ಸೋಮವಾರ, ಜೂಲೈ 6, 2020
21 °C

ರಾಜ್ಯಸಭೆಯಲ್ಲಿ ‘ತಲಾಖ್‌’ ಜಟಾಪಟಿ

ಪಿಟಿಐ Updated:

ಅಕ್ಷರ ಗಾತ್ರ : | |

ರಾಜ್ಯಸಭೆಯಲ್ಲಿ ‘ತಲಾಖ್‌’ ಜಟಾಪಟಿ

ನವದೆಹಲಿ: ಮುಸ್ಲಿಂ ಮಹಿಳೆಯರ (ಮದುವೆ ಹಕ್ಕುಗಳ ರಕ್ಷಣೆ) ಮಸೂದೆ 2017 ರಾಜ್ಯಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಯಿತು.

ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಒಗ್ಗಟ್ಟಾಗಿ ಆಗ್ರಹಿಸಿದವು. ಕಾನೂನುಬಾಹಿರವಾಗಿ ತ್ರಿವಳಿ ತಲಾಕ್‌ ಪದ್ಧತಿ ಅನುಸರಿಸುವುದನ್ನು ತಪ್ಪಿಸಲು ಮಸೂದೆ ಶೀಘ್ರ ಅಂಗೀಕಾರವಾಗಬೇಕು ಎಂದು ಬಿಜೆಪಿ ಪ್ರತಿಪಾದಿಸಿತು.

ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಅವರು ಭಾರಿ ಗದ್ದಲದ ನಡುವೆಯೇ ಮಸೂದೆ ಮಂಡಿಸಿದರು. ವಿರೋಧ ಪಕ್ಷಗಳ ಗದ್ದಲಕ್ಕೆ ಅಷ್ಟೇ ಆಕ್ರೋಶಭರಿತರಾಗಿ ಆಡಳಿತ ಪಕ್ಷಗಳ ಸದಸ್ಯರೂ ಪ್ರತಿಕ್ರಿಯೆ ನೀಡಿದ್ದರಿಂದ ಕೋಲಾಹಲ ಸೃಷ್ಟಿಯಾಯಿತು. ಮಧ್ಯಾಹ್ನ ನಂತರ 3 ಗಂಟೆಗೆ ಮತ್ತೆ ಸದನ ಸೇರಿದಾಗಲೂ ಪರಿಸ್ಥಿತಿ ತಿಳಿಯಾಗಲಿಲ್ಲ.

ತ್ರಿವಳಿ ತಲಾಖ್‌ ಮೂಲಕ ವಿಚ್ಛೇದನ ನೀಡುವ ಗಂಡನಿಗೆ ಮೂರು ವರ್ಷ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಮಸೂದೆಗೆ ಕಳೆದ ಡಿಸೆಂಬರ್‌ 28ರಂದು ಲೋಕಸಭೆ ಅನುಮೋದನೆ ನೀಡಿದೆ.

ತ್ರಿವಳಿ ತಲಾಖ್‌ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ತೀರ್ಪು ನೀಡಿದೆ. ಹಾಗಾಗಿ ಮಸೂದೆಯನ್ನು ತುರ್ತಾಗಿ ಅಂಗೀಕರಿಸಬೇಕು ಎಂದು ಸರ್ಕಾರ ವಾದಿಸಿತು. ಆದರೆ, ಮಸೂದೆ ಸಿದ್ಧಪಡಿಸುವಾಗ ಸಂಬಂಧಪಟ್ಟವರ ಅಭಿಪ್ರಾಯ ಪಡೆದಿಲ್ಲ. ಹಾಗಾಗಿ ಮಸೂದೆಯನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದವು.

ಪರಿಶೀಲನಾ ಸಮಿತಿಗೆ ಒಪ್ಪಿಸಬೇಕು ಎಂಬ ಒತ್ತಾಯದ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸದೆ ಉಪಸಭಾಪತಿ ಪಿ.ಜೆ. ಕುರಿಯನ್‌ ಸದನವನ್ನು ಗುರುವಾರಕ್ಕೆ ಮುಂದೂಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.