ಮಂಗಳವಾರ, ಆಗಸ್ಟ್ 4, 2020
22 °C

ಅದೃಷ್ಟದ ನಿರೀಕ್ಷೆಯಲ್ಲಿ ಮತ್ತೊಂದು ‘ಮಳೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅದೃಷ್ಟದ ನಿರೀಕ್ಷೆಯಲ್ಲಿ ಮತ್ತೊಂದು ‘ಮಳೆ’

‘ಮುಂಗಾರು ಮಳೆ’ ಚಿತ್ರದ ನಂತರ ಕನ್ನಡ ಚಿತ್ರರಂಗಕ್ಕೆ ಮಳೆ ಅದೃಷ್ಟದ ಸಂಕೇತವಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಅದೇ ಅದೃಷ್ಟವನ್ನು ನೆಚ್ಚಿ ಎರಡು ರೀತಿಯಲ್ಲಿ ಕನ್ನಡ ಸಿನಿಮಾಗಳಲ್ಲಿ ಮಳೆಗಳನ್ನು ಹೆಚ್ಚು ಬಳಸಿಕೊಳ್ಳಲಾಗುತ್ತಿದೆ. ಮೊದಲನೆಯದು ಮಳೆಯಲ್ಲಿ ಚಿತ್ರೀಕರಿಸುವುದು. ಇನ್ನೊಂದು ಸಿನಿಮಾ ಶೀರ್ಷಿಕೆಯಲ್ಲಿಯೇ ‘ಮಳೆ’ಯನ್ನು ಇರಿಸುವುದು.

ಇದು ಎರಡನೇ ಬಗೆಯ ಸಿನಿಮಾ. ಹೆಸರು ‘ನೀನಿಲ್ಲದ ಮಳೆ’. ಮೊದಲಿಗೆ ಈ ಚಿತ್ರಕ್ಕೆ ‘ಪೋರ’ ಎಂದು ಹೆಸರಿಡಲಾಗಿತ್ತಂತೆ. ಆದರೆ ಮಳೆಯಲ್ಲಿ ಅದೃಷ್ಟವಿದೆ ಎಂಬ ನಂಬಿಕೆಯ ಮೇಲೆ ಶೀರ್ಷಿಕೆಯನ್ನು ಬದಲಿಸಿ ‘ನೀನಿಲ್ಲದ ಮಳೆ’ ಎಂದು ಬದಲಿಸಲಾಗಿದೆ ಎಂದು ನಿರ್ದೇಶಕ ಆರ್‌. ಜನಾರ್ದನ್‌ ಅವರೇ ಹೇಳಿಕೊಂಡರು. ಅಂದಹಾಗೆ ಈ ಚಿತ್ರದ ನಾಯಕನಟನಾಗಿಯೂ ಅವರೇ ಬಣ್ಣ ಹಚ್ಚಿದ್ದಾರೆ.

ಉನ್ನತ ವ್ಯಾಸಂಗಕ್ಕಾಗಿ ವಿದೇಶಗಳಿಗೆ ಹೋಗುವ ವಿದ್ಯಾರ್ಥಿಗಳು ಅಲ್ಲಿ ತೊಂದರೆಗೆ ಸಿಲುಕುವುದು, ಕಣ್ಮರೆಯಾಗುವುದು, ಕೊಲೆಯಾಗುವುದು ಪತ್ರಿಕೆಗಳಲ್ಲಿ ಆಗೀಗ ವರದಿಯಾಗುತ್ತಲೇ ಇರುತ್ತವೆ. ಇಂಥದ್ದೇ ಎಳೆಯನ್ನುಇಟ್ಟುಕೊಂಡು ಈ ಸಿನಿಮಾವನ್ನು ಹೆಣೆಯಲಾಗಿದೆ. ವಿದೇಶಗಳಲ್ಲಿನ ಕಾನೂನು ಸುವ್ಯವಸ್ಥೆ, ವಿದ್ಯಾರ್ಥಿಗಳನ್ನು ದುಶ್ಚಟಗಳತ್ತ ಸೆಳೆಯುವ ಜಾಲ, ಅದರ ಪರಿಣಾಮಗಳು ಇವನ್ನೆಲ್ಲವನ್ನೂ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಜನಾರ್ದನ್‌ ಅವರದ್ದು. ಈ ಚಿತ್ರದ ಕಥೆಯನ್ನು ವಿಜಯ್‌ ಚೆಂಡೂರ್‌ ಬರೆದಿದ್ದಾರೆ. ಅಮೆರಿಕ ನಿವಾಸಿ ವ್ಯಾಲರಿ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅಮೆರಿಕದಲ್ಲಿ ಮೈನಸ್‌ 10 ಡಿಗ್ರಿ ಚಳಿಯ ವಾತಾವರಣದಲ್ಲಿ 28 ದಿನಗಳ ಚಿತ್ರೀಕರಣವನ್ನು ನಡೆಸಿರುವ ಚಿತ್ರತಂಡ, ಉಳಿದ ಭಾಗವನ್ನು ಬೀದರ್‌ ಕೋಟೆಯಲ್ಲಿ ಚಿತ್ರೀಕರಿಸಿಕೊಂಡಿದೆ. ನಾಯಕಿ ಭಾರತಕ್ಕೆ ಬಂದುಹೋಗುವ ಟಿಕೆಟ್‌ ವೆಚ್ಚಕ್ಕಾಗಿಯೇ ಸುಮಾರು ಹತ್ತು ಲಕ್ಷ ರೂಪಾಯಿಗಳನ್ನು ವ್ಯಯಿಸಲಾಗಿದೆಯಂತೆ.

ತಬಲಾನಾಣಿ, ಲಕ್ಕಿ ಶಂಕರ್‌, ಮನ್‌ದೀಪ್‌ ರಾಯ್‌, ಮೋಹನ್‌ ಜುನೇಜಾ ತಾರಾಗಣದಲ್ಲಿದ್ದಾರೆ. ಕವಿರಾಜ್‌ ಒಂದು ಹಾಡು ಬರೆದಿದ್ದಾರೆ. ಉಳಿದ ನಾಲ್ಕು ಹಾಡುಗಳಿಗೆ ಇಂದ್ರಸೇನಾ ಸಾಹಿತ್ಯ ರಚಿಸಿ ಸಂಗೀತವನ್ನೂ ಸಂಯೋಜಿಸಿದ್ದಾರೆ. ಜತೆಗೆ ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ. ನಿರಂಜನಬಾಬು ಛಾಯಾಗ್ರಹಣ ಇರುವ ‘ನೀನಿಲ್ಲದ ಮಳೆ’ಯನ್ನು ಡಾ. ಶೈಲೇಂದ್ರ, ಕೆ. ಬಲ್ದಾಲ್‌ ಮತ್ತು ದೇವರಾಜ್‌ ಶಿಡ್ಲಘಟ್ಟ ನಿರ್ಮಾಣ ಮಾಡಿದ್ದಾರೆ. ಜನವರಿ ಎರಡನೇ ವಾರ ತೆರೆಗೆ ತರಲು ತಂಡ ಸಿದ್ಧತೆ ನಡೆಸಿದೆ.

ಆರ್‌. ಜನಾರ್ದನ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.