ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಮನೆ ನಿರ್ಮಾಣಕ್ಕೆ ಮರಳು ಪೂರೈಕೆಗೆ ಕ್ರಮ: ನಿರ್ಧಾರ

ಶಾಸಕ ಕಿಮ್ಮನೆ ರತ್ನಾಕರ ಅಧ್ಯಕ್ಷತೆಯಲ್ಲಿ ನಡೆದ ಸಭೆ
Last Updated 4 ಜನವರಿ 2018, 7:07 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಸರ್ಕಾರಿ ಶೌಚಾಲಯ, ವಸತಿ ಫಲಾನುಭವಿಗಳಿಗೆ, ಬಡವರ ಮನೆ ನಿರ್ಮಾಣಕ್ಕೆ ಬಳಕೆಯಾಗುವ ಮರಳನ್ನು ಒದಗಿಸಲು ಅಡ್ಡಿಪಡಿಸಬಾರದು. ಮರಳು ಪಡೆಯುವ ಕುರಿತು ಗ್ರಾಮ ಪಂಚಾಯ್ತಿ ಪಿಡಿಒ ನೀಡುವ ಒಪ್ಪಿಗೆ ಪತ್ರಕ್ಕೆ ಮನ್ನಣೆ ನೀಡಬೇಕು ಎಂದು ಬುಧವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶಾಸಕ ಕಿಮ್ಮನೆ ರತ್ನಾಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಿರ್ಧರಿಸಿದೆ.

ಶಾಸಕ ಕಿಮ್ಮನೆ ರತ್ನಾಕರ ಮಾತನಾಡಿ, ‘ಸ್ಥಳೀಯವಾಗಿ ಮರಳು ಲಭ್ಯವಿದ್ದರೂ ಅದನ್ನು ಉಪಯೋಗಿಸದ ಸ್ಥಿತಿ 2 ತಿಂಗಳಿನಿಂದ ನಿರ್ಮಾಣವಾಗಿದೆ. ಶೌಚಾಲಯ, ವಸತಿ, ಇತರೆ ಸಣ್ಣ ಪುಟ್ಟ ಬಳಕೆಗೆ ಪಿಡಿಒ ನೀಡುವ ಅನುಮತಿಯನ್ನು ಆಡಳಿತ ಒಪ್ಪಿಕೊಳ್ಳಬೇಕು. ತಾಲ್ಲೂಕಿನ 38 ಗ್ರಾಮ ಪಂಚಾಯ್ತಿಗಳ ಪೈಕಿ 13 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮರಳು ಸಿಗುವುದಿಲ್ಲ. ವಾಸ್ತವ ಸಂಗತಿ ಅರಿತು ಮಾನವೀಯ ನೆಲೆಗಟ್ಟಿನಲ್ಲಿ ನೀಡಿದ ಅನುಮತಿಯನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಅಕ್ರಮ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈ ಹಿಂದೆ 90 ಅಧಿಕೃತ ಮರಳು ಕ್ವಾರಿಗಳು ಇವೆ. ಪರಿಸರ ನಿಯಂತ್ರಣ ಜಾರಿ ನಂತರ 37 ಕ್ವಾರಿಯನ್ನು ಮಾತ್ರ ಆರಂಭಿಸಬಹುದಾಗಿದೆ. 10 ಕ್ವಾರಿ ಗುತ್ತಿಗೆ ನೀಡಲಾಗಿದೆ. 27 ಕ್ವಾರಿ ಆರಂಭಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇದೆ. ಮರಳು ಪೂರೈಕೆ ಬಿಕ್ಕಟ್ಟಿನಲ್ಲಿದ್ದು ಸಮಸ್ಯೆ ಪರಿಹಾರಕ್ಕೆ ಸಕಾರಾತ್ಮಕ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್‌ ಹೇಳಿದರು.

ಪೊಲೀಸ್‌ ಇಲಾಖೆ ಉದ್ದೇಶ ಪೂರ್ವಕವಾಗಿ ಕಿರುಕುಳ ನೀಡುತ್ತಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅಕ್ರಮವಾಗಿ ಮರಳನ್ನು ಸಂಗ್ರಹಿಸಲಾಗಿದೆ ಎಂದು ಗ್ರಾಮಸ್ಥರು ಖಚಿತ ಮಾಹಿತಿ ನೀಡಿದಾಗ ಕ್ರಮ ತೆಗೆದುಕೊಳ್ಳಲಾಗಿದೆ. ಪಿಡಿಒ ಅವರು ನೀಡಿದ ಅನುಮತಿಯನ್ನು ದುರುಪಯೋಗ ಪಡಿಸಿಕೊಂಡ ಹಲವು ಪ್ರಕರಣಗಳಿವೆ ಎಂದು ಜಿಲ್ಲಾ ಎಸ್‌ಪಿ ಅಭಿನವ ಖರೆ ತಿಳಿಸಿದರು.

ಸರ್ಕಾರದ ಫಲಾನುಭವಿಗಳ ಹೆಸರಿನಲ್ಲಿ ಅಕ್ರಮ ಮರಳು ಸಂಗ್ರಹ ನಡೆದಾಗ ಇಲಾಖೆ ಕೈಕಟ್ಟಿ ಕೂರಲು ಸಾಧ್ಯವಿಲ್ಲ. ಫಲಾನುಭವಿಗಳಿಗೆ ಮರಳು ಪೂರೈಕೆ ಸಂಬಂಧ ನೀಡಲಾದ ಅನುಮತಿ, ಸಾಗಣೆ ದಿನ ಕುರಿತು ಪಿಡಿಒ ಪೊಲೀಸ್‌ ಇಲಾಖೆಗೆ ಕಡ್ಡಾಯವಾಗಿ ಮಾಹಿತಿ ನೀಡಿದರೆ ಅನುಕೂಲವಾಗಲಿದೆ ಎಂದು ಹೇಳಿದರು.

ಹೊಸಳ್ಳಿ ಗ್ರಾಮದಲ್ಲಿ ವಸತಿ, ಶೌಚಾಲಯ ಯೋಜನೆ ಅಡಿಯಲ್ಲಿ ಪಿಡಿಒ ಅವರ ಅನುಮತಿ ಮೇರೆಗೆ ಸಂಗ್ರಹ ಮಾಡಿದ್ದ ಮರಳನ್ನು ಪತ್ತೆ ಮಾಡಿ ಮೊಕದ್ದಮೆ ಹೂಡಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ ಹೇಳಿದರು.

ಅಕ್ರಮ ಮರಳು ದಂಧೆ ನಡೆಸುವವರ ವಿರುದ್ಧ ಯಾವುದೇ ಕ್ರಮ ಜರುಗುತ್ತಿಲ್ಲ. ದಂಧೆ ಮಾಡುವವರ ಜೊತೆ ಪೊಲೀಸರು ಸ್ನೇಹ ಬೆಳೆಸುತ್ತಾರೆ. ಬಡವರ ಮನೆ ಬಳಿ ಸಂಗ್ರಹವಾದ ಅಲ್ಪ ಸ್ವಲ್ಪ ಮರಳಿನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಚಂದವಳ್ಳಿ ಸೋಮಶೇಖರ್‌ ಆರೋಪಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕಾಸರವಳ್ಳಿ ಶ್ರೀನಿವಾಸ್‌ ಮಾತನಾಡಿ, ‘ಸರ್ಕಾರಿ ಫಲಾನುಭವಿಗಳ ಜೊತೆ ಇತರೆ ಜನರಿಗೂ ಪಿಡಿಒ ಮೂಲಕ ಮರಳು ಪಡೆಯಲು ಅನುಮತಿಗೆ ಅವಕಾಶವಾಗಬೇಕು. ಮರಳು ಪೂರೈಕೆ ವಿಚಾರದಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶ ಕಲ್ಪಿಸಬಾರದು’ ಎಂದರು.

ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನವಮಣಿ, ಉಪಾಧ್ಯಕ್ಷೆ ಯಶೋದಾ ಮಂಜುನಾಥ್‌, ಪ್ರಶಾಂತ್‌, ಕೆಳಕೆರೆ ದಿವಾಕರ್‌, ಡಿವೈಎಸ್‌ಪಿ ಗಣೇಶ ಹೆಗಡೆ, ತಹಶೀಲ್ದಾರ್‌ ಆನಂದಪ್ಪನಾಯ್ಕ್, ತಾಲ್ಲೂಕು ಪಂಚಾಯ್ತಿ ಇಒ ಅವರೂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT