ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಅಂತರ್ಜಾಲ...

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಅಂತರ್ಜಾಲ ಆಧಾರಿತ ಸೇವೆಗಳು ಯಾವುದೇ ತೊಡಕು ಅಥವಾ ತಾರತಮ್ಯ ಇಲ್ಲದೆ ಎಲ್ಲರಿಗೂ ಲಭ್ಯವಾಗಬೇಕು ಎನ್ನುವುದು ನೆಟ್‌ ನ್ಯೂಟ್ರಾಲಿಟಿ (ಮುಕ್ತ ಅಂತರ್ಜಾಲ) ಪರಿಕಲ್ಪನೆ. ಮೇಲ್ನೋಟಕ್ಕೆ ಇದು ಉಚಿತ ಸೇವೆ ಎನಿಸಿದರೂ, ಇದು ಸಂಪೂರ್ಣವಾಗಿ ಮುಕ್ತ ಮಾರುಕಟ್ಟೆಯ ಸ್ಪರ್ಧೆಯ ನಿಯಮಗಳಿಗೆ ವಿರುದ್ಧವಾಗಿದೆ.

ಈ ನೆಟ್‌ ನ್ಯೂಟ್ರಾಲಿಟಿ ಹೆಸರಿನಲ್ಲಿ, ಇಡೀ ಇಂಟರ್‌ನೆಟ್‌ ಜಗತ್ತಿನ ಮೇಲೆ ಕಾರ್ಪೊರೇಟ್‌ ನಿಯಂತ್ರಣ ವ್ಯವಸ್ಥೆಯೊಂದು ಜಾರಿಗೆ ಬರುವ ಅತ್ಯಂತ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ಅಂತರ್ಜಾಲ ಬಳಕೆದಾರರ ಆರೋಪ.

ನೆಟ್‌ನ್ಯೂಟ್ರಾಲಿಟಿ ಕಲ್ಪನೆ ಜಾರಿಗೆ ಬಂದ 2003ರಲ್ಲೇ ಕೊಲಂಬಿಯಾ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ಟಿಮ್‌ ವೂ ಇಂಥದೊಂದು ಎಚ್ಚರಿಕೆ ನೀಡಿದ್ದರು. ಅಂದರೆ ಕೆಲವೇ ಕೆಲವು ಇಂಟರ್ ಸೇವಾಪೂರೈಕೆ ಕಂಪೆನಿಗಳು ಮತ್ತು ಐಟಿ ಕಂಪೆನಿಗಳು ಸೇರಿಕೊಂಡು, ಇಡೀ ಇಂಟರ್‌ನೆಟ್‌ ಜಗತ್ತನ್ನು ನಿಯಂತ್ರಿಸುವ ವ್ಯವಸ್ಥೆ ನಿರ್ಮಾಣವಾಗುತ್ತದೆ. ಗ್ರಾಹಕನಿಗೆ ಯಾವುದೇ ಆಯ್ಕೆ ಸ್ವಾತಂತ್ರ್ಯ ಇರುವುದಿಲ್ಲ’ ಎಂದಿದ್ದರು. ಈ ಮಾತು ಮತ್ತೆ ಈಗ ಚರ್ಚೆಯಾಗುತ್ತಿದೆ.

3ಜಿ, 4ಜಿ ಸೇವೆಗಳು ಜನಪ್ರಿಯಗೊಂಡ ಬೆನ್ನಲ್ಲೇ, ಇಂಟರ್‌ನೆಟ್‌ ಸೇವಾ ಪೂರೈಕೆ ಕಂಪನಿಗಳಿಗೆ (ಐಎಸ್‌ಪಿ) ಮೊಬೈಲ್‌ ಬಳಕೆಯ ಸೇವೆಗಳಿಂದ ಬರುವ ವರಮಾನ ಗಣನೀಯವಾಗಿ ಹೆಚ್ಚಿದೆ. ಎರಡನೆಯ ಹಂತದಲ್ಲಿ ಇದನ್ನು ಇನ್ನಷ್ಟು ವ್ಯಾವಹಾರಿಕವಾಗಿ ವಿಸ್ತರಿಸಲು ಈ ಕಂಪನಿಗಳು ಯೋಜನೆ ರೂಪಿಸಿವೆ. ಆಯ್ದ ಜಾಲತಾಣಗಳನ್ನು ಇಂಟರ್ನೆಟ್ ಶುಲ್ಕವಿಲ್ಲದೆ ಒದಗಿಸುವ ‘ಫೇಸ್‌ಬುಕ್’ನ internet.org ಕಲ್ಪನೆ, ಫ್ಲಿಪ್‌ಕಾರ್ಟ್ ಕಂಪನಿ ಏರ್‌ಟೆಲ್‌ನ ‘ಝೀರೊ’ ಸೇವೆಯಡಿ ಮಾರುಕಟ್ಟೆ ಪ್ರಯೋಗಕ್ಕೆ ಮುಂದಾಗಿದ್ದು, ಇವೆಲ್ಲವೂ ಇದರ ಭಾಗಗಳು.

ಅಂದರೆ ಮುಕ್ತ ಅಂತರ್ಜಾಲ ಪರಿಕಲ್ಪನೆಯನ್ನು ವೇದಿಕೆಯಾಗಿ ಬಳಸಿಕೊಂಡು ಮಧ್ಯಮ ಗಾತ್ರದ ಕಂಪನಿಗಳಿಗೆ ಮಾರುಕಟ್ಟೆ ವಿಸ್ತರಿಸಲು ನೆರವಾಗುವ ಪ್ರಯತ್ನ. ಅಂದರೆ, ಇಂಟರ್‌ನೆಟ್‌ ಸೇವಾ ಪೂರೈಕೆ ಕಂಪೆನಿಯು ಈ ಸಂಸ್ಥೆಗಳ ವೆಬ್‌ಸೈಟ್ ಹಾಗೂ ಇತರ ಇಂಟರ್ನೆಟ್‌ ಸೇವೆಗಳನ್ನು ಉಚಿತವಾಗಿ ಬಳಕೆದಾರರಿಗೆ ನೀಡುತ್ತವೆ.

ಅಮೆಜಾನ್‌, ಆ್ಯಪಲ್‌, ಫೇಸ್‌ಬುಕ್‌, ಗೂಗಲ್ ಮತ್ತು ಮೈಕ್ರೊಸಾಫ್ಟ್‌ ಅಮೆರಿಕದ ಈ ಐದು ಕಂಪನಿಗಳು ಸದ್ಯ ಆನ್‌ಲೈನ್‌ ಜಗತ್ತನ್ನು ಆಳುತ್ತಿವೆ. ಇಡೀ ಅಂತರ್ಜಾಲ ಮೂಲಸೌಕರ್ಯ ವ್ಯವಸ್ಥೆ ಈ ಕಂಪೆನಿಗಳ ಕೈಗಳಲ್ಲಿದೆ. ಆ್ಯಪ್‌ಸ್ಟೋರ್‌ನಿಂದ ಆಪರೇಟಿಂಗ್‌ ಸಿಸ್ಟಂವರೆಗೆ, ಆಪರೇಟಿಂಗ್ ಸಿಸ್ಟಂನಿಂದ ಕ್ಲೌಡ್‌ ಸೇವೆಯವರೆಗೆ ಈ ಕಂಪನಿಗಳ ಏಕಸ್ವಾಮ್ಯ ಮುಂದುವರಿದಿದೆ.

ಇಂಟರ್‌ನೆಟ್‌ನ ಬಹುತೇಕ ಜಾಹೀರಾತು ವ್ಯವಹಾರವನ್ನು ಈ ಕಂಪನಿಗಳೇ ನಿಭಾಯಿಸುತ್ತವೆ. ಅಷ್ಟೇ ಅಲ್ಲ, ಎಅಂಡ್‌ಟಿ, ಕಾರ್ಟರ್‌, ಕಾಮ್‌ಕ್ಯಾಸ್ಟ್‌, ವೆರಿಜಾನ್‌ನಂತಹ ಇಂಟರ್‌ನೆಟ್‌ ಸೇವಾ ಪೂರೈಕೆ ಕಂಪೆನಿಗಳು ಸಹ ಈ ಕಂಪನಿಗಳ ನಿಯಂತ್ರಣದಲ್ಲಿವೆ. ಇವೆಲ್ಲವೂ ಜತೆಯಾದರೆ ಮುಕ್ತ ಅಂತರ್ಜಾಲ ಎನ್ನುವ ಪರಿಕಲ್ಪನೆ ಹೇಗೆ ಕಾರ್ಪೊರೇಟ್‌ ನಿಯಂತ್ರಣಕ್ಕೆ ಬರುತ್ತದೆ ಎಂದು ವಿವರಿಸುತ್ತಾರೆ ಟಿಮ್‌ ವೂ.

‘ಇದು ಮಧ್ಯಮ ಗಾತ್ರದ ಕಂಪನಿಗಳಿಗೆ ಮಾರುಕಟ್ಟೆ ವಿಸ್ತರಿಸಲು ಅನುಕೂಲವಾದರೂ, ಸ್ಟಾರ್ಟ್‌ಅಪ್‌ ಕಂಪೆನಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಕಂಪನಿಗಳಿಗೆ ತಮ್ಮ ಹೊಸ ಗ್ರಾಹಕರನ್ನು ಹುಡುಕಿಕೊಳ್ಳಲು ಈ ವ್ಯವಸ್ಥೆ ಅಡ್ಡಿಯಾಗುತ್ತದೆ. ಒಟ್ಟಿನಲ್ಲಿ ಮುಕ್ತ ಅಂತರ್ಜಾಲ ಪರಿಕಲ್ಪನೆ ಮುಕ್ತ ಮಾರುಕಟ್ಟೆ ಸ್ಪರ್ಧೆಗೆ ವಿರುದ್ಧವಾದದು’ಎನ್ನುತ್ತಾರೆ ಎಫ್‌ಸಿಸಿ ಅಧ್ಯಕ್ಷ ಅಜಿತ್‌ ಪೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT