ಶನಿವಾರ, ಫೆಬ್ರವರಿ 27, 2021
23 °C
ಬಿಬಿಎಂಪಿ ವ್ಯಾಪ್ತಿಯಲ್ಲಿ 842 ಕಿ.ಮೀ ರಾಜಕಾಲುವೆ: 177 ಕಿ.ಮೀಗೆ ₹ 1,100 ಕೋಟಿ ಬಿಡುಗಡೆ

ರಾಜಕಾಲುವೆ ಪುನರ್ ವಿನ್ಯಾಸಕ್ಕೆ ಗಡುವು: ಹೈಕೋರ್ಟ್‌ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕಾಲುವೆ ಪುನರ್ ವಿನ್ಯಾಸಕ್ಕೆ ಗಡುವು: ಹೈಕೋರ್ಟ್‌ ಎಚ್ಚರಿಕೆ

ಬೆಂಗಳೂರು: ‘ನಗರದ ರಾಜಕಾಲುವೆಗಳ ಪುನರ್‌ ವಿನ್ಯಾಸ ಕಾಮಗಾರಿಯನ್ನು ನಿರ್ದಿಷ್ಟ ಗಡುವಿನೊಳಗೆ ಮುಕ್ತಾಯಗೊಳಿಸಬೇಕು’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಈ ಕುರಿತಂತೆ ಸಿಟಿಜನ್‌ ಆಕ್ಷನ್ಸ್‌ ಫೋರಂ (ಸಿಎಎಫ್‌) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಾದ ಜಯ್ನಾ ಕೊಠಾರಿ, ‘ರಾಜಕಾಲುವೆಗಳ ದುರಸ್ತಿ ಮತ್ತು ಸ್ವಚ್ಛತೆ ಹಾಗೂ ಪುನರ್ ವಿನ್ಯಾಸ ಕಾಮಗಾರಿ

ಯನ್ನು ಬಿಬಿಎಂಪಿ ಇನ್ನೂ ಮುಕ್ತಾಯಗೊಳಿಸಿಲ್ಲ. ಕೆಲವೆಡೆ ಕಾಮಗಾರಿಯಿಂದ ರಸ್ತೆಗಳ ಮೇಲೆ ತ್ಯಾಜ್ಯ ಹೊರ ಹಾಕಲಾಗಿದ್ದು ಮತ್ತಷ್ಟು ಸಮಸ್ಯೆ ಸೃಷ್ಟಿಸಿದೆ’ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ರಮೇಶ್, ‘ಏನ್ರೀ ಯುದ್ಧೋಪಾದಿಯಲ್ಲಿ ಕೆಲಸ ನಡೆಸುತ್ತಿದ್ದೀರಾ ಹೇಗೆ. ಬೆಂಗಳೂರು ಡ್ರೈನೇಜ್‌–ಗಾರ್ಬೇಜ್‌ಗೆ ಹೆಸರಾಗಿಬಿಟ್ಟಿದೆ’ ಎಂದು ಬಿಬಿಎಂಪಿ ಪರ ವಕೀಲರನ್ನು ಕೆಣಕಿದರು.

ಎಚ್‌.ಜಿ.ರಮೇಶ್‌

ಇದಕ್ಕೆ ಉತ್ತರಿಸಿದ ವಿ.ಶ್ರೀನಿಧಿ, ‘ಸ್ವಾಮಿ, ಬಿಬಿಎಂಪಿ ವ್ಯಾಪ್ತಿಯಲ್ಲಿ 2006–07ರಿಂದ 2017ರ ಜುಲೈ 31ರವರೆಗೆ 177.02 ಕಿ.ಮೀ ಉದ್ದದ ರಾಜಕಾಲುವೆಗೆ ಹೊಸ ರೂಪ ನೀಡಲಾಗುತ್ತಿದೆ. ಇದಕ್ಕಾಗಿ ನಗರೋತ್ಥಾನ ಯೋಜನೆಯಡಿ ₹ 1367 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದರು.

‘2016–17 ಮತ್ತು 2017–18ರ ಸಾಲಿನಲ್ಲಿ ₹ 1,100 ಕೋಟಿ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯ ಪರಿಣಾಮ ಪ್ರವಾಹ ಉಂಟಾಗಿ ಹಾನಿ ಉಂಟಾದ ಪ್ರದೇಶಗಳಲ್ಲಿನ 20 ಕಿ.ಮೀ. ದುರಸ್ತಿಗೆ 96 ಕೋಟಿ ಒದಗಿಸಲಾಗಿದೆ’ ಎಂದು ತಿಳಿಸಿದರು.

‘ಈತನಕ 389 ಕಿ.ಮೀ. ಉದ್ದದಷ್ಟು ರಾಜಕಾಲುವೆಗೆ ಹೊಸ ವಿನ್ಯಾಸ ಒದಗಿಸಲಾಗಿದೆ. ಉಳಿದ 453 ಕಿ.ಮೀನಷ್ಟು ಕಾಮಗಾರಿ ಬಾಕಿ ಇದೆ. 1,988 ಕಡೆ ಒತ್ತುವರಿಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 1,225 ಒತ್ತುವರಿ ತೆರವುಗೊಳಿಸಲಾಗಿದೆ. ತೆರವುಗೊಳಿಸಬೇಕಾಗಿರುವ ಪ್ರದೇಶಗಳ ಒತ್ತುವರಿ

ದಾರರಿಗೆ ನೋಟಿಸ್ ನೀಡಲಾಗಿದೆ. ಈ ಕುರಿತು ಭೂ ದಾಖಲೆಗಳ ಜಂಟಿ ನಿರ್ದೇಶಕ ಕಚೇರಿ ಜೊತೆಪತ್ರ ವ್ಯವಹಾರ ನಡೆಸಲಾಗಿದೆ’ ಎಂದರು.

‘ಯಲಹಂಕ, ದಕ್ಷಿಣ, ಪೂರ್ವ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಒತ್ತುವರಿ ಗುರುತಿಸಲು ಸರ್ವೇಯರ್‌ಗಳ ನಿಯೋಜನೆ ಮಾಡಲಾಗಿದೆ. ಉಳಿದ ವಲಯಗಳಲ್ಲಿ ಸರ್ವೇಯರ್‌ಗಳ ನಿಯೋಜನೆಗೆ ಭೂ ದಾಖಲೆಗಳ ಜಂಟಿ ನಿರ್ದೇಶಕರಿಗೆ ಮನವಿ ಮಾಡಲಾಗಿದೆ. ಒತ್ತುವರಿ ಪ್ರದೇಶದ ಒಟ್ಟು ವ್ಯಾಪ್ತಿ 11 ಎಕರೆ 21 ಗುಂಟೆಯಷ್ಟು ಇದೆ. ಇದರ ಪುನರ್‌ ವಿನ್ಯಾಸಕ್ಕೆ  ₹ 600 ಕೋಟಿ ಅಂದಾಜಿಸಲಾಗಿದೆ’ ಎಂದು ಶ್ರೀನಿಧಿ ವಿವರಿಸಿದರು.

ಈ ಕುರಿತಂತೆ ನ್ಯಾಯಪೀಠಕ್ಕೆ ಲಿಖಿತ ವಿವರಣೆ ನೀಡಲು ಶ್ರೀನಿಧಿ ಮುಂದಾದರು. ಆದರೆ, ಇದನ್ನು ಒಪ್ಪದ ನ್ಯಾಯಮೂರ್ತಿ ರಮೇಶ್‌, ‘ರಾಜಕಾಲುವೆಗಳ ಪುನರ್ ವಿನ್ಯಾಸಕ್ಕೆ ಯಾರು ಹಣ ಕೊಡುತ್ತಾರೆ, ಎಷ್ಟು ಕೊಡಬೇಕು, ರಾಜಕಾಲುವೆ ನೀರು ಅಂತಿಮವಾಗಿ ಎಲ್ಲಿಗೆ ಹೋಗಿ ಸೇರುತ್ತದೆ. ಅದನ್ನು ಶುದ್ಧೀಕರಣ ಮಾಡಿ ಬಿಡಲಾಗುತ್ತದೆಯೇ ಹೇಗೆ ಅಥವಾ ಸುಮ್ಮನೇ ಹೇಗೆ ಹರಿಯುತ್ತದೊ ಹಾಗೇ ಬಿಡುತ್ತೀರೊ’ ಎಂಬ ಪ್ರಶ್ನೆಗಳ ಸುರಿ

ಮಳೆಗರೆದರು.

‘ನೀವು ರಾಜಕಾಲುವೆ ದುರಸ್ತಿ, ಪುನರ್ ವಿನ್ಯಾಸವನ್ನು ವರ್ಷದುದ್ದಕ್ಕೂ ಹೀಗೆಯೇ ಮಾಡುತ್ತಲೇ ಇದ್ದರೆ ಹೇಗೆ’ ಎಂದು ಪ್ರಶ್ನಿಸಿದ ರಮೇಶ್, ‘ನಾರ್ವೆಯಂತಹ ದೇಶದಲ್ಲಿ ಕಸದಿಂದ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ. ನೆರೆಯ ಸ್ಕ್ಯಾಂಡಿನೇವಿಯನ್ ದೇಶಗಳಿಗೂ ನಾರ್ವೆ ತಾನು ಉತ್ಪಾದಿಸಿದ ವಿದ್ಯುತ್‌ ಅನ್ನು ಮಾರಾಟ ಮಾಡುತ್ತದೆ. ಆದರೆ, ಅಂತರ ರಾಷ್ಟ್ರೀಯ ಖ್ಯಾತಿಯ ಬೆಂಗಳೂರು ಏನು ಮಾಡುತ್ತಿದೆ’ ಎಂದು ಪ್ರಶ್ನಿಸಿದರು.

‘ನೀವು ರಾಜಕಾಲುವೆಗಳಿಗೆ ಹೊಸ ರೂಪ ಕೊಡುವುದನ್ನು ಇಂತಿಷ್ಟು ಸಮಯದಲ್ಲಿ ಪೂರೈಸಲೇಬೇಕು. ಇಲ್ಲದೇ ಹೋದರೆ ನ್ಯಾಯಾಲಯವೇ ನಿರ್ದಿಷ್ಟ ಗುಡುವು ನೀಡುತ್ತದೆ. ಈ ಕುರಿತಂತೆ ಮುಂದಿನ ವಿಚಾರಣೆ ವೇಳೆಗೆ ನಿಮ್ಮಕ್ರಿಯಾ ಯೋಜನೆಯ ವಿವರಗಳನ್ನು ಕೋರ್ಟ್‌ಗೆ ಸಲ್ಲಿಸಿ’ ಎಂದು ರಮೇಶ್‌ ಆದೇಶಿಸಿದರು.

ವಿಚಾರಣೆಯನ್ನು 2018ರ ಜನವರಿ 23ಕ್ಕೆ ಮುಂದೂಡಲಾಗಿದೆ.

ಗಲ್ಲಿಗಳಲ್ಲಿ ರೋಬೊಟ್‌ ಬಳಕೆ

‘ಇಕ್ಕಟ್ಟಾದ ಗಲ್ಲಿ ಪ್ರದೇಶಗಳಲ್ಲಿರುವ ರಾಜಕಾಲುವೆಗಳ ಪುನರ್ವಿನ್ಯಾಸಕ್ಕೆ ರೋಬೊಟ್‌ ಯಂತ್ರಗಳನ್ನು ಬಳಸಲಾಗುತ್ತಿದೆ’ ಎಂದು ಶ್ರೀನಿಧಿ ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಇನ್ನೂ ಐದು ರೋಬೊಟ್ ಯಂತ್ರಗಳ ಅಗತ್ಯವಿದೆ ಎಂದರು.

* ರಾಜಕಾಲುವೆಗಳ ಪುನರ್ವಿನ್ಯಾಸ ಮಾಡುವಲ್ಲಿ ಬಿಬಿಎಂಪಿ ವೃತ್ತಿಪರ ಯೋಜನೆ ಹೊಂದಿದೆಯೇ?

–ಎಚ್‌.ಜಿ.ರಮೇಶ್‌

ಹಂಗಾಮಿ ಮುಖ್ಯ ನ್ಯಾಯಮೂರ್ತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.