ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಒಟ್ಟಾಗಿ ಬಂದಿದ್ದ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ– ಮೂವರ ಬಂಧನ

Last Updated 3 ಜನವರಿ 2018, 5:34 IST
ಅಕ್ಷರ ಗಾತ್ರ

ಮಂಗಳೂರು: ನಗರದ ಹೊರವಲಯದ ಪಿಲಿಕುಳ ನಿಸರ್ಗಧಾಮದ ಆವರಣದಲ್ಲಿನ ವಾಟರ್‌ ಅಮ್ಯೂಸ್‌ಮೆಂಟ್‌ ಪಾರ್ಕ್‌ಗೆ ಮಂಗಳವಾರ ಬೆಳಿಗ್ಗೆ ಒಟ್ಟಾಗಿ ಬಂದಿದ್ದ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮೀಯ ವಿದ್ಯಾರ್ಥಿಗಳ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ್ದು, ಈ ಸಂಬಂಧ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ 11.30ಕ್ಕೆ ಈ ಪ್ರಕರಣ ನಡೆದಿದೆ. ಕಿನ್ನಿಗೋಳಿ ಸಮೀಪದ ಕಾಲೇಜೊಂದರಲ್ಲಿ ಓದುತ್ತಿರುವ ಹಿಂದೂ ಧರ್ಮದ ಒಬ್ಬ ವಿದ್ಯಾರ್ಥಿನಿ, ಕ್ರೈಸ್ತ ಧರ್ಮದ ಒಬ್ಬ ವಿದ್ಯಾರ್ಥಿನಿ ಮತ್ತು ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳು ಒಟ್ಟಾಗಿ ನಿಸರ್ಗಧಾಮಕ್ಕೆ ಬಂದಿದ್ದರು. ಈ ಮಾಹಿತಿ ಅರಿತ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಸಂಪತ್‌ ಶೆಟ್ಟಿ ಮತ್ತು ಸಹಚರರು ಮಾನಸ ಅಮ್ಯೂಸ್‌ಮೆಂಟ್‌ ಪಾರ್ಕ್‌ ಬಳಿ ಬಂದಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಕಾವೂರು ಠಾಣೆ ಪೊಲೀಸರು ವಿದ್ಯಾರ್ಥಿಗಳನ್ನು ರಕ್ಷಿಸಲು ಹೊರಗೆ ಕರೆತರುತ್ತಿರುವಾಗಲೇ ಈ ಗುಂಪು ಅವರ ಮೇಲೆ ಹಲ್ಲೆ ನಡೆಸಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕಾವೂರು ಠಾಣೆ ಇನ್‌ಸ್ಪೆಕ್ಟರ್‌ ಕೆ.ಆರ್‌.ನಾಯ್ಕ್ ಮತ್ತು ಕಾನ್‌ಸ್ಟೆಬಲ್‌ ವಿಶ್ವನಾಥ್‌ ವಿದ್ಯಾರ್ಥಿಗಳನ್ನು ಕರೆತರುತ್ತಿದ್ದಾರೆ. ಆಗ ಹಿಂದಿನಿಂದ ಹೋದ ಸಂಪತ್‌ ಮತ್ತು ಸಹಚರರು ವಿದ್ಯಾರ್ಥಿನಿಯೊಬ್ಬಳ ಬೆನ್ನಿಗೆ ಗುದ್ದಿದ್ದಾರೆ. ಪೊಲೀಸರು ತಡೆಯುತ್ತಿದ್ದಂತೆ ಹಿಂದಿದ್ದ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದು ದೃಶ್ಯಗಳಲ್ಲಿದೆ.

ಮೂವರ ಬಂಧನ: ಘಟನೆ ಸಂಬಂಧ ಮೂಡುಶೆಡ್ಡೆ ನಿವಾಸಿಗಳಾದ ಸಂಪತ್‌ ಶೆಟ್ಟಿ, ವರದ ಮತ್ತು ದಿನೇಶ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಪತ್‌ ಕಾವೂರು ಠಾಣೆ ರೌಡಿಗಳ ಪಟ್ಟಿಯಲ್ಲಿದ್ದಾನೆ. ಈತ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ಎಂಬುದು ಗೊತ್ತಾಗಿದೆ. ಉಳಿದವರು ಯಾವ ಸಂಘಟನೆಗೆ ಸೇರಿದವರು ಎಂಬುದರ ಕುರಿತು ವಿಚಾರಣೆ ನಡೆದಿದೆ. ಇನ್ನೂ ಕೆಲವರು ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರನ್ನೂ ಬಂಧಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್‌ ಟಿ.ಆರ್‌.ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವ್ಯಾವ ಸೆಕ್ಷನ್‌ ದಾಖಲು?

ಆರೋಪಿಗಳ ವಿರುದ್ಧ ಅಡ್ಡಗಟ್ಟಿರುವುದು, ಆಯುಧದಿಂದ ಹಲ್ಲೆ ನಡೆಸಿರುವುದು, ಜೀವ ಬೆದರಿಕೆ, ಮಹಿಳೆಯ ಘನತೆಗೆ ಹಾನಿ ಮಾಡಲು ಯತ್ನಿಸಿರುವುದು, ವಿಭಿನ್ನ ಧರ್ಮದ ಜನರ ನಡುವೆ ಮತೀಯ ದ್ವೇಷ ಹಬ್ಬಿಸಲು ಯತ್ನಿಸಿರುವ ಆರೋಪದಡಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳು ಹಾಗೂ ಬಾಲಾಪರಾಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

* ಲವ್‌ ಜಿಹಾದ್‌ ತಡೆಗೆ ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಯುವತಿಯರ ಮೇಲೆ ನಿಗಾ ಇಡುವಂತೆ ತಾಯಂದಿರಿಗೆ ತಿಳಿವಳಿಕೆ ನೀಡಲಾಗುವುದು. 

–ಪ್ರೊ.ಎಂ.ಬಿ.ಪುರಾಣಿಕ್‌, ವಿಎಚ್‌ಪಿ ಪ್ರಾಂತ ಕಾರ್ಯಾಧ್ಯಕ್ಷ

ಮುಖ್ಯಾಂಶಗಳು

* ಪಾರ್ಕ್‌ಗೆ ಬಂದಿದ್ದ ಕಾಲೇಜು ವಿದ್ಯಾರ್ಥಿಗಳು

* ಪೊಲೀಸರು ರಕ್ಷಣೆಗೆ ಯತ್ನಿಸುತ್ತಿರುವಾಗಲೇ ಹಿಂದಿನಿಂದ ಬಂದು ಹಲ್ಲೆ

* ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT