ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾತ್ಮದಿಂದ ಪರಮಸುಖ

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ಅಧ್ಯಾತ್ಮ ಸಾಧನೆ ಮಾಡುವ ಸಾಧಕನ ಮುಂದಿರುವ ಮಾರ್ಗಗಳು ಮೂರು. ಅವುಗಳೆಂದರೆ ಭಕ್ತಿಮಾರ್ಗ, ಕರ್ಮಮಾರ್ಗ, ಜ್ಞಾನಮಾರ್ಗ. ಪರಮಾತ್ಮನಲ್ಲಿ ನಾವು ಇಡುವ ಅತಿಶಯವಾದ ಅನುರಕ್ತಿಯೆ ಭಕ್ತಿ. ಪರಮಾತ್ಮನು ಭಕ್ತಿಪ್ರಿಯ. ಇದು ಅತ್ಯಂತ ಸರಳ ಹಾಗೂ ಸುಲಭವಾದ ಮಾರ್ಗ. ಮನುಷ್ಯ ಬದುಕಿರುವವರೆಗೆ ಕರ್ಮಗಳನ್ನು ಮಾಡಲೇಬೇಕಾಗುತ್ತದೆ.

ಕರ್ಮರಹಿತನಾಗಿ ಬದುಕುವುದು ಕಷ್ಟ. ಆದ್ದರಿಂದ ಕರ್ಮದಿಂದ ಬಿಡುಗಡೆ ಹೊಂದದೆ ನಿಷ್ಕಾಮ ಕರ್ಮವನ್ನಾಚರಿಸುವುದು ಕರ್ಮ ಮಾರ್ಗ. ಮೂರನೆಯದು ಜ್ಞಾನ ಮಾರ್ಗ ಇದು ಅತ್ಯಂತ ಕಠಿಣವಾದುದು. ಈ ಮಾರ್ಗಾವಲಂಬಿಗಳು ತಮ್ಮ ಚಿತ್ತವನ್ನು ಪರಿಶುದ್ಧಗೊಳಿಸಿಕೊಳ್ಳಬೇಕಾಗುವುದು. ಶರೀರ ಮತ್ತು ಇಂದ್ರಿಯಗಳನ್ನು ಬಾಹ್ಯ ಆಕರ್ಷಣೆಗಳಿಂದ ಮುಕ್ತಗೊಳಿಸಿದಾಗ ಅಧ್ಯಾತ್ಮ ಜ್ಞಾನವುಂಟಾಗಿ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ.

ಅಧ್ಯಾತ್ಮ ಸಾಧನೆಯ ಮೂರೂ ಮಾರ್ಗಗಳಲ್ಲಿ ಸಾಧಕನಿಗೆ ಬಲವಾದ ಅಡೆತಡೆಗಳನ್ನುಂಟು ಮಾಡುವ ವೈರಿಗಳೆಂದರೆ ಸಾಧಕನಲ್ಲಿರುವ ಅಹಂಕಾರ ಮಮಕಾರಗಳು. ನಾನು ನನ್ನದು ಎಂಬ ಅಭಿಮಾನವನ್ನು ತೊಡೆದು ಹಾಕದೆ ಯಾವೊಬ್ಬ ಸಾಧಕನೂ ತನ್ನ ಸಾಧನೆಯನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ. ಅಹಂಕಾರ ಹಾಗು ಗರ್ವದಿಂದ ಮಾಡುವ ಭಕ್ತಿ ನಿರರ್ಥಕವಾಗುತ್ತದೆ.

ಅಧ್ಯಾತ್ಮ ಸಾಧನೆಯಲ್ಲಿ ಕರ್ಮವು ಬಂಧನಕಾರಿಯೆಂದು ಕೆಲವರು ತಿಳಿದಿರುತ್ತಾರೆ. ಬಂಧನದಿಂದ ಮುಕ್ತನಾಗಲು ಕರ್ಮತ್ಯಾಗ ಅತ್ಯವಶ್ಯವೆಂದು ವಾದಿಸುತ್ತಾರೆ. ವಾಸ್ತವವಾಗಿ ಕರ್ಮ ಬಂಧನಕಾರಿಯಲ್ಲ. ಅದರ ಹಿಂದಿರುವ ಫಲಾಪೇಕ್ಷೆ, ಆಸಕ್ತಿ, ಅಹಂಕಾರ-ಮಮಕಾರಗಳೇ ಬಂಧನಕ್ಕೆ ಕಾರಣ. ಮನಸ್ಸಿನ ಬಯಕೆಗಳನ್ನು ನಿವಾರಿಸಿಕೊಳ್ಳುವುದು ಕರ್ಮತ್ಯಾಗಕ್ಕಿಂತಲೂ ಮುಖ್ಯ. ಮನಸ್ಸಿನ ಬಯಕೆಗಳಲ್ಲಿ ಪರಿವರ್ತನೆಯಾಗದಿದ್ದರೆ ಕರ್ಮತ್ಯಾಗವೂ ನಿಷ್ಫಲವಾಗುತ್ತದೆ.

ಜ್ಞಾನಮಾರ್ಗದಲ್ಲಿ ಮುನ್ನಡೆವ ಸಾಧಕನೂ ಸಂಸಾರದ ಕ್ಷಣಭಂಗುರತೆಯನ್ನು ಅರಿತು ತನ್ನ ಮನಸ್ಸನ್ನು ವಿಷಯ ವಾಸನೆಗಳಿಂದ ಮುಕ್ತಗೊಳಿಸಿ ಪರಮಾತ್ಮ ಚಿಂತನೆಯಲ್ಲಿರಬೇಕಾಗುತ್ತದೆ. ಹೀಗೆ ಜ್ಞಾನಸಾಧನೆಯಲ್ಲಿರುವ ಸಾಧಕನೂ ಕೂಡ ಅಹಂಕಾರ ಮಮಕಾರಗಳ ಕಾರಣದಿಂದ ಪಥಭ್ರಷ್ಟನಾಗುವ ಸಂಭವ ಹೆಚ್ಚು.

ಹೀಗೆ ಅಧ್ಯಾತ್ಮ ಸಾಧನೆಯ ಭಕ್ತಿ, ಕರ್ಮ ಮತ್ತು ಜ್ಞಾನ ಮಾರ್ಗಗಳಲ್ಲಿ ನಾನು, ನನ್ನದು ಎಂಬ ಭಾವ ಅಂದರೆ ಅಹಂಕಾರ ಮಮಕಾರಗಳು ಸಾಧಕನನ್ನು ದಿಕ್ಕೆಡೆಸುತ್ತವೆ. ಆದ್ದರಿಂದ ಸಾಧಕನು ಅರ್ಪಣಭಾವದಿಂದ ಸಾಧನೆಯನ್ನು ಮುಂದುವರೆಸಬೇಕು. ಸ್ವಾರ್ಥದ ಲವಲೇಶವೂ ಅವನಲ್ಲಿರಕೂಡದು. ಅಧ್ಯಾತ್ಮ ಸಾಧನೆಯ ಮೂಲಕ ಸಾಧಕನು ತನ್ನನ್ನು ತಾನು ಕಳೆದುಕೊಂಡು ಪರಮಾತ್ಮನಲ್ಲಿ ಸಾಮರಸ್ಯ ಹೊಂದಿ ಪರಮಸುಖವನ್ನು ಸಾಧಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT