3

ಶಿಕ್ಷಣ ಸಾಲ ಪಡೆದ ಮಹಿಳೆಗೆ ವಿನಾಕಾರಣ ತೊಂದರೆ: ಆರೋಪ

Published:
Updated:

ಉಡುಪಿ: ಮಹಿಳೆಯೊಬ್ಬರು ಪಡೆದ ಶಿಕ್ಷಣ ಸಾಲಕ್ಕೆ ವಿಮೆ ಇದ್ದರೂ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿ ಮಾತ್ರ ಆಕೆಯಿಂದ ಬಲವಂತದಿಂದ ವಸೂಲಿ ಮಾಡಲು ಮುಂದಾಗಿದ್ದಾರೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನುಭಾಗ್ ಗಂಭೀರ ಆರೋಪ ಮಾಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಲ್ಕಿಯ ವಿಜಯ ಕಾಲೇಜಿನ ಪ್ರಾಂಶುಪಾಲರಾಗಿದ್ದ ದಿ. ಅರವಿಂದ ಜೋಶಿ ಅವರ ಪುತ್ರಿ ಮೈತ್ರೇಯಿ ಅವರೇ ಸಿಂಡಿಕೇಟ್ ಬ್ಯಾಂಕಿನ ವಿಜಯ ಕಾಲೇಜಿನ ಶಾಖೆಯ ಸಿಬ್ಬಂದಿಯಿಂದ ಕಿರುಕುಳಕ್ಕೆ ಒಳಗಾಗಿರುವವರು. ಜೋಶಿ ಅವರು ಮಗಳ ವಿದ್ಯಾಭ್ಯಾಸಕ್ಕಾಗಿ ಬ್ಯಾಂಕ್‌ನಿಂದ ₹3.60 ಲಕ್ಷ ಸಾಲವನ್ನು 2009ರಲ್ಲಿ ಪಡೆದಿದ್ದರು.

ಷರತ್ತಿನ ಅನ್ವಯ ಆ ಸಾಲಕ್ಕಾಗಿ ಅವರು ಒಂದೇ ಕಂತಿನ ವಿಮೆ ಮಾಡಿಸಿದ್ದರು. ಅದರ ಮೊತ್ತ ₹4,350 ಅವರ ಬ್ಯಾಂಕ್ ಖಾತೆಯಿಂದಲೇ ಕಡಿತವಾಗಿದೆ. ಸಾಲ ಪಡೆದಿರುವ ವ್ಯಕ್ತಿ ಅಥವಾ ಅವರ ತಂದೆ ವಿದ್ಯಾಭ್ಯಾಸದ ಅವಧಿಯಲ್ಲಿಯೇ ನಿಧನರಾದರೆ ವಿಮೆಯ ಮೂಲಕ ಮೊತ್ತವನ್ನು ಭರಿಸಿಕೊಳ್ಳಬೇಕು. ಬ್ಯಾಂಕಿನವರು ಹಾಗೆ ಮಾಡದೆ ಮೈತ್ರೇಯಿ ಅವರಿಗೆ ಬ್ಯಾಂಕ್ ನೋಟಿಸ್ ನೀಡಿದ್ದಾರೆ. ಅಲ್ಲದೆ ಮನೆಗೆ ಕೆಲವು ವ್ಯಕ್ತಿಗಳನ್ನು ಕಳುಹಿಸಿ ಬಲವಂತದ ವಸೂಲಿಗೂ ಮುಂದಾಗಿದ್ದಾರೆ ಎಂದು ದೂರಿದರು.

ಮೈತ್ರೇಯಿ ಅವರು ಮಾತನಾಡಿ, ‘ನಾನಿನ್ನೂ ಓದುತ್ತಿರುವಾಗಲೇ ತಂದೆ ತೀರಿಕೊಂಡರು. ಆದ್ದರಿಂದ ವಿಮೆಯ ಹಣದಿಂದ ಸಾಲದ ಮೊತ್ತ ಪಾವತಿಯಾಗಬೇಕು. ಸಾಲ ಪಡೆದಾಗ ನಾನು ಚಿಕ್ಕವಳಿದ್ದ ಕಾರಣ ಸಾಲದ ವಿವರ ಸರಿಯಾಗಿ ಗೊತ್ತಿರಲಿಲ್ಲ. ಎಷ್ಟು ಸಾಲ ಮಾಡಲಾಗಿದೆ, ವಿಮೆಯ ಮೊತ್ತ ಯಾರಿಗೆ ಪಾವತಿಯಾಗಿದೆ ಎಂಬ ವಿವರ ಕೇಳಿದರೆ ಬ್ಯಾಂಕ್ ಸಿಬ್ಬಂದಿ ನೀಡುತ್ತಿಲ್ಲ’ ಎಂದರು.

ಬಡ್ಡಿ ಸೇರಿಸಿ ಸಾಲದ ಮೊತ್ತ ಸುಮಾರು ₹12 ಲಕ್ಷವಾಗಿದೆ ಎಂದು ಬ್ಯಾಂಕಿನವರು ಹೇಳುತ್ತಾರೆ. ಇದರಿಂದಾಗಿ ಕುಟುಂಬ ತೊಂದರೆಗೆ ಸಿಲುಕಿದೆ ಎಂದು ಅವರು ಅಲವತ್ತುಕೊಂಡರು.

* * 

ಮೈತ್ರೇಯಿ ಅವರ ಪ್ರಕರಣದ ವಿಷಯವನ್ನು ಇ ಮೇಲ್ ಮೂಲಕ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಗಮನಕ್ಕೂ ತರಲಾಗಿದೆ.

ರವೀಂದ್ರನಾಥ್ ಶಾನುಭಾಗ್,

ಅಧ್ಯಕ್ಷ 

ನಾನು ಈಗ ವಿವಾಹವಾಗಿ ಕಾಸರಗೋಡಿನ ಪತಿಯ ಮನೆಯಲ್ಲಿದ್ದೇನೆ. ಮುಲ್ಕಿಯಲ್ಲಿರುವ ತಾಯಿಯ ಮನೆಗೆ ಬ್ಯಾಂಕ್‌ ವಸೂಲಾತಿ ಸಿಬ್ಬಂದಿ ಬಂದು ತೊಂದರೆ ನೀಡುತ್ತಿದ್ದಾರೆ.

ಮೈತ್ರೇಯಿ

ಸಾಲ ಪಡೆದವರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry