ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೇಶ್‌ ಮೇಸ್ತ ಸಾವು ಪ್ರಕರಣ ಸಿಬಿಐಗೆ

Last Updated 13 ಡಿಸೆಂಬರ್ 2017, 16:59 IST
ಅಕ್ಷರ ಗಾತ್ರ

ಬೆಂಗಳೂರು: ಹೊನ್ನಾವರದ ಪರೇಶ್‌ ಮೇಸ್ತ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ಧರಿಸಿದ ರಾಜ್ಯ ಸರ್ಕಾರ, ಈ ಸಂಬಂಧ ಬುಧವಾರ ಸಿಬಿಐ ಅಧಿಕಾರಿಗಳಿಗೆ ಪತ್ರ ಬರೆದಿದೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ‘ಪರೇಶ್‌ ಸಾವಿನ ಬಗ್ಗೆ ನಿಖರ ಮಾಹಿತಿ ಗೊತ್ತಾಗಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕಿದೆ. ಅವರ ಕುಟುಂಬದವರ ಒತ್ತಾಯದಂತೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ತೀರ್ಮಾನಿಸಿದ್ದೇವೆ. ಮುಖ್ಯಮಂತ್ರಿ ಅವರು ಸಹ ಅದಕ್ಕೆ ಒಪ್ಪಿಗೆ ನೀಡಿ ಆದೇಶ ಹೊರಡಿಸಿದ್ದಾರೆ’ ಎಂದರು.

‘ಬಿಜೆಪಿಯ ಒತ್ತಡಕ್ಕೆ ಮಣಿದು ಈ ಆದೇಶ ಹೊರಡಿಸಿಲ್ಲ. ಪರೇಶ್‌ ತಂದೆ ಕಮಲಾಕರ್‌ ಅವರೇ, ‘ನನ್ನ ಮಗ ಯಾವ ಪಕ್ಷಕ್ಕೂ ಸೇರಿಲ್ಲ. ಯಾವ ಸಂಘಟನೆ ಜತೆಗೂ ನಂಟು ಹೊಂದಿರಲಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿ ಕೆಲ ಮುಖಂಡರು, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಂತೆ ವರ್ತಿಸುತ್ತಿದ್ದಾರೆ. ಕೋಮು ಭಾವನೆಗಳನ್ನು ಪ್ರಚೋದಿಸುವಂತೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಚುನಾವಣೆಗಳು ಹತ್ತಿರವಾಗುತ್ತಿದ್ದು, ತಾವು ಸೋಲುತ್ತೇವೆ ಎಂಬುದು ಬಿಜೆಪಿಯವರಿಗೆ ಗೊತ್ತಾಗಿದೆ. ಹೀಗಾಗಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಮಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅದರಿಂದ ಪರಿಣಾಮವಾಗಿಯೇ ಹೊನ್ನಾವರ, ಶಿರಸಿಗಳಲ್ಲಿ ಕೋಮುಗಲಭೆಗಳು ನಡೆಯುತ್ತಿವೆ’ ಎಂದರು.

ಕೋಮು ಗಲಭೆ ಬಣ್ಣ: ‘2012ರಿಂದ ಇದುವರೆಗೂ ಕೋಮುಗಲಭೆಗಳಲ್ಲಿ 11 ಮಂದಿ ಮೃತಪಟ್ಟಿದ್ದಾರೆ. ಆದರೆ, ಬಿಜೆಪಿಯವರು 20 ಮಂದಿ ಎಂದು ವಾದಿಸುತ್ತಾರೆ. ಯಾವುದೋ ಕಾರಣಕ್ಕೆ ಸತ್ತ ವ್ಯಕ್ತಿಗಳನ್ನೆಲ್ಲ ಕೋಮು ಗಲಭೆಯಲ್ಲೇ ಸತ್ತರೆಂದು ಹೇಳುತ್ತಿದ್ದಾರೆ. ಇದೇ ಗಲಭೆಯಲ್ಲಿ 6 ಮಂದಿ ಪಿಎಫ್‌ಐ ಸಂಘಟನೆಯವರು ಸತ್ತಿದ್ದಾರೆ. ಅವರ ಬಗ್ಗೆ ಏಕೆ ಮಾತನಾಡುವುದಿಲ್ಲ’ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

‘ಬಿಜೆಪಿ ಅವರಿಗೆ ಅನುಭವ ಕಮ್ಮಿ. ಅದು ಇದ್ದಿದ್ದರೆ ಈ ರೀತಿ ಪ್ರಚೋದನೆ ಕೆಲಸ ಮಾಡುತ್ತಿರಲಿಲ್ಲ. ಎಲ್ಲ ಪ್ರಕರಣವನ್ನು ಸಿಬಿಐಗೆ ಕೊಡಿ ಎನ್ನುತ್ತಾರೆ. ತೀರ್ಥಹಳ್ಳಿಯ ನಂದಿತಾ, ಐಎಎಸ್‌ ಅಧಿಕಾರಿ ಡಿ.ಕೆ.ರವಿ ಪ್ರಕರಣದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT