗೊಂಡಿರುವ ಕುರಿ ಮಾರುಕಟ್ಟೆ ಕಾಮಗಾರಿಗೆ ಪೂರ್ಣ ಪ್ರಮಾಣದ ಅನುದಾನ ಬಳಕೆಯಾಗಿಲ್ಲ’ ಎಂಬ ದೂರು ಕೇಳಿ ಬರುತ್ತಿವೆ.

‘ಕುರಿ ಮಾರುಕಟ್ಟೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗಿರುವ ಕುರಿತು ಸರ್ಕಾರ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗೆ ಮಾಹಿತಿ ನೀಡಿದೆಯಷ್ಟೇ. ಕಾಮಗಾರಿ ಮಾರ್ಗಸೂಚಿ ನೀಡಿಲ್ಲ. ಹಾಗಾಗಿ, ಮಾರುಕಟ್ಟೆ ನಿರ್ಮಾಣ ಕುರಿತು ನಿಗಮದ ಸಹಾಯಕ ನಿರ್ದೇಶಕರು ಮಾರುಕಟ್ಟೆ ನಿರ್ಮಾಣ ಕಾಮಗಾರಿ ಪರಿಶೀಲಿಸಿಲ್ಲ’ ಎನ್ನುತ್ತಾರೆ ಕುರಿ ವಹಿವಾಟು ನಡೆಸುವ ವ್ಯಾಪಾರಿಗಳು.

ಇದನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಯ ಪ್ರಭಾರ ಸಹಾಯಕ ನಿರ್ದೇಶಕ ಡಾ.ಶಣ್ಮುಖಪ್ಪ ಒಪ್ಪಿಕೊಳ್ಳುತ್ತಾರೆ. ಸರ್ಕಾರದ ಮಾರ್ಗಸೂಚಿ ಇಲ್ಲದೇ ಏನೂ ಮಾಡುವಂತಿಲ್ಲ. ಮಾರುಕಟ್ಟೆಯನ್ನು ನಿಗಮಕ್ಕೆ ಹಸ್ತಾಂತರಿಸಿ ಕೊಳ್ಳುವಂತೆಯೂ ಸರ್ಕಾರ ಆದೇಶಿಸಿಲ್ಲ ಎಂದೂ ಹೇಳುತ್ತಾರೆ.

**

ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಬೇಡಿಕೆಗೆ ತಕ್ಕಂತೆ ಅನುದಾನ ಒದಗಿಸುವುದಾಗಿ ಮೀನುಗಾರಿಕೆ ಇಲಾಖೆ ತಿಳಿಸಿದೆ. ಆದರೆ, ನಗರದಲ್ಲಿ ಜಾಗ ಸಿಕ್ಕಿಲ್ಲ.

-ಮಹೇಶ್, ಪ್ರಭಾರ ಸಹಾಯಕ ನಿರ್ದೇಶಕ, ಮೀನುಗಾರಿಕೆ ಇಲಾಖೆ

**

ಕುರಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಶೀಘ್ರ ಪೂರ್ಣಗೊಳ್ಳುವ ವಿಶ್ವಾಸವಿದೆ.

-ಸಿದ್ದೇಶ್ವರ ಸ್ವಾಮಿ, ಕಾರ್ಯದರ್ಶಿ, ಎಪಿಎಂಸಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.