ಸೋಮವಾರ, ಜೂಲೈ 6, 2020
21 °C

ತಾಂತ್ರಿಕ ತೊಂದರೆ: ಮೆಟ್ರೊ ರೈಲು ನಿಂತರೂ ಬಾಗಿಲು ತೆರೆಯಲಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಂತ್ರಿಕ ತೊಂದರೆ: ಮೆಟ್ರೊ ರೈಲು ನಿಂತರೂ ಬಾಗಿಲು ತೆರೆಯಲಿಲ್ಲ

ಬೆಂಗಳೂರು: ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿಗೆ ಹೊರಟಿದ್ದ ಮೆಟ್ರೊ ರೈಲಿನಲ್ಲಿ ಕಬ್ಬನ್‌ ಪಾರ್ಕ್‌ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಆತಂಕದ ಪರಿಸ್ಥಿತಿ ಉಂಟಾಯಿತು. ಕಬ್ಬನ್‌ ಪಾರ್ಕ್‌ ನಿಲ್ದಾಣದಿಂದ ಕೊಂಚ ಹಿಂದೆಯೇ ಮೂರು ಬಾರಿ ನಿಂತು ಮತ್ತೆ ಮುಂದೆ ಚಲಿಸಿದ ರೈಲು, ನಿಲ್ದಾಣಕ್ಕೆ ಬಂದು ತಲುಪಿದ ಮೇಲೆ ಬಾಗಿಲುಗಳು ತೆರೆದುಕೊಳ್ಳಲೇ ಇಲ್ಲ. ಅದೇ ಸಮಯದಲ್ಲಿ ಹವಾನಿಯಂತ್ರಣ ವ್ಯವಸ್ಥೆಯೂ ಅಸ್ತವ್ಯಸ್ತಗೊಂಡಿತು. ಇದರಿಂದ ಸ್ವಲ್ಪ ಪ್ರಮಾಣದಲ್ಲಿ ಉಸಿರಾಟದ ತೊಂದರೆಯೂ ಕಾಣಿಸಿಕೊಂಡಿತು. ಬೆಳಿಗ್ಗೆ 10.17ನಿಮಿಷಕ್ಕೆ ರೈಲು ಕಬ್ಬನ್‌ ಪಾರ್ಕ್‌ ನಿಲ್ದಾಣಕ್ಕೆ ಬಂದು ನಿಂತು ಹಲವು ನಿಮಿಷಗಳೇ ಕಳೆದರೂ ಬಾಗಿಲುಗಳು ತೆರೆದುಕೊಳ್ಳಲಿಲ್ಲ.  

ಸ್ವಲ್ಪ ಹೊತ್ತಿನ ನಂತರ ಮೆಟ್ರೊ ಸಿಬ್ಬಂದಿ ಹೊರಗಿನಿಂದ ನಿರ್ದೇಶಿಸಿದಂತೆ ಬಾಗಿಲ ಪಕ್ಕದಲ್ಲಿನ ತುರ್ತುಪರಿಸ್ಥಿತಿಯಲ್ಲಿ ಬಳಸುವ ಒತ್ತುಗುಂಡಿಯನ್ನು ಬಳಸಿದಾಗ ಬಾಗಿಲು ತೆರೆದುಕೊಂಡಿತು. ಪ್ರಯಾಣಿಕರೆಲ್ಲ ಲಗುಬಗೆಯಿಂದ ರೈಲಿನಿಂದ ಹೊರಗಿಳಿದು ಸಮಾಧಾನದ ನಿಟ್ಟುಸಿರುಬಿಟ್ಟರು.

ಈ ಅವ್ಯವಸ್ಥೆಗೆ ಕಾರಣ ಏನು ಎಂಬ ಪ್ರಶ್ನೆಗೆ ರೈಲು ಸಿಬ್ಬಂದಿಯಿಂದ ಸಮರ್ಪಕ ಉತ್ತರ ಬರದಿದ್ದಾಗ ಸಾರ್ವಜನಿಕರ ಆತಂಕ ಆಕ್ರೋಶಕ್ಕೆ ತಿರುಗಿತು. ರೈಲ್ವೆ ಸಿಬ್ಬಂದಿಯ ಜತೆ ಮಾತಿನ ಚಕಮಕಿಗೆ ನಿಂತರು. ಹೀಗೆ ಮಾತಿಗೆ ತೊಡಗಿದ್ದಾಗಲೇ ನಿಂತಿದ್ದ ರೈಲು ಯಾವ ಸೂಚನೆಯನ್ನೂ ನೀಡದೆ ಒಮ್ಮಿಂದೊಮ್ಮೆಲೇ ಮುಂದಕ್ಕೆ ಚಲಿಸಲಾರಂಭಿಸಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಯಿತು.

‘ಜನರು ರೈಲಿನೊಳಗೆ ಆತಂಕದಿಂದ ಒದ್ದಾಡುತ್ತಿದ್ದರೂ ಏನಾಗುತ್ತಿದೆ ಎಂಬ ಬಗ್ಗೆ ಯಾವ ಸೂಚನೆಯನ್ನೂ ನೀಡಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬ ಬಗ್ಗೆಯೂ ಯಾರಿಗೂ ತಿಳಿದಿರಲಿಲ್ಲ. ರೈಲಿನೊಳಗೆ ಹವಾನಿಯಂತ್ರಣ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದೇ ಉಸಿರಾಟಕ್ಕೂ ತೊಂದರೆ ಆಯಿತು. ಯಾರಿಗಾದರೂ ಹೆಚ್ಚುಕಮ್ಮಿ ಆದರೆ ಯಾರು ಹೊಣೆ?’ ಎಂದು ಸಾರ್ವಜನಿಕರೊಬ್ಬರು ಮೆಟ್ರೊ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ‘ಮೇಲಾಧಿಕಾರಿಗಳನ್ನು ಇಲ್ಲಿಗೇ ಕರೆಸಿ’ ಎಂದು ಪಟ್ಟುಹಿಡಿದರು.

‘ಏನೋ ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ. ದಯವಿಟ್ಟು ಸಹಕರಿಸಿ’ ಎಂಬ ಸಿಬ್ಬಂದಿಯ ಸಮಾಧಾನವನ್ನು ಕೇಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಅಲ್ಲದೇ ಈ ನಡುವೆಯೇ ಯಾವ ಸೂಚನೆಯನ್ನೂ ಕೊಡದೆ ನಿಂತಿದ್ದ ರೈಲು ಒಮ್ಮಿಂದೊಮ್ಮೆಲೇ ಮುಂದಕ್ಕೆ ಹೋಗಿದ್ದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಯ್ತು. ‘ಎಲ್ಲರೂ ಭಯದಿಂದ ನಿಂತುಕೊಂಡಿದ್ದಾರೆ. ಮೆಟ್ರೊ ರೈಲು ಹಾಳಾಗಿದ್ದರಿಂದ ಕೆಲವರು ಅದಕ್ಕೆ ಒರಗಿಕೊಂಡೇ ನಿಂತಿದ್ದರು. ಆದರೆ ರೈಲು ಒಮ್ಮಿಂದೊಮ್ಮೆಲೇ ಮುಂದಕ್ಕೆ ಚಲಿಸಲು ಶುರುವಾಯ್ತು. ಪಕ್ಕ ನಿಂತಿದ್ದವರೆಲ್ಲರಿಗೂ ಒಮ್ಮೆ ಜೀವ ಹೋಗಿ ಬಂದ ಹಾಗಾಯ್ತು. ಮೊದಲೇ ಹೆದರಿಕೆಯಲ್ಲಿ ನಿಂತಿದ್ದ ಜನರು ಇನ್ನಷ್ಟು ಹೆದರಿಕೊಳ್ಳುವ ಹಾಗಾಯ್ತು. ಕನಿಷ್ಠ ಜನರಿಗೆ ರೈಲು ಹೊರಡುತ್ತಿದೆ ಎಂಬ ಸೂಚನೆ ನೀಡಿ, ಅವರನ್ನು ಪಕ್ಕಕ್ಕೆ ಸರಿಸಿ ನಂತರ ಮುಂದಕ್ಕೆ ಚಲಾಯಿಸಬಹುದಿತ್ತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯ ವಿವರವನ್ನು ನೀಡುತ್ತಾರೆ.

ಸ್ಪಂದಿಸದ ಹಿರಿಯ ಅಧಿಕಾರಿಗಳು:

ಮೆಟ್ರೊ ಸಿಬ್ಬಂದಿ, ಜನರ ಎದುರಿಗೇ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡುತ್ತಿದ್ದರೂ ಅಧಿಕಾರಿಗಳು ಕರೆಯನ್ನು ಸ್ವೀಕರಿಸಲಿಲ್ಲ. ಹಲವು ಬಾರಿ ಪ್ರಯತ್ನಿಸಿದ ಮೇಲೆ ಕರೆ ಸ್ವೀಕರಿಸಿದ ತಾಂತ್ರಿಕ ವಿಭಾಗದವರು ಸ್ಪಷ್ಟವಾದ ಮಾಹಿತಿಯನ್ನೂ ನೀಡಲಿಲ್ಲ. ಇದು ಕೂಡ ಸಾರ್ವಜನಿಕರ ಕೋಪಕ್ಕೆ ಕಾರಣವಾಯ್ತು.

ಕೆಲ ಸಮಯದ ನಂತರ ರೈಲು ಸಂಚಾರ ಮತ್ತೆ ಸಹಜ ಸ್ಥಿತಿಗೆ ಮರಳಿತು.

ಬಹುತೇಕ ಎಲ್ಲ ರೈಲುಗಳಲ್ಲಿಯೂ ಸಣ್ಣಪುಟ್ಟ ಸಮಸ್ಯೆ

ಒಂದು ರೈಲು ಮಾತ್ರವಲ್ಲ, ಇಂದು ಬೈಯಪ್ಪನ ಹಳ್ಳಿಯಿಂದ ಮೈಸೂರು ರಸ್ತೆಯ ಮಾರ್ಗವಾಗಿ ಚಲಿಸುತ್ತಿರುವ ಬಹುತೇಕ ಎಲ್ಲ ರೈಲುಗಳಲ್ಲಿಯೂ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಂಡಿವೆ. ಕೆಲವು ರೈಲುಗಳು ತುಂಬಾನಿಧಾನವಾಗಿ ಸಾಗುತ್ತಿದ್ದರೆ, ಇನ್ನು ಕೆಲವು ರೈಲುಗಳು ಹಲವು ಕಡೆ ನಿಂತು ನಿಂತು ಮುಂದಕ್ಕೆ ಚಲಿಸುತ್ತಿದ್ದವು. ಬಹುತೇಕ ಎಲ್ಲ ರೈಲುಗಳಲ್ಲಿಯೂ ಹವಾನಿಯಂತ್ರಣ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕೆಲವು ಕಡೆ ಸಮಸ್ಯೆ ಕುರಿತು ಸೂಚನೆ, ನಿರ್ದೇಶನವನ್ನು ನೀಡಲಾಯಿತು. ಇನ್ನೂ ಕೆಲವು ರೈಲುಗಳಲ್ಲಿ ಯಾವುದೇ ನಿರ್ದೇಶನವನ್ನೂ ಕೊಡಲಿಲ್ಲ.

ಅನಗತ್ಯ ಗದ್ದಲ ಎಬ್ಬಿಸಿದರು

‘ಮೊದಲೇ ಜನರು ಆತಂಕಗೊಂಡಿರುವಾಗ ಕೆಲವರು ಸುಮ್ಮನೆ ಪ್ರಚಾರಕ್ಕೋಸ್ಕರ ಅನಗತ್ಯ ಗದ್ದಲ ಎಬ್ಬಿಸಿ ಇನ್ನಷ್ಟು ಆತಂಕ ಹುಟ್ಟಿಸಿದರು’ ಎಂದು ತೊಂದರೆ ಕಾಣಿಸಿಕೊಂಡ ರೈಲಿನಲ್ಲಿಯೇ ಪ್ರಯಾಣಿಸುತ್ತಿದ್ದವರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಮೆಟ್ರೊ ಆರಂಭವಾದಾಗಿನಿಂದಲೂ ನಾನು  ಇದರಲ್ಲಿ ಪ್ರಯಾಣಿಸುತ್ತಿದ್ದೇನೆ. ಆದರೆ ಎಂದೂ ಹೀಗೆ ಆಗಿರಲಿಲ್ಲ. ತಾಂತ್ರಿಕ ತೊಂದರೆ ಇದೆ ಎಂದು ಮೊದಲೇ ಗೊತ್ತಿದ್ದರೆ ಯಾರೂ ರೈಲನ್ನು ಬಿಡುವುದಿಲ್ಲ. ಸಮಸ್ಯೆ ಆಗಿದೆ ನಿಜ. ಅದಕ್ಕೆ ಬೇಕಾದರೆ ಸಂಬಂಧಪಟ್ಟವರಿಗೆ ದೂರು ನೀಡಬೇಕು. ಆದರೆ ಆ ಕ್ಷಣದಲ್ಲಿ ಸುಮ್ಮನೇ ಗದ್ದಲ ಎಬ್ಬಿಸಿ ಆತಂಕವನ್ನು ಇನ್ನಷ್ಟು ಹೆಚ್ಚಿಸುವ ಕೆಲಸ ಮಾಡಬಾರದು. ಸಾರ್ವಜನಿಕರೂ ಇಂಥ ಸಂದರ್ಭದಲ್ಲಿ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ಆದರೆ ಯಾವ್ಯಾವುದೋ ಸಂಘಟನೆಯಲ್ಲಿದ್ದವರು ಈ ರೈಲಿನಲ್ಲಿದ್ದಿದ್ದರಿಂದ ಅವರು ತಮ್ಮ ಪ್ರಚಾರಕ್ಕೋಸ್ಕರ ವಿನಾಕಾರಣ ಸಿಬ್ಬಂದಿಯ ಮೇಲೆ ರೇಗಾಡಿದರು. ತಾಂತ್ರಿಕ ಸಮಸ್ಯೆ ಇದ್ದಾಗ ಸಿಬ್ಬಂದಿ ಏನು ಮಾಡಲು ಸಾಧ್ಯ?’ ಎಂದು ಅವರು ಪ್ರಶ್ನಿಸಿದರು.

ಪ್ರಯಾಣಿಕರಿಗೆ ಸರಿಯಾದ ತಿಳಿವಳಿಕೆ ನೀಡಲು ಸಲಹೆ

‘ಇಂಥ ತುರ್ತು ಸಂದರ್ಭದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಪ್ರಯಾಣಿಕರಿಗೆ ಸರಿಯಾದ ತಿಳಿವಳಿಕೆ ನೀಡಬೇಕು. ಆ ತಿಳಿವಳಿಕೆಯ ಕೊರತೆಯಿಂದಲೇ ಗೊಂದಲ ಇನ್ನಷ್ಟು ಹೆಚ್ಚುತ್ತದೆ’ ಎಂದರು ವಿಜಯನಗರದ ನಿವಾಸಿ ಅವಿನಾಶ್‌. ‘ರೈಲಿನೊಳಗೆ ಇರುವ ನಿಲ್ದಾಣಗಳ ಹೆಸರು ಪ್ರದರ್ಶಿಸುವ ವಿದ್ಯುನ್ಮಾನ ಪರದೆಯ ಮೇಲೆ ತುರ್ತು ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು, ಬಾಗಿಲುಗಳನ್ನು ಹೇಗೆ ತೆರೆಯಬೇಕು ಎಂಬ ಕುರಿತು ವಿಡಿಯೊಗಳನ್ನು ಪ್ರಸಾರ ಮಾಡುತ್ತಿರಬೇಕು.ಕನಿಷ್ಠ ಪಕ್ಷ ಧ್ವನಿ ನಿರ್ದೇಶನವನ್ನಾದರೂ ನೀಡಬೇಕು. ಆಗ ಜನರಿಗೆ ಈ ಬಗ್ಗೆ ತಿಳಿವಳಿಕೆ ಮೂಡುತ್ತಿದೆ’ ಎಂದೂ ಅವರು ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.