ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಖ್ಯಾತ ಗಾಯಕಿ ರಾಧಾ ವಿಶ್ವನಾಥನ್‌ ಇನ್ನಿಲ್ಲ

Last Updated 3 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಐದು ದಶಕಗಳು ಹೆಸರು ಮಾಡಿದ್ದ ಪ್ರಖ್ಯಾತ ಗಾಯಕಿ ಡಾ. ರಾಧಾ ವಿಶ್ವನಾಥನ್‌ (83) ನಗರದಲ್ಲಿ ಮಂಗಳವಾರ ರಾತ್ರಿ ನಿಧನರಾದರು.

ಅವರು ಎಂ.ಎಸ್‌. ಸುಬ್ಬುಲಕ್ಷ್ಮಿ ಅವರ ಮಗಳು. ತಮಿಳುನಾಡಿನ ಗೋಪಿಚೆಟ್ಟಿಪಾಳ್ಯದಲ್ಲಿ 1934ರಲ್ಲಿ ರಾಧಾ ಜನಿಸಿದರು. ಅವರಿಗೆ ಎರಡು ವರ್ಷವಾಗಿದ್ದಾಗ ತಂದೆ ಸದಾಶಿವಂ ಅವರು ಸುಬ್ಬುಲಕ್ಷ್ಮೀ ಅವರನ್ನು ಮದುವೆಯಾಗಿದ್ದರು. ‘ಸುಬ್ಬುಲಕ್ಷ್ಮೀ ಅಮ್ಮನೇ ನನ್ನ ಜಗತ್ತು. ಅವರು ನನಗೆ ಸಂಗೀತವನ್ನಷ್ಟೇ ಕಲಿಸಲಿಲ್ಲ, ಜೀವನದ ದಾರಿಗೆ ಬೆಳಕಾಗಿ ನಿಂತರು’ ಎಂದು ರಾಧಾ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.

‘ಮಂಗಳವಾರ ರಾತ್ರಿ ಮೊಮ್ಮಗಳು ಐಶ್ವರ್ಯಾ ಬಳಿ ಎಂ.ಎಸ್‌. ಸುಬ್ಬುಲಕ್ಷ್ಮಿ ಅವರ ಪ್ರಖ್ಯಾತ ಭಜನೆಗಳಲ್ಲಿ ಒಂದಾದ ‘ಶ್ರೀಮನ್‌ ನಾರಾಯಣ...’ ಹಾಡುವಂತೆ ಹೇಳಿದರು. ಚರಣದಲ್ಲಿ ಬರುವ ‘ಶ್ರೀಪಾದಮೆ ಶರಣು...’ ಎಂಬ ಸಾಲನ್ನು ಹಾಡುವಾಗಲೇ ಕೊನೆಯುಸಿರೆಳೆದರು’ ಎಂದು ರಾಧಾ ಅವರ ಮಗ ವಿ. ಶ್ರೀನಿವಾಸನ್‌ ಭಾವುಕರಾದರು.

‘ಅಜ್ಜಿ ಸುಮಾರು 700 ಕೀರ್ತನೆಗಳನ್ನು ಹೇಳಿಕೊಟ್ಟಿದ್ದಾರೆ. ಅಲ್ಲದೆ ಎಂ.ಎಸ್. ಸುಬ್ಬಲಕ್ಷ್ಮೀ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಹೇಳುತ್ತಿದ್ದರು’ ಎಂದು ಐಶ್ವರ್ಯಾ ನೆನಪಿಸಿಕೊಂಡರು.

ಬ್ರಿಟನ್‌ ರಾಣಿ ಎಲಿಜಬೆತ್‌ ಮತ್ತು ಅಂದಿನ ಪ್ರಧಾನಿ ಮಾರ್ಗರೇಟ್‌ ಥ್ಯಾಚರ್‌ ಅವರ ಮುಂದೆ ಸುಬ್ಬುಲಕ್ಷ್ಮಿ ಮತ್ತು ರಾಧಾ ವಿಶ್ವನಾಥನ್‌ ಅವರು 1982ರಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟಿದ್ದರು. ದೇಶ ವಿದೇಶಗಳಲ್ಲಿ ಇವರ ಜೋಡಿ ಕಛೇರಿ ನೀಡಿದೆ. ವಿಶ್ವಸಂಸ್ಥೆಯಲ್ಲೂ ಹಾಡಿದ್ದರು. ಬಾಲ್ಯದಲ್ಲಿ ನೃತ್ಯಪಟುವಾಗಿದ್ದ ರಾಧಾ ಅವರು ಗಾಂಧೀಜಿ ಮತ್ತು ನೆಹರೂ ಅವರ ಮುಂದೆ ನೃತ್ಯ ಪ್ರದರ್ಶನ ನೀಡಿದ್ದರು.

ಅವರಿಗೆ 2008ರಲ್ಲಿ ಲಲಿತಾ ಕಲಾ ಅಕಾಡೆಮಿಯ ‘ಸಂಗೀತ ರತ್ನ’ , 2010ರಲ್ಲಿ ಆರಾಧನಾ ಸಮಿತಿಯ ‘ಕಲಾ ಚಂದ್ರಿಕಾ’ ಹಾಗೂ 2016ರಲ್ಲಿ ‘ವೀಣೆ ರಾಜಾರಾವ್‌’ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

ಅವರು ಕೆಲ ವರ್ಷಗಳ ಹಿಂದೆ ಚೆನ್ನೈ ತೊರೆದು ಬೆಂಗಳೂರಿಗೆ ಬಂದು ನೆಲೆಸಿದ್ದರು. ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ಪುತ್ರಿ, ಇಬ್ಬರು ಪುತ್ರರು, ಸೊಸೆಯಂದಿರು ಮತ್ತು ಇಬ್ಬರು ಮೊಮ್ಮಕ್ಕಳು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT