ಬುಧವಾರ, ಆಗಸ್ಟ್ 5, 2020
21 °C

ಹೊಸ ವರ್ಷಕ್ಕೆ ಹೊಸ ಸವಾಲು, ಹೊಸ ಕನಸು....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ವರ್ಷಕ್ಕೆ ಹೊಸ ಸವಾಲು, ಹೊಸ ಕನಸು....

ಹೊಸ ವರ್ಷಕ್ಕೆ ಹೆಜ್ಜೆ ಇಟ್ಟ ಸಂಭ್ರಮ. ಕಲ್ಪತರು ನಾಡು, ಶೈಕ್ಷಣಿಕ ನಗರದ ಖ್ಯಾತಿಯ ತುಮಕೂರು ಜಿಲ್ಲೆಯ ಮುಂದೆ ಈ ವರ್ಷವೂ ಹಲವು ಸವಾಲುಗಳಿವೆ. ಹಲವು ಕನಸುಗಳಿವೆ. ಕಳೆದ ವರ್ಷ ಬಣ್ಣದಲ್ಲೇ ಸೌಧ ಕಟ್ಟಿಕೊಂಡೆವು. ಅಭಿವೃದ್ಧಿಯ ಜಾಡು ನಿರೀಕ್ಷಿಸಿದಷ್ಟು ಆಗಲಿಲ್ಲ. ಬರ, ನಿರೀಕ್ಷಿಸಿದಷ್ಟು ಸಿಗದ ಹೇಮಾವತಿ ನೀರು, ಸಾಕಾರ ರೂಪಕ್ಕೆ ಬಾರದ ಎಚ್‌ಎಎಲ್‌, ಏಷ್ಯಾದ ಅತಿ ದೊಡ್ಡ ಸೋಲಾರ್‌ ಪಾರ್ಕ್‌ ಯೋಜನೆ, ಫುಡ್‌ ಪಾರ್ಕ್‌ನಲ್ಲಿ ಸೃಷ್ಟಿಯಾಗದ ಉದ್ಯೋಗ, ರೈತರ ಉತ್ಪನ್ನಗಳಿಗೆ ಸಿಗದ ಬೆಲೆ, ಕಡತದಲ್ಲೇ ಉಳಿದ ’ಸೇವ್ ಫಾರ್ಮರ್‌’ ಆಂದೋಲನ,  ಸ್ಮಾರ್ಟ್ ಸಿಟಿ ಯೋಜನೆಗಳು.... ಹೀಗೆ ಹತ್ತು ಹಲವು ಯೋಜನೆಗಳು ನಿರೀಕ್ಷೆಯಷ್ಟು ಫಲ ನೀಡಲಿಲ್ಲ.

2018ರ ಹೊಸ ವರ್ಷಕ್ಕೆ ಈ ಎಲ್ಲ ಯೋಜನೆಗಳ ಅನುಷ್ಠಾನದ ಕನಸನ್ನು ಈಡೇರಿಸುವ ಸವಾಲು ಎದುರಾಗಿದೆ. ಈ ವರ್ಷವಾದರೂ ಜಿಲ್ಲೆಯ ಅಭಿವೃದ್ಧಿ ಪರ್ವ ತೆರೆದುಕೊಳ್ಳಬೇಕಾಗಿದೆ. ಜಿಲ್ಲೆಯ ಯುವ ಜನರಿಗೆ ಉದ್ಯೋಗದ ಕನಸು ನನಸಾಗಬೇಕಾಗಿದೆ. ಹೀಗೆ ಪ್ರತಿ ಕ್ಷೇತ್ರಗಳಲ್ಲಿಯೂ ಸಮಸ್ಯೆ ಮತ್ತು ಸವಾಲುಗಳು ಹೀಗೆ. 2018ರ ಈ ಹೊಸ ವರ್ಷದಲ್ಲಿ ಜಿಲ್ಲೆಯ ರಾಜಕಾರಣಿಗಳು, ಹೋರಾಟಗಾರರು, ವಿವಿಧ ಕ್ಷೇತ್ರಗಳ ಗಣ್ಯರು ಹೊಂದಿರುವ ಕನಸುಗಳೇನು ಎನ್ನುವ ಅಭಿಪ್ರಾಯಗಳು ಸಹ ಇಲ್ಲಿವೆ.

ಚುನಾವಣೆಯ ಸವಾಲು: ಈ ವರ್ಷ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವುದರಿಂದ ಕಾವು ಪಡೆದುಕೊಂಡಿದೆ. ಹಣ, ಹೆಂಡ, ಸೀರೆ, ಕುಪ್ಪಸ, ಬೆಳ್ಳಿ ಬಟ್ಟಲು, ಜೆಸಿಬಿಯಲ್ಲಿ ಪುಕ್ಕಟೆ ಕೆಲಸ, ಕುಡಿಯುವ ನೀರು, ಆರೋಗ್ಯ ಶಿಬಿರಗಳ ಭರಾಟೆ  ಜೋರು ಪಡೆದಿವೆ.

ಕ್ಷೇತ್ರಗಳ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲದಿರುವುದನ್ನು, ರಾತ್ರಿ ವೇಳೆ ವೈದ್ಯರು ತಂಗದಿರುವುದನ್ನು ಯಾವೊಬ್ಬ ಶಾಸಕರು ಪ್ರಶ್ನಿಸಿಲ್ಲ. ಆದರೆ ಮುಂದೆ ಮರು ಆಯ್ಕೆ ಬಯಸಿ, ಹೊಸದಾಗಿ ಶಾಸಕರಾಗ ಬಯಸುವ ಹಾಗೂ ಟಿಕೆಟ್ ಆಕಾಂಕ್ಷಿಗಳು ಊರಿಗೊಂದು ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತ ಸಮಾಜ ಸೇವಕರಾಗುತ್ತಿದ್ದಾರೆ. ಶಾಸಕರಾಗ ಬಯಸುವರ ನಡುವೆ ಕ್ಷೇತ್ರದ ಅಭಿವೃದ್ಧಿಯ ಕನಸು ಹೊತ್ತ, ಗ್ರಾಮೀಣ ಆರ್ಥಿಕತೆಯನ್ನು ಮೇಲೆಕ್ಕೆತ್ತಲು ದೂರದೃಷ್ಟಿಯುಳ್ಳ ಶಾಸಕರನ್ನು ಆಯ್ಕೆ ಮಾಡುವಂಥ ಸವಾಲು ಮತದಾರರ ಮುಂದಿದೆ.

ಶೈಕ್ಷಣಿಕ ಕ್ಷೇತ್ರ: ತುಮಕೂರು ವಿಶ್ವವಿದ್ಯಾನಿಲಯ ಆರಂಭವಾಗಿ ದಶಕ ಕಳೆದರೂ ಗುಣಮಟ್ಟದ ಉನ್ನತ ಶಿಕ್ಷಣದಲ್ಲಿ ಜಿಲ್ಲೆಯ ಸಾಧನೆ ಕಳಪೆಯಾಗಿಯೇ ಉಳಿದಿದೆ. ಈವರೆಗೂ ಸ್ವಂತ ಕ್ಯಾಂಪಸ್ ಹೊಂದಲು ವಿ.ವಿಗೆ ಸಾಧ್ಯವಾಗಿಲ್ಲ. ಮೂರು ಹಂತದಲ್ಲಿ ₹ 540 ಕೋಟಿ ಮೊತ್ತದ ಕ್ಯಾಂಪಸ್‌ ರೂಪುರೇಷೆ ಸಿದ್ಧಪಡಿಸಿದ್ದರೂ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಈ ವರ್ಷವಾದರೂ ಈ ಕನಸು ನನಸಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

’ಸ್ಮಾರ್ಟ್ ಸಿಟಿ’ ಹೆಸರಿನಲ್ಲಿ ನಗರ ಬೀಗುತ್ತಿದ್ದರೂ ಶತಮಾನ ಕಂಡಿರುವ ನಗರದ ಎಂಪ್ರೆಸ್ ಪದವಿ ಪೂರ್ವ ಕಾಲೇಜಿಗೆ ಸೂಕ್ತ ಕೊಠಡಿಗಳಿಲ್ಲ. ಹೈಸ್ಕೂಲ್ ಮತ್ತು ಕಾಲೇಜನ್ನು ಪಾಳಿ ಆಧಾರದಲ್ಲಿ ನಡೆಸಲಾಗುತ್ತಿದೆ. ಇದೇ ರೀತಿಯ ಪಾಳಿ ಪದ್ಧತಿ ಸರ್ಕಾರಿ ಪದವಿ ಕಾಲೇಜು, ತುಮಕೂರು ವಿ.ವಿ ಕಲಾ ಕಾಲೇಜಿನಲ್ಲೂ ಇದೆ.

ಕೊಠಡಿಗಳ ಕೊರತೆ ಕಾರಣ ಪಾಳಿ ಆಧಾರದಲ್ಲಿ ತರಗತಿ ನಡೆಸಬೇಕಾದ ಸ್ಥಿತಿ ಇದೆ. 2018ರಲ್ಲಾದರೂ ಈ ಕೆಟ್ಟ ಶೈಕ್ಷಣಿಕ ವಾತಾವರಣದಿಂದ ಹೊರಬರಬೇಕಾಗಿದೆ.

ಪದವಿ ಹಾಗೂ ಸ್ನಾತಕೋತ್ತರ ಕೇಂದ್ರಗಳನ್ನು ಒಳಗೊಂಡ ಅನೇಕ ಖಾಸಗಿ ಕಾಲೇಜುಗಳಲ್ಲಿ ಸರಿಯಾದ ಸೌಕರ್ಯಗಳಿಲ್ಲ. ಉತ್ತಮ ಗುಣಮಟ್ಟದ ಬೋಧಕರಿಲ್ಲ. ಕಳಪೆಯಾಗಿ ಉನ್ನತ ಶಿಕ್ಷಣ ನೀಡುವ ಶೈಕ್ಷಣಿಕ ಸಂಸ್ಥೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಗುಣಮಟ್ಟದ ಶಿಕ್ಷಣದ ಸುಧಾರಣೆಯತ್ತ ಹೊಸ ವರ್ಷ ಹೊರಳಬೇಕಾಗಿದೆ.

ಕೃಷಿ: ಕೃಷಿಕರ ಸ್ಥಿತಿ ಜಿಲ್ಲೆಯಲ್ಲಿ ಹೀನಾಯವಾಗಿದೆ. ಅವರ ಆರ್ಥಿಕತೆ ಸುಧಾರಿಸುವ ಯಾವ ಕೆಲಸಗಳೂ ಆಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ರೈತರ ಆತ್ಮಹತ್ಯೆ ಹೆಚ್ಚುತ್ತಲೇ ಸಾಗುತ್ತಿದೆ. ಅಂತರ್ಜಲ ಕುಸಿಯುತ್ತಿರುವುದರಿಂದ ತೋಟಗಾರಿಕೆ ತೀರಾ ಸಂಕಷ್ಟ ಸ್ಥಿತಿಗೆ ಸಿಲುಕಿದೆ.

ಅತಿ ನೀರು ಬೇಡುವ ಅಡಿಕೆ ಬೆಳೆಯ ವಿಸ್ತರಣೆ ತಡೆಗಟ್ಟಬೇಕಾಗಿದೆ. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಹಲಸು, ಮಾವು, ನಿಂಬೆ, ಪಪ್ಪಾಯಿ, ಡ್ರ್ಯಾಗನ್‌ ಹಣ್ಣು, ಹುಣುಸೆ ಬೆಳೆಗಳತ್ತ ರೈತರನ್ನು ಜಾಗೃತಿಗೊಳಿಸುವ ಕೆಲಸ ಆಗಬೇಕಾಗಿದೆ. ಸಿರಿ ಧಾನ್ಯಗಳ ಬೆಳೆಯುವುದನ್ನು ಪ್ರೋತ್ಸಾಹಿಸಬೇಕಾಗಿದೆ. ಸಿರಿ ಧಾನ್ಯಗಳ ಸಂಸ್ಕರಣೆಯನ್ನು ಜಿಲ್ಲೆಯಲ್ಲೇ ಮಾಡುವ ಯಂತ್ರೋಪಕರಣಗಳ ಅವಕಾಶವನ್ನು ಜಿಲ್ಲಾಡಳಿತ ಒದಗಿಸಬೇಕಿದೆ.

ಕೊಬ್ಬರಿ ಬೆಲೆ ಹೆಚ್ಚುವ ನಿಟ್ಟಿನಲ್ಲಿ ಜಿಐ (ಭೌಗೋಳಿಕ ಚಿಹ್ನೆ) ಪೇಟೆಂಟ್‌ ಪಡೆಯುವ ಕನಸು ಈ ವರ್ಷವಾದರೂ ನನಸಾಗಬೇಕಾಗಿದೆ. ನೀರಾ ಇಳಿಸಲು ಸರ್ಕಾರ ಅವಕಾಶ ನೀಡಿರುವುದರಿಂದ ನೀರಾ ಚಳವಳಿಯನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯಬೇಕಾಗಿದೆ. ಗ್ರಾಮಗಳಲ್ಲಿ ನೀರಾ ಸಂಗ್ರಹಣಾ ಕೇಂದ್ರಗಳನ್ನು ತೆರೆಯಬೇಕಾಗಿದೆ. ಹಾಲು ಒಕ್ಕೂಟದ ಮಾದರಿಯಲ್ಲಿ ‘ನೀರಾ ಒಕ್ಕೂಟ’ ಅಸ್ತಿತ್ವಕ್ಕೆ ಹೊಸ ವರ್ಷ ಬುನಾದಿ ಹಾಕಬೇಕಾಗಿದೆ.

ನೀರಾವರಿ: ಹೇಮಾವತಿ ನೀರಿನ ಅತಿಯಾದ ಅವಲಂಬನೆ ತಪ್ಪಿಸಿ ವೈಜ್ಞಾನಿಕ ಬಳಕೆಯತ್ತ ಹೊಸ ಚಿಂತನೆಗಳನ್ನು ಮಾಡಬೇಕಾಗಿದೆ. ಕೃಷ್ಣಕೊಳ್ಳದ ನೀರಿನ ಬಳಕೆ ಈ ವರ್ಷವಾದರೂ ಸಾಧ್ಯವಾಗಬೇಕಾಗಿದೆ. ಭದ್ರಾ ಮೇಲ್ದಂಡೆ ಯೋಜನೆ ಜಾರಿ ಈ ವರ್ಷವಾದರೂ ನನಸಾಗಲಿದೆಯೇ ಎನ್ನುವ ನಿರೀಕ್ಷೆ ಜನರಲ್ಲಿ ಇದೆ.

ಹೊಸ ತುಮಕೂರು ಕಟ್ಟುವ ಕನಸು

ಹೊಸ ವರ್ಷದಲ್ಲಿ ತುಮಕೂರು–ರಾಯದುರ್ಗ, ತುಮಕೂರು–ದಾವಣಗೆರೆ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಪೂರ್ಣಗೊಳಿಸಬೇಕೆಂಬ ಕನಸಿದೆ.

’ನಗರದ ಎಲ್ಲ ಬಡ ಜನರಿಗೆ ಮನೆ ಕೊಡಬೇಕೆಂಬ ಮಹಾನ್ ಕನಸು ಕಂಡುಕೊಂಡಿದ್ದೇನೆ. ಇದಕ್ಕಾಗಿ ಯೋಜನೆ ಹಾಕಿಕೊಂಡಿದ್ದೇನೆ. ಇದನ್ನು ಸಾಕಾರ ರೂಪಕ್ಕೆ ತರಬೇಕು. ವಿಧಾನಸಭಾ ಚುನಾವಣೆಯನ್ನು ಶಾಂತಿಯುತ ಮತ್ತು ಪಾರದರ್ಶಕವಾಗಿ ನಡೆಸಬೇಕು. ಅತಿ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಬೇಕು. ನಿಟ್ಟೂರು ಬಳಿಯ ಕುಂದರನಹಳ್ಳಿಯಲ್ಲಿ ಎಚ್‌ಎಎಲ್‌ ಲಘು ಯುದ್ಧ ವಿಮಾನ ತಯಾರಿಕಾ ಘಟಕ, ಪಾವಗಡ ಸೋಲಾರ್‌ ಪಾರ್ಕ್‌ ಉದ್ಘಾಟನೆ ಮಾಡಬೇಕೆಂಬ ಕನಸಿದೆ’.

ಜಿಲ್ಲೆಯ ನೀರಾವರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೊರಟಗೆರೆ ಸಮೀಪ ಭೈರಗೊಂಡ್ಲುವಿನಲ್ಲಿ ಜಲಾಶಯ ನಿರ್ಮಾಣ ಮಾಡಬೇಕು. ತುಮಕೂರು ಅಮಾನಿಕೆಯ ಸುತ್ತಲು ವಾಕಿಂಕ್ ಪಾಥ್‌ ನಿರ್ಮಾಣ ಮಾಡಿ ಹೊಸ ಸ್ಪರ್ಶ ನೀಡಬೇಕು. ಒಳ್ಳೆಯ ಮಳೆಯಾಗಿ ಜಿಲ್ಲೆಯ ಎಲ್ಲ ಕೆರೆಗಳು ತುಂಬಲಿ ಎಂಬ ಸದಾಶಯ ಹೊಂದಿದ್ದೇನೆ.

–ಕೆ.ಪಿ.ಮೋಹನ್‌ರಾಜ್‌, ಜಿಲ್ಲಾಧಿಕಾರಿ

***

ಉದ್ಯೋಗದ ಭರವಸೆ

ಈ ವರ್ಷ ತುಮಕೂರು–ರಾಯದುರ್ಗ, ತುಮಕೂರು–ದಾವಣಗೆರೆ ರೈಲು ಮಾರ್ಗ ಪೂರ್ಣಗೊಳಿಸಬೇಕು. ಮೆಷಿನ್‌ ಟೂಲ್‌ ಪಾರ್ಕ್‌, ಜಪಾನ್ ಪಾರ್ಕ್‌ ಕಾರ್ಯಾರಂಭ ಮಾಡಬೇಕು. ಜಿಲ್ಲೆಯ ಯುವಕರಿಗೆ ಉದ್ಯೋಗದ ಭರವಸೆ ಸಿಗಬೇಕು. ಎಂಎಸ್‌ಎಂಇ ತಂತ್ರಜ್ಞಾನ ಕೇಂದ್ರವನ್ನು ಒಂದು ಹಂತಕ್ಕೆ ತರಬೇಕು. ಜನರಿಗೆ ಭರಸವೆ ಮೂಡಿಸುವ ಕೆಲಸ ಮಾಡಬೇಕು.

ಜಿಲ್ಲೆಯಲ್ಲಿ ಎಲ್ಲೂ ಅಹಿತಕರ ಘಟನೆ ನಡೆಯದಂತೆ  ಎಲ್ಲರೂ ಶಾಂತಿ, ಸೌಹಾರ್ದದಿಂದ ಬದುಕಬೇಕು. ನಮ್ಮದೇ ಕಾಂಗ್ರೆಸ್‌ ಸರ್ಕಾರ ಮತ್ತೇ ಅಧಿಕಾರಕ್ಕೆ ಬರಲಿ ಎಂಬ ಕನಸು ಇದೆ.

ಎಸ್‌.ಪಿ.ಮುದ್ದಹನುಮೇಗೌಡ, ಸಂಸದ

***

ವೈದ್ಯಕೀಯ ಕಾಲೇಜು ಬೇಕು

ನನೆಗುದಿಗೆ ಬಿದ್ದಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗಲಿ ಎಂಬ ಕನಸಿದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜನರ ಸಹಭಾಗಿತ್ವವೇ ಇಲ್ಲವಾಗಿದೆ. ಇದು ಸ್ಪಷ್ಟವಾಗಬೇಕು. ಜನರ ಸಹಭಾಗಿತ್ವದಲ್ಲಿ ಈ ಹಣ ಸರಿಯಾಗಿ ಬಳಕೆಯಾಗಬೇಕು ಎಂಬುದು ಈ ವರ್ಷದ ನನ್ನ ಕನಸಾಗಿದೆ.

–ಕುಂದರನಹಳ್ಳಿ ರಮೇಶ್‌, ಅಭಿವೃದ್ಧಿ ರೆವಲ್ಯೂಷನ್ ಫೋರಂ

***

ಜನರ ಜೀವನ ಮಟ್ಟ ಸುಧಾರಿಸಲಿ

ಜಿಲ್ಲೆಯ ಜನರ ಜೀವನ ಮಟ್ಟ ಸುಧಾರಿಸಿ ಎಲ್ಲರೂ ನೆಮ್ಮದಿ ಬದುಕು ಬದುಕಬೇಕು. ಸಂಕಷ್ಟದಲ್ಲಿರುವ ರೈತರು, ಕಾರ್ಮಿಕರು, ದುಡಿಯುವ ವರ್ಗದ ಕಷ್ಟಗಳನ್ನು  ನಿವಾರಣೆಯಾಗಿ ಘನತೆಯ ಬದುಕು ಕಟ್ಟಿಕೊಡುವಂತಾಗಬೇಕು. ನಗರ ಯೋಜಿತ ಬೆಳವಣಿಗೆ ಕಾಣಬೇಕು.

ನೀರಾವರಿ ಸೌಲಭ್ಯ ಇಲ್ಲದಿರುವ ಹಿಂದುಳಿದಿರುವ ತಾಲ್ಲೂಕುಗಳಿಗೆ ಕನಿಷ್ಠ ನೀರಾವರಿ ಸೌಲಭ್ಯ ಕಲ್ಪಿಸಬೇಕು. ತೆಂಗು ಸಮಸ್ಯೆ ಸದನದಲ್ಲಿ ಮುಖ್ಯ ವಿಷಯವಾಗಿ ಚರ್ಚೆಯಾಗಬೇಕು. ಎಲ್ಲ ಜಾತಿ, ಧರ್ಮ ಒಗ್ಗೂಡಿಸುವ ಸಮಗ್ರ ಅಭಿವೃದ್ಧಿ ಆಗಬೇಕು.

ದೊರೈರಾಜ್‌, ಪಿಯುಸಿಎಲ್‌ ಜಿಲ್ಲಾ ಘಟಕದ ಅಧ್ಯಕ್ಷ

***

ಸ್ಮಾರ್ಟ್‌ ಸಿಟಿ

ಸ್ಮಾರ್ಟ್‌ ಸಿಟಿ ಅನುಷ್ಠಾನ ಆರಂಭವಾಗಬೇಕು. ಇದೇ ನನ್ನ ಮಹಾನ್ ಕನಸು. ಸ್ಮಾರ್ಟ್ ಸಿಟಿ ಅಧಿಕಾರಿ ಅನಿರುದ್ಧ ಶ್ರವಣ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಇವರ ಜಾಗಕ್ಕೆ ಒಳ್ಳೆಯ ಅಧಿಕಾರಿ ಬರಬೇಕು. ತುಮಕೂರು ನಗರ ಸ್ಮಾರ್ಟ್‌ ನಗರ ಆಗಬೇಕೆಂಬುದೇ ನನ್ನ ಕನಸಾಗಿದೆ.

–ಜಿ.ಎಸ್‌.ಬಸವರಾಜ್‌, ಮಾಜಿ ಸಂಸದ

***


 

ಬಾಲಕಿಯರ ಮೇಲೆ ದೌರ್ಜನ್ಯ ನಿಲ್ಲಲಿ

ಜಿಲ್ಲೆಯಲ್ಲಿ  ಮಹಿಳೆಯರು ಅದರಲ್ಲೂ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಳೆದ ವರ್ಷ ಹೆಚ್ಚಿದ್ದವು. ಹೊಸ ವರ್ಷ ಲೈಂಗಿಕ ದೌರ್ಜನ್ಯ ರಹಿತ ವರ್ಷವಾಗಿರಲಿ ಎಂಬ ಕನಸು ಇದೆ.

ಜಿಲ್ಲೆಯಲ್ಲಿ ಕೌಟುಂಬಿಕ ಸಂಬಂಧಗಳು ದಿನೇದಿನೇ ಕ್ಷೀಣವಾಗುತ್ತಿವೆ. ಹೊಸ ವರ್ಷದಲ್ಲಿ ಕೌಟುಂಬಿಕ ಸಾಮರಸ್ಯ  ಸುಧಾರಣೆಯಾಗಲಿ. ಕೌಟುಂಬಿಕ ಸಂಘರ್ಷಗಳು ತಪ್ಪಲಿ.

–ಸಾ.ಚಿ.ರಾಜಕುಮಾರ್‌, ಮಹಿಳಾ ಪರ ಹೋರಾಟಗಾರರು

***


 

ನೀರಿನ ಸಮಸ್ಯೆ ತಪ್ಪಲಿ

ತುಮಕೂರು ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಬೇಕು. ಶಾಶ್ವತ ನೀರಾವರಿ ವ್ಯವಸ್ಥೆಯಾಗಬೇಕು. ಅಂತರ್ಜಲ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು. ಹಂದಿ–ನಾಯಿಗಳ ಕಾಟ ಇಲ್ಲವಾಗಿ ನಗರ ನಳನಳಿಸುವಂತಾಗಬೇಕೆಂಬ ಕನಸು ಇದೆ.

–ಕೆ.ಪಿ.ಲಕ್ಷ್ಮಿಕಾಂತರಾಜೇ ಅರಸ್‌, ಚಿಂತನ ಬಳಗ

***


 

ಕಾಳಜಿ ಇರುವವರು ಶಾಸಕರಾಗಲಿ

ಇದು ಚುನಾವಣಾ ವರ್ಷ ಆಗಿರುವುದರಿಂದ  ಕನಿಷ್ಠ ಸಾಮಾಜಿಕ ಕಳಕಳಿ ಇರುವ ವ್ಯಕ್ತಿಗಳನ್ನು ಚುನಾಯಿಸುವ ಮನಸ್ಸು ಜಿಲ್ಲೆಯ ಮತದಾರರಿಗೆ ಬರಲಿ.

ರೈತರ ಸಂಕಷ್ಟಗಳನ್ನು ಸ್ವಲ್ಪ ಮಟ್ಟಿಗಾದರೂ ಸುಧಾರಿಸಬಲ್ಲ ನೀರಾ ಇಳಿಸಲು ಇರುವ ಹಾಗೂ ಕೊಬ್ಬರಿ ಆನ್‌ಲೈನ್‌ ಟೆಂಡರ್ ತೊಡಕುಗಳು ನಿವಾರಣೆಯಾಗಲಿ. ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಮತ್ತಷ್ಟು ಕೆಲಸಗಳು ಜರುಗಲಿ.

–ಎಸ್‌.ಗಂಗಾಧರಯ್ಯ, ಅಧ್ಯಕ್ಷರು, ಬೆಲೆ ಕಾವಲು ಸಮಿತಿ

***


 

ಎಲ್ಲರನ್ನು ಬೆಸೆಯಲಿ

ಜಿಲ್ಲೆಯ ಸುತ್ತಲಿನ ವರ್ತಮಾನ ಮನಸ್ಸನ್ನು ಛಿದ್ರಗೊಳಿಸುವ ಹಳವಂಡಗಳನ್ನು  ಸೃಷ್ಟಿಸುತ್ತಿದೆ. ಮನುಷ್ಯ, ಮನುಷ್ಯರು ದೂರ ಸರಿಯುತ್ತಾ ಒಬ್ಬರನೊಬ್ಬರು ಕೇಳಲಾಗದಂತೆ, ಕಾಣಲಾಗದಂತೆ ದ್ವೀಪಗಳಾಗುತ್ತಿದ್ದೇವೆ. ಹೊಸವರ್ಷಕ್ಕೊಂದು ಕನಸು... ಎಲ್ಲರನ್ನೂ ಬೆಸೆಯುವಂಥ ಭಾಷೆ ಕಟ್ಟೋಣ. ಒಡಕಿನ ಭಾಷೆಯನ್ನು ಬಿಟ್ಟು ಒಡಲ ಭಾಷೆಯಲ್ಲಿ ಮಾತಾಡೋಣ.

– ಗೀತಾ ವಂಸತ್‌ , ಕಥೆಗಾರ್ತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.