ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಲ ಬೆಲೆ ನೀಡಲು ರೈತರ ಆಗ್ರಹ

Last Updated 11 ಡಿಸೆಂಬರ್ 2017, 20:28 IST
ಅಕ್ಷರ ಗಾತ್ರ

ಬೆಂಗಳೂರು: ರೈತರ ಬೆಳೆಗಳನ್ನು ಖರೀದಿಸಲು ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದು, ಬೆಂಬಲ ಬೆಲೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉತ್ತರ ತಾಲ್ಲೂಕು ಘಟಕದ ಸದಸ್ಯರು ಸೋಮವಾರ ಇಲ್ಲಿ ಒತ್ತಾಯಿಸಿದ್ದಾರೆ.

ಘಟಕದ ಅಧ್ಯಕ್ಷ ವಿ.ಆರ್‌.ನಾರಾಯಣ ರೆಡ್ಡಿ, ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಆದರೆ, ಸರ್ಕಾರ ರೈತರ ನೆರವಿಗೆ ಬಾರದೆ, ರೈತರಿಗೆ ಆತ್ಮಹತ್ಯೆ ಭಾಗ್ಯ ಕೊಡುತ್ತಿದೆ ಎಂದು ದೂರಿದರು.

ನಗರ ಜಿಲ್ಲೆಯಲ್ಲಿ ರಾಗಿ, ಜೋಳ, ತೊಗರಿ ಹಾಗೂ ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ಇತ್ತೀಚೆಗೆ ಬರಗಾಲದಿಂದ ಬೆಳೆಹಾನಿ ಸಂಭವಿಸಿ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಸರ್ಕಾರ ಈಗ ಬೆಳೆದಿರುವ ಬೆಳೆಗಳನ್ನಾದರೂ ಖರೀದಿಸಲು ಶೀಘ್ರ ಖರೀದಿ ಕೇಂದ್ರಗಳನ್ನು ತೆರೆದು, ಕನಿಷ್ಠ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.

ಇಂಧನ ಸಚಿವರು ಗ್ರಾಮೀಣ ಪ್ರದೇಶದ 4.70 ಲಕ್ಷ ರೈತರಿಗೆ ಪುಕ್ಕಟೆಯಾಗಿ ವಿದ್ಯುತ್‌ ಕೊಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ದಿನಕ್ಕೆ 3 ಗಂಟೆ ಮಾತ್ರ ವಿದ್ಯುತ್‌ ನೀಡುತ್ತಿದ್ದು, ಗುಣಮಟ್ಟದ ವಿದ್ಯುತ್‌ ಸಿಗುತ್ತಿಲ್ಲ. ವಿದ್ಯುತ್‌ ಸಂಪರ್ಕಕ್ಕೆ ಮೀಟರ್‌ ಮತ್ತು ಮಾರ್ಗ ಅಳವಡಿಸಲು ರೈತರಿಂದ ₹15,000ದಿಂದ ₹50,000 ಹಣ ಪಾವತಿಸಿಕೊಳ್ಳುವ ಮೂಲಕ ಹಣ ಮಾಡುವುದನ್ನೇ ಸರ್ಕಾರ ದಂಧೆಯಾಗಿಸಿಕೊಂಡಿದೆ ಎಂದು ಆರೋಪಿಸಿದರು.

ಕಾರ್ಯದರ್ಶಿ ನಂಜುಂಡಪ್ಪ, ತಾಲ್ಲೂಕು ಕಚೇರಿಯಲ್ಲಿ ಕೆಲವು ಗ್ರಾಮಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಬೆಳೆಹಾನಿ ಸಮೀಕ್ಷೆ ಮಾಡುವಾಗ ನೀರು ಹಾಯಿಸಿ ಚೆನ್ನಾಗಿ ಬೆಳೆದಿರುವ ರಾಗಿ, ತೊಗರಿ ಮತ್ತಿತರ ಬೆಳೆಗಳ ಛಾಯಾಚಿತ್ರಗಳನ್ನು ಮಾತ್ರ ತೆಗೆದುಕೊಂಡು, ನಗರ ಜಿಲ್ಲೆಯಲ್ಲಿ ಚೆನ್ನಾಗಿ ಬೆಳೆ ಬಂದಿದೆ ಎಂದು ತಪ್ಪು ಮಾಹಿತಿ ನೀಡುತ್ತಿರುವ ಬಗ್ಗೆ ರೈತರಿಂದ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಸಮಗ್ರ ಪರಿಶೀಲಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಉತ್ತರ ತಾಲ್ಲೂಕು ಹೆಚ್ಚುವರಿ ವಿಶೇಷ ತಹಶೀಲ್ದಾರ್‌ ಅನಿಲ್‌ ಅವರಿಗೆ ರೈತರು ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅನಿಲ್‌, ಅಧಿಕಾರಿಗಳು ಕೈಗೊಂಡಿದ್ದ ಬೆಳೆಹಾನಿ ಸಮೀಕ್ಷಾ ಕಾರ್ಯದ ಬಗ್ಗೆ ಪರಿಶೀಲಿಸಲಾಗುವುದು. ಲೋಪ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT