ಶನಿವಾರ, ಜೂಲೈ 4, 2020
21 °C

ಬಿಜೆಪಿ ಕಾರ್ಯಕರ್ತ ದೀಪಕ್ ಮೃತದೇಹ ಸ್ಥಳಾಂತರ: ಗ್ರಾಮಸ್ಥರು, ದೀಪಕ್ ಪೋಷಕರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಕಾರ್ಯಕರ್ತ ದೀಪಕ್ ಮೃತದೇಹ ಸ್ಥಳಾಂತರ: ಗ್ರಾಮಸ್ಥರು, ದೀಪಕ್ ಪೋಷಕರ ಆಕ್ರೋಶ

ಮಂಗಳೂರು: ಬುಧವಾರ ಹತ್ಯೆಗೀಡಾದ ದೀಪಕ್ ರಾವ್ ಮೃತದೇಹವನ್ನು ಎ.ಜೆ. ಆಸ್ಪತ್ರೆಯಿಂದ, ಕಾಟಿಪಳ್ಳದ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ.

ಗುರುವಾರ ಬೆಳಿಗ್ಗೆ ಶವವನ್ನು ಕಾಟಿಪಳ್ಳಕ್ಕೆ ತರುತ್ತಿದ್ದಂತೆಯೇ ತೀವ್ರ ಆಕ್ರೋಶ ವ್ಯಕ್ತವಾಯಿತು. ಶವವನ್ನು ಮತ್ತೆ ಎ.ಜೆ.‌ಆಸ್ಪತ್ರೆಗೆ ಸ್ಥಳಾಂತರಿಸಬೇಕು. ಅಲ್ಲಿಂದ ಗೌರವದಿಂದ ಶವಯಾತ್ರೆಗೆ ಅವಕಾಶ ಕೊಡಬೇಕು ಎಂದು ಬಜರಂಗದಳ, ವಿಶ್ವಹಿಂದೂ ಪರಿಷತ್‌, ಹಿಂದೂ ಜಾಗರಣ ವೇದಿಕೆ ಹಾಗೂ ದುರ್ಗಾವಾಹಿನಿ ಸಂಘಟನೆಗಳ‌ ಕಾರ್ಯಕರ್ತರು, ಪೋಷಕರು ಒತ್ತಾಯಿಸಿದರು.

ಯಾರಿಗೂ ತಿಳಿಸದೇ ಪೊಲೀಸರು ಏಕಾಏಕಿ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಕೂಡಲೇ ಶವಯಾತ್ರೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಆಂಬುಲೆನ್ಸ್ ನಿಂದ ಶವವನ್ನು ಕೆಳಗೆ ಇಳಿಸಲು ಬಿಡುವುದಿಲ್ಲ‌ ಎಂದು ಪಟ್ಟು ಹಿಡಿದರು. ನಗರ ಪೊಲೀಸ್ ಆಯುಕ್ತ ಟಿ.ಆರ್.‌ಸುರೇಶ್ ಸ್ಥಳದಲ್ಲಿ ಹಾಜರಿದ್ದು, ಗ್ರಾಮಸ್ಥರ ಮನವೊಲಿಕೆಗೆ ಮುಂದಾಗಿದ್ದಾರೆ. ಆದರೆ, ಜನರು ಮಾತ್ರ ಪಟ್ಟು ಸಡಿಲಿಸುತ್ತಿಲ್ಲ.‌ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ದೀಪಕ್ ರಾವ್ ತಾಯಿ, ತಮ್ಮ, ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು, ಆಂಬುಲೆನ್ಸ್ ಎದುರು ಕುಳಿತು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಟಿಪಳ್ಳದಲ್ಲಿ ಗೊಂದಲದ ಪರಿಸ್ಥಿತಿ

ಈ ಹಿಂದೆ ಶರತ್ ಮಡಿವಾಳ ಅವರ ಶವಯಾತ್ರೆ ನಡೆದ ವೇಳೆ ಬಂಟ್ವಾಳದಲ್ಲಿ ಕಲ್ಲು ತೂರಾಟ ನಡೆದಿದ್ದ ಕಾರಣ ಪೊಲೀಸರು ಎ.ಜೆ.ಆಸ್ಪತ್ರೆಯ  ಹಿಂಬಾಗಿಲಿನಿಂದ ಶವವನ್ನು ಸಾಗಿಸಿದ್ದರು.

* ಈ ಹಿಂದೆ ಮೆರವಣಿಗೆ ಆದಾಗ ಕೆಲ ಅಹಿತಕರ ಘಟನೆಗಳು ನಡೆದಿವೆ. ಅದಕ್ಕಾಗಿ ಪೊಲೀಸರು ಶವಯಾತ್ರೆಗೆ ಅನುಮತಿ ನೀಡಿರಲಿಕ್ಕಿಲ್ಲ. ಪಿಎಫ್ ಐ ಮತ್ತು ಬಜರಂಗದಳದಂತಹ ಮತೀಯ ಸಂಘಟನೆಗಳಿಂದ ಇಂತಹ ಕೃತ್ಯಗಳು ಮರುಕಳಿಸುತ್ತಿವೆ.

–ರಮಾನಾಥ ರೈ, ಸಚಿವ‌‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.