ಸೋಮವಾರ, ಮಾರ್ಚ್ 1, 2021
31 °C

‘ಚೂರಿಕಟ್ಟೆ’ ವೃತ್ತಾಂತ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಚೂರಿಕಟ್ಟೆ’ ವೃತ್ತಾಂತ...

ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸತನದ ಭಾಗವಾಗಬೇಕು. ಆ ಹೊಸತನದ ಗಡಿಯನ್ನು ಇನ್ನಷ್ಟು ವಿಸ್ತರಿಸಬೇಕು ಎಂಬ ಹಂಬಲದೊಂದಿಗೆ ರಾಘು ಶಿವಮೊಗ್ಗ ‘ಚೂರಿಕಟ್ಟೆ’ ಎನ್ನುವ ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ಚೂರಿಕಟ್ಟೆಯ ಟೀಸರ್‌ ಬಿಡುಗಡೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಚಿತ್ರತಂಡದ ಸಕಲರೂ ವೇದಿಕೆಯ ಮುಂದೆ ಇದ್ದರು. ಆದರೂ ಕಾರ್ಯಕ್ರಮ ಆರಂಭವಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿರಲಿಲ್ಲ. ಕಾರಣ ಅತಿಥಿಯಾಗಿ ಬರಲಿದ್ದ ರಕ್ಷಿತ್‌ ಶೆಟ್ಟಿ ಅವರು ಇನ್ನೂ ಬಂದಿರಲಿಲ್ಲ. ಕಾದೂ ಕಾದೂ ಸಾಕಾಗಿ ಚಿತ್ರತಂಡ ವೇದಿಕೆ ಏರಿತು.

‘ಸಿನಿಮಾದ ಕಥೆ ತುಂಬ ಚೆನ್ನಾಗಿದೆ. ಬಿಗಿಯಾದ ಚಿತ್ರಕಥೆಯೇ ಈ ಸಿನಿಮಾದ ಶಕ್ತಿ’ ಎಂದರು ನಾಯಕ ಪ್ರವೀಣ್‌.

‘ರಾಘು ನೀನಾಸಮ್‌ ವಿದ್ಯಾರ್ಥಿಯಾಗಿ ರಂಗತರಬೇತಿ ಪಡೆದಿದ್ದಾರೆ. ನಂತರ ಕಿರುಚಿತ್ರಗಳನ್ನು ಮಾಡಿ ಸಿನಿಮಾ ಮಾಧ್ಯಮದ ಕುರಿತು ಅನುಭವ ಪಡೆದುಕೊಂಡಿದ್ದಾರೆ. ಈಗ ಪೂರ್ಣಪ್ರಮಾಣದ ಸಿನಿಮಾ ಮಾಡಿರುವುದು ಖುಷಿಯ ವಿಷಯ’ ಎಂದು ಚಿತ್ರದಲ್ಲಿ ಪೊಲೀಸ್‌ ಇನ್‌ಸ್ಟೆಕ್ಟರ್ ಪಾತ್ರ ಮಾಡಿರುವ ಅಚ್ಯುತ್‌ ಕುಮಾರ್‌ ಬೆನ್ನುತಟ್ಟಿದರು.

‘ರಾಘು ಅವರ ಕಿರುಚಿತ್ರವನ್ನು ನೋಡಿಯೇ ಅವರ ಪ್ರತಿಭೆ ತಿಳಿದುಕೊಂಡೆ. ಎರಡೇ ದಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರೂ ಅದು ನನಗೆ ಖುಷಿ ಕೊಟ್ಟಿದೆ. ತಮಗೆ ಬೇಕಾದಂಥ ನಟನೆಯನ್ನು ಕಲಾವಿದರಿಂದ ತೆಗೆದುಕೊಳ್ಳುವ ಶಕ್ತಿ ನಿರ್ದೇಶಕರಲ್ಲಿದೆ’ ಎಂದರು ದತ್ತಣ್ಣ.

ಪ್ರೇರಣಾ ಈ ಚಿತ್ರದ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಲೆನಾಡಿನಲ್ಲಿ ಚಿತ್ರೀಕರಣ ಮಾಡಿದ ಅನುಭವಗಳನ್ನು ಅವರು ಹಂಚಿಕೊಂಡರು. ಸಿನಿಮಾದ ಐದು ಹಾಡುಗಳಿಗೆ ವಾಸುಕೀ ವೈಭವ್‌ ಸಂಗೀತ ಸಂಯೋಜಿಸಿದ್ದಾರೆ.

‘ಚೂರಿಕಟ್ಟೆ ಎಂಬ ಚಿತ್ರದ ಶೀರ್ಷಿಕೆಗೂ ಬ್ರಿಟಿಷರ ಕಾಲಕ್ಕೂ ಸಂಬಂಧವಿದೆ. ಇದು ಸ್ಥಳವೊಂದರ ಹೆಸರು. ಆಗ ರೈಲಿನಲ್ಲಿ ಸಾಗಿಸುವ ವಸ್ತುಗಳಿಗೆ ತೆರಿಗೆ ಕಟ್ಟಬೇಕಾಗಿತ್ತು. ಆದರೆ ಅಧಿಕಾರಿಗಳು ಸುಂಕ ಪಾವತಿಸದೇ ಸರ್ಕಾರಕ್ಕೆ ನಷ್ಟ ಉಂಟುಮಾಡುತ್ತಿದ್ದರು. ಹೀಗೆ ಸುಂಕ ವಸೂಲಾತಿಯ ಜಾಗದಲ್ಲಿ ಒಂದು ಕಟ್ಟೆ ಇತ್ತು. ಆ ಸ್ಥಳದಲ್ಲಿ ಕಳ್ಳರ ಕಾಟವೂ ಇದ್ದುದರಿಂದ ಅವರಿಂದ ರಕ್ಷಿಸಲು ಅಂಗರಕ್ಷಕರು ಚೂರಿಯನ್ನು ಸದಾ ಇಟ್ಟುಕೊಂಡಿರುತ್ತಿದ್ದರು. ಆದ್ದರಿಂದ ಈ ಸ್ಥಳಕ್ಕೆ ಚೂರಿಕಟ್ಟೆ ಎಂಬ ಹೆಸರು ಬಂತು. ಈ ಹೆಸರು ಆಕರ್ಷಕವಾಗಿರುವುದರಿಂದ ಚಿತ್ರಕ್ಕೆ ಇದೇ ಶೀರ್ಷಿಕೆ ಮಾಡಿಕೊಳ್ಳಲಾಯ್ತು’ ಎಂದು ಹೇಳಿಕೊಂಡರು ರಾಘು ಶಿವಮೊಗ್ಗ.

ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ರಕ್ಷಿತ್‌ ಶೆಟ್ಟಿ ಬಂದು ತಲುಪಿದರು. ಎಂದಿನಂತೆ ಟ್ರಾಫಿಕ್‌ ಅನ್ನು ದೂರಿ ವೇದಿಕೆಯೇರಿದ ಅವರು ಟೀಸರ್‌ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಬಹುತೇಕ ರಂಗಭೂಮಿ ಕಲಾವಿದರೇ ನಟಿಸಿರುವುದು ಈ ಚಿತ್ರದ ವಿಶೇಷ. ಬಾಲಾಜಿ ಮನೋಹರ್‌ ಖಳನ ಪಾತ್ರದಲ್ಲಿ ನಟಿಸಿದ್ದಾರೆ. ಅರಣ್ಯ ಅಧಿಕಾರಿಯಾಗಿ ಮಂಜುನಾಥ ಹೆಗಡೆ ನಟಿಸಿದ್ದಾರೆ. ನೋಬಿನ್‌ ಪಾಲ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.