ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಿತಾರಣ್ಯಗಳಲ್ಲೂ ಹುಲಿ ಗಣತಿ

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲೇ ಅತ್ಯಂತ ಹೆಚ್ಚು ಹುಲಿಗಳನ್ನು ಹೊಂದಿರುವ ನಮ್ಮ ರಾಜ್ಯದಲ್ಲಿ 2018ನೇ ಸಾಲಿನ ಹುಲಿ ಗಣತಿಗೆ (ಎಐಟಿಇ –2018) ಸಿದ್ಧತೆ ಆರಂಭವಾಗಿದೆ.

ಇದೇ ಮೊದಲ ಬಾರಿ ಹುಲಿ ಅಭಯಾರಣ್ಯಗಳ ಜೊತೆಯಲ್ಲಿ ರಕ್ಷಿತಾರಣ್ಯಗಳಲ್ಲೂ ಸಮೀಕ್ಷೆ ನಡೆಯಲಿದೆ. ಹುಲಿಗಳ ಜೊತೆಗೆ ಸಸ್ಯಾಹಾರಿ ಪ್ರಾಣಿಗಳ ಗಣತಿಯನ್ನೂ ನಡೆಸಲಾಗುತ್ತಿದೆ.

ಡೆಹ್ರಾಡೂನ್‌ನ ವನ್ಯಜೀವಿ ಸಂಸ್ಥೆ ಅಭಿವೃದ್ಧಿ ಪಡಿಸಿದ ಎಂ–ಸ್ಟ್ರೈಪ್‌ ಆ್ಯಪ್‌ ಅನ್ನು ಈ ಹಿಂದೆ ಹುಲಿ ಗಣತಿಗೆ ಬಳಸಲಾಗುತ್ತಿತ್ತು. ಈ ಬಾರಿ ಅದರ ಸುಧಾರಿತ ಆವೃತ್ತಿಯಾದ ‘ಇಕಲಾಜಿಕಲ್‌’ ಆ್ಯಪ್‌ ಬಳಕೆ ಮಾಡಲಾಗುತ್ತಿದೆ. ಸಮೀಕ್ಷೆ ವೇಳೆ ಆಗುವ ತಪ್ಪುಗಳನ್ನು ಕಡಿಮೆ ಮಾಡಲು ಸರಳವಾದ ಈ ಆ್ಯಂಡ್ರಾಯ್ಡ್‌ ಆ್ಯಪ್‌ ನೆರವಾಗಲಿದೆ.

ಈ ಕಾರ್ಯವು ಒಟ್ಟು ನಾಲ್ಕು ಹಂತಗಳಲ್ಲಿ ನಡೆಯಲಿದೆ. ಇದರಲ್ಲಿ ವನ್ಯಜೀವಿ ವಲಯ ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳನ್ನು ಒಳಗೊಂಡಿರುವ ವಿಭಾಗಗಳ ಅಧಿಕಾರಿಗಳು, ಪರಿಸರ ಪ್ರವಾಸೋದ್ಯಮ ಮಂಡಳಿಯ ಪ್ರಮಾಣೀಕೃತ ಸ್ವಯಂಸೇವಕರು ಹಾಗೂ ಅರಣ್ಯ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಮೊದಲ ಹಂತದಲ್ಲಿ 8 ದಿನಗಳ ಗಣತಿ ನಡೆಯಲಿದೆ. ಈ ಹಂತದಲ್ಲಿ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಮಾಂಸಾಹಾರಿ ಹಾಗೂ ಸಸ್ಯಾಹಾರಿ (ಆನೆ, ಕಾಡುಕೋಣ, ಕಡವೆ, ಜಿಂಕೆ) ಜೀವಿಗಳ ಸರ್ವೆ ಹಾಗೂ ಅವುಗಳ ಆವಾಸ ಸ್ಥಾನಗಳ ಗುಣಮಟ್ಟದ ಅಧ್ಯಯನವನ್ನು ನಡೆಸಬೇಕಿದೆ.

ಗಸ್ತು ಪ್ರದೇಶಗಳನ್ನು (ಬೀಟ್‌) ಒಂದು ಘಟಕವನ್ನಾಗಿ ಪರಿಗಣಿಸಲಾಗುತ್ತದೆ. ಈ ಪ್ರದೇಶಗಳಲ್ಲಿ ಪ್ರಾಣಿಗಳ ಕುರುಹು ಪತ್ತೆ ಸರ್ವೆ ಹಾಗೂ ಅದರ ಪ್ರತಿ 2 ಕಿ.ಮೀ ಪಟ್ಟಿಯಲ್ಲಿ ಗೊರಸು ಹೊಂದಿರುವ ಪ್ರಾಣಿಗಳ ದಟ್ಟಣೆ, ಸಸ್ಯವರ್ಗ ಮತ್ತು ಅಲ್ಲಿ ಮಾನವ ಹಸ್ತಕ್ಷೇಪದ ಪ್ರಮಾಣವನ್ನು ಆಧರಿಸಿ ಗಣತಿಯ ಮಾದರಿಗಳನ್ನು ನಿರ್ಧರಿಸಲಾಗುತ್ತದೆ.

ಹುಲಿ ಅಭಯಾರಣ್ಯಗಳಲ್ಲಿ ಜ.1ರಿಂದ 7ರ ವರೆಗೆ ತರಬೇತಿ, ಕ್ಷೇತ್ರ ಕಾರ್ಯ ಸಿದ್ಧತೆ ಹಾಗೂ ಅಣಕು ಗಣತಿ ನಡೆಯಲಿದೆ. ಜ.8ರಿಂದ ಜ.16ವರೆಗೆ ಸಮೀಕ್ಷೆ ನಡೆಯಲಿದೆ. ರಕ್ಷಿತಾರಣ್ಯಗಳಲ್ಲಿ ಜ.15ರಿಂದ 20ರವರೆಗೆ ತರಬೇತಿ, ಕ್ಷೇತ್ರ ಕಾರ್ಯ ಸಿದ್ಧತೆ ಹಾಗೂ ಅಣಕು ಗಣತಿ ಜರುಗಲಿದೆ. ಜ.22ರಿಂದ 30ರವರೆಗೆ ಸಮೀಕ್ಷೆ ನಡೆಯಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಈ ಬಾರಿ ಹುಲಿ ಸಂರಕ್ಷಿತ ಪ್ರದೇಶಗಳ ಹೊರಗೂ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.

ಗಣತಿ ವೇಳೆ ಸಫಾರಿ ಇಲ್ಲ: ಗಣತಿ ನಡೆಯುವ ದಿನಗಳಲ್ಲಿ ಜ. 7ರಿಂದ ಜ.13ರವರೆಗೆ ಹುಲಿ ಅಭಯಾರಣ್ಯಗಳಲ್ಲಿ ಸಫಾರಿಗಳನ್ನು ರದ್ದುಪಡಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಂಕಿ ಅಂಶ

* 406 ರಾಜ್ಯದಲ್ಲಿ ಈ ಹಿಂದಿನ ಹುಲಿ ಗಣತಿ ವೇಳೆ ಪತ್ತೆಯಾಗಿದ್ದ ಹುಲಿಗಳು

* 4 ವರ್ಷಗಳಿಗೊಮ್ಮೆ ಹುಲಿ ಗಣತಿ ನಡೆಸಲಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT