ಬುಧವಾರ, ಜೂಲೈ 8, 2020
23 °C

ರಾಜಕೀಯಕ್ಕೆ ರಜನಿ ಕುತೂಹಲದ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜಕೀಯಕ್ಕೆ ರಜನಿ ಕುತೂಹಲದ ನಡೆ

ತಮಿಳುನಾಡಿನ ರಾಜಕಾರಣದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆ ನಡೆದಿದೆ. ರಾಜಕೀಯ ಪ್ರವೇಶಿಸುವುದಾಗಿ ನಟ ರಜನಿಕಾಂತ್‌ ಘೋಷಣೆ ಮಾಡುವ ಮೂಲಕ ಸುಮಾರು ಎರಡು ದಶಕಗಳ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ. ವಿಧಾನಸಭೆಗೆ ಮುಂದೆ ನಡೆಯುವ ಚುನಾವಣೆಯಲ್ಲಿ ಎಲ್ಲ 234 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಬಹಿರಂಗಪಡಿಸಿದ್ದಾರೆ. ಭ್ರಷ್ಟಾಚಾರದಿಂದ ಮುಕ್ತವಾದ ಪ್ರಾದೇಶಿಕ ಪಕ್ಷವನ್ನು ಅಸ್ತಿತ್ವಕ್ಕೆ ತರುವುದಾಗಿ ವಾಗ್ದಾನ ಮಾಡಿದ್ದಾರೆ. ಒಂದು ವೇಳೆ ಅಧಿಕಾರಕ್ಕೆ ಬಂದು ಮೂರು ವರ್ಷಗಳ ಅವಧಿಯಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಲು ಆಗದಿದ್ದರೆ ರಾಜೀನಾಮೆ ನೀಡುವುದಾಗಿಯೂ ಹೇಳಿದ್ದಾರೆ. ಅಂದರೆ ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಳ್ಳುವ ಇಂಗಿತ ಅವರ ಮಾತುಗಳಲ್ಲಿ ಎದ್ದು ಕಾಣುತ್ತದೆ. ಜಯಲಲಿತಾ ನಿಧನದ ನಂತರ ತಮಿಳುನಾಡಿನಲ್ಲಿ ಒಂದು ರೀತಿಯ ರಾಜಕೀಯ ಮತ್ತು ಆಡಳಿತಾತ್ಮಕ ಶೂನ್ಯ ಕಾಣಿಸುತ್ತಿದೆ. ಜಯಾ ಪ್ರತಿನಿಧಿಸುತ್ತಿದ್ದ ಆರ್‌.ಕೆ. ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶಶಿಕಲಾ ಬಣದ ಟಿ.ಟಿ.ವಿ. ದಿನಕರನ್‌ಗೆ ಸಿಕ್ಕ ಭಾರಿ ಬಹುಮತದ ಗೆಲುವು ಅಲ್ಲಿನ ಆಡಳಿತಾರೂಢ ಎಐಎಡಿಎಂಕೆಯೊಳಗೆ ಅಲ್ಲೋಲಕಲ್ಲೋಲ ಉಂಟು ಮಾಡಿದೆ. ಅದರ ಸರ್ಕಾರದ ಸ್ಥಿತಿ ಮೇಲ್ನೋಟಕ್ಕೆ ಗಟ್ಟಿಯಾಗಿದೆ ಎನಿಸಿದರೂ ವಾಸ್ತವವಾಗಿ ಅಭದ್ರವಾಗಿದೆ. ಸರ್ಕಾರ ನಡೆಯುತ್ತಿರುವುದೇ ತುಂಬ ತೆಳುವಾದ, ನಾಜೂಕಿನ ಬಹುಮತದಿಂದ. ತಮ್ಮ ಬಣವೇ ಜಯಾ ಅವರ ನಿಜವಾದ ಉತ್ತರಾಧಿಕಾರಿ ಎಂದು ದಿನಕರನ್‌ ಹೇಳಿಕೊಳ್ಳುತ್ತಿದ್ದಾರೆ. ಅವರ ಹಿಂದೆ ಎಷ್ಟು ಶಾಸಕರು ಹೋಗಬಹುದು ಎನ್ನುವುದರ ಮೇಲೆ ಈಗಿನ ಸರ್ಕಾರದ ಭವಿಷ್ಯ ನಿಂತಿದೆ. ರಜನಿಕಾಂತ್‌ಗೆ ಈ ಅಸ್ಥಿರತೆ ವರವಾಗಬಹುದೇ, ಸಿನಿಮಾ ನಟನಾಗಿ ಅಪಾರ ಅಭಿಮಾನಿಗಳ ಸಮೂಹವನ್ನೇ ಹೊಂದಿರುವ ವರ್ಚಸ್ಸು ರಾಜಕೀಯದಲ್ಲಿ ಅವರ ಕೈಹಿಡಿಯಬಹುದೇ ಎಂಬುದನ್ನು ತಿಳಿಯಲು ಇನ್ನಷ್ಟು ದಿನ ಕಾಯಬೇಕು.

ಒಂದಂತೂ ನಿಜ. ತಮಿಳುನಾಡಿನ ರಾಜಕಾರಣ ಬೇರೆ ರಾಜ್ಯಗಳಂತಲ್ಲ. ಸಿನಿಮಾ ತಾರೆಗಳಿಗೂ ರಾಜಕಾರಣಕ್ಕೂ ಅಲ್ಲಿ ಗಟ್ಟಿಯಾದ ನಂಟಿದೆ. ಎಂ.ಜಿ. ರಾಮಚಂದ್ರನ್‌ ಅವರು ಚಿತ್ರರಂಗದಿಂದ ರಾಜಕಾರಣಕ್ಕೆ ಬಂದು ಎಐಎಡಿಎಂಕೆ ಪಕ್ಷ ಕಟ್ಟಿ ಮುಖ್ಯಮಂತ್ರಿಯಾದರೆ, ಆ ಪಕ್ಷವನ್ನು ಮತ್ತಷ್ಟು ಬೆಳೆಸಿ ಜಯಲಲಿತಾ ಅಧಿಕಾರದ ಗದ್ದುಗೆ ಏರಿದ್ದರು. ಇವರಿಬ್ಬರಿಗೂ ಪಕ್ಷ ಮತ್ತು ಸರ್ಕಾರದ ಮೇಲೆ ಗಟ್ಟಿಯಾದ ಹಿಡಿತ ಇತ್ತು. ಡಿಎಂಕೆ ನೇತಾರ ಕರುಣಾನಿಧಿ ಕೂಡ ಸಿನಿಮಾ ಹಿನ್ನೆಲೆಯಿಂದಲೇ ಬಂದವರು. ಎಂಜಿಆರ್‌ ಅವರಂತೆಯೇ ಅಭೂತಪೂರ್ವ ಸಾಧನೆ ಮಾಡಿದವರು ನೆರೆಯ ಆಂಧ್ರದಲ್ಲಿ

ಎನ್‌.ಟಿ. ರಾಮರಾವ್. ತೆಲುಗುದೇಶಂ ಪಕ್ಷವನ್ನು ಸ್ಥಾಪಿಸಿ ಗೆದ್ದು ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಎಲ್ಲರೂ ಇವರಷ್ಟು

ಅದೃಷ್ಟವಂತರೇನಲ್ಲ. ಯಾವುದೋ ಒಂದು ಪಕ್ಷದ ಮೂಲಕ ಗುರುತಿಸಿಕೊಂಡು ಶಾಸನಸಭೆಗೆ ಚುನಾಯಿತರಾದ ನಟ–ನಟಿಯರು ಎಲ್ಲ ಕಡೆ ಇದ್ದಾರೆ. ಆದರೆ ಅವರ ಪ್ರಭಾವ ತುಂಬ ಸೀಮಿತ. ತಮಿಳುನಾಡಿನ ವಿಷಯಕ್ಕೇ ಬರುವುದಾದರೆ, ನಟ ವಿಜಯಕಾಂತ್‌ ಅವರು ಡಿಎಂಡಿಕೆ ಎಂಬ ಪಕ್ಷ ಕಟ್ಟಿ ಚುನಾವಣೆಗೆ ಧುಮುಕಿದ್ದರು. 2011ರಲ್ಲಿ ಎಐಎಡಿಎಂಕೆ ಜತೆ ಮೈತ್ರಿ ಮಾಡಿಕೊಂಡು 29 ಸ್ಥಾನಗಳನ್ನೂ ಗೆದ್ದಿದ್ದರು. ಆದರೆ 2016ರ ಚುನಾವಣೆಯಲ್ಲಿ ಪ್ರತ್ಯೇಕವಾಗಿ ನಿಂತಾಗ ಒಂದೇ ಒಂದು ಕಡೆ ಗೆಲ್ಲಲು ಕೂಡ ಅವರಿಗೆ ಆಗಲಿಲ್ಲ. ಸ್ವತಃ ಅವರೇ ಠೇವಣಿ ಕಳೆದುಕೊಂಡರು. ಅತ್ತ ಅವಿಭಜಿತ ಆಂಧ್ರದಲ್ಲಿ ನಟ ಚಿರಂಜೀವಿ ಸಹ ಇಂತಹುದೇ ಸಾಹಸಕ್ಕೆ ಇಳಿದಿದ್ದರು. 2008ರಲ್ಲಿ ಪ್ರಜಾರಾಜ್ಯಂ ಪಕ್ಷ ಹುಟ್ಟು ಹಾಕಿ ವಿಧಾನಸಭೆಯಲ್ಲಿ 18 ಸ್ಥಾನ ಗಳಿಸಿದರೂ ಹೆಚ್ಚು ಕಾಲ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮುಂದೆ ಅನಿವಾರ್ಯವಾಗಿ ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದರು. ಕರ್ನಾಟಕಕ್ಕೆ ಬಂದರೆ, ನಟ ಉಪೇಂದ್ರ ಈಗ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಸ್ಥಾಪಿಸಿದ್ದಾರೆ. ವಿಧಾನಸಭೆಯ ಮುಂಬರುವ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ತಮಿಳುನಾಡಿನಲ್ಲಿಯೇ ಇನ್ನೊಬ್ಬ ನಟ ಕಮಲಹಾಸನ್‌ ಕೂಡ ಸಕ್ರಿಯ ರಾಜಕಾರಣಿಯಾಗುವ ಹಾದಿಯಲ್ಲಿದ್ದಾರೆ. ಆದರೆ ಸಿನಿಮಾ ನಟರ ರಾಜಕೀಯಕ್ಕೂ ಕೆಲವು ಮಿತಿಗಳು ಇವೆ ಎಂಬುದನ್ನು ಇದುವರೆಗಿನ ಅನುಭವಗಳು ಸಾಬೀತು ಮಾಡಿವೆ. ಇವನ್ನೆಲ್ಲ ರಜನಿಕಾಂತ್‌ ಕೂಡ ಸಹಜವಾಗಿಯೇ ಗಮನಿಸಿರುತ್ತಾರೆ. ಸಿನಿಮಾ ನಟ ಎಂಬ ಕೀರ್ತಿ, ವರ್ಚಸ್ಸಿಗಷ್ಟೇ ಜೋತು ಬಿದ್ದರೆ ಪ್ರಯೋಜನ ಇಲ್ಲ. ಪಕ್ಷದ ಪ್ರಣಾಳಿಕೆ, ನಿರ್ದಿಷ್ಟ ಕಾರ್ಯಕ್ರಮ, ಅದರ ಅನುಷ್ಠಾನದ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡುವುದು ಮುಖ್ಯ. ಈ ಕೆಲಸ ಮಾಡಿದವರು ಗೆದ್ದಿದ್ದಾರೆ, ಮಾಡದೇ ಇದ್ದವರು ಸೋತಿದ್ದಾರೆ. ಹೊಸ ಪಕ್ಷ ಕಟ್ಟುವವರೆಲ್ಲ ಇದನ್ನು ಮರೆಯಬಾರದು. ಅದು ರಜನಿಕಾಂತ್‌ಗೂ ಅನ್ವಯಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.