ಬುಧವಾರ, ಆಗಸ್ಟ್ 5, 2020
23 °C

ಚಿಕ್ಕಲ್ಲೂರು ಜಾತ್ರೆ: ಚಂದ್ರಮಂಡಲ ಉತ್ಸವಕ್ಕೆ ಅದ್ದೂರಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಲ್ಲೂರು ಜಾತ್ರೆ: ಚಂದ್ರಮಂಡಲ ಉತ್ಸವಕ್ಕೆ ಅದ್ದೂರಿ ಚಾಲನೆ

ಚಾಮರಾಜನಗರ: ಜಿಲ್ಲೆಯ ಸುಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯ ಆರಂಭದ ದಿನವಾದ ಮಂಗಳವಾರ ರಾತ್ರಿ ಜರುಗಿದ ಚಂದ್ರಮಂಡಲ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಚಂದ್ರಮಂಡಲಕ್ಕೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆ ‘ಧರೆಗೆ ದೊಡ್ಡವರಾದ ಮಂಟೇಸ್ವಾಮಿ ಅವರ ಪಾದಕ್ಕೆ ಉಘೇ, ಕತ್ತಲ ರಾಜ್ಯದಲ್ಲಿ ಪರಂಜ್ಯೋತಿಯಾಗಿ ಬೆಳಗಿದ ಸಿದ್ದಪ್ಪಾಜಿಯವರ ಚಂದ್ರಮಂಡಲಕ್ಕೆ ಉಘೇ’ ಎಂಬ ಭಕ್ತರ ಉದ್ಘೋಷ ಜಾತ್ರೆಯಾದ್ಯಂತ ಮಾರ್ದನಿಸಿತು. ದೇವಸ್ಥಾನದ ಸುತ್ತಲೂ ನೆರೆದಿದ್ದ ಭಕ್ತರು ಚಂದ್ರಮಂಡಲದ ಬೆಳಗನ್ನು ಕಣ್ತುಂಬಿಕೊಂಡರು.

ಹೂವು, ಹೊಂಬಾಳೆ, ಬಾಳೆಕಂದು, ಮಾವಿನ ತೋರಣಗಳಿಂದ ಚಂದ್ರಮಂಡಲ ಕಟ್ಟೆಯನ್ನು ಸಿಂಗರಿಸಲಾಗಿತ್ತು. ಬೊಪ್ಪೆಗೌಡನಪುರದ ಧರೆಗೆ ದೊಡ್ಡವರ ಸಂಸ್ಥಾನ ಮಠದ ಪೀಠಾಧಿಪತಿ ಜ್ಞಾನಾನಂದ ಚೆನ್ನರಾಜೇ ಅರಸು ಅವರು ಮಂಗಳಾರತಿ ಬೆಳಗಿಸಿ ಚಂದ್ರಮಂಡಲಕ್ಕೆ ಅಗ್ನಿ ಸ್ಪರ್ಶ ಮಾಡಿದರು.

ಭಕ್ತರು ಚಂದ್ರಮಂಡಲ ಜ್ಯೋತಿಗೆ ದವಸಧಾನ್ಯ, ಹಣ್ಣು, ಜವನ, ನಗನಾಣ್ಯಗಳನ್ನು ಎಸೆಯುವುದರ ಮೂಲಕ ತಮ್ಮ ಹರಕೆ ಸಲ್ಲಿಸಿದರು. ಬೆಂಗಳೂರು, ಮೈಸೂರು, ಕನಕಪುರ, ರಾಮನಗರ, ಗುಂಡ್ಲುಪೇಟೆ, ಚಾಮರಾಜನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಜನಸಾಗರ ಹರಿದು ಬಂದಿತ್ತು. ನೆರೆದಿದ್ದ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಬೂದಿಗಾಗಿ ಮುಗಿಬಿದ್ದ ಭಕ್ತರು: ಚಂದ್ರಮಂಡಲ ಹತ್ತಿ ಉರಿದು ಕೆಳಗೆ ಬೀಳುತ್ತಿದ್ದಂತೆ ಭಕ್ತರು ಬೂದಿಯನ್ನು ತೆಗೆದುಕೊಳ್ಳಲು ಮುಗಿಬಿದ್ದರು.

ನೀಲಗಾರರ ಪರಂಪರೆಯಲ್ಲಿ ಅತ್ಯಂತ ಶ್ರೇಷ್ಠ ಎಂದು ನಂಬಿರುವ ಬೂದಿಯನ್ನು ‘ಕಪ್ಪುದೂಳ್ತ’ ಎಂದು ಕರೆಯಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.