ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಂಗ ಅಧಿಕಾರಿಗಳ ಸುಪರ್ದಿಗೆ ?

ಅರೆ ನ್ಯಾಯಿಕ ಪ್ರಕರಣಗಳ ಮೇಲ್ಮನವಿ–ಪುನರ್‌ಪರಿಶೀಲನಾ ಅರ್ಜಿ ವಿಚಾರಣೆ
Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅರೆನ್ಯಾಯಿಕ ಪ್ರಕರಣಗಳ ವಿಚಾರಣೆಯನ್ನು ಕಂದಾಯ ಅಧಿಕಾರಿಗಳ ಬದಲು ನ್ಯಾಯಾಂಗ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಬೇಕೆಂಬ ನ್ಯಾಯಮೂರ್ತಿಗಳ ಸಲಹೆಯನ್ನು ಅನುಷ್ಠಾನಕ್ಕೆ ತರುವ ದಿಸೆಯಲ್ಲಿ ಅಡ್ವೊಕೇಟ್‌ ಜನರಲ್ ಕಚೇರಿ ಗಂಭೀರ ಚಿಂತನೆ ನಡೆಸಿದೆ.

‘ತಹಶೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಮುಂದಿರುವ ಅರೆನ್ಯಾಯಿಕ ಪ್ರಕರಣಗಳ ವಿಲೇವಾರಿಯಲ್ಲಿ ಸಾಕಷ್ಟು ವಿಳಂಬವಾಗುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ಈ ದಿಸೆಯಲ್ಲಿ ಸೂಕ್ತ ಮಾರ್ಗೋಪಾಯ ಹುಡುಕಿ ಎಂಬ ನ್ಯಾಯಮೂರ್ತಿ ಎಸ್.ಎನ್‌.ಸತ್ಯನಾರಾಯಣ ಅವರ ಸಲಹೆಯನ್ನು ಹೇಗೆ ಅನುಷ್ಠಾನಕ್ಕೆ ತರಬೇಕು ಎಂಬುದರ ಬಗ್ಗೆ ಒಂದು ದಿನದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗುವುದು’ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣ ತಿಳಿಸಿದ್ದಾರೆ.

ಈ ಕುರಿತಂತೆ ‘ಪ್ರಜಾವಾಣಿ’ಗೆ ವಿವರಿಸಿದ ಅವರು, ‘ಕಂದಾಯ ಅಧಿಕಾರಿಗಳು ತಮ್ಮ ದೈನಂದಿನ ಆಡಳಿತಾತ್ಮಕ ಕೆಲಸಗಳ ಒತ್ತಡದಲ್ಲಿ ಅರೆನ್ಯಾಯಿಕ ಪ್ರಕರಣಗಳ ವಿಲೇವಾರಿಗೆ ಹರಸಾಹಸ ಪಡಬೇಕಾಗಿದೆ. ಇದನ್ನು ಮನಗಂಡಿರುವ ನ್ಯಾಯಮೂರ್ತಿಗಳು ಈ ಕುರಿತಂತೆ ಕಾಯ್ದೆಗೆ ತಿದ್ದುಪಡಿ ತರಲು ಸಾಧ್ಯವೇ ಹೇಗೆ ನೋಡಿ ಎಂದು ಮೌಖಿಕವಾಗಿ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ’ ಎಂದರು.

‘ನ್ಯಾಯಮೂರ್ತಿಗಳ ಸಲಹೆಯನ್ನು ಆಧರಿಸಿ ಅರೆನ್ಯಾಯಿಕ ಪ್ರಕರಣಗಳ ಮೇಲ್ಮನವಿ ಮತ್ತು ಪುನರ್ ಪರಿಶೀಲನಾ ಅರ್ಜಿಗಳನ್ನು ನ್ಯಾಯಾಂಗ ಅಧಿಕಾರಿಗಳಿಗೆ (ಸಿವಿಲ್ ನ್ಯಾಯಾಧೀಶರು) ಒಪ್ಪಿಸಲು ತೀರ್ಮಾನಿಸಲಾಗುವುದು’ ಎಂದು ಶಿವಣ್ಣ ವಿವರಿಸಿದರು.

ಖಾತೆ ಬದಲಾವಣೆ ತಕರಾರು, ಸರ್ಕಾರಿ ಜಮೀನು ಮಂಜೂರು, ಮಂಜೂರಾತಿ ರದ್ದು, ಆರ್‌ಟಿಸಿ (ರೆಕಾರ್ಡ್ಸ್‌ ಆಫ್‌ ರೈಟ್ಸ್‌, ಟನೆನ್ಸಿ ಅಂಡ್‌ ಕ್ರಾಪ್ಸ್–ಪಹಣಿ)– ಸರ್ಕಾರಿ ಭೂಮಿ ಮಂಜೂರು ಮಾಡಿಸಿಕೊಂಡ ಪ್ರಕರಣಗಳು ಹಾಗೂ ಇಂತಹ ಪ್ರಕರಣಗಳಲ್ಲಿ ತಹಶೀಲ್ದಾರ್ ವರದಿ ಪ್ರಶ್ನೆ ಮಾಡಿದ ಮೇಲ್ಮನವಿಗಳ ವಿಚಾರಣೆಗಳು ಅರೆ ನ್ಯಾಯಿಕ ವಿಚಾರಣಾ ವ್ಯಾಪ್ತಿಗೆ ಒಳಪಡುತ್ತವೆ.

ವೆಬ್‌ಸೈಟ್‌: ‘ಅರೆನ್ಯಾಯಿಕ ವಿಚಾರಣಾ ಪ್ರಕರಣಗಳು ಯಾವ ಹಂತದಲ್ಲಿವೆ ಎಂಬುದನ್ನು ಸುಲಭವಾಗಿ ತಿಳಿಯಲು ಅನುಕೂಲವಾಗುವಂತೆ ಕಂದಾಯ ಇಲಾಖೆ ಅಧಿಕೃತ ವೆಬ್‌ಸೈಟ್‌ ಸಿದ್ಧಪಡಿಸಿದೆ’ ಎಂಬ ಅಂಶವನ್ನು ಶಿವಣ್ಣ ಕಳೆದ ವರ್ಷ ನ್ಯಾಯಮೂರ್ತಿ ಎ.ಎನ್‌.ವೇಣುಗೋಪಾಲಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ತಿಳಿಸಿದ್ದರು.

‘ರಾಜ್ಯದ ವಿವಿಧೆಡೆ ತಹಶೀಲ್ದಾರ್ ಹಂತದಿಂದ ಜಿಲ್ಲಾಧಿಕಾರಿ ವ್ಯಾಪ್ತಿಯವರೆಗೆ ವಿಚಾರಣೆ ಹಂತದಲ್ಲಿರುವ ಅರೆ ನ್ಯಾಯಿಕ ಪ್ರಕರಣಗಳ ಸಂಖ್ಯೆ 1.22 ಲಕ್ಷದಷ್ಟಿದೆ’ ಎಂದಿದ್ದರು.

‘ನ್ಯಾಯಮೂರ್ತಿ ವೇಣುಗೋಪಾಲಗೌಡ ಅವರ ವಿಶೇಷ ಆಸಕ್ತಿಯಿಂದಾಗಿಯೇ ವೆಬ್‌ಸೈಟ್ ಸಿದ್ಧಪಡಿಸಲಾಯಿತು. ಇದೀಗ ಸತ್ಯನಾರಾಯಣ ಅವರ ಸಲಹೆಯೂ ಅರೆನ್ಯಾಯಿಕ ಪ್ರಕರಣಗಳ ವಿಲೇವಾರಿ ಮಾರ್ಗೋಪಾಯಕ್ಕೆ ಇನ್ನಷ್ಟು ಒತ್ತು ನೀಡಿದೆ’ ಎಂದು ಶಿವಣ್ಣ ಹೇಳಿದರು.

‘ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ’

‘ಕಂದಾಯ ಅಧಿಕಾರಿಗಳು ನಡೆಸುವ ಅರೆನ್ಯಾಯಿಕ ಪ್ರಕರಣಗಳ ವಿಚಾರಣೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಹಿರಿಯ ವಕೀಲ ವಿವೇಕ್‌ ರೆಡ್ಡಿ ಪ್ರತಿಕ್ರಿಯೆ ನೀಡಿದರು.

‘ತಹಶೀಲ್ದಾರ್, ಉಪವಿಭಾಗಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ರಾಜಕಾರಣಿಗಳ ಒತ್ತಡಕ್ಕೆ ಮಣಿಯುವುದು, ಅಷ್ಟೇ ಅಲ್ಲದೆ ಅರೆ ನ್ಯಾಯಿಕ ಪ್ರಕರಣಗಳ ವಿಚಾರಣೆಯಲ್ಲಿ ಮಧ್ಯವರ್ತಿಗಳ ಹಾವಳಿಯೂ ಹೆಚ್ಚಿದೆ. ಇದರಿಂದಾಗಿ ಇಲ್ಲಿ ಸಿಗುತ್ತಿರುವ ನ್ಯಾಯಕ್ಕೆ ಅರ್ಥವೇ ಇಲ್ಲದಂತಾಗಿದೆ’ ಎಂದರು.

‘ಇಂತಹ ಪ್ರಕರಣಗಳಿಗಾಗಿಯೇ ವಿಶೇಷ ಕೋರ್ಟ್‌ಗಳು ರಚನೆಯಾಗಬೇಕು. ಇವುಗಳ ನ್ಯಾಯಾಧೀಶರನ್ನು ಹೈಕೋರ್ಟ್ ನೇಮಕ ಮಾಡಬೇಕು’ ಎಂಬ ನಿಲುವು ವಿವೇಕ್ ರೆಡ್ಡಿ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT