ಸೋಮವಾರ, ಜೂನ್ 1, 2020
27 °C

ದೇಸಿ ತಳಿ ಹಸುಗಳ ರಕ್ಷಕ

ನಾರಾಯಣರಾವ್‌ ಕುಲಕರ್ಣಿ Updated:

ಅಕ್ಷರ ಗಾತ್ರ : | |

ದೇಸಿ ತಳಿ ಹಸುಗಳ ರಕ್ಷಕ

ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಎಂದರೆ ವಿದೇಶಿ ತಳಿ ಹಸುಗಳ ಹಿಂಡು ಕಣ್ಮುಂದೆ ಬರುತ್ತದೆ. ಕೈಲಾಗದಿದ್ದಾಗ ಇವುಗಳ ಉಸಾಬರಿಯೇ ಬೇಡ ಎಂದು ದನಕರುಗಳನ್ನೆಲ್ಲ ಮಾರಿ ಕೈತೊಳೆದುಕೊಂಡವರ ಉದಾಹರಣೆಗಳೂ ಇವೆ. ಅಷ್ಟೇ ಅಲ್ಲ ಬರುಬರುತ್ತ ದನಕರುಗಳನ್ನು ಸಾಕುವುದು ಬಹುತೇಕ ರೈತರಿಗೆ ಸವಾಲಿನ ಕೆಲಸವೂ ಆಗಿದೆ.

ಭೀಕರ ಬರಗಾಲದ ಸ್ಥಿತಿಯಲ್ಲೂ ದೇಸಿ ಹಸುಗಳನ್ನು ಸಾಕಿ ಅವುಗಳ ಸಂತತಿ ಹೆಚ್ಚಿಸಿಕೊಂಡು ಬರುತ್ತಿರುವ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕು ಮಾಟರಾಗಿ ಗ್ರಾಮದ ಯಲ್ಲಪ್ಪ ಚಳಗೇರಿ ಅವರಿಗೆ ವಿದೇಶಿ ತಳಿಯೆಂದರೆ ಅಲರ್ಜಿ. ಸರ್ಕಾರದ ಯಾವ ಸವಲತ್ತುಗಳನ್ನು ಪಡೆಯದೆ ದೇಸಿ ತಳಿ ಹಸುಗಳನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ ಈ ಮಾದರಿ ರೈತ.

ದೇಸಿ ಹಸುವಿನ ಪ್ರೀತಿ
ಸರಿ ಸುಮಾರು ಒಂದೂವರೆ ದಶಕದ (2003ರಲ್ಲಿ) ಹಿಂದಿನ ಮಾತು. ಮಳೆ ಇಲ್ಲ, ಬೆಳೆ ಇಲ್ಲ. ತೀವ್ರ ತರಹದ ಬರ. ಜಮೀನು ಇದ್ದರೂ ಮೇವಿಲ್ಲದೆ ಉಪವಾಸದಿಂದ ದನಗಳು ಸಾಯುತ್ತಿದ್ದರೆ, ಇತ್ತ ಮನೆಯಲ್ಲಿ ಸೇರು ಕಾಳು ಸಹ ಇರುತ್ತಿರಲಿಲ್ಲ. ಸಂಕಷ್ಟದ ಸ್ಥಿತಿಯಲ್ಲಿ ‘ಯಪ್ಪಾ, ಹೊಲ್ದಾಗ ದನಾ ಸಾಯಕ್ಹತ್ಯಾವ. ಮನ್ಯಾಗ ಕಾಳಿಲ್ಲ. ನಾವರ ಯಾಕ್‌ ಬದುಕಬೇಕ?’ ಮಗಳ ಮಾತಿಗೆ ಕರಳು ಸುಟ್ಟಂಗಾಯಿತು ಎಂದು ನೆನೆದರು ಚಳಗೇರಿ.

‘ಅಷ್ಟೊಂದು ಜಮೀನು ಇದ್ರೂ ಆಗ ಹೆಂಡ್ರು ಮಕ್ಳು, ದನಕರುಗಳ ಹೊಟ್ಟಿ ತುಂಬ್ಸಾಕ ಸಾಧ್ಯವಾಗಲಿಲ್ಲ. ಆಗಿನ ಸ್ಥಿತಿನ ನೆನಸ್ಕೊಂಡ್ರ ಕಣ್ಣೀರು ದಳದಳ ಹರಿತಾವ್ರಿ...’ ಹಾಲು ಕುಡಿಯುತ್ತಿದ್ದ ಕರುವಿನ ಮೈದಡವುತ್ತ ಹೀಗೇ ಕಥೆ ಸುರುಳಿ ಬಿಚ್ಚುತ್ತಾ ಹೋದಾಗ ಅವರ ಕಣ್ಣಂಚುಗಳು ತೇವಗೊಂಡಿದ್ದವು.

ಆದರೆ, ಎಂಥ ಸ್ಥಿತಿ ಬಂದರೂ ದನಕರುಗಳನ್ನು ಉಳಿಸಿ ಬೆಳೆಸಬೇಕು ಎಂಬುದಕ್ಕೆ ಮಾತ್ರ ಯಲ್ಲಪ್ಪ ಅವರಿಗೆ ಬಡತನ ಅಡ್ಡಿ ಎನಿಸಲಿಲ್ಲ. 2003ರ ಬರಗಾಲದಲ್ಲಿ ಹತ್ತಾರು ಹಸುಕರುಗಳು ಸತ್ತು, ಉಳಿದದ್ದು ಬರೀ ಮೂರು. ಈಗ ವಿವಿಧ ತಳಿಯ 30ಕ್ಕೂ ಅಧಿಕ ಹಸುಗಳು, ನಾಲ್ಕು ಎತ್ತುಗಳು ಯಲ್ಲಪ್ಪ ಅವರ ಬಳಿ ಇವೆ. ಎಷ್ಟೇ ಕಷ್ಟ ಬಂದರೂ ದನಕರುಗಳನ್ನು ಉಳಿಸಿಕೊಳ್ಳುತ್ತೇವೆ ಎಂಬ ಆತ್ಮವಿಶ್ವಾಸದ ಮಾತು ಅವರದು.

ಹೊಲಕ್ಕೆ ವಿಷ ಉಣಿಸಿಲ್ಲ
ಸುಮಾರು 40 ಎಕರೆ ಜಮೀನು ಅವರಿಗಿದ್ದು ಅದರಲ್ಲಿ ಶೇ 10ರಷ್ಟು ಕೊಳವೆಬಾವಿ ನೀರಾವರಿ ಇದೆ. ದೇಸಿ ದನಗಳ ಸಗಣಿ, ಗಂಜಲ ಹೊಲ ಸೇರುತ್ತದೆ. ಪ್ರತಿವರ್ಷ ಜಮೀನಿಗೆ ಸಾಕಾಗುವಷ್ಟು ಕೊಟ್ಟಿಗೆ ಗೊಬ್ಬರ ಬಳಸುತ್ತ ಬಂದಿದ್ದಾರೆ. ಹೊಲಕ್ಕೆ ರಾಸಾಯನಿಕ ಗೊಬ್ಬರ ಬಳಸುವ ಅಗತ್ಯವೇ ಇಲ್ಲ ಎಂದರು ಚಳಗೇರಿ.

ಯಲ್ಲಪ್ಪ ಅವರ ಜಮೀನಿನಲ್ಲಿ ಎಲ್ಲಿ ನೋಡಿದರೂ ಬೇವು ಇತರೆ ಸಾಕಷ್ಟು ಮರಗಳು ಬೆಳೆದುನಿಂತಿವೆ. ‘ಹಿಂದೆ ಬಡತನ ಬಂದು ಉಪವಾಸ ಮಲಗಿದರೂ ಒಂದೂ ಮರಗಿಡ ಕಡಿದು ಮಾರಿ ಹೊಟ್ಟೆ ಹೊರೆದಿಲ್ಲ. ಒಂದು ಎಕರೆ ಜಮೀನು ಮಾರಿಲ್ಲ. ಹೊಲ ಎಂದರೆ ಗಿಡಗಳಿರಬೇಕು. ಕೊಟ್ಟಿಗೆಯಲ್ಲಿ ದನಗಳಿದ್ದರೆ ಸಂಪತ್ತು’ ಎಂದರು ಯಲ್ಲಪ್ಪ. ಕೊಳವೆಬಾವಿಯಲ್ಲಿ ನೀರು ಹೆಚ್ಚಿರುವುದಕ್ಕೆ ಈ ಗಿಡಗಳೂ ಕಾರಣವಾಗಿರಬಹುದು ಎನ್ನುವುದು ಅವರ ಅಭಿಪ್ರಾಯ.

ಅನೇಕ ಹಸುಗಳು ಹಾಲು ಕೊಡುತ್ತಿದ್ದರೂ ಕರುಗಳು ಕುಡಿದ ನಂತರ ಉಳಿದದ್ದನ್ನು ಹಿಂಡುತ್ತಾರೆ. ಮನೆಯವರಿಗೆಲ್ಲ ಹಾಲು, ಮೊಸರು, ತುಪ್ಪ ಹೀಗೆ ಸಮೃದ್ಧಿ ಹೈನು. ವಿದೇಶಿ ತಳಿ ಹಸುವಿನ ಹಾಲು ಇವರ ಮನೆ ಹೊಕ್ಕಿಲ್ಲ. ಮನೆಯವರ ಆರೋಗ್ಯಕ್ಕೆ ಇದೂ ಒಂದು ಕಾರಣವಂತೆ. ‘ನಮ್ಮನಿ ಮಂದಿ ಎಂದರ ದವಾಖಾನಿಗೆ (ಆಸ್ಪತ್ರೆ) ಹೋಗಿದ್ದನ್ನು ನೋಡೀರೇನ್ರಿ ನೀವು’ ಎಂದೆ ಯಲ್ಲಪ್ಪ ಮುಖ ಅರಳಿಸಿ ಪ್ರಶ್ನಿಸುವಾಗ ಮುಂದಿದ್ದವರಿಗೆ ಖುಷಿಯಾಗುತ್ತದೆ.

ಯಲ್ಲಪ್ಪ ಓದಿದ್ದು ಏಳನೇ ತರಗತಿ, ಹೈಸ್ಕೂಲ್‌ ಕಟ್ಟೆ ಏರದಿದ್ದರೂ ಮಕ್ಕಳನ್ನು ಮಾತ್ರ ವಿದ್ಯಾವಂತರನ್ನಾಗಿ ಮಾಡಿದ್ದಾರೆ. ಪದವಿವರೆಗೆ ಓದಿದ ಹಿರಿಮಗ ದನಕರು ಸಾಕಾಣಿಕೆ, ಬೇಸಾಯದಲ್ಲಿ ತೊಡಗಿದ್ದರೆ, ಎರಡನೇ ಮಗ ಬೆಂಗಳೂರಿನಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದುಕೊಂಡು ಕೆಎಎಸ್‌ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದಾರೆ. ಇನ್ನೊಬ್ಬ ಪದವಿ ಮುಗಿಸಿ ಟೋಲ್‌ ಗೇಟ್‌ನಲ್ಲಿ ಸ್ವಂತ ಕೆಲಸದಲ್ಲಿದ್ದರೆ, ಕೊನೆಯ ಮಗ ಪಿಯು ಕಲಿಯುತ್ತಿದ್ದಾನೆ. ಅಷ್ಟೇ ಏಕೆ, ಕುಗ್ರಾಮದಲ್ಲಿದ್ದರೂ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಹಿಂದೆಬಿದ್ದಿಲ್ಲ. ಬಿಎ, ಬಿ.ಇಡಿ ಮುಗಿಸಿರುವ ಮಗಳು ಅತಿಥಿ ಶಿಕ್ಷಕಿ. ಇನ್ನೊಬ್ಬಳು ಪಿಯು, ಉಳಿದ ಇಬ್ಬರು ಎಸ್ಸೆಸ್ಸೆಲ್ಸಿವರೆಗೆ ವಿದ್ಯೆ ಕಲಿತಿದ್ದಾರೆ. ಮಗನನ್ನು ಸಬ್‌ ಇನ್‌ಸ್ಪೆಕ್ಟರ್‌ ಮಾಡಿಸಿಯೇ ತೀರುತ್ತೇನೆ ಎಂಬ ಛಲ ಯಲ್ಲಪ್ಪ ಅವರಲ್ಲಿದೆ.

ದನ ಇಲ್ಲದವರಿಗೂ ಕೊಟ್ಟಿಗೆ ‘ಭಾಗ್ಯ’
ದನಕರುಗಳೇ ಇಲ್ಲದ ಬಹಳಷ್ಟು ಜನರಿಗೆ ಉದ್ಯೋಗ ಖಾತರಿ ಯೋಜನೆಯಲ್ಲಿ ದನದ ಕೊಟ್ಟಿಗೆಗೆ ನೆರವು ನೀಡಲಾಗಿದೆ. ಆದರೆ ಅನೇಕ ದಶಕಗಳಿಂದಲೂ ದೇಸಿ ತಳಿ ಸಂರಕ್ಷಿಸುತ್ತ ಬಂದ ಯಲ್ಲಪ್ಪ ಅವರಿಗೆ ಗಟ್ಟಿಮುಟ್ಟಾದ ಕೊಟ್ಟಿಗೆಯೂ ಇಲ್ಲ. ತಮಗೆ ಹಿರೇಅರಳಿಹಳ್ಳಿ ಗ್ರಾಮ ಪಂಚಾಯಿತಿ ಅಂಥ ‘ಭಾಗ್ಯ’ ಕರುಣಿಸಲಿಲ್ಲ ಎಂಬ ಬೇಸರ ಅವರದು.

ಯಲ್ಲಪ್ಪ ಚಳಗೇರಿ ಅವರ ಸಂಪರ್ಕ ಸಂಖ್ಯೆ 9686219344.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು