ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ– ಲಿಂಗಾಯತರ ತಂಟೆ ಬೇಡ: ಬಿಜೆಪಿ ನಾಯಕರಿಗೆ ಷಾ ಕಟ್ಟಪ್ಪಣೆ

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಯಾವ ನಾಯಕರೂ ಸಕ್ರಿಯವಾಗಿ ಪಾಲ್ಗೊಳ್ಳಬಾರದು’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಕಟ್ಟಪ್ಪಣೆ ವಿಧಿಸಿದ್ದಾರೆ.

ನಗರದಲ್ಲಿ ಭಾನುವಾರ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಮಾತನಾಡಿದ ಅಮಿತ್‌ ಷಾ, ‘ಲಿಂಗಾಯತ ಹಾಗೂ ವೀರಶೈವ ಬಣಗಳ ನಡುವಿನ ತಿಕ್ಕಾಟದಲ್ಲಿ ನಾವು ಯಾವುದೇ ನಿಲುವು ತಳೆಯದೆ ತಟಸ್ಥವಾಗಿ ಉಳಿಯಬೇಕು’ ಎಂದು ತಾಕೀತು ಮಾಡಿದ್ದಾರೆ.

‘ಈ ವಿಷಯದಲ್ಲಿ ಬಿಜೆಪಿ ತುಳಿದಿರುವ ಹಾದಿ ಸರಿಯಾಗಿಯೇ ಇದೆ. ಮುಂದೆಯೂ ನಮ್ಮ ನಿಲುವು ಬದಲಾಗಬಾರದು. ಯಾವುದೇ ನಾಯಕರು ಪಕ್ಷದ ಸೂಚನೆ ಮೀರಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ಎಚ್ಚರಿಕೆ ನೀಡಿದ್ದಾಗಿ ಮೂಲಗಳು ಸ್ಪಷ್ಟಪಡಿಸಿವೆ.

ಅಧಿಕಾರ ಕೊಟ್ಟಿಲ್ಲ: ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಲು ನಾವು ಯಾರಿಗೂ ಅಧಿಕಾರ ಕೊಟ್ಟಿಲ್ಲ. ಯಾರಾದರೂ ಘೋಷಣೆ ಮಾಡಿದರೆ ಅದಕ್ಕೆ ಪಕ್ಷ  ಹೊಣೆಯಲ್ಲ. ಅರ್ಹತೆ ಆಧರಿಸಿಯೇ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗುವುದು ಎಂದು ಷಾ ಸ್ಪಷ್ಟಪಡಿಸಿದ್ದಾರೆ.

ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡುವ ವಿಷಯದಲ್ಲಿ ಪಕ್ಷದ ಸಂಸದೀಯ ಮಂಡಳಿ ತೀರ್ಮಾನ ಕೈಗೊಳ್ಳಲಿದೆ. ಯಾರ ಒತ್ತಡಗಳಿಗೂ ಮಣಿದು ಟಿಕೆಟ್‌ ಹಂಚಿಕೆ ಮಾಡುವುದಿಲ್ಲ ಎಂದು ಅವರು ಖಚಿತಪಡಿಸಿದರು.

ಬಿಜೆಪಿ ರಾಜ್ಯ ಅಧ್ಯಕ್ಷ ಯಡಿಯೂರಪ್ಪ ಪರಿವರ್ತನಾ ಯಾತ್ರೆ ಸಮಯದಲ್ಲಿ ಸುಮಾರು 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಘೋಷಿಸಿದ್ದರು. ಈ ಬಗ್ಗೆ ‍ಪಕ್ಷದ ಮುಖಂಡರು ದೂರು ನೀಡಿದ್ದರು.

ಷಾ ಹೇಳಿಕೆಯಿಂದಾಗಿ ಯಡಿಯೂರಪ್ಪ ಅವರಿಗೆ ಹಿನ್ನಡೆಯಾಗಿದೆ ಎಂದು ಪಕ್ಷದೊಳಗೆ ವ್ಯಾಖ್ಯಾನಿಸಲಾಗುತ್ತಿದೆ.

‘ಕಾಂಗ್ರೆಸ್‌ ಪಕ್ಷವೇ ನಮ್ಮ ವೈರಿ’

‘ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಮಾತ್ರವೇ ನಮ್ಮ ವೈರಿ. ನಮ್ಮ ಆಕ್ರಮಣ ಏನಿದ್ದರೂ ಅವರ ಮೇಲೆ’ ಎಂಬುದನ್ನು ನೆನಪಿಡುವಂತೆ ಅಮಿತ್‌ ಷಾ ಬಿಜೆಪಿ ನಾಯಕರಿಗೆ ಸೂಚ್ಯವಾಗಿ ಹೇಳಿದ್ದಾರೆ.

ಬಿಜೆಪಿ ಅಧ್ಯಕ್ಷರು ಜೆಡಿಎಸ್‌ ಅನ್ನು ಗಮನದಲ್ಲಿಟ್ಟುಕೊಂಡು ಈ ಮಾತು ಹೇಳಿದ್ದಾರೆ ಎಂದು ಬಿಜೆಪಿಯೊಳಗೆ ವ್ಯಾಖ್ಯಾನಿಸಲಾಗುತ್ತಿದೆ. ರಾಜ್ಯದಲ್ಲಿ ಅಕಸ್ಮಾತ್‌ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದರೆ ದೇವೇಗೌಡರ ಬೆಂಬಲ ಬೇಕಾಗಬಹುದು ಎಂಬ ನಿರೀಕ್ಷೆಯಲ್ಲಿ ಈ ಮಾತು ಹೇಳಿದ್ದಾರೆ ಎಂದೇ ಅರ್ಥೈಸಲಾಗುತ್ತಿದೆ.

ಮಹದಾಯಿ ವಿಷಯ ಕುರಿತು ಅಮಿತ್‌ ಷಾ ಹೆಚ್ಚಿಗೆ ಮಾತನಾಡಿಲ್ಲ. ಸಮಸ್ಯೆ ಪರಿಹಾರ ಕುರಿತು ಏನೂ ಹೇಳದೆ ಮೌನವಾಗಿದ್ದರು ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT