ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿಗೆ ಸಿಗುವುದೇ ಕಾಯಕಲ್ಪ ?

Last Updated 3 ಜನವರಿ 2018, 7:04 IST
ಅಕ್ಷರ ಗಾತ್ರ

ಮಾಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಜ.3ರಂದು ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಯೋಜನಾ ಪ್ರಾಧಿಕಾರದ ಕಟ್ಟಡ ಉದ್ಘಾಟಿಸಲಿದ್ದಾರೆ.

ವಿಪುಲ ನೈಸರ್ಗಿಕ ಸಂಪನ್ಮೂಲಗಳ ಜತೆಗೆ ಹಲವು ವೈವಿಧ್ಯತೆಗಳಿಂದ ಕೂಡಿರುವ ಮಾಗಡಿ, ರಾಜಧಾನಿ ಬೆಂಗಳೂರಿನಿಂದ 51 ಕಿ.ಮೀ ದೂರದಲ್ಲಿದ್ದರೂ, ಹಲವು ಸೌಲಭ್ಯಗಳಿಂದ ವಂಚಿತವಾಗಿದೆ.

ಕೃಷ್ಣರಾಜ ಗಿರಿ: ಮಾಗಡಿಯಿಂದ ಆಗ್ನೇಯ ದಿಕ್ಕಿನಲ್ಲಿ 11 ಕಿ.ಮೀ. ದೂರ ದಲ್ಲಿರುವ ಗಿರಿಧಾಮ ಸಾವನದುರ್ಗದ ಬೆಟ್ಟ 12 ಕಿ.ಮೀ. ಸುತ್ತಳತೆಯಲ್ಲಿದೆ. ಸಮುದ್ರ ಮಟ್ಟದಿಂದ 4,886 ಅಡಿ ಎತ್ತರದಲ್ಲಿದೆ. ವನಸಿರಿ, ಸಸ್ಯಸಂಕುಲ, ಪ್ರಾಣಿ, ಪಕ್ಷಿ ಸಂಕುಲಗಳಿವೆ.

ಖಗಮೃಗ, ನೀರಿನ ಝರಿ, ಶಿಖರಗಳಿಂದ ಕೂಡಿರುವ ರಮಣೀಯ ನೆಲೆಯಾಗಿದೆ. ಬೆಟ್ಟದ ಸುತ್ತ ಪುಟಾಣಿ ರೈಲು ಓಡಿಸಿ ಸಾವನದುರ್ಗದಿಂದ ಅನತಿದೂರದಲ್ಲಿ ಮಂಚನಬೆಲೆ ಜಲಾಶಯಕ್ಕೆ ರೋಪ್‌ವೇ ನಿರ್ಮಿಸಿದರೆ ಪ್ರವಾಸೋದ್ಯಮದಿಂದ ಲಾಭಗಳಿಸಬಹುದು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಬೆಟ್ಟದ ಮೇಲೆ ನಿರ್ಮಿಸಿರುವ ಕೋಡುಗಲ್‌ ಶಿಖರದ ಬಸವಣ್ಣ, ಆಂಜನೇಯ ಸ್ವಾಮಿ, ಬಂಡೆಗಲ್ಲು ವಿನಾಯಕ ಸ್ವಾಮಿ ಗುಡಿ, ಸಾವಂದರಾಯನ ಕಾಲದ ಏಳುಸುತ್ತಿನ ಕೋಟೆ, ನೀರಿನ ದೊಣೆಗಳನ್ನು ಮುಂದಿನ ಪೀಳಿಗೆಗೆ ರಕ್ಷಿಸಬೇಕು ಎಂಬುದು ಇತಿಹಾಸಕಾರ ಡಾ.ಮುನಿರಾಜಪ್ಪ ಅವರ ಅಭಿಪ್ರಾಯ.

ಕ್ರಷರ್‌ ಕಂಟಕ: ತಿರುಮಲೆ ತಿರುವೆಂಗಳನಾಥ ರಂಗನಾಥ ಸ್ವಾಮಿ ದೇಗುಲದ ಸಾವಿರ ವರ್ಷದ ಸ್ಮಾರಕವಾದ ವೆಂಗಳಪ್ಪನ ಪಾಳ್ಯದ ರಂಗಪ್ಪನ ಬೆಟ್ಟದಲ್ಲಿ ಹಗಲು ರಾತ್ರಿ ಭಾರಿಗಾತ್ರದ ಸಿಡಿಮದ್ದು ಸಿಡಿಸಲಾಗುತ್ತಿದೆ. 11 ಕ್ರಷರ್‌ಗಳು ಬೆಟ್ಟ ಕೊರೆಯುತ್ತಿದ್ದು, ನಿಸರ್ಗ ಸಂಪತ್ತು ಲೂಟಿ ಮಾಡಲಾಗುತ್ತಿದೆ ಎನ್ನುವುದು ಸಾರ್ವಜನಿಕರ ಆತಂಕ.

ರೈಲು: ಸೋಲೂರು ಮಾರ್ಗವಾಗಿ ಮಂಗಳೂರು ತಲುಪುವ ರೈಲು ಮಾರ್ಗವನ್ನು ವಿಸ್ತರಿಸಿ ಮಾಗಡಿ ಮೂಲಕ ರಾಮನಗರಕ್ಕೆ ಸಂಪರ್ಕ ಕಲ್ಪಿಸಿದರೆ, ದ್ವೀಪದಂತಿರುವ ಮಾಗಡಿ ಹೊರಗಿನ ಪ್ರಪಂಚಕ್ಕೆ ಪರಿಚಯವಾಗಲು ಅನುಕೂಲವಾಗಲಿದೆ. ಸಂತಶ್ರೇಷ್ಠರಾದ ಡಾ.ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರ ಅಭಿವೃದ್ಧಿ ಪ‍ಡಿಸಬೇಕಾಗಿದೆ ಎನ್ನುತ್ತಾರೆ ಸ್ಥಳೀಯರು.

ದುರ್ಗಗಳ ರಕ್ಷಣೆ: ತಾಲ್ಲೂಕಿನಲ್ಲಿ ಇರುವ ಪಾಳೇಗಾರರು ಮತ್ತು ಕೆಂಪೇಗೌಡರ ವಂಶಜರು ನಿರ್ಮಿಸಿದ್ದ ಹುತ್ರಿದುರ್ಗ, ಭೈರವನದುರ್ಗ, ಹುಲಿಯೂರು ದುರ್ಗ, ಸಾವನದುರ್ಗದ ಏಳು ಸುತ್ತಿನ ಕೋಟೆ, ಹುಲಿಕಲ್ ಅರಮನೆ, ಸೋಮೇಶ್ವರ ಗುಡಿಗಳು ರಕ್ಷಣೆ ಮಾಡಲು ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಒಕ್ಕೊರಲ ಮನವಿ

ಉಳಿಯಬೇಕಿದೆ ವನಸಿರಿ

ತಾಲ್ಲೂಕಿನಲ್ಲಿ ಸಾವನದುರ್ಗ, ಸಿದ್ದೇದೇವರ ಬೆಟ್ಟ, ತೂಬಿನಕೆರೆ, ಮತ್ತಿಕೆರೆ, ಬೆಳಗವಾಡಿ, ಭಂಟರ ಕುಪ್ಪೆ, ಕಾಚಕಲ್ಲಪ್ಪನ ಗುಡ್ಡ, ಇತರೆಡೆಗಳಲ್ಲಿನ ಅರಣ್ಯ ನಿತ್ಯ ಒತ್ತುವರಿಯಾಗುತ್ತಿದೆ. ವನಸಿರಿ ಉಳಿಸದಿದ್ದರೆ ಎಲ್ಲರಿಗೂ ವನವಾಸ ತಪ್ಪಿದ್ದಲ್ಲ ಎನ್ನುತ್ತಾರೆ ಸ್ಥಳೀಯ ಪರಿಸರ ಪ್ರೇಮಿಗಳು.

ಅರಣ್ಯ ನಾಶವಾಗುತ್ತಿರುವುದರಿಂದ ಕಾಡಾನೆ, ಚಿರತೆ, ಸೀಳುನಾಯಿ, ಕರಡಿ, ನರಿ, ಕಾಡುಹಂದಿಗಳು ರೈತರ ಹೊಲಗದ್ದೆಗಳತ್ತ ನುಗ್ಗಿ ಬಂದು ರೈತನ ತೋಟ ನಾಶ ಮಾಡುತ್ತಿವೆ. ಅನ್ನದಾತನನ್ನು ಬಲಿ ತೆಗೆದುಕೊಳ್ಳುತ್ತಿವೆ. ವನ್ಯಮೃಗ ಮತ್ತು ವನಸಿರಿ ಉಳಿಸಬೇಕಿದೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT