ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿ ವೆನಿಲ್ಲಾಕ್ಕೆ ದಾಖಲೆ ಧಾರಣೆ

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ‘ಹಸಿರು ಚಿನ್ನ’ ಎಂದೇ ಖ್ಯಾತವಾದ ವೆನಿಲ್ಲಾಗೆ ಮಾರುಕಟ್ಟೆಯಲ್ಲಿ ಧಾರಣೆ ಭಾರಿ ಪ್ರಮಾಣದಲ್ಲಿ ಏರುಮುಖ ಕಂಡಿದ್ದು, 13 ವರ್ಷಗಳ ನಂತರ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ, ಬೆಳೆಗಾರರ ತೋಟದಲ್ಲಿ ಬೆಳೆ ಇಲ್ಲದ ಕಾರಣ ನಿರಾಸೆ ಮೂಡಿಸಿದೆ.

2003–04ರ ವೇಳೆಯಲ್ಲಿ ಹೊಸ ಅಲೆ ಸೃಷ್ಟಿಸಿದ್ದ ವೆನಿಲ್ಲಾ, ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿತ್ತು. ಹಸಿ ಬೀನ್ಸ್ ಧಾರಣೆ ಕಿಲೋಗೆ ₹4 ಸಾವಿರ ತಲುಪಿದರೆ ಒಣ ಬೀನ್ಸ್ ಧಾರಣೆ ಕಿಲೋಗೆ ₹28 ಸಾವಿರದ ಗಡಿ ಮುಟ್ಟಿತ್ತು. ಇದರಿಂದ ಉತ್ತೇಜನಗೊಂಡ ರೈತರು ಸಾಲ ಮಾಡಿ ಸಾವಿರಾರು ಹೆಕ್ಟೇರ್‌ಗಳಲ್ಲಿ ವೆನಿಲ್ಲಾ ಬೆಳೆಯಲು ಮುಂದಾಗಿದ್ದರು. ಇದರಿಂದಾಗಿ 2007–08 ರಲ್ಲಿ ವೆನಿಲ್ಲಾ ಹಸಿ ಬೀನ್ಸ್ ಧಾರಣೆ ಕಿಲೋಗೆ ₹ 100ಕ್ಕೆ ಕುಸಿದಿತ್ತು. ಕೃಷಿಕರು ಕುಸಿದು ಹೋಗಿದ್ದರು.

ಒಂದೆಡೆ ವೆನಿಲ್ಲಾ ಬೆಳೆಯಿಂದ ಅಸಲು ಹುಟ್ಟದೇ ಇರುವುದು ಮತ್ತೊಂದೆಡೆ ಬೆಳೆಗೆ ತಗುಲಿದ ಅಕಾಲಿಕ ‘ವಿಲ್ಟ್‘ರೋಗದಿಂದ ಬೇಸತ್ತ ಕೃಷಿಕರು ವೆನಿಲ್ಲಾ ಬಳ್ಳಿ ನಾಟಿ ಮಾಡಿದಷ್ಟೇ ವೇಗವಾಗಿ ಕಿತ್ತೆಸೆಯಲು ಮುಂದಾದರು. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಗಣನೀಯವಾಗಿ ವೆನಿಲ್ಲಾ ಬೆಳೆಯುವ ಪ್ರದೇಶ ದಿನದಿನಂದ ದಿನಕ್ಕೆ ಕಡಿಮೆಯಾಗಿ ಇಳುವರಿ ಕುಂಠಿತವಾಗಿತ್ತು.

ಇದೀಗ ರಾಜ್ಯದ ಒಟ್ಟಾರೆ ಹಸಿ ಬೀನ್ಸ್ ಉತ್ಪಾದನೆ ಶೇ 99ರಷ್ಟು ಕುಸಿದಿದ್ದು, 4 ಟನ್‌ನಷ್ಟು ಮಾತ್ರ ಸಿಗಬಹುದು ಎಂಬುದು ಸಂಸ್ಕರಿಸುವವರ ಲೆಕ್ಕಾಚಾರ. ಸ್ಥಳೀಯ ಕಂಪೆನಿಗಳ ಬೇಡಿಕೆಗೆ ಇದು ಸಾಕಾಗುತ್ತಿಲ್ಲ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಈ ವರ್ಷ ಎಲ್ಲ ದರ್ಜೆಯ ಹಸಿ ಬೀನ್ಸ್ ಧಾರಣೆ ಕಿಲೋಗೆ ₹5 ಸಾವಿರದಿಂದ  ₹5800 ಮುಟ್ಟಿದ್ದರೆ. ಒಣ ಬೀನ್ಸ್ ಧಾರಣೆ ಕಿಲೋಗೆ ₹18 ಸಾವಿರದಿಂದ ₹31 ಸಾವಿರದ ಆಸುಪಾಸು ತಲುಪಿದೆ. ಆದರೆ, ರಾಜ್ಯದ ಕೃಷಿಕರ ಬಳಿ ವೆನಿಲ್ಲಾ ಸಂಗ್ರಹ ಇಲ್ಲ.

ಕೇರಳದ ಆಯ್ದ ಕೆಲವು ರೈತರು ಮಾತ್ರ ಏಳೆಂಟು ವರ್ಷ ಹಿಂದೆ ಸಂಸ್ಕರಿಸಿದ ಒಣ ಬೀನ್ಸ್‌ಗಳನ್ನು ಸಂಗ್ರಹಿಸಿ ಇಟ್ಟಿದ್ದು ಇದೀಗ ಅವರಿಗೆ ಬಂಪರ್ ಲಾಟರಿ ಹೊಡೆದಂತಾಗಿದೆ.

ಅತಿ ಹೆಚ್ಚು ವೆನಿಲ್ಲಾ  ಬೆಳೆಯುವ ಮಡಗಾಸ್ಕರ್ ದೇಶದಲ್ಲಿ ಈ ಬಾರಿ ಬೀಸಿದ ಚಂಡಮಾರುತದಿಂದಾಗಿ ವೆನಿಲ್ಲಾ ನಿರೀಕ್ಷಿತ ಪ್ರಮಾಣದಲ್ಲಿ ದೊರಕದ ಕಾರಣ ಭಾರತದಲ್ಲಿ ಧಾರಣೆ ಮತ್ತಷ್ಟು ಏರುವ ಸಂಭವ ಇದೆ. ಮುಂದಿನ ಒಂದು ವರ್ಷದವರೆಗೂ ಇದೇ ಧಾರಣೆ ಮುಂದುವರೆಯಲಿದೆ ಎನ್ನುತ್ತಾರೆ ವೆನಿಲ್ಲಾ ಕ್ಷೇತ್ರದ ಪರಿಣತರು.

ಈ ನಡುವೆ ಇಂಡೊನೇಷ್ಯಾ ಮತ್ತಿತರ ದೇಶಗಳಲ್ಲಿ ಕಡಿಮೆ ದರಕ್ಕೆ ದೊರಕುವ ವೆನಿಲ್ಲಾವನ್ನು ಭಾರತಕ್ಕೆ ತರಿಸಿಕೊಂಡು  ಇಲ್ಲಿನ ಬೀನ್ಸ್ ಜೊತೆ ಸೇರಿಸಿ ವಿದೇಶಕ್ಕೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
–ಎಚ್‌.ಎಸ್‌.ಸತೀಶ್‌ ಜೈನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT