ಬುಧವಾರ, ಜೂನ್ 23, 2021
26 °C
ತೃತೀಯಲಿಂಗಿ ವ್ಯಕ್ತಿಗಳ(ಹಕ್ಕುಗಳ ರಕ್ಷಣೆ) ಮಸೂದೆಯ ಅಂಶಗಳು

ಶತಮಾನಗಳ ಸಂಕಟ ಇನ್ನಾದರೂ ನಿವಾರಣೆಯಾದೀತೇ?

ಉಮಾಪತಿ. ಡಿ. Updated:

ಅಕ್ಷರ ಗಾತ್ರ : | |

ಶತಮಾನಗಳ ಸಂಕಟ ಇನ್ನಾದರೂ ನಿವಾರಣೆಯಾದೀತೇ?

ಭಾರತದಲ್ಲಿ ಬ್ರಿಟಿಷ್ ಆಡಳಿತ ಜಾರಿ ಮಾಡಿದ 1871ರ ಕ್ರಿಮಿನಲ್ ಟ್ರೈಬ್ಸ್ ಕಾಯ್ದೆ ಪ್ರಕಾರ ಹಿಜಡಾಗಳು ಎಂದೇ ಕೀಳಾಗಿ ಕರೆಯಲಾಗುವ ತೃತೀಯ ಲಿಂಗಿಗಳು ಸ್ತ್ರೀಯರಂತೆ ಉಡುಪು ಧರಿಸಿ ಬೀದಿಗಿಳಿಯುವುದು ನಿಷಿದ್ಧವಾಗಿತ್ತು. ಕಾಯ್ದೆ ಉಲ್ಲಂಘಿಸಿದರೆ ಎರಡು ವರ್ಷಗಳ ತನಕ ಜೈಲುವಾಸ ಅನುಭವಿಸಬೇಕಿತ್ತು. 1949ರಲ್ಲಿ ಈ ಕಾಯ್ದೆಯೇನೋ ರದ್ದಾಯಿತು.

ಈ 'ಶಪಿತ' ಸಮುದಾಯದ ಶತಮಾನಗಳ ಸಂಕಟಕ್ಕೆ ಸಮಾಜ ಕುರುಡು ಮತ್ತು ಕಿವುಡು ಎರಡೂ ಆಗಿತ್ತು. ತೃತೀಯಲಿಂಗಿಗಳ ಕುರಿತ ಅವಹೇಳನದ ಭಾವನೆ ಸಾರ್ವಜನಿಕ ಬದುಕಿನಲ್ಲಿ ಈಗಲೂ ಅಳಿದಿಲ್ಲ.

ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಅವಕಾಶಗಳ ಕೊರತೆ, ಸಾಮಾಜಿಕ ಕಳಂಕ, ಭೇದಭಾವದ ಸಂಕಟ ಹಾಗೂ ಹತ್ತು ಹಲವು ಸರ್ಕಾರಿ ದಾಖಲೆ– ದಸ್ತಾವೇಜುಗಳ ನಿರಾಕರಣೆಯನ್ನು ತೃತೀಯಲಿಂಗಿಗಳು ಎದುರಿಸುತ್ತಿದ್ದಾರೆ. ಇತ್ತೀಚಿನ ಜನಗಣತಿಯ ಪ್ರಕಾರ ದೇಶದಲ್ಲಿನ ತೃತೀಯಲಿಂಗಿ ವ್ಯಕ್ತಿಗಳ ಸಂಖ್ಯೆ 48 ಲಕ್ಷ.

* 2016ರ ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಮಸೂದೆಗೆ ಮತ್ತೆ ಜೀವ ಬಂದಿದೆಯೇ?

ಹೌದು. ಈ ಮಸೂದೆಯನ್ನು ಇದೇ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಪುನಃ ಮಂಡಿಸುವ ಸೂಚನೆಗಳಿವೆ. 2014ರಲ್ಲಿ ಮೊದಲ ಬಾರಿಗೆ ಮಂಡಿಸಲಾಗಿದ್ದ ಈ ಮಸೂದೆಯನ್ನು ಸಂಸತ್ತಿನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿತ್ತು. ಅದು, ಮಸೂದೆಯ ಓರೆಕೋರೆಗಳು ಮತ್ತು ಲೋಪಗಳನ್ನು ಸರಿಪಡಿಸುವ ವರದಿಯೊಂದನ್ನು 2017ರ ಜುಲೈ ತಿಂಗಳಲ್ಲಿ ನೀಡಿತ್ತು.

* ಸ್ಥಾಯಿ ಸಮಿತಿಯು ಮಸೂದೆಯನ್ನು ಅನುಮೋದಿಸಿತ್ತೇ?

ಬಹುಮುಖ್ಯವಾಗಿ ಮಸೂದೆಯಲ್ಲಿನ 'ತೃತೀಯಲಿಂಗಿ' ವ್ಯಾಖ್ಯಾನವನ್ನು ಸಮಿತಿ ಒಪ್ಪಲಿಲ್ಲ. ಜಾಗತಿಕ ಮಟ್ಟಕ್ಕೆ ಅನುಗುಣವಾಗಿ ವ್ಯಾಖ್ಯಾನದಲ್ಲಿ ಬದಲಾವಣೆ ತರಬೇಕೆಂದು ಬಯಸಿತು. ತಮ್ಮ ಲಿಂಗವು ಯಾವುದೆಂದು ಗುರುತಿಸಿಕೊಳ್ಳುವ ಹಕ್ಕು ತೃತೀಯಲಿಂಗಿಗಳಿಗೆ ಇರಬೇಕು ಎಂದು ಪ್ರತಿಪಾದಿಸಿತ್ತು. 2013ರಲ್ಲಿ ಸರ್ಕಾರವೇ ರಚಿಸಿದ್ದ ತಜ್ಞರ ಸಮಿತಿ ಕೂಡ ತೃತೀಯಲಿಂಗಿಗಳ ಹಿತರಕ್ಷಣಾ ಕ್ರಮಗಳ ಕುರಿತು ನೂರಕ್ಕೂ ಹೆಚ್ಚು ಪುಟಗಳ ವರದಿ ಸಲ್ಲಿಸಿತ್ತು.

*ಪುನಃ ಮಂಡಿಸಲಾಗುತ್ತಿರುವ ಮಸೂದೆಯಲ್ಲಿ ಸುಧಾರಣೆಯ ತಿದ್ದುಪಡಿಗಳನ್ನು ಸೇರಿಸಲಾಗಿದೆಯೇ?

ಈಗ ಪುನಃ ಮಂಡಿಸಲಾಗುತ್ತಿರುವ ಮಸೂದೆಯಲ್ಲಿ ಸುಧಾರಣೆಯ ತಿದ್ದುಪಡಿಗಳನ್ನು ಸೇರಿಸಲಾಗಿದೆಯೇ ಇಲ್ಲವೇ ಎಂಬುದು ಇನ್ನೂ ನಿಶ್ಚಿತವಾಗಿ ತಿಳಿದು ಬಂದಿಲ್ಲ. ಯಾವುದೇ ತಿದ್ದುಪಡಿಗಳಿಲ್ಲದೆ ಮೂಲ ರೂಪದ ಮಸೂದೆಯನ್ನೇ ಮಂಡಿಸಲು ಸರ್ಕಾರ ಮುಂದಾಗಿದೆ ಎಂಬುದು ತೃತೀಯಲಿಂಗಿಗಳ ಆರೋಪ. ತೃತೀಯಲಿಂಗಿಗಳು ಮತ್ತು ಈ ಸಮುದಾಯದ ಹಕ್ಕುಗಳ ಪ್ರತಿಪಾದಕ ವಲಯಗಳಿಗೆ ಸರ್ಕಾರದ ಈ ನಡೆ ನಿರಾಶೆ ತಂದಿದೆ.

ವ್ಯಾಪಕ ಅಸಮಾಧಾನವನ್ನು ಪರಿಗಣಿಸಿ ತಿದ್ದುಪಡಿ ತರುವ ಸೂಚನೆ ಇದೆ. ತೃತೀಯಲಿಂಗಿಗಳ ಜೈವಿಕ ಪರೀಕ್ಷೆ ಕೈಬಿಟ್ಟು, ತಮ್ಮ ಆದ್ಯತೆಯ ಲಿಂಗ ಆಯ್ಕೆಯ ಹಕ್ಕನ್ನು ಅವರಿಗೆ ನೀಡುವ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

* ತೃತೀಯಲಿಂಗಿಗಳ ಹಕ್ಕುಗಳನ್ನು ಗುರುತಿಸಲು ಚಾಲನೆ ದೊರೆತದ್ದು ಯಾವಾಗ?

2014ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದಂತಹ ಐತಿಹಾಸಿಕ ತೀರ್ಪಿನಿಂದ ಹಕ್ಕುಗಳನ್ನು ಗುರುತಿಸಿ ಅವುಗಳನ್ನು ರಕ್ಷಿಸುವ ಪ್ರಕ್ರಿಯೆಗೆ ಹೊಸ ಚಾಲನೆ ಸಿಕ್ಕಿತು. ಸ್ತ್ರೀ– ಪುರುಷ ಲಿಂಗಗಳ ಜೊತೆಗೆ ಮೂರನೆಯ ಲಿಂಗವೆಂದು ನ್ಯಾಯಾಲಯ ಈ ಸಮುದಾಯವನ್ನು ಗುರುತಿಸಿತು. ದೇಶದ ಇತರೆ ನಾಗರಿಕರಿಗೆ ಸಿಗುತ್ತಿರುವ ಹಕ್ಕುಗಳು ಮತ್ತು ಸಾಂವಿಧಾನಿಕ ರಕ್ಷಣೆಗಳು ಈ ಸಮುದಾಯಕ್ಕೂ ಲಭಿಸಬೇಕು; ಹುಟ್ಟಿನಿಂದ ನಿಶ್ಚಯಿಸಲಾದ ಲಿಂಗಕ್ಕೆ (ಸ್ತ್ರೀಲಿಂಗ ಅಥವಾ ಪುರುಷಲಿಂಗ) ತಾಳೆಯಾಗದ ಲಿಂಗಿಗಳನ್ನು ಭೇದ ಭಾವದಿಂದ ನಡೆಸಿಕೊಳ್ಳುವ ಅಮಾನವೀಯತೆ ಕೊನೆಯಾಗಬೇಕು; ಸಾಮುದಾಯಿಕ ಬದುಕಿನಲ್ಲಿ ತಲೆಯೆತ್ತಿ ಪಾಲ್ಗೊಳ್ಳುವ ಹಕ್ಕು ಮತ್ತು ಘನತೆ ಅವರಿಗೆ ಸಿಗಬೇಕು; ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರೆಂದು ಪರಿಗಣಿಸಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಎಂದು ನ್ಯಾಯಾಲಯ ಸಾರಿತು.

* ಮಸೂದೆ ಕುರಿತ ಬಹುಮುಖ್ಯ ಅಸಮಾಧಾನ ಯಾವುದು?

ಅಸಮಾಧಾನವು ‘ತೃತೀಯಲಿಂಗಿ’ ವ್ಯಾಖ್ಯೆಗೆ ಸಂಬಂಧಿಸಿದ್ದು- ‘ತೃತೀಯ ಲಿಂಗಿ ವ್ಯಕ್ತಿಯು ಇತ್ತ ಸಂಪೂರ್ಣವಾಗಿ ಪುರುಷನೂ ಅಲ್ಲ, ಅತ್ತ ಸಂಪೂರ್ಣವಾಗಿ ಮಹಿಳೆಯೂ ಅಲ್ಲ; ಅಥವಾ ಪುರುಷ ಮತ್ತು ಮಹಿಳೆಯ ಸಂಯೋಗವೂ ಅಲ್ಲ; ಪುರುಷ ಅಥವಾ ಮಹಿಳೆ ಅಲ್ಲ; ತೃತೀಯಲಿಂಗಿ ವ್ಯಕ್ತಿಗೆ ಹುಟ್ಟಿನಿಂದ ದತ್ತವಾದ ಲಿಂಗಕ್ಕೂ ಮತ್ತು ಆ ವ್ಯಕ್ತಿ ಬೆಳೆದ ನಂತರ ತನ್ನ ಲಿಂಗ ಯಾವುದೆಂದು ಭಾವಿಸುವ ಲಿಂಗಕ್ಕೂ ತಾಳೆಯಾಗುವುದಿಲ್ಲ; ಅಂತರಲಿಂಗಿ ವ್ಯತ್ಯಾಸಗಳು ಮತ್ತು ವಿಲಕ್ಷಣ ಲಿಂಗದ ತೃತೀಯಪುರುಷ ಮತ್ತು ತೃತೀಯಮಹಿಳೆ ಈ ವ್ಯಕ್ತಿ' ಎಂಬ ವ್ಯಾಖ್ಯೆ ತೃತೀಯಲಿಂಗಿ ಸಮುದಾಯದ ಮೂಲಭೂತ ಬೇಡಿಕೆಯನ್ನೇ ನಿರಾಕರಿಸಿದೆ ಎಂಬ ಆಕ್ರೋಶ ಪ್ರಕಟವಾಗಿದೆ.

* ಮಸೂದೆಯು ತೃತೀಯಲಿಂಗಿಗಳಿಗೆ ನಿರಾಕರಿಸಿರುವ ಹಕ್ಕು ಯಾವುದು?

ತೃತೀಯಲಿಂಗಿ ಅಸ್ಮಿತೆ ಮತ್ತು ಅಂತರಲೈಂಗಿಕತೆ ಅಸ್ಮಿತೆ ಬೇರೆ ಬೇರೆ ಎಂದು ನೋಡದಿರುವುದು ಈ ಮಸೂದೆಯ ದೋಷ. ತಾನು ಪುರುಷ, ಮಹಿಳೆ ಇಲ್ಲವೇ ತೃತೀಯಲಿಂಗಿ ಎಂದು ಗುರುತಿಸಿಕೊಳ್ಳುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ ಇದೆ ಎನ್ನುತ್ತದೆ ಸುಪ್ರೀಂ ಕೋರ್ಟ್ ತೀರ್ಪು. ಆದರೆ ತಾವು ತೃತೀಯಲಿಂಗಿ ಎಂದು ಗುರುತಿಸಿಕೊಳ್ಳುವವರಿಗೆ ಮಾತ್ರವೇ ಈ ಮಸೂದೆಯಲ್ಲಿ ಅವಕಾಶವಿದೆ. ಉದಾಹರಣೆಗೆ ತೃತೀಯಲಿಂಗಿಯಾಗಿರುವ ವ್ಯಕ್ತಿ ತಾನು ಪುರುಷ ಎಂದೋ, ಮಹಿಳೆ ಎಂದೋ ಗುರುತಿಸಿಕೊಳ್ಳುವ ಅವಕಾಶವನ್ನು ಈ ಮಸೂದೆ ನಿರಾಕರಿಸುತ್ತದೆ. ತಾವು ತೃತೀಯಲಿಂಗಿಗಳೆಂದು ಗುರುತಿಸಿಕೊಳ್ಳುವ ಹಕ್ಕನ್ನು ನೀಡುವ ಮುನ್ನ ಇವರನ್ನು ಜಿಲ್ಲಾ ಮಟ್ಟದ ಐವರು ಸದಸ್ಯರ ಸಮಿತಿ ಪರೀಕ್ಷೆಗೆ ಗುರಿಪಡಿಸುತ್ತದೆ ಎನ್ನುತ್ತದೆ ಮಸೂದೆ. ತನ್ನ ಆದ್ಯತೆಯ ಲಿಂಗವನ್ನು ಆರಿಸಿಕೊಳ್ಳುವ ಪ್ರತಿಯೊಬ್ಬ ತೃತೀಯಲಿಂಗಿಯ ಮೂಲಭೂತ ಹಕ್ಕಿನ ಉಲ್ಲಂಘನೆಯಿದು.

* ತೃತೀಯಲಿಂಗಿಗಳು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಪ್ರಕಾರ ಮಸೂದೆಯ ಇತರೆ ಕೊರತೆಗಳೇನು?

ಹೆಣ್ಣು ಮತ್ತು ಗಂಡು ಎಂಬ ಎರಡೇ ಲಿಂಗಗಳಿವೆ ಎಂಬ ಸಾಂಪ್ರದಾಯಿಕ ಲಿಂಗನೋಟವನ್ನು ಆಧರಿಸಿ ರೂಪಿಸಲಾಗಿರುವ ಹಾಲಿ ಕ್ರಿಮಿನಲ್ ಮತ್ತು ಸಿವಿಲ್ ಕಾನೂನುಗಳನ್ನು ತೃತೀಯಲಿಂಗಿಗಳ ಅಸ್ತಿತ್ವಕ್ಕೆ ತಕ್ಕಂತೆ ತಿದ್ದಿಬರೆಯುವ ಕುರಿತು ಮಸೂದೆಯಲ್ಲಿ ಪ್ರಸ್ತಾಪವೇ ಇಲ್ಲ ಎಂದು ಹೋರಾಟಗಾರರು ಮತ್ತು ತಜ್ಞರು ತಕರಾರು ಎತ್ತಿದ್ದಾರೆ.

* ಮಸೂದೆಯಲ್ಲಿನ ಇತರೆ ಮುಖ್ಯಾಂಶಗಳು ಯಾವುವು?

ತಮ್ಮ ಮನೆ– ಗ್ರಾಮ ತೊರೆಯುವಂತೆ ತೃತೀಯಲಿಂಗಿಗಳನ್ನು ಒತ್ತಾಯಿಸುವುದು, ಅವರನ್ನು ಬೆತ್ತಲೆ ಮೆರವಣಿಗೆ ಮಾಡುವುದು, ಭಿಕ್ಷೆ ಬೇಡುವಂತೆ ಒತ್ತಾಯಿಸಿ ಜೀತದಾಳಿನಂತೆ ದುಡಿಸಿಕೊಳ್ಳುವುದು ಮಸೂದೆಯ ಪ್ರಕಾರ ಕಾನೂನುಬಾಹಿರ. ಈ ದೌರ್ಜನ್ಯ ನಡೆಸುವವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುವುದು. ತೃತೀಯಲಿಂಗಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಪ್ರಕರಣಗಳಿಗೆ ಅನ್ವಯ ಆಗುವಂತೆ ಕಾನೂನುಗಳಿಗೆ ತಿದ್ದುಪಡಿ ತರಬೇಕು. ಮನೆಯ ಹೊರಗೆ ಮತ್ತು ಒಳಗೆ ಅವರಿಗೆ ದೈಹಿಕ ಅಥವಾ ಮಾನಸಿಕ ಹಾನಿ ಉಂಟು ಮಾಡುವುದು ಮತ್ತು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರಾಕರಿಸುವುದು ಕಾನೂನಿನ ಪ್ರಕಾರ ಅಪರಾಧ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿಲ್ಲದ ಇತರೆ ಎಲ್ಲ ತೃತೀಯಲಿಂಗಿಗಳನ್ನು ಹಿಂದುಳಿದ ವರ್ಗದವರೆಂದು ಪರಿಗಣಿಸಿ ಮೀಸಲು ಸೌಲಭ್ಯದ ಖಾತ್ರಿ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳು, ಶಿಕ್ಷಣ ಸಂಸ್ಥೆಗಳು, ಉದ್ಯೋಗದ ಜಾಗಗಳಲ್ಲಿ ಅವರನ್ನು ತಾರತಮ್ಯದಿಂದ ನಡೆಸಿಕೊಳ್ಳುವುದನ್ನು ನಿಷೇಧಿಸಿದೆ. ಸಾಂಸ್ಕೃತಿಕ ಬದುಕು, ವಿರಾಮ, ಮನರಂಜನಾ ಚಟುವಟಿಕೆಗಳಲ್ಲಿ ಅವರಿಗೆ ಸಮಾನ ಹಕ್ಕು ಮತ್ತು ಪ್ರವೇಶವಿದೆ. ಲಿಂಗವನ್ನು ಆಧರಿಸಿ ಎಸಗುವ ಯಾವುದೇ ಭೇದಭಾವವನ್ನು ಅವರ ವಿರುದ್ಧ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.