ಗುರುವಾರ , ಆಗಸ್ಟ್ 13, 2020
27 °C
ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಸಾಧನೆ l ಅಧಿಕ ವಿದ್ಯುತ್‌ ಮೆಸ್ಕಾಂಗೆ ಮಾರಾಟ

ಸೌರವಿದ್ಯುತ್‌ ಘಟಕ ಆರಂಭ

ಶಿವಾನಂದ ಕರ್ಕಿ Updated:

ಅಕ್ಷರ ಗಾತ್ರ : | |

ಸೌರವಿದ್ಯುತ್‌ ಘಟಕ ಆರಂಭ

ತೀರ್ಥಹಳ್ಳಿ: ವಿದ್ಯುತ್‌ ಕೊರತೆಯ ತೀವ್ರತೆಯನ್ನು ಕಡಿಮೆ ಮಾಡಲು ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಸೂರ್ಯ ರಶ್ಮಿಯ ಮೊರೆಹೋಗಿದೆ. ಪಟ್ಟಣ ಪಂಚಾಯ್ತಿ ಸಮೀಪದ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಚಾವಣಿಯನ್ನು ವಿದ್ಯುತ್‌ ಉತ್ಪಾದನಾ ಘಟಕವನ್ನಾಗಿ ಮಾರ್ಪಡಿಸಿ ಸದ್ದಿಲ್ಲದೇ ಸೋಲಾರ್‌ ವಿದ್ಯುತ್‌ ಉತ್ಪಾದನೆ ಮಾಡುತ್ತಿದೆ.ಅಧಿಕ ವಿದ್ಯುತ್‌ ಅನ್ನು  ಮೆಸ್ಕಾಂಗೆ ನೀಡುತ್ತಿದೆ.

ಪಟ್ಟಣ ಪಂಚಾಯ್ತಿ ಜಿಲ್ಲೆಯಲ್ಲಿಯೇ ಅತ್ಯುತ್ತಮ ರಂಗಮಂದಿರ ನಿರ್ಮಾಣ ಮಾಡಿದ್ದು, ರಂಗಮಂದಿರದ ಬಳಕೆ ಹಾಗೂ ಪಟ್ಟಣ ಪಂಚಾಯ್ತಿ ಕಚೇರಿಗೆ ಅಗತ್ಯವಿರುವ ವಿದ್ಯುತ್‌ಗೆ ಈಗ ಮೆಸ್ಕಾಂ ಇಲಾಖೆಯನ್ನು ಆಶ್ರಯಿಸದೇ ಸ್ವಾವಲಂಬಿಯಾಗಿದೆ.

ಪಟ್ಟಣ ಪಂಚಾಯ್ತಿ ಸದಸ್ಯರೆಲ್ಲರೂ ಒಗ್ಗೂಡಿ 2017–18ನೇ ಸಾಲಿನ ಉದ್ಯಮ ನಿಧಿಯಲ್ಲಿನ ಸುಮಾರು ₹ 25 ಲಕ್ಷದಲ್ಲಿ ಆಧುನಿಕ ಸೋಲಾರ್‌ ವಿದ್ಯುತ್‌ ಘಟಕವನ್ನು ನಿರ್ಮಿಸಿದೆ. ಈ ಸೋಲಾರ್‌ ವಿದ್ಯುತ್‌ ಘಟಕವು 30 ಕೆ.ವಿ. ಸಾಮರ್ಥ್ಯದ್ದಾಗಿದ್ದು ಪ್ರತಿ ದಿನ 150 ಯೂನಿಟ್‌ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿದೆ.

ಇಲ್ಲಿ ಉತ್ಪಾದನೆಯಾದ ವಿದ್ಯುತ್ತನ್ನು ಪ್ರತಿ ಯೂನಿಟ್‌ಗೆ ₹ 6.61 ರಂತೆ ಮೆಸ್ಕಾಂಗೆ ನೀಡಲು ಪಟ್ಟಣ ಪಂಚಾಯ್ತಿ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಪಟ್ಟಣ ಪಂಚಾಯ್ತಿಗೆ ಪ್ರತಿ ತಿಂಗಳು ₹ 29 ಸಾವಿರ ಆದಾಯ ಲಭಿಸಲಿದೆ.

ಶಾಂತವೇರಿ ಗೋಪಾಲಗೌಡ ರಂಗಮಂದಿರದ ವಿಶಾಲವಾದ ಚಾವಣಿ ಮೇಲೆ 94 ವಿಶೇಷವಾದ ಸಿಐಜಿಎಸ್‌ (ಮೋಡ ಕವಿದ ವಾತಾವರಣದಲ್ಲೂ ವಿದ್ಯುತ್‌ ಉತ್ಪಾದಿಸಬಲ್ಲ) ಸೋಲಾರ್‌ ಪ್ಯಾನಲ್‌ಗಳನ್ನು ಅಳವಡಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿದ ಪ್ರತಿ ಪ್ಯಾನಲ್‌ಗಳ ವಿದ್ಯುತ್‌ ಉತ್ಪಾದನೆಯನ್ನು ಪವರ್‌ ಆಪ್ಟಿಮೈಜರ್‌ ಮೂಲಕ ಅಂತರ್ಜಾಲದಲ್ಲಿ ಗಮನಿಸಬಹುದು. ಆಧುನಿಕ ತಂತ್ರಜ್ಞಾನವನ್ನು ಬಳಸಿ ಸೋಲಾರ್‌ ವಿದ್ಯುತ್‌ ಉತ್ಪಾದನಾ ಘಟಕವನ್ನು ಪಟ್ಟಣ ಪಂಚಾಯ್ತಿಯಲ್ಲಿ ಅಳವಡಿಸಿರುವುದು ರಾಜ್ಯದಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಪ್ರಥಮ ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಂದೇಶ್ ಜವಳಿ ಹೇಳುತ್ತಾರೆ.

ಮಲೆನಾಡು ಪ್ರದೇಶದಲ್ಲಿ ಮಳೆಗಾಲದಲ್ಲಿ ಸೋಲಾರ್‌ ವಿದ್ಯುತ್‌ ಉತ್ಪಾದನೆ ನಿರೀಕ್ಷಿತ ಪ್ರಮಾಣದಲ್ಲಿ ಆಗದೇ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದರೂ ಮಂದ ಬೆಳಕಿನಲ್ಲಿಯೂ ನಿಗದಿತ ವಿದ್ಯುತ್‌ ಉತ್ಪಾದನೆ ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ಸಾಧ್ಯ ಎಂಬ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

*

ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ವಿದ್ಯುತ್‌ ಪೂರೈಕೆ ಅಡಚಣೆಯಾಗಿತ್ತು. ಸೋಲಾರ್‌ ವಿದ್ಯುತ್‌ ಘಟಕ ಆರಂಭದಿಂದಾಗಿ ಪಟ್ಟಣ ಪಂಚಾಯ್ತಿ ಕಚೇರಿ, ರಂಗಮಂದಿರಕ್ಕೆ ನಿರಂತರ ವಿದ್ಯುತ್‌ ಪೂರೈಕೆಯಾಗುತ್ತಿದೆ.

–ಸಂದೇಶ್‌, ಜವಳಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.