ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಠ ಮಾಡದ ಶಿಕ್ಷಕರು ಗ್ರಾಮೀಣ ಪ್ರದೇಶಕ್ಕೆ

Last Updated 2 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಪ್ರದೇಶಗಳ (‘ಎ’ ವಲಯ) ಪ್ರಾಥಮಿಕ ಶಾಲೆಗಳಲ್ಲಿ ಸರಿಯಾಗಿ ಪಾಠ ಮಾಡದ ಶಿಕ್ಷಕರನ್ನು ಗ್ರಾಮಾಂತರ ಪ್ರದೇಶಕ್ಕೆ (‘ಸಿ’ ವಲಯ) ಕಡ್ಡಾಯವಾಗಿ ವರ್ಗಾವಣೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

2017–18ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ಪ್ರಾಯೋಗಿಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ.

2014ರಲ್ಲಿ ಪರೀಕ್ಷೆ ಮೂಲಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮೂರು ವರ್ಷದ ಅವಧಿ ಪೂರೈಸಿರುವ ಶಿಕ್ಷಕರ ಕಾರ್ಯನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರೆ ಅಂತಹವರಿಗೆ ನೋಟಿಸ್ ಕೊಟ್ಟು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು. ವರ್ಗಾವಣೆ ಪ್ರಾಧಿಕಾರ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕಡ್ಡಾಯ ವರ್ಗಾವಣೆ ಈ ಬಾರಿ ಮೂರು ಹಂತಗಳಲ್ಲಿ ನಡೆಯುತ್ತದೆ. ಕೋರಿಕೆ ವರ್ಗಾವಣೆ ಬಯಸುವ ಶಿಕ್ಷಕರು ಗರಿಷ್ಠ ಐದು ವರ್ಷ ಪೂರೈಸಿರಬೇಕು. ‘ಎ’ ವಲಯದಲ್ಲಿ ಸತತ ಹತ್ತು ವರ್ಷ ಕೆಲಸ ಮಾಡಿದ್ದರೆ ಘಟಕದ (ಜಿಲ್ಲೆ) ಹೊರಗೆ ವರ್ಗಾವಣೆ ಹೊಂದಲು ಅರ್ಹರಿರುತ್ತಾರೆ.

ಯಾವುದೇ ತಾಲ್ಲೂಕಿನಲ್ಲಿ ಮಂಜೂರಾದ ಹುದ್ದೆಗಳ ಶೇ 20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಇದ್ದರೆ ವರ್ಗಾವಣೆ ನೀಡುವುದಿಲ್ಲ ಎಂದು ವಿವರಿಸಲಾಗಿದೆ.

ಆದರೆ, ದೈಹಿಕ ಮತ್ತು ವಿಶೇಷ ಶಿಕ್ಷಕರ ವರ್ಗಾವಣೆಗೆ ಖಾಲಿ ಹುದ್ದೆಗಳ ಮಿತಿ ಅನ್ವಯ ಆಗುವುದಿಲ್ಲ. ಯಾವುದೇ ಶಾಲೆಯಲ್ಲಿ 200ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿದ್ದರೆ ದೈಹಿಕ ಮತ್ತು ವಿಶೇಷ ಶಿಕ್ಷಕರನ್ನು ನೇಮಿಸಲು ಅವಕಾಶವಿದೆ.

ಪರಸ್ಪರ ವರ್ಗಾವಣೆಗೆ ಸೂಚನೆಗಳು
* ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ 3 ವರ್ಷ ಪೂರ್ಣಗೊಂಡಿರಬೇಕು (ಘಟಕದ ಹೊರಗೆ). ಘಟಕದ ಒಳಗೆ ಕನಿಷ್ಠ ಸೇವಾವಧಿ ಅನ್ವಯ ಆಗುವುದಿಲ್ಲ.
* ಇಬ್ಬರೂ ಶಿಕ್ಷಕರ ವೃಂದ ಮತ್ತು ವಿಷಯಗಳಲ್ಲಿ ಹೊಂದಾಣಿಕೆ ಇರಬೇಕು.
* ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಒಳಗೆ ‘ಎ’ ವಲಯದಿಂದ ‘ಎ’ ವಲಯಕ್ಕೆ ವರ್ಗಾವಣೆಗೆ ಅವಕಾಶ ಇಲ್ಲ.
* ಪರಸ್ಪರ ಒಬ್ಬರೊಂದಿಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಕೌನ್ಸೆಲಿಂಗ್‌ಗೆ ಇಬ್ಬರೂ ಹಾಜರಾಗಿ ವರ್ಗಾವಣೆ ಆದೇಶ ಪಡೆಯಬೇಕು.

ಕೋರಿಕೆ ವರ್ಗಾವಣೆಗೆ ಸೂಚನೆಗಳು:
* ಕಾಯಂ ಪೂರ್ವ ಸೇವಾ ಅವಧಿ ಪೂರೈಸದ ಪ್ರಾಥಮಿಕ ಶಾಲಾ ಶಿಕ್ಷಕರು ಕೋರಿಕೆ ವರ್ಗಾವಣೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
* ಜ್ಯೇಷ್ಠತಾ ಘಟಕಕ್ಕೆ ಅರ್ಜಿ ಸಲ್ಲಿಸಿರುವವರು ಪ್ರಸ್ತುತ ಶಾಲೆಯಲ್ಲಿ 5 ವರ್ಷ ಸೇವೆ ಪೂರ್ಣಗೊಳಿಸಿರಬೇಕು.
* ಪತಿ– ಪತ್ನಿ ಇಬ್ಬರೂ ರಾಜ್ಯ, ಕೇಂದ್ರ ಸರ್ಕಾರಿ ಅಥವಾ ಸಾರ್ವಜನಿಕ ಉದ್ದಿಮೆಗಳಲ್ಲಿ ನೌಕರರಾಗಿದ್ದರೆ ಕನಿಷ್ಠ ಸೇವಾವಧಿ ಅನ್ವಯ ಆಗುವುದಿಲ್ಲ.

ಪತಿ–ಪತ್ನಿ ವರ್ಗಾವಣೆ
ಪತಿ– ಪತ್ನಿ ಇಬ್ಬರೂ ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ, ಸಾರ್ವಜನಿಕ ಉದ್ದಿಮೆಗಳಲ್ಲಿ ಕಾಯಂ ನೌಕರರಾಗಿದ್ದರೆ, ಮಹಾನಗರ ಪಾಲಿಕೆ, ಜಲಮಂಡಳಿ, ನಿಗಮ ಮಂಡಳಿಗಳಲ್ಲಿ ಉದ್ಯೋಗದಲ್ಲಿದ್ದರೆ ಕಾಯಂ ನೌಕರರು ಎಂದು ಪರಿಗಣಿಸಲಾಗುತ್ತದೆ.

ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಸರ್ಕಾರಿ ಶಾಲೆ, ಮತ್ತೊಬ್ಬರು ಅನುದಾನಿತ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅಂಥವರೂ ವರ್ಗಾವಣೆ ಪಡೆಯಬಹುದು. ಆದರೆ, ನಗರ ಪ್ರದೇಶ ಹೊರತುಪಡಿಸಿ ವರ್ಗಾವಣೆ ನೀಡಬೇಕು.

ಕಾಯಿಲೆ ಪ್ರಕರಣಗಳು: ಶಿಕ್ಷಕರು ಅಥವಾ ಅವರ ಪತಿ/ಪತ್ನಿ/ಮಕ್ಕಳು ಹೃದಯ, ಮೂತ್ರಪಿಂಡ, ಕ್ಯಾನ್ಸರ್‌ ಮತ್ತು ಎಚ್‌ಐವಿ ಮತ್ತಿತರ ತೀವ್ರತರ ಕಾಯಿಲೆಗಳಿಂದ ಬಳಲುತ್ತಿದ್ದರೆ ದಾಖಲೆಗಳನ್ನು ಒದಗಿಸಿ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು.

ಅಂಗವಿಕಲ ಪ್ರಕರಣಗಳು: ಅಂಗವಿಕಲ ಮೀಸಲಾತಿಯಲ್ಲಿ ನೇಮಕವಾಗಿರಬೇಕು. ಶೇ 40ಕ್ಕಿಂತ ಹೆಚ್ಚು ಪ್ರಮಾಣ ಅಂಗವಿಕಲತೆ ಇರುವ ಬಗ್ಗೆ ಜಿಲ್ಲಾ ಸರ್ಜನ್‌ಗಳಿಂದ ಪಡೆದ ಪ್ರಮಾಣ ಪತ್ರ ಸಲ್ಲಿಸಬೇಕು. 

ವಿಧವೆಯರು ಪತಿಯ ಮರಣ ಪ್ರಮಾಣ ಪತ್ರ ಸಲ್ಲಿಸಬೇಕು. ಸೈನ್ಯದಲ್ಲಿರುವ ಅಥವಾ ಮೃತರ ಅವಲಂಬಿತರು ಆ ಬಗ್ಗೆ ಪ್ರಮಾಣ ಪತ್ರ ಹಾಜರುಪಡಿಸಿ ಅರ್ಜಿ ಸಲ್ಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT