ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿಗೆ ಪ್ರಶ್ನಿಸುವ ನೈತಿಕತೆಯಿಲ್ಲ

ಕಾಂಗ್ರೆಸ್‌ ಬ್ಲಾಕ್‌ ವಕ್ತಾರ ಎಂ.ಎಸ್‌. ಅನಂತ್‌ ತಿರುಗೇಟು
Last Updated 1 ಜನವರಿ 2018, 6:46 IST
ಅಕ್ಷರ ಗಾತ್ರ

ಮೂಡಿಗೆರೆ: ‘ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಅವರ ಬಗ್ಗೆ ಪ್ರಶ್ನಿಸಲು ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ನೈತಿಕತೆಯಿಲ್ಲ’ ಎಂದು ಕಾಂಗ್ರೆಸ್‌ ಬ್ಲಾಕ್‌ ವಕ್ತಾರ ಎಂ.ಎಸ್‌. ಅನಂತ್‌ ತಿರುಗೇಟು ನೀಡಿದ್ದಾರೆ.

ಪಟ್ಟಣದದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ‘ಶಾಸಕಿ ಮೋಟಮ್ಮ ಸ್ಥಳೀಯ ಸಮಸ್ಯೆಗಳಿಗೆ ಧ್ವನಿಯಾಗಲಿಲ್ಲ’ ಎಂದು ಆರೋಪಿಸಿರುವುರಲ್ಲಿ ಸತ್ಯಾಂಶವಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಡಾನೆ ಸಮಸ್ಯೆಗೆ ಕೈಗೊಂಡ ಕ್ರಮಗಳ ಬಗ್ಗೆ ಕುಮಾರಸ್ವಾಮಿ ಜನರಿಗೆ ಮಾಹಿತಿ ನೀಡಬೇಕು. ಆದರೆ, ಮೋಟಮ್ಮ ಅರಣ್ಯ ಸಚಿವರನ್ನು ತಾಲ್ಲೂಕಿಗೆ ಕರೆ ತಂದು, ತಾಲ್ಲೂಕಿನ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಆನೆಯನ್ನು ಹಿಡಿಯುವ ಕಾರ್ಯಾಚರಣೆ ನಡೆಸಿದರು’ ಎಂದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ತಾಲ್ಲೂಕಿಗೆ ನೀಡಿರುವ ಅನುದಾನ ಹಾಗೂ ಕಳೆದ ಕಾಂಗ್ರೆಸ್‌ ಸರ್ಕಾರದಲ್ಲಿ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಕ್ಷೇತ್ರಕ್ಕೆ ತಂದಿರುವ ಅನುದಾನವನ್ನು ತುಲನೆ ಮಾಡಿ ನೋಡಬೇಕು. ರಾಜ್ಯದಲ್ಲಿ ಮೋಟಮ್ಮ ಸಚಿವರಾಗಿದ್ದಾಗ, ತೋಟಗಾರಿಕೆ ಕಾಲೇಜು, ಬಸ್‌ ಡಿಪೋ, ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಹೇಮಾವತಿ ಯೋಜನೆ, ಹೊಯ್ಸಳ ಕ್ರೀಡಾಂಗಣ, ಹೋಬಳಿ ಮಟ್ಟದಲ್ಲಿ ಪದವಿಪೂರ್ವ ಕಾಲೇಜು, ಹೋಬಳಿಗೊಂದು ಪೊಲೀಸ್‌ ಠಾಣೆ, ಮಿನಿ ವಿಧಾನ ಸೌಧ ನಿರ್ಮಿಸಿ ತಾಲ್ಲೂಕಿನ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅಲ್ಲದೆ, ಇಡೀ ದೇಶವೇ ರಾಜ್ಯದತ್ತ ನೋಡುವಂತೆ ಸ್ತ್ರೀಶಕ್ತಿ ಸಂಘಗಳನ್ನು ಸ್ಥಾಪಿಸಿ ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಕೊಡುಗೆ ನೀಡಿದ್ದಾರೆ ಎಂದರು.

‘ಮೋಟಮ್ಮ ತಮ್ಮ ಅವಧಿಯಲ್ಲಿ ಎಂಜಿಎಂ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಹಾಸನ, ಚಿಕ್ಕಮಗಳೂರು ಮುಂತಾದ ಕಡೆಗಳಿಂದ ರೋಗಿಗಳು ಎಂಜಿಎಂ ಆಸ್ಪತ್ರೆಗೆ ಬರುವಂತಹ ವಾತಾವರಣ ಸೃಷ್ಟಿಸಿದ್ದರು. ಆದರೆ, ತಾವು ಕ್ಷೇತ್ರದ ಶಾಸಕರಾಗಿದ್ದಾಗ ಎಂಜಿಎಂ ಆಸ್ಪತ್ರೆ ಆಡಳಿತ ಸಂಪೂರ್ಣವಾಗಿ ಕುಸಿಯುವಂತೆ ಮಾಡಿದ ಖ್ಯಾತಿ ನಿಮಗೆ ಸಲ್ಲಬೇಕು. ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ ಪ್ರಸ್ತುತ ಸರ್ಕಾರದಲ್ಲೂ ಕೂಡ ಕ್ಷೇತ್ರಕ್ಕೆ ಕೋಟ್ಯಂತರ ಅನುದಾನವನ್ನು ತಂದಿದ್ದು, ಅದಕ್ಕೆ ಇದೇ 5ರಂದು ಮುಖ್ಯಮಂತ್ರಿಯೇ ಬಂದು ವಿವಿಧ ಯೋಜನೆಗಳಿಗೆ ಚಾಲನೆ ನೀಡುವುದೇ ಸಾಕ್ಷಿಯಾಗಿದೆ. ಇಂತಹ ನಾಯಕಿಯ ಬಗ್ಗೆ ಹಗುರವಾಗಿ ಮಾತನಾಡದೇ ತಾವು ಸ್ವತಃ ಪರಿವರ್ತನೆಯಾಗುವತ್ತ ಚಿಂತಿಸಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT