ಗುರುವಾರ , ಮಾರ್ಚ್ 4, 2021
18 °C

ಜಾತಿ ಸಂಘಗಳಿಗೆ ಸರ್ಕಾರಿ ಜಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತಿ ಸಂಘಗಳಿಗೆ ಸರ್ಕಾರಿ ಜಮೀನು

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಮಾಚೋಹಳ್ಳಿಯಲ್ಲಿ 58 ಎಕರೆ 20 ಗುಂಟೆ ಸರ್ಕಾರಿ ಜಾಗವನ್ನು ಜಾತಿ ಸಂಘಗಳೂ ಸೇರಿ 36 ವಿವಿಧ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಸಚಿವ ಸಂಪುಟ ಸಭೆ ಸೋಮವಾರ ಒಪ್ಪಿಗೆ ನೀಡಿದೆ.

ಒಟ್ಟು ಲಭ್ಯ 96 ಎಕರೆ 12 ಗಂಟೆ ಸರ್ಕಾರಿ ಖರಾಬು ಗೋಮಾಳ ಜಮೀನಿನ ಪೈಕಿ 19 ಎಕರೆ 20 ಗುಂಟೆ ಜಮೀನನ್ನು ಸರ್ಕಾರಿ ಆಸ್ಪತ್ರೆ, ಪೊಲೀಸ್ ಠಾಣೆ ಒಳಗೊಂಡಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸುವ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ಕುರುಬ, ಆರ್ಯ ಈಡಿಗ, ವಿಶ್ವಕರ್ಮ, ಕುರುಹಿನ ಶೆಟ್ಟಿ, ಪದ್ಮಸಾಲಿ, ಮಡಿವಾಳ, ವಾಲ್ಮೀಕಿ ನಾಯಕ, ಗಾಣಿಗ, ದೇವಾಡಿಗ, ದೇವಾಂಗ, ಸವಿತಾ ಸಮಾಜ, ಉಪ್ಪಾರ, ಕುಂಚಿಟಿಗ, ದೊಂಬಿದಾಸ, ಹಿಂದೂ ಸಾದರ, ತಿಗಳ, ದಲಿತ ಸಂಘರ್ಷ ಸಮಿತಿ, ವೀರಶೈವ, ಒಕ್ಕಲಿಗ, ಗೊಲ್ಲ-ಯಾದವ, ಕೊರಮ, ಗಂಗಾಮತಸ್ಥ, ಮುಸ್ಲಿಂ ಹಾಗೂ ಆಂಗ್ಲೊ ಇಂಡಿಯನ್ ಸಮುದಾಯಗಳಿಗೆ ಶೈಕ್ಷಣಿಕ ಹಾಗೂ ಇತರೆ ಉದ್ದೇಶಗಳಿಗೆ ಗುತ್ತಿಗೆ ಆಧಾರದಲ್ಲಿ ಜಮೀನು ಮಂಜೂರು ಮಾಡಲಾಗಿದೆ.

ಈ ಪೈಕಿ, ರಾಜ್ಯ ಪ್ರದೇಶ ಕುರುಬರ ಸಂಘ, ಹಿಂದುಳಿದ ಜಾತಿಗಳ ಒಕ್ಕೂಟಕ್ಕೆ ತಲಾ 5 ಎಕರೆ, ವಿಶ್ವಕರ್ಮ, ಕುರುಹಿನಶೆಟ್ಟಿ, ಉಪ್ಪಾರ ಸಂಘ, ವಾಲ್ಮೀಕಿ ಸಂಘ, ಸವಿತಾ ಸಮಾಜ, ಯಾದವರ ಸಂಘ, ದೊಂಬಿದಾಸರ ಸಂಘಕ್ಕೆ ತಲಾ 1 ಎಕರೆ 20 ಗುಂಟೆ‌ ಜಮೀನು ಹಂಚಿಕೆ ಮಾಡಲಾಗಿದೆ ಎಂದೂ ಜಯಚಂದ್ರ ವಿವರಿಸಿದರು.

‘ಸೇವಾ ಸಿಂಧು’ ಯೋಜನೆ: ಎಲ್ಲ ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಗಳನ್ನು ಕೇಂದ್ರೀಯ ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡುವ ‘ಸೇವಾ ಸಿಂಧು’ ಯೋಜನೆಗೂ ಅನುಮೋದನೆ ನೀಡಲಾಗಿದೆ. 19 ಇಲಾಖೆಗಳ 326 ಸೇವೆಗಳು ಈ ವೆಬ್‌ ಪೋರ್ಟಲ್‌ನಲ್ಲಿ ಸಿಗಲಿವೆ. ನ್ಯಾಷನಲ್ ಇನ್‌ಫರ್ಮ್ಯಾಟಿಕ್‌ ಸೆಂಟರ್ (ಎನ್‌ಐಸಿ) ತಂತ್ರಾಂಶ ಅಭಿವೃದ್ಧಿಪಡಿಸಿದೆ’ ಎಂದು ಅವರು ಮಾಹಿತಿ ನೀಡಿದರು.

ಸಂಪುಟ ಸಭೆಯ ಇತರ ನಿರ್ಣಯಗಳು

* ರಾಜ್ಯದಲ್ಲಿ 418.16 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು ₹ 5,334 ಕೋಟಿ ವೆಚ್ಚದ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಕೆಶಿಪ್‌) ಮೂರನೇ ಹಂತದ ಯೋಜನೆಗೆ ಅನುಮೋದನೆ. ಕೊಳ್ಳೆಗಾಲ-ಹನೂರು ಮತ್ತು ಚಿಂತಾಮಣಿ- ಆಂಧ್ರಪ್ರದೇಶದ ಗಡಿ ದ್ವಿಪಥ ರಸ್ತೆಗಳು, ನೈಸ್ ರಸ್ತೆ– ಮಾಗಡಿ ಹಾಗೂ ಮಾಗಡಿ ರಾಷ್ಟ್ರೀಯ ಹೆದ್ದಾರಿ 75- ಚಿಕ್ಕಬೂದಿಗೆರೆ ಚತುಷ್ಪಥ ರಸ್ತೆ , ಗದಗ-ಹೊನ್ನಾಳಿ ರಸ್ತೆ ಅಭಿವೃದ್ಧಿ ಈ ಯೋಜನೆಯಲ್ಲಿ ಸೇರಿವೆ.

* ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ನೇತ್ರ ವಿಭಾಗಕ್ಕೆ ಉಪಕರಣ ಹಾಗೂ ಸಲಕರಣೆ ಖರೀದಿಗೆ ₹ 8.06 ಕೋಟಿ ಮಂಜೂರು. ಈ ಆಸ್ಪತ್ರೆಗಳಲ್ಲಿ ನೇತ್ರ ತಜ್ಞರಿಗೆ ಪ್ರತಿ ತಿಂಗಳು 75 ಮಂದಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಗುರಿ ನಿಗದಿ.

* ರಾಜ್ಯ ಸರ್ಕಾರಿ ವಿಮಾ ಇಲಾಖೆಯಲ್ಲಿ 2014ರ ಮಾರ್ಚ್‌ 31ರಿಂದ ಚಾಲ್ತಿಯಲ್ಲಿದ್ದ ಕಡ್ಡಾಯ ಜೀವ ವಿಮಾ ಶಾಖೆಯ ಎಲ್ಲ ವಿಮಾದಾರರಿಗೆ 2012-14 ನೇ ದ್ವೈ-ವಾರ್ಷಿಕ ಅವಧಿಗೆ ಪ್ರತಿ ₹ 1,000 ವಿಮಾ ಮೊತ್ತಕ್ಕೆ ₹ 90 ಬೋನಸ್

* ಕೆಎಎಸ್‌ ಅಧಿಕಾರಿಗಳ ಗೃಹ ನಿರ್ಮಾಣ ಮುಂಗಡದ ಮಿತಿ ₹ 25 ಲಕ್ಷದಿಂದ ₹ 40 ಲಕ್ಷ ಹಾಗೂ ಇತರ ವೃಂದಗಳ ಅಧಿಕಾರಿಗಳ ಮುಂಗಡದ ಮಿತಿ ₹ 15 ಲಕ್ಷದಿಂದ ₹ 25 ಲಕ್ಷಕ್ಕೆ ಹೆಚ್ಚಳ

ಪ್ರಕರಣ ಕೈಬಿಡಲು ತೀರ್ಮಾನ

ರೈತರಿಗೆ ಬೆಳೆ ನಷ್ಟ ಪರಿಹಾರ ತಲುಪಿಸುವ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಕೆಎಎಸ್‌ (ಕಿರಿಯ ಶ್ರೇಣಿ) ಅಧಿಕಾರಿಗಳಾದ ಅನಿತಾ ಲಕ್ಷ್ಮಿ, ಬಿ.ಎ. ಜಗದೀಶ ಮತ್ತು ಎಂ. ತಿಪ್ಪೇಸ್ವಾಮಿ ವಿರುದ್ಧದ ಪ್ರಕರಣವನ್ನು ಕೈಬಿಡಲು ಸಚಿವ ಸಂಪುಟ ನಿರ್ಧರಿಸಿದೆ.

‘ಫಲಾನುಭವಿಗಳು ನೀಡಿದ ದೂರಿನ ಕುರಿತು ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಉಪ ಲೋಕಾಯುಕ್ತರು ಮಾಡಿರುವ ಶಿಫಾರಸು ಏನು’ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ಉತ್ತರಿಸಲು ಸಚಿವ ಜಯಚಂದ್ರ ತಡವರಿಸಿದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಕಾರ್ಯದರ್ಶಿ ಅನಿಲ್‌ ಕುಮಾರ್‌ ಝಾ ಅವರನ್ನು ಕರೆಸಿಕೊಂಡು ಮಾಹಿತಿ ಪಡೆದ ಬಳಿಕವೂ ಸಮರ್ಪಕ ಉತ್ತರ ನೀಡಲು ಅಸಾಧ್ಯವಾದ ಕಾರಣ, ಎರಡು ದಿನಗಳ ಒಳಗೆ ಮಾಧ್ಯಮಗೋಷ್ಠಿ ಕರೆದು ವಿವರ ನೀಡುವುದಾಗಿ ಸಚಿವರು ತಿಳಿಸಿದರು.

‘ಮಧುಗಿರಿಯಲ್ಲಿ ಅನಿತಾ ಲಕ್ಷ್ಮಿ ಉಪ ವಿಭಾಗಾಧಿಕಾರಿಯಾಗಿದ್ದರು. ಆಗ ರೈತರಿಗೆ 337 ಚೆಕ್‌ಗಳ ಮೂಲಕ ₹ 3.19 ಲಕ್ಷ ಬೆಳೆ ನಷ್ಟ ಪರಿಹಾರ ಮೊತ್ತ ವಿತರಿಸಲಾಗಿದೆ. ಈ ಚೆಕ್‌ಗಳ ಪೈಕಿ 44 ಚೆಕ್‌ಗಳು ಕಣ್ಮರೆಯಾಗಿವೆ. ಕೆಲವು ಫಲಾನುಭವಿಗಳ ಹೆಸರು ಎರಡು ಕಡೆ ನಮೂದಾಗಿದೆ. ಒಂದೇ ಮಾದರಿಯ ಸಹಿಗಳಿವೆ’ ಎಂದು ಮಾಹಿತಿ ನೀಡಿದರು. ಆದರೆ, ಈ ದೂರಿನ ತನಿಖೆ ನಡೆಸಿದ್ದ ಉಪ ಲೋಕಾಯುಕ್ತರು ಮಾಡಿದ ಶಿಫಾರಸಿನ ಬಗ್ಗೆ ವಿವರ ನೀಡಲು ಅವರು ಹಿಂದೇಟು ಹಾಕಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.