ಶುಕ್ರವಾರ, ಫೆಬ್ರವರಿ 26, 2021
30 °C

ಭಾರತಕ್ಕೆ ಗೆಲುವು ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತಕ್ಕೆ ಗೆಲುವು ಅನಿವಾರ್ಯ

ಮೊಹಾಲಿ: ಮೊದಲ ಪಂದ್ಯದಲ್ಲಿ ಎದುರಾಗಿದ್ದ ಸೋಲಿನಿಂದ ಮೈ ಕೊಡವಿ ನಿಂತಿರುವ ಭಾರತ ತಂಡ ಈಗ ಜಯದ ಮಂತ್ರ ಜ‍ಪಿಸುತ್ತಿದೆ.

ಶ್ರೀಲಂಕಾ ಎದುರಿನ ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯ ಪಂಜಾಬ್‌ ಕ್ರಿಕೆಟ್‌ ಸಂಸ್ಥೆಯ ಅಂಗಳದಲ್ಲಿ ಬುಧವಾರ ನಡೆಯಲಿದೆ. ಸರಣಿ ಜಯದ ಕನಸು ಜೀವಂತವಾಗಿಟ್ಟುಕೊಳ್ಳಬೇಕಾದರೆ ಈ ಹೋರಾಟದಲ್ಲಿ ಆತಿಥೇಯರು ಗೆಲ್ಲಲೇಬೇಕು. ಹೀಗಾಗಿ ಇದು ರೋಹಿತ್‌ ಶರ್ಮಾ ಪಡೆಯ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಪೈಪೋಟಿ.

ಈ ವರ್ಷ ತವರಿನಲ್ಲಿ ನಡೆದ ಸರಣಿಗಳಲ್ಲಿ ಆಧಿಪತ್ಯ ಸಾಧಿಸಿದ್ದ ಭಾರತಕ್ಕೆ ಧರ್ಮಶಾಲಾ ಅಂಗಳದಲ್ಲಿ ಸಿಂಹಳೀಯ ನಾಡಿನ ತಂಡ ಸೋಲಿನ ರುಚಿ ತೋರಿಸಿತ್ತು.

ಪ್ರವಾಸಿ ಪಡೆಯ ವೇಗಿ ಸುರಂಗ ಲಕ್ಮಲ್‌ ದಾಳಿಗೆ ಭಾರತದ ಬ್ಯಾಟ್ಸ್‌ಮನ್‌ಗಳು ಬೆಚ್ಚಿದ್ದರು. ನಾಯಕತ್ವ ವಹಿಸಿಕೊಂಡ ಚೊಚ್ಚಲ ಪಂದ್ಯದಲ್ಲಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಲು ರೋಹಿತ್‌ ವಿಫಲರಾಗಿದ್ದರು.

ಏಕದಿನ ಮಾದರಿಯಲ್ಲಿ ಎರಡು ದ್ವಿಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಹೊಂದಿರುವ ರೋಹಿತ್‌, ಧರ್ಮಶಾಲಾದಲ್ಲಿ ಕೇವಲ ಎರಡು ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡಿದ್ದರು. ಸ್ಫೋಟಕ ಆಟಕ್ಕೆ ಹೆಸರಾಗಿರುವ ಎಡಗೈ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಸೊನ್ನೆ ಸುತ್ತಿದ್ದರು. ಇವರು ಈ ಪಂದ್ಯದಲ್ಲಿ ಲಯ ಕಂಡುಕೊಂಡು ಆಡುವುದು ಅಗತ್ಯ.

ಶ್ರೇಯಸ್‌ ಅಯ್ಯರ್‌, ದಿನೇಶ್‌ ಕಾರ್ತಿಕ್‌ ಮತ್ತು ಕರ್ನಾಟಕದ ಮನೀಷ್‌ ಪಾಂಡೆ ಅವರೂ ತಮ್ಮ ಮೇಲಿನ ಜವಾಬ್ದಾರಿ ಅರಿತು ಆಡಬೇಕು. ಇವರು ಹಿಂದಿನ ಪಂದ್ಯದಲ್ಲಿ ವಿಕೆಟ್‌ ನೀಡಲು ಅವಸರಿಸಿದ್ದರು!

ಕೇದಾರ್‌ ಜಾಧವ್‌ ಗಾಯದ ಕಾರಣ ತಂಡದಿಂದ ಹೊರಬಿದ್ದಿದ್ದರು. ಹೀಗಾಗಿ ಶ್ರೇಯಸ್‌ಗೆ ಪದಾರ್ಪಣೆಯ ಅವಕಾಶ ಸಿಕ್ಕಿತ್ತು. ತಮ್ಮ ಚೊಚ್ಚಲ ಪಂದ್ಯದಲ್ಲಿ ಅವರು 9 ರನ್‌ ಗಳಿಸಲಷ್ಟೇ ಶಕ್ತರಾಗಿದ್ದರು.

ದಿನೇಶ್‌ ಕಾರ್ತಿಕ್‌ ಶೂನ್ಯಕ್ಕೆ ಔಟಾದರೆ, ಮನೀಷ್‌  2ರನ್‌ ಗಳಿಸಿ ವಿಕೆಟ್‌ ಕೈಚೆಲ್ಲಿದ್ದರು. ಹಾರ್ದಿಕ್‌ ಪಾಂಡ್ಯಾ ಕೂಡ ನಿರೀಕ್ಷೆ ಹುಸಿಗೊಳಿಸಿದ್ದರು.

ಪ್ರಮುಖ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದ್ದರಿಂದ ತಂಡ 50ರ ಗಡಿ ದಾಟುವುದೇ ಅನುಮಾನ ಎನಿಸಿತ್ತು. ಆದರೆ ಅನುಭವಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಮಹೇಂದ್ರ ಸಿಂಗ್‌ ದೋನಿ ಛಲದಿಂದ ಹೋರಾಡಿ ಕ್ರಿಕೆಟ್‌ ಪ್ರೇಮಿಗಳ ಮನ ಗೆದ್ದಿದ್ದರು.

ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದ ಅವರು ಮೊಹಾಲಿಯಲ್ಲೂ ರನ್‌ ಮಳೆ ಸುರಿಸುವ ನಿರೀಕ್ಷೆ ಇದೆ.

ಅನುಭವಿ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಆಡುವ ಬಳಗದಲ್ಲಿ ಸ್ಥಾನ ಗಳಿಸುವ ಸಂಭವ ಇದೆ. ಅವರಿಗೆ ಮೊದಲ ಪಂದ್ಯದಲ್ಲಿ ಅವಕಾಶ ಸಿಕ್ಕಿರಲಿಲ್ಲ.

ಭುವನೇಶ್ವರ್‌ ಕುಮಾರ್‌ ಮತ್ತು ಜಸ್‌ಪ್ರೀತ್‌ ಬೂಮ್ರಾ ವೇಗದ ಬೌಲಿಂಗ್‌ ವಿಭಾಗದಲ್ಲಿ ಭಾರತದ ಶಕ್ತಿಯಾಗಿದ್ದಾರೆ. ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ಇವರು ಆರಂಭದಲ್ಲೇ ವಿಕೆಟ್‌ ಉರುಳಿಸಿ ಎದುರಾಳಿ ತಂಡಕ್ಕೆ ಆಘಾತ ನೀಡಬಲ್ಲರು.

ಆದರೆ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ, ಪರಿಣಾಮಕಾರಿ ಸಾಮರ್ಥ್ಯ ತೋರುವುದು ಅಗತ್ಯ. ಮೊದಲ ಪಂದ್ಯದಲ್ಲಿ 5 ಓವರ್‌ ಬೌಲ್‌ ಮಾಡಿದ್ದ ಅವರು 39ರನ್‌ ಕೊಟ್ಟಿದ್ದರು.

ಸ್ಪಿನ್ನರ್‌ಗಳಾದ ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಾಹಲ್‌ ಅವರೂ ಮಿಂಚುವ ವಿಶ್ವಾಸ ಹೊಂದಿದ್ದಾರೆ.

ಸರಣಿ ಜಯದ ಹಂಬಲ

ಮೊದಲ ಪಂದ್ಯದಲ್ಲಿ ಗೆದ್ದು ವಿಶ್ವಾಸದಿಂದ ಬೀಗುತ್ತಿರುವ ತಿಸಾರ ಪೆರೇರಾ ಪಡೆ ಎರಡನೇ ಹೋರಾಟದಲ್ಲೂ ಭಾರತದ ಸವಾಲು ಮೀರಿ ನಿಂತು ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಆರಂಭಿಕ ಬ್ಯಾಟ್ಸ್‌ಮನ್‌ ಉಪುಲ್‌ ತರಂಗ, ಏಂಜೆಲೊ ಮ್ಯಾಥ್ಯೂಸ್‌ ಮತ್ತು ನಿರೋಷನ್‌ ಡಿಕ್ವೆಲ್ಲಾ, ಉತ್ತಮ ಲಯದಲ್ಲಿ ಆಡುತ್ತಿರುವುದು ಈ ತಂಡಕ್ಕೆ ವರವಾಗಿ ಪರಿಣಮಿಸಿದೆ. ತರಂಗ ಮೊದಲ ಪಂದ್ಯದಲ್ಲಿ 49 ರನ್‌ ಗಳಿಸಿ ಜಯದ ಹಾದಿ ಸುಗಮ ಮಾಡಿದ್ದರು.

ಮ್ಯಾಥ್ಯೂಸ್‌ ಮತ್ತು ಡಿಕ್ವೆಲ್ಲಾ ಕೂಡ ರನ್ ಕಾಣಿಕೆ ನೀಡಿದ್ದರು.

ಆದರೆ ಧನುಷ್ಕಾ ಗುಣತಿಲಕ ಮತ್ತು ಲಾಹಿರು ತಿರಿಮಾನ್ನೆ ಅವರ ವೈಫಲ್ಯ ನಾಯಕ ಪೆರೇರಾ ಚಿಂತೆಗೆ ಕಾರಣವಾಗಿದೆ. ಇವರು ಲಯ ಕಂಡುಕೊಂಡರೆ ತಂಡದ ಬ್ಯಾಟಿಂಗ್‌ ಶಕ್ತಿ ಇನ್ನಷ್ಟು ಹೆಚ್ಚಲಿದೆ.

ಲಕ್ಮಲ್‌, ಮ್ಯಾಥ್ಯೂಸ್‌, ನುವಾನ್‌ ಪ್ರದೀಪ ಮತ್ತು ತಿಸಾರ ಪೆರೇರಾ, ಬೌಲಿಂಗ್‌ನಲ್ಲಿ ತಾವು ತಂಡದ ಆಧಾರ ಸ್ತಂಭ ಎಂಬುದನ್ನು ಮೊದಲ ಪಂದ್ಯದಲ್ಲಿ ನಿರೂಪಿಸಿದ್ದಾರೆ.

ಅಖಿಲ ಧನಂಜಯ ಮತ್ತು ಸಚಿತ್‌ ಪತಿರಾಣ ಅವರೂ ಮೋಡಿ ಮಾಡಲು ಕಾಯುತ್ತಿದ್ದಾರೆ.

ತಂಡಗಳು ಇಂತಿವೆ

ಭಾರತ:
ರೋಹಿತ್‌ ಶರ್ಮಾ (ನಾಯಕ), ಶಿಖರ್‌ ಧವನ್‌, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ವಾಷಿಂಗ್ಟನ್‌ ಸುಂದರ್‌, ದಿನೇಶ್‌ ಕಾರ್ತಿಕ್‌, ಮಹೇಂದ್ರ ಸಿಂಗ್‌ ದೋನಿ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಾಲ್‌, ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌ ಮತ್ತು ಸಿದ್ದಾರ್ಥ್‌ ಕೌಲ್‌.

ಶ್ರೀಲಂಕಾ: ತಿಸಾರ ಪೆರೇರಾ (ನಾಯಕ), ಉಪುಲ್‌ ತರಂಗ, ಧನುಷ್ಕಾ ಗುಣತಿಲಕ, ಲಾಹಿರು ತಿರಿಮಾನ್ನೆ, ಏಂಜೆಲೊ ಮ್ಯಾಥ್ಯೂಸ್‌, ಅಸೆಲಾ ಗುಣರತ್ನೆ, ನಿರೋಷನ್‌ ಡಿಕ್ವೆಲ್ಲಾ, ಚತುರಂಗ ಡಿ ಸಿಲ್ವ, ಅಖಿಲ ಧನಂಜಯ, ಸುರಂಗ ಲಕ್ಮಲ್‌, ನುವಾನ್‌ ಪ್ರದೀಪ, ಸದೀರ ಸಮರವಿಕ್ರಮ, ಧನಂಜಯ ಡಿಸಿಲ್ವ, ದುಷಮಂತ ಚಾಮೀರ, ಸಚಿತ್‌ ಪತಿರಾಣ ಮತ್ತು ಕುಶಾಲ್‌ ಪೆರೇರಾ.

ಆರಂಭ: ಬೆಳಿಗ್ಗೆ 11.30.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

ಭಾರತದ ನೆಲದಲ್ಲಿ ಏಕದಿನ ಸರಣಿ ಗೆಲ್ಲುವುದು ನಮ್ಮ ಗುರಿ. ಹೀಗಾಗಿ ಎರಡನೇ ಪಂದ್ಯದಲ್ಲೂ ಶ್ರೇಷ್ಠ ಸಾಮರ್ಥ್ಯ ತೋರುವತ್ತ ಚಿತ್ತ ನೆಟ್ಟಿದ್ದೇವೆ.

–ತಿಸಾರ ಪೆರೇರಾ, ಶ್ರೀಲಂಕಾ ತಂಡದ ನಾಯಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.