ಶನಿವಾರ, ಜೂಲೈ 4, 2020
21 °C

2017ರ ಮಹತ್ತರ ಸಂಶೋಧನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

2017ರ ಮಹತ್ತರ ಸಂಶೋಧನೆಗಳು

ಪ್ರತಿ ವರ್ಷ ಹೊಸ ಪ್ರಯೋಗಗಳು ಸಂಶೋಧನೆಗಳು ನಡೆಯುತ್ತಿರುತ್ತವೆ. ಆದರೆ, ಅವುಗಳಲ್ಲಿ ಅನೇಕ ಪ್ರಯತ್ನಗಳು ಯಶಸ್ವಿಯಾಗುವುದು ಕಡಿಮೆ. ಅಪರೂಪಕ್ಕೊಮ್ಮೆ ವಿಜ್ಞಾನ– ತಂತ್ರಜ್ಞಾನ ಲೋಕಕ್ಕೆ ಹೊಸ ಆಯಾಮ ನೀಡುವ ಪ್ರಯೋಗಗಳು ಯಶಸ್ವಿಯಾಗಿ ನಡೆಯುತ್ತವೆ. 2017ರಲ್ಲಿ ನಡೆದ ಈ ನಾಲ್ಕು ಪ್ರಯೋಗಗಳು ಅಂಥವು. ಭವಿಷ್ಯದ ಜನಾಂಗಕ್ಕೆ ನೆರವಾಗುವಂತಹ ಈ ಮಹತ್ತರ ಸಂಶೋಧನೆಗಳ ಮಾಹಿತಿ ಇಲ್ಲಿದೆ.

ಕ್ವಾಂಟಂ ಜಾಲ

ಪ್ರಸ್ತುತ ನಾವು ಬಳಸುತ್ತಿರುವ ಅಂತರ್ಜಾಲ ಸೇವೆಗಳು ರೇಡಿಯೊ ತರಂಗಗಳ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ತರಂಗಗಳು ವಿಶ್ವದ ಮೂಲೆ ಮೂಲೆಯಲ್ಲಿ  ನಡೆಯುವ ಘಟನೆಗಳು, ಮಾಹಿತಿಯನ್ನು ವಿವಿಧ ಮಾಧ್ಯಮಗಳ ಮೂಲಕ ನಮಗೆ ತಿಳಿಸುತ್ತವೆ.

ರೇಡಿಯೊ ತರಂಗಳ ಬದಲಿಗೆ, ಕ್ವಾಂಟಂ ತರಂಗಗಳ ಮೂಲಕ ಮಾಹಿತಿಯನ್ನು ರವಾನಿಸಿದರೆ, ಯಾವ ರೀತಿ ಉಪಯೋಗ ಆಗಬಹುದು ಎಂಬ ಆಲೋಚನೆ ಚೀನಾದ ಸಂಶೋಧಕರಿಗೆ ಬಂತು. ಈ ದಿಸೆಯಲ್ಲಿ ಮಾಡಿದ ಪ್ರಯೋಗಗಳೂ ಯಶಸ್ವಿಯಾದವು. ಉಪಗ್ರಹದ ಸಹಾಯದಿಂದ ಕ್ವಾಂಟಂ ಕಮ್ಯೂನಿಕೇಷನ್‌ ಮೂಲಕ ವಿಡಿಯೊ ಕರೆಗಳನ್ನು ಮಾಡುವ ಸೌಲಭ್ಯ ಸಿಗುತ್ತಿದೆ.

ಈ ಕ್ವಾಂಟಂ ತಂತ್ರಜ್ಞಾನವನ್ನು ಅಂತರ್ಜಾಲದಲ್ಲಿ ಬಳಸಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಆಗಿದೆ. ರೇಡಿಯೊ ತರಂಗ ತಂತ್ರಜ್ಞಾನಕ್ಕೂ ಕ್ವಾಂಟಂ ತಂತ್ರಜ್ಞಾನಕ್ಕೂ ದೊಡ್ಡ ವ್ಯತ್ಯಾಸಗಳೇನೂ ಇರುವುದಿಲ್ಲ. ಆದರೆ ವೇಗ ಹೆಚ್ಚು. ಕ್ವಾಂಟಂ ತಂತ್ರಜ್ಞಾನದ ಮೂಲಕ ಅಂತರ್ಜಾಲ ಬಳಸಿದರೆ ಕನ್ನ ಹಾಕುವ ಸಾಧ್ಯತೆ ತೀರಾ ಕಡಿಮೆ ಎಂದು ಸಂಶೋಧಕರ ತಂಡ ತಿಳಿಸಿತ್ತು.

ಈ ಅಂತರ್ಜಾಲದಲ್ಲಿ ವಿನಿಮಯವಾಗುವ ಯಾವುದೇ ಮಾಹಿತಿ ಮೂರನೇ ಕಣ್ಣಿಗೆ ಬೀಳುವುದು ತುಂಬಾ ಕಷ್ಟ ಎಂದು ಹೇಳಿತ್ತು. ಒಂದು ವೇಳೆ, ಶತ ಪ್ರಯತ್ನ ಮಾಡಿ ಕನ್ನ ಹಾಕಿದರೂ ಕಂಪ್ಯೂಟರ್ ಸ್ಥಗಿತಗೊಳ್ಳುತ್ತದೆ (ಕ್ರ್ಯಾಷ್‌). ಕನ್ನ ಹಾಕುವವರನ್ನು ಪತ್ತೆ ಹಚ್ಚುವುದು ಸುಲಭ.

ರಾಕೆಟ್‌ ಪುನರ್‌ಬಳಕೆ

ಕಕ್ಷೆಗೆ ಉಪಗ್ರಹಗಳನ್ನು, ಬಾಹ್ಯಾಕಾಶ ನೌಕೆಗಳನ್ನು ತೇಲಿಬಿಡುವ ರಾಕೆಟ್‌ಗಳು ಕೆಲಸ ಮುಗಿದ ನಂತರ ತುಂಡು ತುಂಡಾಗಿ ಬೇರ್ಪಟ್ಟು ಅಂತರಿಕ್ಷದಲ್ಲಿ ಕಸದಂತೆ ಹರಡಿಕೊಳ್ಳುತ್ತವೆ. ಅಲ್ಲೇ ಸುತ್ತುತ್ತಿರುತ್ತವೆ. ಈ ರೀತಿ ಆಗದಂತೆ, ಅಂತರಿಕ್ಷದಲ್ಲಿ ತ್ಯಾಜ್ಯ ಉಳಿಯದಂತೆ ನೋಡಿಕೊಳ್ಳಬೇಕು. ಪುನರ್ಬಳಕೆ ಮಾಡಬಹುದಾದ ರಾಕೆಟ್‌ಗಳನ್ನು ತಯಾರಿಸುವುದು ಅನಿವಾರ್ಯ. ಇದರಿಂದ ಶೇ 30ರಷ್ಟು ಹಣ ಉಳಿತಾಯವೂ ಆಗುತ್ತದೆ. ಅತಿ ಕಡಿಮೆ ಖರ್ಚಿನಲ್ಲಿ ಅಂತರಿಕ್ಷ ಪ್ರಯೋಗಗಳನ್ನು ನಡೆಸುವ ಭಾರತದಂತಹ ರಾಷ್ಟ್ರಗಳಿಗೆ ಇದು ಹೆಚ್ಚು ನೆರವಾಗಲಿದೆ. ಇದಷ್ಟೇ ಅಲ್ಲ, ಕಡಿಮೆ ಖರ್ಚಿನಲ್ಲಿ ಮಾನವರೂ ಚಂದ್ರಗ್ರಹಕ್ಕೆ, ಅಂತರಿಕ್ಷಕ್ಕೆ ಹೋಗಿಬರಬಹುದು.

ಅಂತರಿಕ್ಷ ಪ್ರಯೋಗಗಳಲ್ಲಿ ಹೊಸ ಆಲೋಚನೆ

ಗಳನ್ನು ವಿಶ್ವದ ಮುಂದೆ ಇಡುತ್ತಿರುವ ‘ಸ್ಪೇಸ್ ಎಕ್ಸ್’ ಸಂಸ್ಥೆ ಈ ಪ್ರಯೋಗಗಳನ್ನು ಮಾಡುತ್ತಿದೆ.‌ ಈ ಹಿಂದೆ ಪ್ರಯೋಗಕ್ಕೆ ಬಳಸಿದ್ದ ‘ಫಾಲ್ಕನ್‌–9’ ರಾಕೆಟ್‌ ಬೂಸ್ಟರ್‌ ಅನ್ನು ಮತ್ತೆ 2017ರಲ್ಲಿ ಬಳಸಿತ್ತು. ಒಮ್ಮೆ ಬಳಸಿದ ರಾಕೆಟ್‌ ಅನ್ನು ಮತ್ತೆ ನಭಕ್ಕೆ ಹಾರಿಸಿದ್ದು ಇದೇ ಮೊದಲ ಬಾರಿ ಎಂದು ಸಂಸ್ಥೆಯ ವ್ಯವಸ್ಥಾಪಕ ಎಲನ್‌ ಮಸ್ಕನ್‌ ತಿಳಿಸಿದ್ದರು.

ಕೃತಕ ಗರ್ಭಚೀಲ

ಒಂಬತ್ತು ತಿಂಗಳು ತುಂಬುವುದಕ್ಕೂ ಮೊದಲೇ ಮಗು ಹುಟ್ಟಿದರೆ ಇನ್‌ಕ್ಯೂಬೇಟರ್‌ನಲ್ಲಿ ಇಟ್ಟು ಬದುಕಿಸುತ್ತಿದ್ದೇವೆ. ಅದರಲ್ಲೂ ಆರು ಅಥವಾ ಏಳು ತಿಂಗಳಲ್ಲಿ ಹುಟ್ಟಿದ ಮಗು ಬದುಕಬೇಕಾದರೆ ಸಾಕಷ್ಟು ಪ್ರತಿಕೂಲತೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚು ಶಿಶುಮರಣ ಪ್ರಮಾಣವೂ ಈ ಹಂತದಲ್ಲೇ ಆಗುತ್ತದೆ. ಈ ಸಮಸ್ಯೆಗೆ ಸೂಕ್ತ ಪರಿಹಾರವೆಂಬಂತೆ ತಾಯಿ ಗರ್ಭಚೀಲದಂತೆ ಕೃತಕ ಗರ್ಭಚೀಲವನ್ನು ಅಮೆರಿಕದ ಫಿಲಿಡೆಲ್ಫಿಯಾದಲ್ಲಿರುವ ಮಕ್ಕಳ ಆಸ್ಪತ್ರೆಯೊಂದರ ವೈದ್ಯರು ತಯಾರಿಸಿ ವೈದ್ಯಕೀಯ ವಿಜ್ಞಾನಕ್ಕೆ ಹೊಸ ಆಯಾಮ ನೀಡಿದ್ದಾರೆ.

ಜೀವಚೀಲ (ಬಯೊಬ್ಯಾಗ್‌) ಎಂದು ಕರೆಯುವ ಈ ಚೀಲದಲ್ಲಿ ಮಕ್ಕಳು ತಾಯಿ ಹೊಟ್ಟೆಯಲ್ಲಿ ಇರುವ ರೀತಿಯಲ್ಲೇ ಸುರಕ್ಷಿತವಾಗಿ ಇರಲು ವಿಶೇಷ ದ್ರಾವಣವೊಂದನ್ನು ಇಡಲಾಗಿರುತ್ತದೆ.

ಪ್ರಯೋಗಾರ್ಥವಾಗಿ 105ದಿನ ಬೆಳವಣಿಗೆ ಆಗಿರುವ ಕುರಿಮರಿಯನ್ನು ಇಡಲಾಗಿತ್ತು. ಅದರ ಬೆಳವಣಿಗೆಯೂ ಆರೋಗ್ಯಕರವಾಗಿತ್ತು. 105 ದಿನದ ಕುರಿಮರಿ ಎಂದರೆ, 22ವಾರದ ಮಾನವ ಶಿಶುಗೆ ಸಮಾನ. ಈ ಪ್ರಯೋಗವನ್ನೂ ಮಾನವ ಶಿಶುಗಳ ಮೇಲೂ ನಡೆಸಲು ಪ್ರಯತ್ನಿಸಲಾಗುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ  ಆರು–ಏಳು ತಿಂಗಳಿಗಿಂತ ಮುಂಚೆ ಹುಟ್ಟುವ ಮಗುವನ್ನು ಸುರಕ್ಷಿತವಾಗಿ ಬೆಳೆಸಬಹುದು.

ಕ್ಯಾನ್ಸರ್‌ಗೆ ಕತ್ತರಿ ಹಾಕಿ

ಮಧುಮೇಹ, ರಕ್ತದೊತ್ತಡ ಹಾಗೂ ಕೆಲವು ರೀತಿಯ ಕ್ಯಾನ್ಸರ್‌ಗಳು ಅನುವಂಶಿಕವಾಗಿ ಬರುತ್ತವೆ ಎಂಬುದು ಪ್ರಯೋಗಗಳ ಮೂಲಕ ಸಾಬೀತಾಗಿದೆ. ಅವು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹರಡದಂತೆ ನೋಡಿಕೊಳ್ಳಬೇಕು ಎಂದರೆ ತಾಯಿಯ ಅಂಡಾಶಯದಲ್ಲೇ (ಆ್ಯಂಬ್ರಿಯೊ) ಗುರುತಿಸಬೇಕು. ದೋಷಪೂರಿತ ಜೀವಕಣಗಳನ್ನು (ಡಿಎನ್‌ಎ) ಗುರುತಿಸಿ, ತೊಲಗಿಸಿದರೆ ಸಂಪೂರ್ಣ ಆರೋಗ್ಯವಂತ ವ್ಯಕ್ತಿಗೆ ಜನ್ಮ ನೀಡಬಹುದು.

ಅಮೆರಿಕದ ಅರೆಗಾನ್‌ ಹೆಲ್ತ್‌ ಸೆಂಟರ್‌ ವಿಶ್ವವಿದ್ಯಾಲಯದ ಸಂಶೋಧಕರು ಈ ದಿಸೆಯಲ್ಲಿ ಪ್ರಯೋಗಗಳನ್ನು ನಡೆಸಿದರು. ಒಂದು ಕಣ ಏರ್ಪಟ್ಟಿರುವ ಅಂಡಾಶಯದಲ್ಲಿನ ಜೀವ ಕಣವನ್ನು (ದೋಷಪೂರಿತ ಡಿಎನ್‌ಎ) ಎಡಿಟ್‌ (ಸಂಕಲನ) ಮಾಡಿದ್ದಾರೆ. ಅದರಲ್ಲಿರುವ ದೋಷಗಳನ್ನು, ರೋಗಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದರು.

ಅಂಡಾಶಯದಲ್ಲಿರುವ ಜೀವಕಣ ಒಂದು ದೊಡ್ಡ ಕಲ್ಲು ಬಂಡೆ ಎಂದುಕೊಂಡರೆ, ಅನಗತ್ಯ ಭಾಗಗಳನ್ನು ತೊಲಗಿಸಿ ಸುಂದರವಾದ ಶಿಲ್ಪವನ್ನು ಕೆತ್ತಿದಂತೆ, ಜೀವ ಕಣಗಳ ಸಂಕಲನ ಮಾಡಿದ್ದಾರೆ! ಈ ಕಾರ್ಯಕ್ಕೆ ಹೊಸ ರೀತಿಯ ಉಳಿಯೊಂದು ನೆರವಾಗಿದೆ. ಅದರ ಹೆಸರು ‘ಕ್ರಿಸ್ಪರ್‌’ ಇದನ್ನು 2014ರಲ್ಲಿ ತಯಾರಿಸಿದರೂ 2017ರಲ್ಲಿ ಮಾನವ ಶರೀರದ ಮೇಲೆ ಯಶಸ್ವಿಯಾಗಿ ಪ್ರಯೋಗ ಮಾಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.