ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಕ್ಕೆ ಲಗ್ಗೆಯಿಟ್ಟ ಹೊಸ ವರ್ಷ

ಅರಮನೆ ಆವರಣಕ್ಕೆ ಸೇರಿದ್ದ ಭಾರಿ ಜನಸಾಗರ
Last Updated 1 ಜನವರಿ 2018, 10:17 IST
ಅಕ್ಷರ ಗಾತ್ರ

ಮೈಸೂರು: ಅಂಬಾವಿಲಾಸ ಅರಮನೆಯ ಅಂಗಳದಲ್ಲಿ ಪೊಲೀಸ್‌ ಬ್ಯಾಂಡಿನ ಸುಶ್ರಾವ್ಯ ಸಂಗೀತ ಆಸ್ವಾದಿಸುತ್ತ ಕುಳಿತಿದ್ದವರ ಕಂಗಳಲ್ಲಿ ಕಾತರ ಇಣುಕುತ್ತಿತ್ತು. ಮಧ್ಯರಾತ್ರಿ ಸಮೀಪಿಸಿದಂತೆ ಬಾನಂಗಳದಲ್ಲಿ ಪಟಾಕಿಗಳು ಬಿಡಿಸಿದ ಚಿತ್ತಾರ ಕಣ್ಮನ ಸೆಳೆಯಿತು. ದೀಪಾಲಂಕಾರ ಅರಮನೆಯ ಅಂದವನ್ನು ಹೆಚ್ಚಿಸುತ್ತಿದ್ದಂತೆ ಹೊಸ ವರ್ಷದ ಸಂಭ್ರಮ ಬಾನೆತ್ತರಕ್ಕೆ ಚಿಮ್ಮಿತು.

ಹೊಸ ವರ್ಷಾಚರಣೆಯ ಪ್ರಯುಕ್ತ ಅಂಬಾವಿಲಾಸ ಅರಮನೆ ಅಂಗಳಕ್ಕೆ ಮಧ್ಯರಾತ್ರಿಯೂ ಪ್ರವೇಶ ಕಲ್ಪಿಸಲಾಗಿತ್ತು. ರಾತ್ರಿ 11.55ಕ್ಕೆ ಶಬ್ದರಹಿತ ಪಟಾಕಿಗಳು ಬಾನೆತ್ತಕ್ಕೆ ಹಾರಿದವು. ಸುಮಾರು 15 ನಿಮಿಷ ವಿವಿಧ ಚಿತ್ತಾರಗಳನ್ನು ಮೂಡಿಸಿ ಸಂಭ್ರಮವನ್ನು ಹೆಚ್ಚಿಸಿದವು.

ಮಧ್ಯರಾತ್ರಿ 12ಕ್ಕೆ ದೀಪಾಲಂಕಾರ ಮೂಡುತ್ತಿದ್ದಂತೆ ಕೇಕೆ, ಸಿಳ್ಳೆಗಳು ಅನುರಣಿಸಿದವು. ಪ್ರವಾಸಿಗರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಹರ್ಷ ವ್ಯಕ್ತಪಡಿಸಿದರು.

ಮಾಗಿ ಉತ್ಸವದ ಅಂಗವಾಗಿ ಆರಂಭವಾದ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ನಿರೀಕ್ಷೆ ಮೀರಿ ಪ್ರವಾಸಿಗರು ಬಂದಿದ್ದರು. ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದ್ದ ಅರಮನೆಯ ಅಂದವನ್ನು ರಾತ್ರಿ 8.30ರವರೆಗೂ ಸವಿದರು. ಬಳಿಕ ಪೊಲೀಸ್‌ ಇಂಗ್ಲಿಷ್‌ ಬ್ಯಾಂಡಿನ ಸಂಗೀತ ಉತ್ಸಾಹ ತುಂಬಿತು.

ಅರಮನೆಯ ಹೊರಗೂ ಹೊಸ ವರ್ಷವನ್ನು ಸಂತಸದಿಂದ ಬರಮಾಡಿಕೊಳ್ಳಲಾಯಿತು. ಸಂಜೆ ಯಿಂದಲೇ ಗುಂಪು–ಗುಂಪಾಗಿ ಓಡಾಡುತ್ತಿದ್ದ ಯುವ ಸಮೂಹ ಮಧ್ಯರಾತ್ರಿಯವರೆಗೆ ಅಲ್ಲಲ್ಲಿ ಸುತ್ತಾಡಿತು. ಮಾನಸಗಂಗೋತ್ರಿಯ ರಸ್ತೆಯಲ್ಲಿ ಸುತ್ತಾಡುತ್ತ ಹಲವರು ಸಂತಸ ಹಂಚಿಕೊಂಡರು. ಪಾರಂಪರಿಕ ನಗರಿಯ ಬೀದಿಗಳಲ್ಲಿಯೂ ಸಂಭ್ರಮ ಮೇರೆ ಮೀರಿತ್ತು.

ಬಹುತೇಕರು ಮಧ್ಯರಾತ್ರಿಯ ವರೆಗೂ ನಿದ್ದೆಗೆ ಜಾರಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಕೇಕ್‌ ಕತ್ತರಿಸುವ ಮೂಲಕ ಮನೆಯಲ್ಲಿಯೂ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಕೆಲ ಖಾಸಗಿ ಕಟ್ಟಡಗಳು ದೀಪಾಲಂಕಾರದಿಂದ ಗಮನ ಸೆಳೆದವು.

ಹೋಟೆಲ್‌ ಮತ್ತು ರೆಸಾರ್ಟ್‌ಗಳಲ್ಲಿ ಹೊಸ ವರ್ಷಕ್ಕೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೆಟ್ರೊಪೋಲ್‌, ಸದರನ್‌ ಸ್ಟಾರ್‌, ಲಿಯೊ ಮೆರಿಡಿಯನ್‌, ರ‍್ಯಾಡಿಸನ್ ಬ್ಲೂ, ಸಂದೇಶ್‌ ದಿ ಪ್ರಿನ್ಸ್‌, ಹೋಟೆಲ್‌ ಪೈ ವಿಸ್ತಾ, ಜೆ.ಪಿ.ಫಾರ್ಚುನ್‌ ಸೇರಿ 20ಕ್ಕೂ ಹೆಚ್ಚು ಹೋಟೆಲುಗಳಲ್ಲಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ನಡೆದವು. ನೋಂದಾಯಿತ ಪ್ರತಿನಿಧಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಸೈಲೆಂಟ್‌ ಷೋರ್ ರೆಸಾರ್ಟ್‌ನಲ್ಲಿ ಚಲನಚಿತ್ರ ನಟ ದಾನೀಶ್‌ ಸೇಠ್‌ ತಂಡ ಹಾಸ್ಯ, ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು. ಝಗಮಗಿಸುವ ದೀಪದ ಬೆಳಕು ಸೀಳಿ ಬರುತ್ತಿದ್ದ ಸಂಗೀತವನ್ನು ಮದಿರೆಯೊಂದಿಗೆ ಆಸ್ವಾದಿಸಿದರು. ಸಂಜೆ 8ಕ್ಕೆ ಆರಂಭವಾದ ಕಾರ್ಯಕ್ರಮ ರಾತ್ರಿ 1 ಗಂಟೆಯವರೆಗೂ ನಡೆದವು. ಇದೇ ಮೊದಲ ಬಾರಿಗೆ ರಾತ್ರಿ 1ರವರೆಗೆ ಅವಕಾಶ ಕಲ್ಪಿಸಿದ್ದು ಕೂಡ ಹಲವರ ಖುಷಿ ಹೆಚ್ಚಿಸಿತ್ತು.

ಹಲವು ಕ್ಲಬ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದವು. ಕಿವಿಗಡಚಿಕ್ಕುವ ಸಂಗೀತದಲ್ಲಿ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿ ಖುಷಿಪಟ್ಟರು. ಚಿತ್ರ ನಟರು, ಸಂಗೀತಗಾರರು, ನೃತ್ಯ ಕಲಾವಿದರು ಇದಕ್ಕೆ ಸಾತ್‌ ನೀಡಿದರು. ವೇದಿಕೆ ಏರಿ ಅನೇಕರು ನೃತ್ಯ ಮಾಡಿದರು.

ಆಲ್ಬರ್ಟ್‌ ವಿಕ್ಟರ್ ರಸ್ತೆ, ಸಯ್ಯಾಜಿರಾವ್‌ ರಸ್ತೆ, ಬೆಂಗಳೂರು–ನೀಲಗಿರಿ ರಸ್ತೆ, ಜೆಎಲ್‌ಬಿ ರಸ್ತೆ ಸೇರಿ ಹಲವೆಡೆ ತಡರಾತ್ರಿಯವರೆಗೂ ಜನದಟ್ಟಣೆ ಇತ್ತು.

ಹೊಸ ವರ್ಷದ ಭದ್ರತೆಗೆ ಒಂದೂವರೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರವಾಸಿ ತಾಣ, ಪ್ರಮುಖ ವೃತ್ತ ಸೇರಿ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರಿದ್ದರು. ಅಲ್ಲಲ್ಲಿ ನಿಂತಿದ್ದ ಸಂಚಾರ ಪೊಲೀಸರು ವಾಹನ ಸವಾರರ ಮೇಲೆ ನಿಗಾ ಇಟ್ಟಿದ್ದರು.

ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು, ಹೆಲ್ಮೆಟ್‌ ರಹಿತ ಚಾಲನೆ ಸೇರಿ ಇತರ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಂದ ದಂಡ ವಸೂಲಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT