ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಪೊಲೀಸ್‌ ಠಾಣೆ ಮುಂದಿನ ಗುರಿ– ಐಜಿಪಿ

Last Updated 3 ಜನವರಿ 2018, 6:48 IST
ಅಕ್ಷರ ಗಾತ್ರ

ಮೈಸೂರು: ದಕ್ಷಿಣ ಪೊಲೀಸ್ ವಲಯದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿರುವ ಪೊಲೀಸ್ ಠಾಣೆಗಳ ಪೈಕಿ ಕನಿಷ್ಠ ಶೇ 60ರಷ್ಟನ್ನು ಮಾದರಿ ಪೊಲೀಸ್ ಠಾಣೆಗಳನ್ನಾಗಿ ರೂಪಿಸುವುದು ಮುಂದಿನ ಗುರಿ ಎಂದು ದಕ್ಷಿಣ ವಲಯದ ಐಜಿಪಿ ವಿಪುಲ್‌ಕುಮಾರ್ ತಿಳಿಸಿದರು.

ಈಚೆಗೆ ನಡೆದ ರಾಜ್ಯಮಟ್ಟದ ಪೊಲೀಸ್ ಕರ್ತವ್ಯಕೂಟದಲ್ಲಿ ಸರ್ವೋತ್ತಮ ಪ್ರಶಸ್ತಿ ಪಡೆದ ದಕ್ಷಿಣ ವಲಯ ತಂಡದ ಸದಸ್ಯರಿಗೆ ಇಲ್ಲಿ ಮಂಗಳವಾರ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಎಲ್ಲ ಠಾಣೆಗಳಲ್ಲೂ ತರಬೇತಿ ಪಡೆದ ಸ್ವಾಗತಕಾರರನ್ನು ನೇಮಿಸಲಾಗಿದೆ. ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗಾಗಿಯೇ ಪ್ರತ್ಯೇಕ ‘ಹೆಲ್ಪ್‌ಡೆಸ್ಕ್‌’ ತೆರೆಯಲಾಗಿದೆ. ಇದು ಠಾಣೆಗಳನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದು ಅವರು ಹೇಳಿದರು.

ಕಾಗದದ ಬಳಕೆ ತಗ್ಗಿಸುವ ದೃಷ್ಟಿಯಿಂದ ಪ್ರತಿ ಠಾಣೆಯನ್ನೂ ‘ಇ–ಕಚೇರಿ’ಯನ್ನಾಗಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಐಜಿಪಿ, ಎಸ್‌ಪಿ ಹಾಗೂ ಕರ್ನಾಟಕ ಪೊಲೀಸ್ ಅಕಾಡೆಮಿಯ ಆಡಳಿತ ಕಚೇರಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಸುಧಾರಿತ ಗಸ್ತು ವ್ಯವಸ್ಥೆ ಶೇ 80ರಷ್ಟು ಯಶಸ್ವಿಯಾಗಿದೆ. ಮುಂದಿನ ವರ್ಷ ಶೇ 100ರಷ್ಟು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದು ಸಲಹೆ ನೀಡಿದರು.

‘ಪೊಲೀಸರು ಇರುವುದು ದಬ್ಬಾಳಿಕೆ ನಡೆಸಲು ಅಲ್ಲ. ಜನರ ಸೇವೆ ಮಾಡಲು ಎಂಬುದನ್ನು ಅರಿಯಬೇಕು. ಜನರಿಗೆ ಮೊದಲು ಗೌರವ ಕೊಡಬೇಕು. ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಮ್ಮದಾಗಬೇಕು’ ಎಂದು ಕರೆ ನೀಡಿದರು.‌

ಒಟ್ಟು 363 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮೈಸೂರಿನಲ್ಲಿ 168, ಕೊಡಗಿನಲ್ಲಿ 82, ಹಾಸನ 69, ಮಂಡ್ಯ 26, ಚಾಮರಾಜನಗರದಲ್ಲಿ ಇರುವ 18 ಸಿಸಿಟಿವಿಗಳಿಂದ ಆರೋಪಿಗಳ ಪತ್ತೆಗೆ ಸಹಾಯವಾಗುತ್ತಿದೆ ಎಂದರು. ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿ.ಎಸ್.ರಾಧಿಕಾ, ಧರ್ಮೇಂದ್ರಕುಮಾರ್ ಮೀನಾ, ವಂಶಿಕೃಷ್ಣ, ಜ್ಯೋತಿ ವೈದ್ಯನಾಥ್, ರಾಜೇಂದ್ರಪ್ರಸಾದ್ ಹಾಜರಿದ್ದರು.

‘ಸೋಷಿಯಲ್ ಮೀಡಿಯಾ’ ಅಳವಡಿಕೆಗೆ ಸೂಚನೆ

ಜನರೊಂದಿಗಿನ ಸಂವಹನವನ್ನು ಹೆಚ್ಚಿಸಬೇಕು. ಇದಕ್ಕೆ ಸಾಮಾಜಿಕ ಮಾಧ್ಯಮಗಳನ್ನು ಠಾಣಾಮಟ್ಟದಲ್ಲಿ ಬಳಸಬೇಕು. ಪ್ರತಿ ಸಿಬ್ಬಂದಿ ಫೇಸ್‌ಬುಕ್, ಟ್ವಿಟರ್, ಇ–ಮೇಲ್, ವಾಟ್ಸ್‌ಆ್ಯಪ್‌ಗಳಲ್ಲಿ ಸಕ್ರಿಯರಾಗಬೇಕು ಎಂದು ಸೂಚನೆ ನೀಡಿದರು.

ಸುಧಾರಿತ ಗಸ್ತು ವ್ಯವಸ್ಥೆಯಲ್ಲಿನ ಕಾನ್‌ಸ್ಟೆಬಲ್‌ಗಳು ತಮ್ಮ ವ್ಯಾಪ್ತಿಯ ಮಾಹಿತಿದಾರರು ಹಾಗೂ ಪ್ರಮುಖರ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಿಕೊಂಡು ಬೆರಳಂಚಿನಲ್ಲಿ ಮಾಹಿತಿ ಪಡೆಯಬಹುದು. ಸಾಮಾಜಿಕ ಮಾಧ್ಯಮಗಳು ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ‍ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.

ಮೈಸೂರು ದಕ್ಷಿಣ ವಲಯ ಸರ್ವೊತ್ತಮ

ಈಚೆಗೆ ನಡೆದ ರಾಜ್ಯಮಟ್ಟದ ಪೊಲೀಸ್ ಕರ್ತವ್ಯಕೂಟದಲ್ಲಿ ಮೈಸೂರು ದಕ್ಷಿಣ ವಲಯ ಸರ್ವೋತ್ತಮ ಪ್ರಶಸ್ತಿ ಪಡೆದುಕೊಂಡಿದೆ ಎಂದು ಐಜಿಪಿ ವಿಪುಲ್‌ಕುಮಾರ್ ಹರ್ಷ ವ್ಯಕ್ತಪಡಿಸಿದರು.

ಕರ್ತವ್ಯಕೂಟದಲ್ಲಿ ಒಟ್ಟು 57 ಪದಕಗಳು ಇದ್ದವು. ಇವುಗಳಲ್ಲಿ 18 ಪದಕಗಳನ್ನು ಪಡೆದುಕೊಂಡು ವಲಯವು ಅಗ್ರಸ್ಥಾನ ಗಳಿಸಿತು. ಇದರಲ್ಲಿ 5 ಪ್ರಥಮ, 8 ದ್ವಿತೀಯ ಪ್ರಶಸ್ತಿಗಳು ಸೇರಿವೆ. ಬಹುತೇಕ ಎಲ್ಲ ವಿಭಾಗಗಳಲ್ಲೂ ವಲಯದ ಸಿಬ್ಬಂದಿ ಉತ್ತಮ ಪ್ರದರ್ಶನ ತೋರಿದರು ಎಂದರು.

ಮೊದಲ ಬಹುಮಾನ ಪಡೆದವರಿಗೆ ₹ 5 ಸಾವಿರ, ದ್ವಿತೀಯ ಬಹುಮಾನ ಪಡೆದವರಿಗೆ ₹ 3 ಸಾವಿರ ಹಾಗೂ ತೃತೀಯ ಬಹುಮಾನ ಪಡೆದವರಿಗೆ ₹ 2 ಸಾವಿರ ನಗದು ಬಹುಮಾನಗಳನ್ನು ಅವರು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT