ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ, ಮುಂಬೈನಲ್ಲಿ ಹಿಂಸಾಚಾರ: ರೈಲು, ಬಸ್‌ ಸೇವೆ ಸ್ಥಗಿತ, ಜನಜೀವನ ಅಸ್ತವ್ಯಸ್ತ

ಭೀಮಾ–ಕೋರೆಗಾಂವ್‌ ಹಿಂಸಾಚಾರ
Last Updated 2 ಜನವರಿ 2018, 12:55 IST
ಅಕ್ಷರ ಗಾತ್ರ

ಮುಂಬೈ: ಭೀಮಾ–ಕೋರೆಗಾಂವ್‌ ಯುದ್ಧದ 200ನೇ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಹಿಂಸಾಚಾರ ಮಂಗಳವಾರ ಮಹಾರಾಷ್ಟ್ರದ ಹಲವು ಭಾಗಗಳಿಗೆ ವ್ಯಾಪಿಸಿದ್ದು ಪುಣೆ ಮತ್ತು ಮುಂಬೈನಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದೆ.

ಹಿಂಸಾಚಾರ ಖಂಡಿಸಿ ಮಂಗಳವಾರ ಮುಂಬೈ, ಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವೆಡೆ ಪ್ರತಿಭಟನೆಗಳು ನಡೆದಿದ್ದು, ರೈಲು ಮತ್ತು ರಸ್ತೆ ತಡೆ ನಡೆಸಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೆಂಬೂರಿನಲ್ಲಿ ಪ್ರತಿಭಟನಾಕಾರರು ರೈಲು ತಡೆದು ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಚೆಂಬೂರು, ವಿಖ್ರೋಲಿ, ಮನ್‌ಖುರ್ದ್‌ ಮತ್ತು ಗೋವಂದಿ ಪ್ರದೇಶದ ಯುವಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ರಾಷ್ಟ್ರೀಯ ಸುದ್ದಿ ವಾಹಿನಿಯ ಪತ್ರಕರ್ತರೊಬ್ಬರ ಮೇಲೆ ಈ ಸಂದರ್ಭದಲ್ಲಿ ಹಲ್ಲೆ ನಡೆದಿದೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕೇಂದ್ರೀಯ ರೈಲ್ವೆ ಕುರ್ಲಾ ಮತ್ತು ವಾಶಿ ನಡುವಣ ಉಪನಗರ ರೈಲು ಸೇವೆಯನ್ನು ಸ್ಥಗಿತಗೊಳಿಸಿದೆ.

ಪೂರ್ವ ಎಕ್ಸ್‌ಪ್ರೈಸ್‌ ಹೆದ್ದಾರಿಯಲ್ಲಿ ಮಂಗಳವಾರ ಬೆಳಿಗ್ಗೆ ಸೇರಿದ ನೂರಾರು ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು. ಇದರಿಂದ ಮಧ್ಯಾಹ್ನದವರೆಗೂ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ರಮಾಬಾಯಿ ಅಂಬೇಡ್ಕರ್‌ ನಗರದಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದ, ಬಸ್‌ನ ಗಾಜುಗಳು ಒಡೆದಿವೆ. ಪೂರ್ವ ಉಪನಗರದಲ್ಲಿ ಕಟ್ಟೆಚ್ಚರವಹಿಸಲು ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಪರಿಸ್ಥಿತಿ ನಿಯಂತ್ರಿಸಲು ಭೀಮಾ–ಕೋರೆಗಾಂವ್‌ನಲ್ಲೂ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿನ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಖುದ್ದಾಗಿ ಅವಲೋಕನ ನಡೆಸಿದ್ದಾರೆ.

ಹಿಂಸಾಚಾರದಲ್ಲಿ ನೂರಾರು ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಳಗಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT