ಬುಧವಾರ, ಜೂಲೈ 8, 2020
29 °C

ಮಾತುಕತೆ: ದಕ್ಷಿಣ ಕೊರಿಯಾ ಪ್ರಸ್ತಾವ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಮಾತುಕತೆ: ದಕ್ಷಿಣ ಕೊರಿಯಾ ಪ್ರಸ್ತಾವ

ಸೋಲ್: ಉತ್ತರ ಕೊರಿಯಾ ಜೊತೆ ಉನ್ನತ ಮಟ್ಟದ ಮಾತುಕತೆ ನಡೆಸುವ ಪ್ರಸ್ತಾವವನ್ನು ದಕ್ಷಿಣ ಕೊರಿಯಾ ಇಟ್ಟಿದೆ. ಉತ್ತರ ಹಾಗೂ ದಕ್ಷಿಣ ಕೊರಿಯಾಗಳ ಗಡಿ ಗ್ರಾಮ ಪನ್ಮುಂಜಾಂನ ಶಾಂತಿಭವನದಲ್ಲಿ ಜನವರಿ 9ರಂದು ಮಾತುಕತೆಗೆ ಸಿದ್ಧ ಎಂದು ದಕ್ಷಿಣ ಕೊರಿಯಾದ ಸಮನ್ವಯ ಸಚಿವ ಚೊ ಮ್ಯೋಂಗ್ ಗ್ಯೊನ್ ಹೇಳಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಉತ್ತರ ಕೊರಿಯಾ ಭಾಗಿಯಾಗುವ ಇಚ್ಛೆಯನ್ನು ಅಧ್ಯಕ್ಷ ಕಿಮ್ ಜಾಂಗ್ ಉನ್ ವ್ಯಕ್ತಪಡಿಸಿದ ಬಳಿಕ ದಕ್ಷಿಣ ಕೊರಿಯಾದಿಂದ ಈ ನಡೆ ವ್ಯಕ್ತವಾಗಿದೆ.

ಹೊಸ ವರ್ಷಾಚರಣೆ ವೇಳೆ ಮಾಡಿದ ಭಾಷಣದಲ್ಲಿ ‘ನನ್ನ ಮೇಜಿನ ಮೇಲೆ ಪರಮಾಣು ಬಟನ್’ ಇದೆ ಎಂದಿದ್ದ ಕಿಮ್, ನೆರೆಯ ದೇಶದ ಕ್ರೀಡಾಕೂಟದಲ್ಲಿ ಭಾಗಿಯಾಗುವ ಸುಳಿವನ್ನು ನೀಡಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೊ ಅವರು, ‘ಯಾವುದೇ ಸಮಯ, ಯಾವುದೇ ಸ್ಥಳ ಮತ್ತು ಯಾವುದೇ ವಿಧಾನದಲ್ಲೂ ಮಾತುಕತೆಗೆ ಸಿದ್ಧ. ಕ್ರೀಡಾಕೂಟದಲ್ಲಿ ಉತ್ತರ ಕೊರಿಯಾದ ನಿಯೋಗ ಭಾಗಿಯಾಗುವ ವಿಚಾರ, ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತಂತೆ ಎರಡೂ ದೇಶಗಳ ‌ಪ್ರತಿನಿಧಿಗಳು ಮುಖಾಮುಖಿ ಕುಳಿತು ಮಾತುಕತೆ ನಡೆಸಬೇಕೆಂಬ ಆಶಯ ನಮ್ಮದು’ ಎಂದು ಹೇಳಿದ್ದಾರೆ.

ಕಿಮ್ ಹೇಳಿಕೆಯನ್ನು ಸ್ವಾಗತಿಸಿದ್ದ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್, ‘ಶಾಂತಿ ಮರುಸ್ಥಾಪನೆಯಲ್ಲಿ ಇದೊಂದು ಮಹತ್ವದ ಹೆಜ್ಜೆ’ ಎಂದು ಬಣ್ಣಿಸಿದ್ದರು. ದಕ್ಷಿಣ ಕೊರಿಯಾದ ಈ ನಡೆಯನ್ನು ಉತ್ತರ ಕೊರಿಯಾದ ಮಿತ್ರರಾಷ್ಟ್ರ ಚೀನಾ ಸ್ವಾಗತಿಸಿದೆ.

1950–53ರ ಕೊರಿಯಾ ಯುದ್ಧದ ಬಳಿಕ ಎರಡೂ ದೇಶಗಳು ಇಬ್ಭಾಗವಾಗಿದ್ದವು. 2015ರಲ್ಲಿ ಕೊನೆಯ ಬಾರಿಗೆ ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಸಭೆ ನಡೆದಿತ್ತು. ಆದರೆ ಒಪ್ಪಂದಕ್ಕೆ ಬರುವಲ್ಲಿ ವಿಫಲವಾಗಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.