ಸೋಮವಾರ, ಜೂಲೈ 6, 2020
21 °C

ಇನ್ನೊಬ್ಬರ ಮೇಲೆ ಅವಲಂಬನೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್ನೊಬ್ಬರ ಮೇಲೆ ಅವಲಂಬನೆ ಬೇಡ

ತುಮಕೂರಿನ ಮಣೆಕುಪ್ಪೆ ನನ್ನೂರು. ಎರಡು ವರ್ಷದವರೆಗೆ ನನ್ನ ಕಣ್ಣು ಚೆನ್ನಾಗಿಯೇ ಇತ್ತು. ಆಡುವಾಗ ಕಣ್ಣಿನಲ್ಲಿ ಮಣ್ಣು ಬಿದ್ದು, ದೃಷ್ಟಿ ಹೋದದ್ದು ಮತ್ತೆ ಬರಲೇ ಇಲ್ಲ. ಇನ್ನೆಂದೂ ಕಣ್ಣು ಕಾಣುವುದಿಲ್ಲ ಎಂದು ವೈದ್ಯರಿಂದ ತಿಳಿದ ಮೇಲೆ ಅಮ್ಮ ನನ್ನನ್ನು ಅಂಧರ ಶಾಲೆಗೆ ಸೇರಿಸುವ ಮನಸ್ಸು ಮಾಡಿದರು. ಬಡತನ ಇದ್ದಿದ್ದರಿಂದ ನಾಲ್ಕು ವರ್ಷದ ನನ್ನನ್ನು ಐದು ವರ್ಷ ಎಂದು ಹೇಳಿ ಬೆಂಗಳೂರಿನ ಅಂಧಶಾಲೆಗೆ ಸೇರಿಸಿದರು. ಅಂದಿನಿಂದ ನನ್ನ ಬದುಕು ಹಾಸ್ಟೆಲ್‌ಗಳಲ್ಲೇ ಕಳೆಯಿತು.

ವೈಟ್‌ಫೀಲ್ಡ್‌ ಸಮೀಪದ ಅಂಡೇಹಳ್ಳಿಯಲ್ಲಿ ಎರಡನೇ ತರಗತಿಯವರೆಗೆ ಸಾಮಾನ್ಯ ಶಾಲೆಗೆ ಹೋಗುತ್ತಿದ್ದೆ. ನಂತರ ರಮಣ ಮಹರ್ಷಿ ಅಕಾಡೆಮಿ ಫಾರ್‌ ದಿ ಬ್ಲೈಂಡ್‌ ಅಂಧರ ಶಾಲೆಯಲ್ಲಿ ಹತ್ತನೇ ತರಗತಿವರೆಗೆ ಓದಿದೆ. ಪುಸ್ತಕದಲ್ಲಿದ್ದ ಪಾಠಗಳನ್ನೆಲ್ಲಾ ಬಾಯಿಪಾಠ ಮಾಡಿ ಒಪ್ಪಿಸುತ್ತಿದ್ದೆ. ಮೊದಲು ಕನ್ನಡ, ಆ ನಂತರ ಇಂಗ್ಲಿಷ್‌ನಲ್ಲಿಯೂ ಬ್ರೈಲ್‌ ಲಿಪಿ ಕಲಿತೆ. ಪಿಯುಸಿ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಓದಿದೆ. ಪರೀಕ್ಷೆಗಳಲ್ಲಿಯೂ ಒಳ್ಳೆಯ ಅಂಕ ಪಡೆದೆ. ಅಂಧರಿಗೆ ಸಹಾಯವಾಗುವಂತೆ ತಂತ್ರಜ್ಞಾನದಲ್ಲಿಯೂ ಸಾಕಷ್ಟು ಬದಲಾವಣೆ ಆಗಿದ್ದರಿಂದ ಕಂಪ್ಯೂಟರ್‌ ಅನ್ನೂ ಕಲಿತುಕೊಂಡೆ.

ಚಾರ್ಟೆಡ್‌ ಅಕೌಂಟೆಂಟ್‌ ಆಗಬೇಕು ಎಂಬುದು ನನ್ನ ಗುರಿ ಆಗಿತ್ತು. ಇದೇ ಕ್ಷೇತ್ರದಲ್ಲಿ ನಾನು ಏನಾದರೂ ಸಾಧನೆ ಮಾಡಲೇಬೇಕು ಎನಿಸಿತ್ತು. ಬಿಕಾಂ ಎರಡನೇ ವರ್ಷದಲ್ಲಿದ್ದಾಗ ಎಸ್‌ಬಿಐ ಹಾಗೂ ಸಿ.ಎ. ಪ್ರವೇಶ ಪರೀಕ್ಷೆ ಬರೆದೆ. ಮೊದಲನೇ ಪ್ರಯತ್ನದಲ್ಲಿಯೇ ಎಸ್‌ಬಿಐ ಪರೀಕ್ಷೆ ಪಾಸಾದೆ. ಸಿ.ಎ. ಪ್ರವೇಶ ಪರೀಕ್ಷೆಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದೆ. ಕೇವಲ ಐದು ಅಂಕ ಕಡಿಮೆ ಬಂದು ಸಿ.ಎ. ಪ್ರವೇಶ ಪರೀಕ್ಷೆಯಲ್ಲಿ ನಪಾಸಾದೆ. ಆಗ ಕೆಲವರು, ‘ಸಿ.ಎ. ಮಾಡಿದರೂ ಸಹಾಯಕರನ್ನು ಇರಿಸಿಕೊಳ್ಳಬೇಕಾಗುತ್ತದೆ. ಅದರ ಬದಲು ಬ್ಯಾಂಕ್‌ ಕೆಲಸಕ್ಕೆ ಸೇರಿಕೊ’ ಎಂದರು. ನನಗೂ ಅದು ಸರಿ ಎನಿಸಿತು. ಹಾಗೆಯೇ ಮಾಡಿದೆ. ಈಗ ಏಳು ವರ್ಷದಿಂದ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ಮೊದಲು ‘ಲೋನ್‌ ರಿಕವರಿ’ ವಿಭಾಗದಲ್ಲಿ ಕೆಲಸ ಮಾಡಿದೆ. ಈಗ ‘ಕಸ್ಟಮರ್‌ ಕಂಪ್ಲೇಟ್‌’ ವಿಭಾಗದಲ್ಲಿ ಕೆಲಸ ಮಾಡುತ್ತಿರುವೆ.

ಕೋರಮಂಗಲ ಪಿ.ಜಿ.ಯಲ್ಲಿದ್ದೆ. ಈಗ ಬಿನ್ನಿಮಿಲ್‌ ಎಸ್‌ಬಿಐ ಕ್ವಾರ್ಟರ್ಸ್‌ನಲ್ಲಿದ್ದೇನೆ. ಸ್ಟಿಕ್‌ ಇದೆ. ಅದರ ಸಹಾಯದಿಂದ ಎಲ್ಲಾ ಕಡೆ ಓಡಾಡುತ್ತೇನೆ. ಕೆಲವೊಮ್ಮೆ ಜನರು ಸಹಾಯ ಮಾಡುತ್ತಾರೆ. ಹೆಚ್ಚು ದೂರ ಎಂದರೆ ಆಟೊದಲ್ಲಿ ಓಡಾಡುತ್ತೇನೆ. ತಂತ್ರಜ್ಞಾನ ಸುಧಾರಿಸಿರುವುದರಿಂದ ಓಡಾಡುವುದು ಸಮಸ್ಯೆ ಎನಿಸುತ್ತಲೇ ಇಲ್ಲ. ಕೆಲಸದಲ್ಲಿ ಕೂಡ ‘ಜಾಬ್‌ ಆಕ್ಸೆಸ್‌ ವಿತ್‌ ಸ್ಪೀಚ್‌’ ಎನ್ನುವ ಸ್ಕ್ರೀನ್‌ ರೀಡರ್‌ ಸಾಫ್ಟ್‌ವೇರ್‌ ಇರುವುದರಿಂದ ಏನೂ ಸಮಸ್ಯೆ ಆಗುವುದಿಲ್ಲ. ಕಂಪ್ಯೂಟರ್‌ನಲ್ಲಿ ನಾವು ಏನು ಮಾಡುತ್ತಿದ್ದೇವೋ ಅದೆಲ್ಲವನ್ನೂ ಅದು ನಮಗೆ ಓದಿ ಹೇಳುತ್ತದೆ.

ರಮಣ ಮಹರ್ಷಿ ಶಾಲೆಯಲ್ಲಿ ಓದಿದ್ದರಿಂದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ನಾನು ಆಸಕ್ತಿ ಬೆಳೆಸಿಕೊಂಡೆ. ಸಂಗೀತದಲ್ಲಿ ಜೂನಿಯರ್‌ ಮುಗಿಸಿದ್ದೇನೆ. ಅಲ್ಲಿ ನಾಟಕಗಳಲ್ಲೂ ಭಾಗವಹಿಸುತ್ತಿದ್ದೆ. ಮುಂದೆ ಏಕಪಾತ್ರಾಭಿನಯ ನನಗೆ ಹೆಚ್ಚು ಇಷ್ಟವಾಯಿತು. ಪೌರಾಣಿಕ ಕಥೆಗಳನ್ನಾಧರಿಸಿದ ವಿಭಿನ್ನ ಪಾತ್ರಗಳ ಏಕಪಾತ್ರಾಭಿನಯ ಮಾಡುತ್ತೇನೆ. ಅಂಧರ ಸಂಘಟನೆಗಳು ಮಾಡುವ ಸ್ಪರ್ಧೆಗಳಲ್ಲಿಯೂ ನಾನು ಭಾಗವಹಿಸುತ್ತೇನೆ. ಕಚೇರಿಯಲ್ಲಿ ನಡೆಯುವ ಸ್ಪರ್ಧೆಗಳಲ್ಲಿಯೂ ನಾನು ಭಾಗವಹಿಸುತ್ತೇನೆ.

ಚಿಕ್ಕಂದಿನಿಂದಲೇ ಮಕ್ಕಳಿಗೆ ಬ್ರೈಲ್‌ ಕಲಿಸಲೇಬೇಕು. ಅದು ನಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಬ್ರೈಲ್‌ ಕಲಿತಿದ್ದರೆ ಅಂಧರಿಗೆ ಎಲ್ಲೇ ಹೋದರೂ ಸಮಸ್ಯೆ ಆಗದು. ಸಾಮಾನ್ಯರಂತೇ ನಾವು ಎಲ್ಲಾ ಕೆಲಸವನ್ನು ಮಾಡಿಕೊಳ್ಳುತ್ತೇವೆ. ಹೆಣ್ಣುಮಕ್ಕಳು, ಅದರಲ್ಲೂ ಅಂಧರು ತಮ್ಮ ಕಾಲ ಮೇಲೆ ತಾವೇ ನಿಂತುಕೊಳ್ಳಬೇಕು. ಇನ್ನೊಬ್ಬರ ಮೇಲೆ ಅವಲಂಬಿತರಾಗಬಾರದು ಎನ್ನುವುದೇ ನನ್ನ ನಿಲುವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.