ಸೋಮವಾರ, ಜೂಲೈ 6, 2020
21 °C

ದಟ್ಟಣೆ ಅವಧಿಯಲ್ಲಿ ಪ್ರತಿ 3.5 ನಿಮಿಷಕ್ಕೊಂದು ಮೆಟ್ರೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಟ್ಟಣೆ ಅವಧಿಯಲ್ಲಿ ಪ್ರತಿ 3.5 ನಿಮಿಷಕ್ಕೊಂದು ಮೆಟ್ರೊ

ಬೆಂಗಳೂರು: ‘ನಮ್ಮ ಮೆಟ್ರೊ’ ರೈಲುಗಳಲ್ಲಿ ಜನದಟ್ಟಯಿಂದ ಹೈರಾಣಾಗಿರುವ ಪ್ರಯಾಣಿಕರಿಗೆ ಹೊಸ ವರ್ಷದ ಆರಂಭದಲ್ಲೇ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಶುಭಸುದ್ದಿಯೊಂದನ್ನು ನೀಡಿದೆ.

ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಪ್ರತಿ ಎರಡು ರೈಲುಗಳ ಸಂಚಾರದ ನಡುವಿನ ಅಂತರವನ್ನು 4 ನಿಮಿಷದ ಬದಲು 3.5 ನಿಮಿಷಕ್ಕೆ ಇಳಿಸಲಾಗಿದೆ. ಹಸಿರು ಮಾರ್ಗದಲ್ಲಿ ಪ್ರತಿ 6 ನಿಮಿಷಕ್ಕೊಂದು ರೈಲು ಸಂಚರಿಸುವ ಅವಧಿಯನ್ನು ವಿಸ್ತರಿಸಲಾಗಿದೆ.

‘ಮಂಗಳವಾರದಿಂದಲೇ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ. ಇದರಿಂದಾಗಿ ನೇರಳೆ ಮಾರ್ಗದಲ್ಲಿ ದಿನದಲ್ಲಿ 10 ರೈಲುಗಳು ಹಾಗೂ ಹಸಿರು ಮಾರ್ಗ

ದಲ್ಲಿ ಮೂರು ರೈಲುಗಳು ಹೆಚ್ಚುವರಿಯಾಗಿ ಸಂಚರಿಸಲಿವೆ’ ಎಂದು ನಿಗಮದ ಕಾರ್ಯಾಚರಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲ ಹಂತ ಪೂರ್ಣಗೊಂಡ ಬಳಿಕ ನೇರಳೆ ಹಾಗೂ ಹಸಿರು ಮಾರ್ಗಗಳೆರಡರಲ್ಲೂ ಪ್ರಯಾಣಿಕರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಬೆಳಿಗ್ಗೆ 8.30ರಿಂದ 10.30ರ ನಡುವೆ ಹಾಗೂ ಸಂಜೆ 5.30ರಿಂದ 8 ಗಂಟೆ ನಡುವೆ ರೈಲುಗಳಲ್ಲಿ ಕಾಲಿಡಲೂ ಕಷ್ಟಪಡುವಷ್ಟು ಪ್ರಯಾಣಿಕರ ದಟ್ಟಣೆ ಇರುತ್ತದೆ.

ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 8.50ರಿಂದ 10.10ರ ನಡು‌‌ವೆ ಹಾಗೂ ಸಂಜೆ 5.58ರಿಂದ 7.42ರ ನಡುವೆ ಪ್ರತಿ 4 ನಿಮಿಷಕ್ಕೊಂದು ರೈಲು ಸಂಚರಿಸುತ್ತಿವೆ. ಆದರೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಹಸಿರು ಮಾರ್ಗದಲ್ಲಿ ಬೆಳಿಗ್ಗೆ 8.53ರಿಂದ 10.17ರ ನಡುವೆ ಹಾಗೂ ಸಂಜೆ ಪ್ರತಿ 6 ನಿಮಿಷಕ್ಕೊಂದು ರೈಲು ಸಂಚರಿಸುತ್ತಿದೆ. ಆದರೂ, ನಿಲ್ದಾಣಗಳಲ್ಲಿ ರೈಲಿನಿಂದ ಇಳಿಯಲು ಹಾಗೂ ಹತ್ತಲು ತ್ರಾಸಪಡಬೇಕಾದ ಸ್ಥಿತಿ ಇದೆ. ದಟ್ಟಣೆ ಅವಧಿಯಲ್ಲಿ ರೈಲುಗಳ ಟ್ರಿಪ್‌ ಸಂಖ್ಯೆ ಹೆಚ್ಚಿಸಿದರೆ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಣೆ ಆಗಲಿದೆ ಎಂದು ಶಂಕರ್‌ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೊಂದೆಡೆ, ದಟ್ಟಣೆ ಸಮಸ್ಯೆ ನಿವಾರಿಸಲು ಡಿ.ತಿಂಗಳಿಂದ ಬೋಗಿಗಳ ಸಂಖ್ಯೆಯನ್ನು 3ರಿಂದ 6ಕ್ಕೆ ಹೆಚ್ಚಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿತ್ತು. ಬಿಎಂಇಎಲ್‌ ಸಂಸ್ಥೆ ಜೊತೆ 150 ಬೋಗಿಗಳನ್ನು ಖರೀದಿಸಲು ನಿಗಮವು ಒಪ್ಪಂದ ಮಾಡಿಕೊಂಡಿದೆ. ಬಿಎಂಇಎಲ್‌ ಇನ್ನೂ ಬೋಗಿಗಳನ್ನು ಹಸ್ತಾಂತ

ರಿಸಿಲ್ಲ. ‘ಬೋಗಿಗಳು ಸಿದ್ಧಗೊಳ್ಳುತ್ತಿವೆ. ಅವುಗಳನ್ನು ಪ್ರಯಾಣಿಕರ ಸಂಚಾರಕ್ಕೆ ಬಳಸಲು ಫೆಬ್ರುವರಿವರೆಗೆ ಕಾಯಬೇಕಾಗುತ್ತದೆ’ ಎಂದು ಶಂಕರ್‌ ತಿಳಿಸಿದರು.

ವಿಸ್ತರಿತ ಅವಧಿಯಲ್ಲಿ 24 ಸಾವಿರ ಮಂದಿ ಪ್ರಯಾಣ

ಹೊಸ ವರ್ಷಾಚರಣೆ ‍ಪ್ರಯುಕ್ತ ಸೇವೆ ವಿಸ್ತರಿಸಿದ ಅವಧಿಯಲ್ಲಿ ಒಟ್ಟು 24,318 ಮಂದಿ ಮೆಟ್ರೊ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ. ಈ ಅವಧಿಯಲ್ಲಿ ಎಂ.ಜಿ. ರಸ್ತೆ ನಿಲ್ದಾಣವನ್ನು ಅತಿ ಹೆಚ್ಚು ಮಂದಿ ಬಳಸಿದ್ದಾರೆ. ಒಟ್ಟು 13,574 ಮಂದಿ ಇಲ್ಲಿಂದ ಸಂಚರಿಸಿದ್ದಾರೆ.

ಟರ್ಮಿನಲ್‌ ನಿಲ್ದಾಣಗಳಿಂದ ರಾತ್ರಿ 11 ಗಂಟೆಗೆ ದಿನದ ಕೊನೆಯ ರೈಲು ಹೊರಡುತ್ತದೆ. ಹೊಸ ವರ್ಷಾಚರಣೆ ಆಚರಿಸುವವರ ಅನುಕೂಲಕ್ಕಾಗಿ ಭಾನುವಾರ ಮಧ್ಯರಾತ್ರಿ 2 ಗಂಟೆಯವರೆಗೂ ಮೆಟ್ರೊ ಸೇವೆ ವಿಸ್ತರಿಸಲಾಗಿತ್ತು.

‘ಭಾನುವಾರ ಇಡೀ ದಿನ ಒಟ್ಟು 3.26 ಲಕ್ಷ ಮಂದಿ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದಾರೆ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮುರಿದಿಲ್ಲ ದಾಖಲೆ: ‘ಒಂದೇ ದಿನ 4.03 ಲಕ್ಷ ಮಂದಿ ಮೆಟ್ರೊ ಬಳಸಿದ ದಾಖಲೆ ಇದೆ. ಸೇವಾ ಅವಧಿ ವಿಸ್ತರಣೆಯ ಹೊರತಾಗಿಯೂ ಭಾನುವಾರ ಈ ದಾಖಲೆ ಮುರಿದಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದುದು ಇದಕ್ಕೆ ಕಾರಣ’ ಎಂದು ಶಂಕರ್‌ ತಿಳಿಸಿದರು.

‘ಮೆಟ್ರೊ ಕಾರ್ಯಾಚರಣೆಯಿಂದ ನಿಗಮವು ಭಾನುವಾರ ₹ 98 ಲಕ್ಷ ವರಮಾನ ಗಳಿಸಿದೆ. ನೇರಳೆ ಮಾರ್ಗದಿಂದ ₹ 50.33 ಲಕ್ಷ ಹಾಗೂ ಹಸಿರು ಮಾರ್ಗದಿಂದ ₹ 48 ಲಕ್ಷ ವರಮಾನ ಬಂದಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.