ಶನಿವಾರ, ಫೆಬ್ರವರಿ 27, 2021
31 °C

ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಅವಿರೋಧ ಆಯ್ಕೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಅವಿರೋಧ ಆಯ್ಕೆ

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಚುನಾವಣಾ ಸಮಿತಿಯ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್‌ ಸೋಮವಾರ ಪ್ರಕಟಿಸಿದರು. ಕೆಲವು ತಲೆಮಾರುಗಳಿಂದ ಈ ಪಕ್ಷದ ನಿಯಂತ್ರಣ ನೆಹರೂ–ಗಾಂಧಿ ಕುಟುಂಬದ ಕೈಯಲ್ಲಿಯೇ ಇದೆ.

ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾದ ಪ್ರಮಾಣಪತ್ರವನ್ನು ಇದೇ 16ರಂದು (ಶನಿವಾರ) ರಾಹುಲ್‌ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಹುಲ್‌ ಪರವಾಗಿ 89 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅಧ್ಯಕ್ಷ ಹುದ್ದೆ ಸ್ಪರ್ಧೆಯಲ್ಲಿ ರಾಹುಲ್‌ ಮಾತ್ರ ಇದ್ದಾರೆ. ಹಾಗಾಗಿ, ಪಕ್ಷದ ಸಂವಿಧಾನದ ಪ್ರಕಾರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಮಚಂದ್ರನ್‌ ಹೇಳಿದ್ದಾರೆ.

19 ವರ್ಷಗಳಿಂದ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರು ಶನಿವಾರ ಮಗ ರಾಹುಲ್‌ಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ. ರಾಹುಲ್‌ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲು ಉತ್ಸುಕರಾಗಿದ್ದಾರೆ ಅಥವಾ ಅವರಿಗೆ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲು ಇಷ್ಟ ಇಲ್ಲ ಎಂಬಂತಹ ವದಂತಿಗಳು ಕಳೆದ ಕೆಲವು ವರ್ಷಗಳಿಂದ ಹರಿದಾಡುತ್ತಲೇ ಇದ್ದವು. ಈಗ ಅಧಿಕೃತ ಘೋಷಣೆಯಾಗುವುದರೊಂದಿಗೆ ವದಂತಿಗಳಿಗೆ ತೆರೆ ಬಿದ್ದಿದೆ.

2013ರಿಂದ ರಾಹುಲ್‌ ಪಕ್ಷದ ಉಪಾಧ್ಯಕ್ಷರಾಗಿದ್ದಾರೆ. 2014ರ ಲೋಕಸಭಾ ಚುನಾವಣೆಯ ಪ್ರಚಾರದ ನೇತೃತ್ವವನ್ನು ರಾಹುಲ್‌ ವಹಿಸಿಕೊಂಡಿದ್ದರು.

ಪ್ರಧಾನಿ ಅಭಿನಂದನೆ

ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾದ ರಾಹುಲ್‌ ಗಾಂಧಿಯನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಗುಜರಾತ್‌ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಪರಸ್ಪರರು ತೀವ್ರ ವಾಗ್ದಾಳಿ ನಡೆಸುತ್ತಿರುವುದರ ನಡುವೆಯೇ ಪ್ರಧಾನಿ ಅಭಿನಂದನೆ ತಿಳಿಸಿದ್ದಾರೆ.

‘ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾದ ರಾಹುಲ್‌ಗೆ ನನ್ನ ಅಭಿನಂದನೆ. ಅವರ ಅವಧಿ ಫಲಪ್ರದವಾಗಲಿ ಎಂದು ಹಾರೈಸುತ್ತೇನೆ’ ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.