ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿ.ನಾ.ಹಳ್ಳಿ, ಹುಳಿಯಾರು ಬಂದ್ ಯಶಸ್ವಿ

Last Updated 12 ಡಿಸೆಂಬರ್ 2017, 6:39 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕು ಶಾಶ್ವತ ಕುಡಿಯುವ ನೀರು ಹೋರಾಟ ಸಮಿತಿ ಸೋಮವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಯಿತು. ತಾಲ್ಲೂಕು ಕೇಂದ್ರ ಸಂಪೂರ್ಣವಾಗಿ ಸ್ತಬ್ಧವಾಗಿತ್ತು, ಹೋಬಳಿ ಕೇಂದ್ರಗಳಲ್ಲೂ ರೈತರು ಹೋರಾಟಗಾರರು ಬೀದಿಗಿಳಿದರು. ಪಟ್ಟಣ ಹಾಗೂ ಹೋಬಳಿ ಕೇಂದ್ರಗಳಲ್ಲಿ ಶಾಲಾ ಕಾಲೇಜುಗಳು ಮುಚ್ಚಿದ್ದವು. ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 26 ಕೆರೆಗಳಿಗೆ ನೀರು ಹರಿಯಬೇಕು ಎಂದು ಆಗ್ರಹಿಸಿ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳು ಸ್ವಯಂಪ್ರೇರಿತವಾಗಿ ಪಾಲ್ಗೊಂಡಿದ್ದರು.

ಬೆಳಿಗ್ಗೆ 8 ಗಂಟೆಯಿಂದಲೇ ಬಂದ್‌ ಬಿಸಿ ತಟ್ಟಿತು. ಸಂಜೆ 5ರ ವರೆಗೂ ರಸ್ತೆಗಳು ಬಿಕೋ ಎಂದವು. ಪ್ರತಿಭಟನಾಕಾರರು ಬೆಳಿಗ್ಗೆಯಿಂದಲೇ ಬೀದಿಗಿಳಿದರು. ಸೋಮವಾರದ ಮರಿ ಸಂತೆ ನಡೆಯಲಿಲ್ಲ. ಬಂದ್ ಮಾಹಿತಿ ಇಲ್ಲದೆ ಕುರಿ ಮೇಕೆ ತಂದಿದ್ದ ಬೆರಳೆಣಿಕೆಯಷ್ಟು ರೈತರು ರಸ್ತೆ ಬದಿಯಲ್ಲೇ ವ್ಯಾಪಾರ ಕುದುರಿಸುತ್ತಿದ್ದ ದೃಶ್ಯ ಕಂಡುಬಂತು.

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕೆಂಕೆರೆ ಸತೀಶ್, ಮುಖಂಡ ಜೆ.ಸಿ.ಮಾಧುಸ್ವಾಮಿ, ನಾಡ ಜಾಗೃತಿ ಸೇನೆ ಲಿಂಗರಾಜು, ಪುರಸಭೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸಿ.ಎಚ್.ಚಿದಾನಂದ್, ಎಂ.ಸಿ.ರಂಗಸ್ವಾಮಯ್ಯ, ಮಹೇಶ್, ಸಿ.ಡಿ.ಸುರೇಶ್‌, ಕರವೆ ಗುರುಮೂರ್ತಿ ಭಾಗವಹಿಸಿದ್ದರು.

ತಾಲ್ಲೂಕಿನ ಮಠಾಧೀಶರು ಪ್ರತಿಭಟನೆಯಲ್ಲಿ ಭಾಗವಿಸಿದ್ದರು. ಕುಪ್ಪೂರು ಮರುಳಸಿದ್ಧೇಶ್ವರ ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶೀ ಕೇಂದ್ರ ಸ್ವಾಮೀಜಿ, ಗೋಡೆಕೆರೆ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ ಹಾಗೂ ಸಿದ್ದರಾಮ ದೇಶೀ ಕೇಂದ್ರ ಸ್ವಾಮೀಜಿ  ಬಂದ್‌ಗೆ ಬೆಂಬಲ ನೀಡಿದರು.

ಪ್ರತಿಭಟನಾ ಸ್ಥಳದಲ್ಲೆ ಹೇಮಾವತಿ ನಾಲಾ ಶಾಖೆಯ ಕಾರ್ಯಾಪಾಲಕ ಎಂಜಿನಿಯರ್‌ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ‘ಭೂಮಿ ಬಿಟ್ಟುಕೊಟ್ಟ ರೈತರಿಗೆ ಪರಿಹಾರ ನೀಡಲು ಸರ್ಕಾರದಿಂದ ₹ 7.5 ಕೋಟಿ ಹಣ ಬಿಡುಗಡೆ ಆಗಬೇಕು. ಗುತ್ತಿಗೆದಾರ ಅವಧಿ ಮುಗಿದಿದ್ದು, ಮರು ಟೆಂಡರ್‌ಗೆ ಪ್ರಕ್ರಿಯೆ ನಡೆಯುತ್ತಿದೆ. ಅತಿ ಶೀಘ್ರ ನಾಲ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು’ ಎಂದರು

ರಸ್ತೆಗಳಲ್ಲಿ ಪೊಲೀಸ್ ಗಸ್ತು ಕಂಡುಬಂತು. ಶೆಟ್ಟಿಕೆರೆ ಗೇಟ್, ತಾಲ್ಲೂಕು ಕಚೇರಿ, ನೆಹರೂ ಸರ್ಕಲ್, ಮತಿಘಟ್ಟ ಗೇಟ್ ಹಾಗೂ ಹುಳಿಯಾರ್ ಗೇಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿ ಮುಂದೆ ನಿಂತು ಪಟ್ಟಣಕ್ಕೆ ಬರುತ್ತಿದ್ದ ವಾಹನಗಳನ್ನು ತಡೆದು ಹಿಂತಿರುಗಲು ಸೂಚನೆ ನಿಡುತ್ತಿದ್ದರು.

ಹುಳಿಯಾರು: ಶಾಶ್ವತ ಕುಡಿಯುವ ನೀರು ಮತ್ತು ನೀರಾವರಿ ಯೋಜನೆಗಳ ಶೀಘ್ರ ಮಂಜೂರಾತಿಗೆ ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಗಳು ಕರೆ ನೀಡಿದ್ದ ಹುಳಿಯಾರು ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು. ಅಂಗಡಿ ಮುಂಗಟ್ಟುಗಳ ಮಾಲೀಕರು, ವರ್ತಕರು ಸ್ವಯಂಘೋಷಿತರಾಗಿ ತಮ್ಮ ಅಂಗಡಿಗಳನ್ನು ಮುಚ್ಚಿದ್ದರು.

ಪಟ್ಟಣದ ಎಲ್ಲ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಖಾಸಗಿ ಶಾಲೆಗಳು ಬಂದ್ ಆಗಿದ್ದವು. ಪಟ್ಟಣದಲ್ಲಿ ಸಾರ್ವಜನಿಕ ಸಂಚಾರ ಕಡಿಮೆಯಿದ್ದು ದೂರದ ಊರುಗಳಿಂದ ಬಂದ್ ಬಗ್ಗೆ ತಿಳಿಯದೆ ಬಂದಿದ್ದ ಪ್ರಯಾಣಿಕರು ಶಿರಾ, ತಿಪಟೂರು, ಹೊಸದುರ್ಗ, ಹಿರಿಯೂರು ಕ್ರಾಸ್‌ಗಳತ್ತ ಇತರೆ ವಾಹನಗಳನ್ನು ಹಿಡಿಯಲು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬೆಳಿಗ್ಗೆ ಬಸ್‌ನಿಲ್ದಾಣದಲ್ಲಿ ಸಮಾವೇಶಗೊಂಡ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಮಂಜೂರಾಗಿರುವ ಹೇಮಾವತಿ ಯೋಜನೆ ಹಣ ನೀಡದೆ ಕಾಮಗಾರಿ ವಿಳಂಬಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಸರ್ಕಾರ ಹಾಗೂ ತಾಲ್ಲೂಕಿನ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆಯ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇತ್ತ ಎತ್ತಿನಹೊಳೆ, ಭದ್ರಾ ಸೇರಿದಂತೆ ಹೇಮಾವತಿ ನಾಲಾ ಯೋಜನೆಗಳು ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಮರೀಚಿಕೆಯಾಗಿದೆ’ ಎಂದು ತಾಲ್ಲೂಕು ರೈತಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ ಆರೋಪಿಸಿದರು.

‘ಸಮಸ್ಯೆಗೆ ಸ್ಪಂದಿಸದೆ ಹೋದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಮುಖಂಡ ಕಾಯಿ ಬಸವರಾಜು ಮಾತನಾಡಿ, ‘ನೀರಿನ ಹೋರಾಟಕ್ಕೆ ರೈತರು ಬೆಂಬಲ ನೀಡಬೇಕು. ಗ್ರಾಮೀಣ ಭಾಗದ ರೈತರು ಸ್ಪಂದಿಸಿದರೆ ಹೋರಾಟಕ್ಕೆ ಹೆಚ್ಚು ಮಹತ್ವ ಬರುತ್ತದೆ’ ಎಂದರು.

ಸ್ವಾತಂತ್ರ ಹೋರಾಟಗಾರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ವರ್ತಕರ ಸಂಘ, ಸೃಜನಾ ಮಹಿಳಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಜಯಕರ್ನಾಟಕ ಸಂಘಟನೆ, ದಲಿತ ಸಹಾಯವಾಣಿ, ಟಿಪ್ಪು ಸುಲ್ತಾನ್ ಯುವಕ ಸಂಘ, ಎಪಿಎಂಸಿ ವರ್ತಕರ ಸಂಘ ಬೆಂಬಲ ಸೂಚಿಸಿದರು.

* * 

10 ದಿನದೊಳಗೆ ಕಾಮಗಾರಿ ಪುನರಾರಂಭ ಮಾಡದಿದ್ದರೆ ಹೇಮಾವತಿ ನಾಲಾ ಕಾಮಗಾರಿ ಮುಂದೆ ಸಮಿತಿಯ ನೂರಾರು ಸದಸ್ಯರು ಧರಣಿ ಕೂರುತ್ತೇವೆ ಡಾ.ಎಸ್.ಜಿ.ಪರಮೇಶ್ವರಪ್ಪ.ಉಪಾಧ್ಯಕ್ಷ ,ಶಾಶ್ವತ ನೀರಾವರಿ ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT